ನಿರ್ದೇಶನ: ಉಪೇಂದ್ರ
ನಿರ್ಮಾಣ: ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಟೈನರ್ಸ್
ಸಂಗೀತ : ಅಜನೀಶ್ ಲೋಕನಾಥ್,
ಛಾಯಾಗ್ರಹಣ: ಹೆಚ್.ಸಿ. ವೇಣು,
ತಾರಾಗಣ: ಉಪೇಂದ್ರ, ರೀಷ್ಮಾ ನಾಣಯ್ಯ, ಆರ್ಮುಗಂ ರವಿಶಂಕರ್, ನಿಧಿ ಸುಬ್ಬಯ್ಯ, ಅಚ್ಯುತ್ ಕುಮಾರ್, ಮಠ ಗುರುಪ್ರಸಾದ್, ಸಾಧು ಕೋಕಿಲ ಹಾಗೂ ಇತರರು.
ಈ ಶುಕ್ರವಾರ ತೆರೆಕಂಡಿರುವ ಉಪೇಂದ್ರ ನಿರ್ದೇಶನದ `ಯುಐ` ಚಿತ್ರವನ್ನು ಬೇಗನೇ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ಫೋಕಸ್ ಮಾಡಿಕೊಂಡು ನೋಡಿದಾಗಲೇ ಚಿತ್ರದ ಪ್ರತಿ ಪದರವೂ ಎಳೆ ಎಳೆಯಾಗಿ ಬಿಡಿಸಿಕೊಳ್ಳುತ್ತ ಹೋಗುತ್ತದೆ, ಅದಕ್ಕೇ ಚಿತ್ರದ ಆರಂಭದಲ್ಲಿ ಉಪೇಂದ್ರ ಪ್ರೇಕ್ಷಕರಿಗೆ ವಾರ್ನ್ ಮಾಡಿಬಿಟ್ಟಿದ್ದಾರೆ. ಇದೊಂದು ಮೆಟಾಫರಿಕಲ್ ಚಿತ್ರ. ಯುಐ ಮನರಂಜನೆಗಿಂತ ಹೆಚ್ಚಾಗಿ ನೋಡುಗರನ್ನು ಆಲೋಚನೆಗೆ ಹಚ್ಚುತ್ತದೆ. ಚಿತ್ರ ನೋಡಿದ ಕೆಲವರು ಉಪೇಂದ್ರ ಅವರ ಯೋಚನೆ, ನಿರೂಪಣಾ ಶೈಲಿ ಚೆನ್ನಾಗಿದೆ, ಆದರೆ ಅದನ್ನು ಅರ್ಥ ಮಾಡಿಕೊಳ್ಳಲು ತಾಳ್ಮೆ ಬೇಕಷ್ಟೇ ಎನ್ನುತ್ತಿದ್ದಾರೆ. ಯುಐ ಸಿನಿಮಾದೊಳಗೊಂದು ಸಿನಿಮಾ ಕಥೆ. ಅದರಲ್ಲಿ ಉಪ್ಪಿ ನಿರ್ದೇಶನದ ನಾಮ ಚಿತ್ರ ಬಿಡುಗಡೆಯಾಗಿರುತ್ತದೆ. ಚಿತ್ರವನ್ನು ಒಮ್ಮೆ ನೋಡಿದರೆ ಅರ್ಥವಾಗುತ್ತಿಲ್ಲ. ಫೋಕಸ್ ಮಾಡಿದ್ರೆ ಅರ್ಥವಾಗುತ್ತದೆ ಎಂದು ಪ್ರೇಕ್ಷಕರು ಪದೇಪದೇ ಸಿನಿಮಾ ನೋಡಲು ಮುಗಿಬೀಳ್ತಾರೆ. ಅರ್ಥ ಆದವರು ಅದನ್ನು ಪ್ರಾಕ್ಟಿಕಲ್ ಆಗಿ ಮಾಡೇಬಿಟ್ಟರೆ, ಮತ್ತೆ ಕೆಲವರು ಸಿನಿಮಾನ ಬ್ಯಾನ್ ಮಾಡಿ ಎಂದು ಪ್ರತಿಭಟಿಸುತ್ತಾರೆ. ಇಂಥಾ ಚಿತ್ರದ ರಿವ್ಯೂ ಹೇಗೆ ಬರೆಯಬೇಕೆಂದು ಖ್ಯಾತ ವಿಮರ್ಶಕನೊಬ್ಬ ತಲೆ ಕೆಡಿಸಿಕೊಳ್ಳುತ್ತಾನೆ. ಚಿತ್ರದ ನಿರ್ದೇಶಕ ಉಪೇಂದ್ರರನ್ನು ಹುಡುಕಿಕೊಂಡು ಹೋಗ್ತಾನೆ. ಅಲ್ಲಿ ಉಪ್ಪಿ ಸಿಗದಿದ್ರೂ, ಆತ ಬರೆದು ನಂತರ ಸುಟ್ಟುಹಾಕಲು ಯತ್ನಿಸಿದ್ದ ಕಥೆಯ ಪ್ರತಿ ಸಿಗುತ್ತದೆ. ಅದನ್ನು ಆತ ಓದುತ್ತ ಹೋದಂತೆ ಸಿನಿಮಾ ಕಥೆ ತೆರೆದುಕೊಳ್ಳುತ್ತದೆ. ಅಷ್ಟಕ್ಕೂ ಆ ಕಥೆ ಏನು? ಉಪೇಂದ್ರ ಅದನ್ನು ಸುಟ್ಟು ಹಾಕಲು ಹೋದದ್ದೇಕೆ, ಕಥಾನಾಯಕ ಕಲ್ಕಿ ಏನಾಗಿರ‍್ತಾನೆ, ಆತ ಏಕೆ ಸಮಾಜವನ್ನು ದ್ವೇಶಿಸುತ್ತಾನೆ, ಆತ ಸಮಾಜದಲ್ಲಿ ತಂದ ಬದಲಾವಣೆಗಳೇನು, ಕೊನೆಗೇನಾಯಿತು ಎನ್ನುವುದೇ ಯುಐ ಕಾನ್ಸೆಪ್ಟ್.
ಈ ಚಿತ್ರದ ಕಥೆ ಒಂದು ಸಾಲಿನಲ್ಲಿ ಹೇಳಿ ಮುಗಿಸುವಂಥದ್ದಲ್ಲ. ಇಲ್ಲಿ ಹಲವು ವಿಷಯಗಳಿವೆ. ಪ್ರಕೃತಿ ನಾಶ, ಜಾತಿ, ಧರ್ಮ, ಭ್ರಷ್ಟಾಚಾರ, ಅಸಮಾನತೆ, ಕಲ್ಕಿ ಅವತಾರ, ಬುದ್ಧ, ಬಸವ, ಸತ್ಯಯುಗ, ಪ್ರಜಾಪ್ರಭುತ್ವ, ಪ್ರಜಾಕೀಯ, ಸೋಷಿಯಲ್ ಮೀಡಿಯಾ, ಜಾತಿವೈ಼ಷಮ್ಯ ಹೀಗೆ ಹಲವು ವಿಷಯಗಳನ್ನು ಒಂದೇ ಫ್ರೇಮ್‌ನಲ್ಲಿ ಉಪೇಂದ್ರ ಹೇಳುವ ಪ್ರಯತ್ನ ಮಾಡಿದ್ದಾರೆ, ತಾನೇನು ಹೇಳಬೇಕೋ ಅದನ್ನು ನೇರವಾಗಿ ಹೇಳಿದ್ದಾರೆ.
ಹಿಂದೆ ಎ ಸಿನಿಮಾ ಮಾಡಿದಾಗ, ಪೋಸ್ಟರ್‌ನಲ್ಲಿ ಇದು ಕಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರ ಅನ್ನೋ ಲೈನ್ ಹಾಕಿದ್ದರು, ಆ ಲೈನೇ ಪ್ರೇಕ್ಷಕರ ತಲೆ ಕೆಡಿಸಿತ್ತು. ಈಗ ಅವರ `ಯುಐ` ಸಿನಿಮಾದ ಆರಂಭದಲ್ಲೇ ಪ್ರೇಕ್ಷಕರಿಗೆ ಸವಾಲ್ ಹಾಕಿದ್ದಾರೆ. ನೀವು ದಡ್ಡರಾಗಿದ್ರೆ ಈಚಿತ್ರ ಪೂರ್ತಿನೋಡಿ, ಬುದ್ಧಿವಂತರಾಗಿದ್ರೆ ಈಗಲೇ ಚಿತ್ರಮಂದಿರದಿಂದ ಎದ್ದೋಗಿ... ಅನ್ನೋ ಲೈನ್‌ನೊಂದಿಗೆ ಸಿನಿಮಾದೊಳಗಿನ ಸಿನಿಮಾನ ಪ್ರಾರಂಭಿಸುತ್ತಾರೆ, ಆಗ ಪ್ರೇಕ್ಷಕ ರೊಚ್ಚಿಗೇಳೋದೊಂದೇ ಬಾಕಿ.
ಈ ಹಿಂದೆ `ಎ` ಚಿತ್ರದಲ್ಲಿ ನಾಯಕ ಪೋಷಕರನ್ನು ಶೂಟ್ ಮಾಡುತ್ತಾನೆ. ತಂದೆ, ತಾಯಿಯನ್ನು ಕಳೆದುಕೊಂಡ ಅನಾಥವಾಗಿ ಅಳುತ್ತ ನಿಂತಿದ್ದ ಮಗುವನ್ನು ಕಂಡ ಆತ ಹೋಗು ಈ ಪ್ರಪಂಚ ವಿಶಾಲವಾಗಿದೆ.. ಎಂದು ಹೇಳುತ್ತಾನೆ. ಅಳುತ್ತಿದ್ದ ಮಗು, ತನ್ನ ಅಳುನಿಲ್ಲಿಸಿ ಅಲ್ಲಿಂದ ಓಡಿ ಹೋಗುತ್ತದೆ. ಆಗ ನಾಯಕ ಇವ್ನು ಓಡೋ ಸ್ಪೀಡ್ ನೋಡಿದ್ರೆ ಮುಂದೆ ಸುಭಾಷ್ ಚಂದ್ರ ಬೋಸ್ ಆಗ್ತಾನೆ ಅಂತ ಹೇಳ್ತಾನೆ.
`ಯುಐ` ಸಿನಿಮಾದಲ್ಲೂ ಅದೇರೀತಿ ಅಳುತ್ತಾ ನಿಲ್ಲುವ ಒಂದು ಮಗುವಿಗೆ ನಾಯಕ ಓಡು ಎಂದು ಹೇಳುತ್ತಾರೆ. ಮಗು ಓಡಿ ಹೋಗುತ್ತದೆ. ಆಗ ನಾಯಕ ಉಪ್ಪಿ, ಇವ್ನು ಓಡೋ ಸ್ಪೀಡ್ ನೋಡಿದ್ರೆ ಮುಂದೆ ಒಸಮಾ ಬಿನ್ ಲಾಡೆನ್, ದಾವೂದ್ ಇಬ್ರಾಹಿಂ ಆಗೋ ಹಾಗೆ ಕಾಣ್ಸುತ್ತೆ ಅಂತ ಹೇಳ್ತಾನೆ. ಅಲ್ಲಿಂದ ಈಗಿನ ಕಥೆ ಕಂಟಿನ್ಯೂ ಆಗುತ್ತೆ. ಸಮಾಜದ ನಗ್ನಸತ್ಯಗಳನ್ನು, ಮನುಷ್ಯನ ಒಳ, ಹೊರಗಿನ ಮುಖಗಳನ್ನು ಅನಾವರಣ ಮಾಡುತ್ತ ಸಾಗುತ್ತಾರೆ.
ಉಪೇಂದ್ರ ಅವರಿಲ್ಲಿ ಸತ್ಯ ಮತ್ತು ಕಲ್ಕಿ ಭಗವಾನ್ ಎಂಬ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಆ 2 ಪಾತ್ರಗಳಿಗೂ ಜೀವ ತುಂಬಿದ್ದಾರೆ. ಅಲ್ಲದೆ ಇಡೀ ಚಿತ್ರವನ್ನು ತಮ್ಮ ಅಭಿನಯ ಮತ್ತು ಬರವಣಿಗೆಯಿಂದ ಆವರಿಸಿಕೊಂಡಿದ್ದಾರೆ. ಸತ್ಯ ಸಮಾಜದ ಪರವಾಗಿ ನಡೆಯಬೇಕೆಂದರೆ, ಕಲ್ಕಿ ಸಮಾಜದ ಕಣ್ತೆರೆಸಿ, ನಗ್ನಸತ್ಯವನ್ನು ಓಪನ್ ಆಗಿ ಹೇಳುವವನು, ತಾಯಿಗಾದ ಅನ್ಯಾಯ ಆತನನ್ನು ಕಲ್ಕಿ ಭಗವಾನ್ ಆಗುವಂತೆ ಮಾಡಿರುತ್ತೆ. ಉಪೇಂದ್ರ ಈ ಎರಡೂ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಇವರ ವೇಷಭೂಷಣ ಕೂಡ ವಿಭಿನ್ನವಾಗಿದೆ. ಸತ್ಯ ಸಾಮಾನ್ಯ ಮಾನವನಂತಿದ್ದರೆ, ಕಲ್ಕಿ ಚಿತ್ರ ವಿಚಿತ್ರವಾದ ಉಡುಗೆಯಲ್ಲಿ ವಿಜೃಂಭಿಸಿದ್ದಾನೆ, ಫೇಮಸ್ ಚಿತ್ರ ವಿಮರ್ಶಕನ ಪಾತ್ರದಲ್ಲಿ ಮುರಳಿ ಶರ್ಮಾ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಹಲವು ಕಲಾವಿದರಿದ್ದು, ಆ ಎಲ್ಲ ಪಾತ್ರಗಳು ಒಂದೆರಡು ದೃಶ್ಯಗಳಿಗೇ ಸೀಮಿತವಾಗಿದೆ. ಉಪೇಂದ್ರ ಬಿಟ್ಟರೆ ಹೆಚ್ಚುಹೊತ್ತು ತೆರೆಮೇಲೆ ಕಾಣಿಸಿಕೊಳ್ಳೋದು ರಾಜನ ಪಾತ್ರ. ಅದನ್ನು ರವಿಶಂಕರ್ ಮಾಡಿದ್ದಾರೆ. ಕಥಾನಾಯಕಿ ರೀಷ್ಮಾ ನಾಣಯ್ಯ ಪಾತ್ರಕ್ಕೆ ಹೆಚ್ಚಿನ ಅವಕಾಶವಿಲ್ಲ, ಅಜನೀಶ್ ಅವರ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಚಿತ್ರಕ್ಕೆ ಹೊಸ ರೂಪ ನೀಡಿದೆ, `ಟ್ರೋಲಾಗುತ್ತೆ ಇದು ಟ್ರೋಲಾಗುತ್ತೆ```` ಹಾಡು ಸಖತ್ ಕ್ಯಾಚಿ ಆಗಿದೆ, ವೇಣು ಅವರ ಕ್ಯಾಮೆರಾ ವರ್ಕ್ ಉತ್ತಮವಾಗಿದ್ದು, ಶಿವಕುಮಾರ್ ಅವರ ಕಲಾನಿರ್ದೇಶನ ಚಿತ್ರವನ್ನು ಶ್ರೀಮಂತವಾಗಿರಿಸಿದೆ. ಅಹಂಕಾರಿ ಪಂಡಿತನಾಗಿ ಅಚ್ಯುತ್‌ಕುಮಾರ್ ಸಿಕ್ಕ ಪಾತ್ರಕ್ಕೆ ನ್ಯಾಯ ನೀಡಿದ್ದಾರೆ. ಸಾಧುಕೋಕಿಲ ಪಾತ್ರಕ್ಕೂ ಹೆಚ್ಚು ಸ್ಪೇಸ್ ಇಲ್ಲ, ಇವರನ್ನೆಲ್ಲ ಇನ್ನೂ ಚೆನ್ನಾಗಿ ಬಳಸಿಕೊಳ್ಳಬಹುದಿತ್ತು, ಲಹರಿ ಸಂಸ್ಥೆಯ ಮನೋಹರ ನಾಯ್ಡು ಹಾಗೂ ಲಹರಿಮೇಲು ಜತೆಗೆ ವೀನಸ್ ಎಂಟರ್‌ಟೈನ್‌ಮೆಂಟ್ಸ್ ನ ಕೆ.ಪಿ. ಶ್ರೀಕಾಂತ್ ಈ ಚಿತ್ರಕ್ಕೆ ದೊಡ್ಡಮಟ್ಟದ ಬಂಡವಾಳ ಹಾಕಿದ್ದಾರೆ.