ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಅಭಿನಯದ ಕುತೂಹಲಕಾರಿ ಥ್ರಿಲ್ಲರ್ ಚಿತ್ರ `ಎಫ್.ಐ.ಆರ್. 6 to 6` ಬಿಡುಗಡೆಗೆ ಸಿದ್ದವಾಗಿದೆ. ಈ ಹಿಂದೆ ಪಟ್ಟಾಭಿಷೇಕ ಎಂಬ ಚಿತ್ರವನ್ನು ನಿರ್ಮಿಸಿದ್ದ ಭಾಗ್ಯರಮೇಶ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೆ.ವಿ.ರಮಣರಾಜ್ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಓಂಜಿ ಅವರ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ.
ಸತೀಶ್ ಬಾಬು ಹಾಗೂ ಎಂ.ಎಸ್. ತ್ಯಾಗರಾಜ್ ಸಂಗೀತ ಸಂಯೋಜನೆ ಮಾಡಿರುವ ಈ ಚಿತ್ರದ ಟ್ರೈಲರ್ ಹಾಗೂ ಆಡಿಯೋ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಫಿಲಂ ಚೇಂಬರ್ ಉಪಾಧ್ಯಕ್ಷ ಶಿಲ್ಪಾ ಶ್ರೀನಿವಾಸ್, ಹಿರಿಯ ನಿರ್ದೇಶಕ ಕೂಡ್ಲು ರಾಮಕೃಷ್ಣ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಟ್ರೈಲರ್ ಪ್ರದರ್ಶನದ ನಂತರ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಚಿತ್ರದ ಕುರಿತಂತೆ ಮಾಹಿತಿ ಹಂಚಿಕೊಂಡರು.
ನಾಯಕ ವಿಜಯ ರಾಘವೇಂದ್ರ ಮಾತನಾಡುತ್ತ ಎಫ್.ಐ.ಆರ್.ಭಾಗ್ಯರಮೇಶ್ ರಮಣರಾಜ್ ಅವರ ಕನಸು. ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾ. ಇಡೀ ಚಿತ್ರವನ್ನು ನೈಟ್ ಎಫೆಕ್ಟ್ ನಲ್ಲೇ ಶೂಟ್ ಮಾಡಿದ್ದೇವೆ. ಸುಮಾರು ರಾತ್ರಿ ಈ ಸಿನಿಮಾಗಾಗಿ ಕಷ್ಟಪಟ್ಟಿದ್ದೇವೆ. ನಿರ್ದೇಶಕರು ತುಂಬಾ ಎಫರ್ಟ್ ಹಾಕಿದ್ದಾರೆ. ಕಷ್ಟಪಟ್ಟು ಇಷ್ಟಪಟ್ಟು ಈ ಸಿನಿಮಾ ಮಾಡಿದ್ದೇವೆ. ಈ ಕಥೆಯಲ್ಲಿ ಮೇಜರ್ ಆಗಿರುವುದೇ ಆ್ಯಕ್ಷನ್. ಒಮ್ಮೊಮ್ಮೆ ಬೆಳಗಿನಜಾವ ನಾಲ್ಕರವರೆಗೆ ಶೂಟ್ ಮಾಡಿದ್ದೇವೆ. ಅಲ್ಲದೆ ಥ್ರಿಲ್ಲರ್ ಮಂಜು ಅವರ ಜೊತೆ ಆಕ್ಷನ್ ಮಾಡುವುದು ತುಂಬಾ ಸುಲಭ. ಒಳ್ಳೇ ಅನುಭವ ಸಿಗುತ್ತೆ ಎಂದು ಹೇಳಿದರು.
ಚಿತ್ರದ ನಿರ್ಮಾಪಕಿ ಭಾಗ್ಯ ರಮೇಶ್ ಮಾತನಾಡುತ್ತ ನಾವು ಈ ಹಿಂದೆ ಪಟ್ಟಾಭಿಷೇಕ ಎಂಬ ಚಿತ್ರ ಮಾಡಿದ್ದೆವು. ರಮಣರಾಜ್ ಅವರು ತಂದ ಈ ಕಥೆ ತುಂಬಾ ಇಂಟರೆಸ್ಟಿಂಗ್ ಆಗಿತ್ತು. ಹಾಗಾಗಿ ಈ ಚಿತ್ರ ನಿರ್ಮಾಣಕ್ಕೆ ಮುಂದಾದೆವು. ವಿಜಯ ರಾಘವೇಂದ್ರ ತುಂಬಾ ಚೆನ್ನಾಗಿ ಆಭಿನಯಿಸಿದ್ದಾರೆ ಎಂದು ಹೇಳಿದರು.
ನಂತರ ಫಿಲಂ ಚೇಂಬರ್ ಶಿಲ್ಪಾ ಶ್ರೀನಿವಾಸ್ ಮಾತನಾಡಿ ನಾನು ಎಸ್.ರಮೇಶ್ ಜತೆ ೪ ಸಿನಿಮಾ ಮಾಡಿದ್ದೇನೆ. ಆ ನಾಲ್ಕೂ ಸಿನಿಮಾಗಳು ಲಾಭ ತಂದುಕೊಟ್ಟಿದ್ದವು. ನಾನು ಪರ್ವ ಮಾಡಿದಾಗ ಗರ್ವ ಹೋಗಿತ್ತು. ಆಗ ವಿಜಯ ರಾಘವೇಂದ್ರ ಹಾಕಿಕೊಂಡು ರೋಮಿಯೋ ಜೂಲಿಯೆಟ್ ಮಾಡಿದೆ. ಆ ಸಿನಿಮಾ ಕೈ ಹಿಡಿಯಿತು. ಇವರಿಬ್ಬರೂ ಸೇರಿ ಮಾಡಿರೋ ಚಿತ್ರ ಚೆನ್ನಾಗಿಯೇ ಇರುತ್ತದೆ ಎಂದು ಹೇಳಿದರು. ಈ ಚಿತ್ರದಲ್ಲಿ ಸಿರಿರಾಜ್, ಸ್ವಾತಿ, ಯಶಾ ಶೆಟ್ಟಿ ಹೀಗೆ ಮೂವರು ನಾಯಕಿಯರಿದ್ದಾರೆ.
ಮೊದಲು ಸಿರಿರಾಜ್ ಮಾತನಾಡಿ ಭಯದಲ್ಲೇ ಬದುಕುವ ಹುಡುಗಿಯಾಗಿ ನಾನೀ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪಾತ್ರ ತುಂಬಾ ಚೆನ್ನಾಗಿದೆ ಎಂದರು. ಉಳಿದಿಬ್ಬರು ನಾಯಕಿಯರಾದ ಸ್ವಾತಿ ಹಾಗೂ ಯಶ ಶೆಟ್ಟಿ ಮಾತನಾಡುತ್ತ ತಮ್ಮ ಪಾತ್ರಗಳ ಬಗ್ಗೆ ವಿವರಿಸಿದರು.
ನಿರ್ದೇಶಕ ರಮಣರಾಜ್ ಅವರು ಈ ಹಿಂದೆ ತೆಲುಗಿನ ಜೆಡಿ ಚಕ್ರವರ್ತಿ ಅವರ ಜೊತೆ ಒಂದು ಚಿತ್ರ ಮಾಡಿದ್ದಾರೆ. ಆ ಚಿತ್ರವಿನ್ನೂ ರಿಲೀಸಾಗಿಲ್ಲ. `ಎಪ್.ಐ.ಆರ್. 6 to 6` ಅವರ ನಿರ್ದೇಶನದ ಎರಡನೇ ಚಿತ್ರ. ಜೆಡಿ ಅವರ ಸಿನಿಮಾ ಮಾಡುವಾಗ ಹೊಳೆದಂಥ ಕಾನ್ಸೆಪ್ಟ್ ಇದು. ಯುವಕನೊಬ್ಬ ಒಂದು ಘಟನೆಯಲ್ಲಿ ಸಿಕ್ಕಿ ಹಾಕಿಕೊಂಡು ನಂತರ ಆ ಸಂದರ್ಭವನ್ನು ಹೇಗೆ ಫೇಸ್ ಮಾಡುತ್ತಾನೆ ಅನ್ನೋದನ್ನು ಸಂಜೆ ಆರರಿಂದ ಬೆಳಗಿನ ಜಾವ ಆರರವರೆಗೆ ನಡೆಯುವ ಕಥೆಯ ಮೂಲಕ ಥ್ರಿಲ್ಲಿಂಗ್ ಆಗಿ ಹೇಳಲು ಪ್ರಯತ್ನಿಸಿದ್ದೇವೆ. ವಿಜಯ ರಾಘವೇಂದ್ರ ಅವರ ಜತೆ ಕೆಲಸ ಮಾಡಿದ್ದು ಒಳ್ಳೇ ಅನುಭವ. 35 ದಿನ ಪೂರ್ತಿ ರಾತ್ರಿ ವೇಳೆಯಲ್ಲೇ ಶೂಟ್ ಮಾಡಿದ್ದೇವೆ. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ ಎಂದು ಹೇಳಿದರು. ನಂತರ ಚಿತ್ರದ ಸಂಕಲನಕಾರ ನಾಗೇಂದ್ರ ಅರಸ್, ನಟ ವಿದ್ಯಾಭರಣ, ಸಂಗೀತ ನಿರ್ದೇಶಕ ಎಂ.ಎಸ್.ತ್ಯಾಗರಾಜ್ ಚಿತ್ರದ ವಿಶೇಷತೆಗಳ ಕುರಿತಂತೆ ಮಾತನಾಡಿದರು.