ಚಿತ್ರ: ಮ್ಯಾಕ್ಸ್
ನಿರ್ದೇಶನ : ವಿಜಯ್ ಕಾರ್ತಿಕೇಯ
ತಾರಾಗಣ: ಕಿಚ್ಚ ಸುದೀಪ್, ಸುನೀಲ್, ಉಗ್ರಂ ಮಂಜು, ಶರತ್ ಲೋಹಿತಾಶ್ವ, ಸುಕೃತಾ ವಾಗ್ಲೆ, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ, ಶ್ರೀಧರ್ ನಾಯ್ಕ್, ಸುಧಾ ಬೆಳವಾಡಿ, ಗೋವಿಂದೇಗೌಡ ಮತ್ತಿತರರಯ
ರೇಟಿಂಗ್ : **** 4/5
“ಮ್ಯಾಕ್ಸ್” ಮೂಲಕ ಮ್ಯಾಕ್ಸಿಮಂ ಮಾಸ್ ಅಂಶಗಳನ್ನು ಮುಂದಿಟ್ಟುಕೊಂಡು ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಕ್ರಿಸ್ಮಸ್ ಮತ್ತು ಹೊಸ ವರ್ಷಕ್ಕೆ ಮನರಂಜನೆಯ ರಸದೌತಣವನ್ನು ನಿರ್ದೇಶಕ ವಿಜಯ್ ಕಾರ್ತಿಕೇಯ ಉಣಬಡಿಸಿದ್ದಾರೆ.
ಮಾಸ್‍ಆಕ್ಷನ್, ಥ್ರಿಲ್ಲರ್,ಎಮೋಷನ್,ಪೊಲೀಸ್ ಕುಟುಂಬಗಳ ಆತಂಕ, ಜೀವಭಯ, ಯಾರಿಗೇನಾದ್ರು ಆಗಲಿ ನಾವು ಚೆನ್ನಾಗಿರಬೇಕೆಂಬ ಮನೋಭಾವದ ಹೊಂದಿದ ಪೋಲೀಸ್ ಸಿಬ್ಬಂಧಿ, ಬೆಳಗಾವುದರೊಳಗೆ ಸರ್ಕಾರ ಬೀಳಿಸಿ ಮುಖ್ಯಮಂತ್ರಿಯಾಗಬೇಕೆನ್ನುವ ಹಂಬಲ, ತುಡಿತ, ಸಚಿವರ ಮಕ್ಕಳ ಆಟೋಟ,ಪುಂಡಾಟ, ಕಾಣೆಯಾದ ಕರುಳಬಳ್ಳಿಯ ಹುಡುಕಾಟ ಹೀಗೆ ಹಲವು ವಿಷಯಗಳ ಸುತ್ತ ಸಾಗುವ ರೋಚಕ ಕಹಾನಿ.
ಅಮಾನತ್ತುಗೊಂಡ ಪೊಲೀಸ್ ಇನ್ಸ್‍ಪೆಕ್ಟರ್ ಅರ್ಜುನ್ ಮಹಾಕ್ಷಯ್ ಅಲಿಯಾಸ್ ಮ್ಯಾಕ್ಸ್- ಕಿಚ್ಚ ಸುದೀಪ್ ದುಷ್ಟರ ಪಾಲಿನ ಸಿಂಹಸ್ವಪ್ನ. ಈ ಕಾರಣಕ್ಕಾಗಿಯೇ ಹಲವು ಭಾರಿ ಅಮಾನತ್ತುಗೊಂಡ ಪೊಲೀಸ್ ಅಧಿಕಾರಿ. ಬೆಳಗ್ಗೆ ಪೊಲೀಸ್ ಠಾಣೆಗೆ ಬಂದು ಕೆಲಸಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕಾದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ರಾತ್ರಿ ನಡೆದ ಘಟನೆ, ಅದು ಏನು, ಏನೆಲ್ಲಾ ಆಗಿದೆ ಎನ್ನುವುದೇ ರಣ ರೋಚಕ.
ರಾತ್ರೋರಾತ್ರಿ ಪೊಲೀಸ್ ಠಾಣೆಗೆ ಮ್ಯಾಕ್ಸ್ ಬಂದ ನಂತರ ಮುಂದೇನಾಗುತ್ತದೆ. ಬೆಳಗ್ಗೆ ಕೆಲಸಕ್ಕೆ ಹಾಜರಾಗುತ್ತಾನಾ, ಇಲ್ಲ ಅದಕ್ಕಿಂತ ಮುಂಚೆ ಮತ್ತೊಮ್ಮೆ ಅಮಾನತ್ತಾಗುತ್ತಾನಾ ಎನ್ನುವ ಕುತೂಹಲದ ಸಂಗತಿ ಪ್ರೇಕ್ಷಕರನ್ನು ಸೀಟಿನ ಬೆರಳತುದಿಯಲ್ಲಿ ಕೂರಿಸಿ ನೋಡುವಂತೆ ಮಾಡಿದ ಚಿತ್ರ ಇದು.
ನಟ ಸುದೀಪ್ ಚಿತ್ರ ಜೀವನದಲ್ಲಿ ಇದುವರೆಗೆ ಬಂದು ಚಿತ್ರಗಳಿಗಿಂತ ವಿಭಿನ್ನವಾದ ಚಿತ್ರ ಮ್ಯಾಕ್ಸ್. ಮಾಸ್ ಅಂಶಗಳು ಮ್ಯಾಕ್ಸಿಮಂ ಆಗಿದೆ. ಸುಖಾ ಸುಮ್ಮನೆ ಯಾವ ಪಾತ್ರವನ್ನು ತುರುಕುವ ಗೋಜಿಗೂ ಹೋಗಿಲ್ಲ. ಚಿತ್ರ ಎಂದ ಮೇಲೆ ನಾಯಕಿ ಇರಬೇಕು ಎನ್ನುವ ಸಿದ್ದಸೂತ್ರ ಬದಿಗಿಟ್ಟು ಕಥೆಗೆ ಒತ್ತು ನೀಡಿರುವ ಚಿತ್ರ “ಮ್ಯಾಕ್ಸ್”.
ಇನ್ನೊಂದುವಿಷಯ ಸುದೀಪ್ , ಕಲಾವಿದರ ಪಾಲಿಗೆ ಇಷ್ಟ ಆಗೋಕೆ. ತನ್ನ ಪಾತ್ರದ ಜೊತೆಗೆ ತನ್ನೊಂದಿಗೆ ನಟಿಸಿರುವ ಪಾತ್ರಗಳಿಗೂ ಅಷ್ಟೇ ಪ್ರಾಮುಖ್ಯತೆ ನೀಡಿದ್ದಾರೆ. ಹಿರೋಹಿಸಂ ಬದಿಗಿಟ್ಟು ಕಥೆಗೆ ಮತ್ತು ಪಾತ್ರಕ್ಕೆ ಏನು ಬೇಕೋ ಅಷ್ಟು ನಿಭಾಹಿಸಿದ್ದಾರೆ.
ಈ ಕಾರಣಕ್ಕಾಗಿಯೇ ಉಗ್ರಂ ಮಂಜು ಪೊಲೀಸ್ ಪೇದೆಯಾದರೂ ಪಾತ್ರಕ್ಕೆ ಒತ್ತು ನೀಡಿದ್ದಾರೆ. ಜೊತೆಗೆ ಇನ್ಸ್‍ಪೆಕ್ಟರ್ ಜಗದೀಶ್, ಪೊಲೀಸ್ ಸಿಬ್ಬಂಧಿಗಳಾದ ವಿಜಯ್ ಚೆಂಡೂರು, ಗೋವಿಂದೇಗೌಡ, ಸುಕೃತಾ ವಾಗ್ಲೆ, ಸಂಯುಕ್ತ ಹೊರನಾಡು ಅವರ ಪಾತ್ರಗಳೂ ತೆರೆಯ ಮೇಲೆ ವಿಜೃಂಬಿಸಿವೆ.
ನಿರ್ದೇಶಕ ವಿಜಯ್ ಕಾರ್ತಿಕೇಯ ಅವರ ಮಾಮೂಲಿ ಕಥೆಯನ್ನು ಕುತೂಹಲ ಭರಿತವಾಗಿ ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ. ಈ ಮೂಲಕ ಕಿಚ್ಚ ಸುದೀಪ್ ಅಭಿಮಾನಿಗಳು ಹೊಸ ವರ್ಷಕ್ಕೆ ಗೆಲುವಿನ ಉಡುಗೊರೆ ನೀಡಿದ್ದಾರೆ. ಹೀಗಾಗಿ ಮ್ಯಾಕ್ಸ್ ಸಂಭ್ರಮ ಕ್ರಿಸ್ಮಸ್‍ನಿಂದಲೇ ಆರಂಭಗೊಂಡಿದೆ.
ಕಿಚ್ಚ ಸುದೀಪ್, ಹೆಸರಿಗೆ ತಕ್ಕಂತೆ ಅಭಿನಯ ಚಕ್ರವರ್ತಿ ಎನ್ನುವುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ನಟನೆ ಹಾವ ಭಾವ, ಡೈಲಾಗ್ ಮೂಲಕ ಅಭಿಮಾನಿಗಳ ಹೃದಯ ಕದ್ದಿದ್ದಾರೆ. ಇದು ಮ್ಯಾಕ್ಸ್ ವಿಶೇಷ.
ಇನ್ಸ್ಪೆಪೆಕ್ಟರ್ ವರಲಕ್ಷಿ, ಸುನೀಲ್, ಶರತ್ ಲೋಹಿತಾಶ್ವ,ಶ್ರೀಧರ್ ನಾಯ್ಕ್, ಸುದಾ ಬೆಳವಾಡಿ,ವೀಣಾ ಸುಂದರ್, ಸುಂದರ್ ವೀಣಾ ಸೇರಿದಂತೆ ಪ್ರತಿ ಪಾತ್ರವೂ ಚಿತ್ರದ ಅಗತ್ಯತೆಯನ್ನು ನಿರೂಪಿಸಿದೆ.