Chief Editor
Manohar. R (Manu)
Photo Journalist
chitrataramanu@gmail.com
+91 9845549026
ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಚಿತ್ರದ ಮೊದಲ ಹಾಡು ಶಿವ ಶಿವ ಲಿರಿಕಲ್ ವಿಡಿಯೋ ಬಿಡುಗಡೆ
Posted date: 26 Thu, Dec 2024 07:12:57 PM
ಇನ್ನೇನು 2025ರ ಹೊಸ ವರ್ಷಕ್ಕೆ ಕೆಲವೇ ದಿನಗಳು ಬಾಕಿಯಿದೆ, ವರ್ಷದ ಕೊನೆಯಲ್ಲಿ ಬಂದ ಯುಐ, ಮ್ಯಾಕ್ಸ್ ಚಿತ್ರಗಳು ಭರ್ಜರಿ ಯಶಸ್ಸು ಕಾಣುತ್ತಿವೆ, ಈಗ ಹೊಸ ವರ್ಷದ ಆರಂಭದಲ್ಲಿ  ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಚಿತ್ರ ಎಂದರೆ ಕೆಡಿ. ಏಕ್‌ ಲವ್‌ ಯಾ ನಂತರ ಜೋಗಿ ಪ್ರೇಮ್ ನಿರ್ದೇಶನ ಹಾಗೂ  ಆಕ್ಷನ್ ಪ್ರಿನ್ಸ್  ದ್ರುವ ಸರ್ಜಾ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ಇದಾಗಿದ್ದು, ಚಿತ್ರವನ್ನು ದಕ್ಷಿಣ ಭಾರತದ ಹೆಸರಾಂತ ನಿರ್ಮಾಣ ಸಂಸ್ಥೆ ಕೆ.ವಿ.ಎನ್. ಪ್ರೊಡಕ್ಷನ್ಸ್  ನಿರ್ಮಿಸುತ್ತಿದೆ, 
ಕೆಡಿ ಮಾತಿನ ಭಾಗದ ಚಿತ್ರೀಕರಣ ಮುಗಿದು, 2 ಹಾಡುಗಳ ಶೂಟಿಂಗ್ ಮಾತ್ರವೇ ಬಾಕಿ ಇದೆ. ಮಂಗಳವಾರ ಈ ಚಿತ್ರದ ಮೊದಲ ಹಾಡು, ಜನಪದ ಶೈಲಿಯ  ಶಿವ ಶಿವ  ಲಿರಿಕಲ್ ವಿಡಿಯೋ ಬಿಡುಗಡೆ ಸಮಾರಂಭ ಒರಾಯನ್ ಮಾಲ್‌ನಲ್ಲಿ ನೆರವೇರಿತು, ಈ ಹಾಡಿಗೆ ಪ್ರೇಮ್ ಹಾಗೂ ಕೈಲಾಶ್‌ಖೇರ್ ದನಿಯಾಗಿದ್ದು, ಉಳಿದಂತೆ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಅಲ್ಲಿನ ಗಾಯಕರೇ ಹಾಡಿದ್ದಾರೆ. 
 
ಪ್ರೇಮ್ ನಿರ್ದೇಶನದ ಯಾವುದೇ ಚಿತ್ರಗಳಲ್ಲಿ ಹಾಡುಗಳೆ ಹೈಲೈಟಾಗಿರುತ್ತೆ. ಅದೇರೀತಿ ಈ ಚಿತ್ರದಲ್ಲೂ ಅವರು ಸಂಗೀತಕ್ಕೆ ಕಥೆ, ಮೇಕಿಂಗ್ ನಷ್ಟೇ ಪ್ರಾಮುಖ್ಯತೆ ನೀಡಿದ್ದಾರೆ. ಶಿವ ಶಿವ  ಹಾಡಲ್ಲಿ ಶಿವನ ವೈಭವೀಕರಣವನ್ನು ಗ್ರಾಫಿಕ್ ಮೂಲಕ ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಸಂಗೀತ ಆ ಚಿತ್ರದ ಇನ್ ವಿಟೇಶನ್ ಇದ್ದಹಾಗೆ, ಶಿವ ಶಿವ ಹಾಡಿನಲ್ಲಿರುವ ಕಣ್ ಕೋರೈಸುವ ವಿಶ್ಯುಯೆಲ್ಸ್, ಅದ್ದೂರಿ ಮೇಕಿಂಗ್, ಕಿವಿಗಪ್ಪಳಿಸುವ ಹಾಡಿನ ಟ್ಯೂನ್ ಎಂಥವರನ್ನೂ ಬಡಿದೆಬ್ಬಿಸುವಂತಿದೆ.
 
ವೇದಿಕೆಯಲ್ಲಿ ನಿರ್ದೇಶಕ ಪ್ರೇಮ್, ನಾಯಕ ದ್ರುವ ಸರ್ಜಾ, ನಾಯಕಿ ರೀಶ್ಮಾ ನಾಣಯ್ಯ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಕೆವಿಎನ್ ಸಂಸ್ಥೆಯ ಬ್ಯುಸಿನೆಸ್ ಹೆಡ್ ಸುಪ್ರೀತ್, ಆನಂದ್ ಆಡಿಯೋದ ಶಾಮ್, ಕೊರಿಯೋಗ್ರಾಫರ್ ಮೋಹನ್, ಕಲಾನಿರ್ದೇಶಕ ಮೋಹನ್ ಬಿ.ಕೆರೆ ಸೇರಿದಂತೆ ಇಡೀ ಚಿತ್ರತಂಡ  ಹಾಜರಿದ್ದು ಮಾತನಾಡಿದರು, 
 
ಹೊಸ ವರ್ಷಕ್ಕೆ ನಮ್ಮ ಚಿತ್ರದ ಮೊದಲ ಹಾಡಾಗಿ ಶಿವ ಶಿವ  ಬರ‍್ತಾ ಇದೆ, ಕೆಡಿ ಅಂದ್ರೆ ಕಾಳಿದಾಸ, 70ರ ದಶಕದಲ್ಲಿದ್ದ ಜನಪ್ರಿಯ ಜನಪದ ಹಾಡಿನ ಸಾಲನ್ನಿಟ್ಟುಕೊಂಡು ಮಾಡಿದ ಸಾಂಗ್ ಇದು. ಈ ಹಾಡನ್ನು 5 ಭಾಷೆಯಲ್ಲೂ ಬಿಡುಗಡೆ ಮಾಡಿದ್ದೇವೆ, ಹಿಂದಿ ಸಾಂಗನ್ನು ಅಜಯ್ ದೇವಗನ್, ತೆಲುಗು ಸಾಂಗನ್ನು ಹರೀಶ್ ಶಂಕರ್ ಹಾಗೂ  ತಮಿಳು ಸಾಂಗನ್ನು ಲೋಕೇಶ್ ಕನಕರಾಜು ರಿಲೀಸ್ ಮಾಡಿದ್ದಾರೆ. ಪೂರ್ತಿ ಹಾಡನ್ನು ಇನ್ನೂ ಬಿಟ್ಟಿಲ್ಲ, ಫುಲ್ ಸಾಂಗ್ ಬೇರೆಯದೇ ಲೆವೆಲ್‌ನಲ್ಲಿದೆ. 1970ರ ಕಾಲಮಾನವನ್ನು ತೋರಿಸೋದು ಅಷ್ಟು ಸುಲಭವಲ್ಲ, ಆಗ ಬೆಂಗಳೂರು ಹೇಗಿತ್ತು ಅಂತ  ಮೋಹನ್ ಬಿ.ಕೆರೆ ಅವರು ಅದ್ಭುತ ಸೆಟ್ ಹಾಕಿದ್ದರು. ಚಿತ್ರದಲ್ಲಿ ಒಟ್ಟು 6 ಹಾಡುಗಳಿದ್ದು, ಮುಂದೆ ಬರೋ ಸಾಂಗ್ ಎಲ್ಲಾ ಯೂನಿಕ್ ಆಗಿರುತ್ತವೆ. ಇವತ್ತಿನವರೆಗೂ ನೋಡಿರದ ರೀಶ್ಮಾ ಅವರನ್ನು  ಈ ಚಿತ್ರದಲ್ಲಿ ಕಾಣಬಹುದು, ಆಕೆ ಉತ್ತಮ ಪರ್ ಫಾರ್ಮರ್, ಇನ್ನು ಧ್ರುವ ನನ್ನ ಬ್ರದರ್ ಇದ್ದಹಾಗೆ, ಕಾಳಿದಾಸ ಎಷ್ಟು ಇನ್ನೋಸೆಂಟೋ, ಅಷ್ಟೇ ರಾ ಆಗಿರುತ್ತಾನೆ, ಆ ಪಾತ್ರವನ್ನು ದ್ರುವ ರಿಯಲಿಸ್ಟಿಕ್ ಆಗಿ ಮಾಡಿದ್ದಾರೆ. ಈತನನ್ನು ಶಿವಣ್ಣ , ಅಪ್ಪು ಸರ್‌ಗೆ ಹೋಲಿಸುತ್ತೇನೆ, ಏಕೆಂದರೆ ಅಷ್ಟು ಎನರ್ಜಿ ಈತನಲ್ಲಿದೆ, ಚಲಿಸುವ ಕಾರ್ ಮೇಲೆ ನಿಂತು ಡ್ಯಾನ್ಸ್ ಮಾಡಿದ್ದಾನೆ. ನನ್ನ ಸಿನಿಮಾದ ಫಸ್ಟ್ ಹೀರೋನೇ ಮ್ಯೂಸಿಕ್, ನನ್ನ ಕಾಟವನ್ನು ತಡೆದುಕೊಂಡು ಅರ್ಜುನ್ ಜನ್ಯ ಅದ್ಭುತವಾದ ಮ್ಯೂಸಿಕ್ ಮಾಡಿಕೊಟ್ಟಿದ್ದಾರೆ. ಕೆವಿಎನ್ ಸಂಸ್ಥೆ ನನಗೆ ಈವೆಗೂ ಯಾವುದಕ್ಕೂ ಕೊರತೆ ಮಾಡಿಲ್ಲ, ಸುಪ್ರೀತ್ ನಮ್ಮ ಫ್ಯಾಮಿಲಿ ಇದ್ದಹಾಗೆ, ಬರೋ ದಿನಗಳಲ್ಲಿ ಮುಂಬೈನಲ್ಲಿ ಚಿತ್ರದ ಟೀಸರ್ ರಿಲೀಸ್ ಮಾಡುವ ಪ್ಲಾನ್ ಕೂಡ ಇದೆ  ಎಂದು ಚಿತ್ರದ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡಿದರು. 
   ಉಳಿದಂತೆ 2 ಹಾಡುಗಳ ಶೂಟಿಂಗ್ ಮಾತ್ರ ಬಾಕಿಯಿದ್ದು, ಅದರಲ್ಲಿ ಒಂದು ಹಾಡಿಗೆ  ಸೆಟ್ ಹಾಕಿ ಚಿತ್ರೀಕರಿಸಲಾಗುತ್ತದೆ. ಇನ್ನೊಂದು ಹಾಡನ್ನು ವಿದೇಶದಲ್ಲಿ ಚಿತ್ರೀಕರಿಸುವ ಪ್ಲಾನಿದೆ. ಚಿತ್ರಕ್ಕೆ ಒಟ್ಟು 150 ದಿನಗಳ ಶೂಟಿಂಗ್ ಮಾಡಿದ್ದೇವೆ ಎಂದೂ ಸಹ  ಹೇಳಿದರು. 
 
ನಾಯಕ ಧ್ರುವ ಮಾತನಾಡಿ ಈ ಹಾಡು ಬರಲು ಮುಖ್ಯ ಕಾರಣ ಪ್ರೇಮ್, ಅರ್ಜುನ್ ಜನ್ಯ ಅವರು ಕಂಪೋಜ್ ಮಾಡಿರುವ ಸ್ಟೈಲ್ ತುಂಬಾ ಚೆನ್ನಾಗಿತ್ತು. ಜನ್ಯ ಅವರ ಜತೆ ಫಸ್ಟ್ ಟೈಮ್ ನಾನು ವರ್ಕ್ ಮಾಡಿರೋದು. ನಿರ್ಮಾಪಕ ವೆಂಕಟ್ ಅವರು ಫೋಕ್ ಸಾಂಗ್ ಬೇಕು ಎಂದು ಹೇಳಿದ್ದರು, ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ, ಅದ್ದೂರಿ, ಬಹದ್ದೂರ್ ಚಿತ್ರಗಳ ನಂತರ ಮತ್ತೊಂದು  ಮುದ್ಧತೆ ಕ್ಯಾರಿ ಆಗಿರೋ ಪಾತ್ರ ನನ್ನದು ಎಂದು ಹೇಳಿದರು,
 
ನಿರ್ಮಾಪಕ ಸುಪ್ರೀತ್ ಮಾತನಾಡುತ್ತ ಕೆಡಿ ಚಿತ್ರದಲ್ಲಿ ಆಡಿಯೋ ಮುಖ್ಯಪಾತ್ರ ವಹಿಸುತ್ತದೆ. ಚಿತ್ರಕ್ಕಾಗಿ ಪ್ರತಿಯೊಬ್ಬರೂ ತುಂಬಾ ಶ್ರಮ ಹಾಕಿದ್ದಾರೆ ಎಂದರು. 
 
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮಾತನಾಡಿ ಕೆ.ಡಿ. ಚಿತ್ರದ ಮ್ಯೂಸಿಕ್ ಗೆ ಹಾಕಿದ ಹಣದಲ್ಲಿ ಒಂದು ದೊಡ್ಡ ಸಿನಿಮಾನೇ ಮಾಡಬಹುದಿತ್ತು. ಪ್ರೇಮ್ ಅನುಮತಿ ಇಲ್ಲದೆ ಒಂದು ಹುಲ್ಲು ಕಡ್ಡಿನೂ ಅಲ್ಲಾಡೋದಿಲ್ಲ. ಆಕ್ಟಿಂಗ್, ಮ್ಯೂಸಿಕ್ ಅಲ್ಲದೆ ಟ್ರ್ಯಾಕ್ ಸಿಂಗರ್ ಕೂಡ ಅವರೇ ಆಗಿರುತ್ತಾರೆ. ಕೀ ಬೋರ್ಡ್ ಒಂದನ್ನು ನಮಗೆ ಬಿಡುತ್ತಾರೆ. ಅವರೆಂದೂ ಮೊಬೈಲ್ ನಲ್ಲಿ ಸಾಂಗ್ ಕಳಿಸಲ್ಲ ಅವರೇ ಬರ್ತಾರೆ, ಪೆನ್ನಲ್ಲಿ ಲಿರಿಕ್ ಬರೀತಾರೆ. ಕೊರೋನಾ ಸಮಯದಲ್ಲಿ ನಮ್ಮಣ್ಣನ್ನ ಕಳೆದುಕೊಂಡೆ, ಆದರೆ ಪ್ರೇಮ್ ಆ ಜಾಗವನ್ನು ತುಂಬಿದ್ದಾರೆ. ಯೂರೋಪ್ ನಲ್ಲಿ 264 ಪೀಸ್ ಆರ್ಕೆಸ್ಟ್ರಾ ಮಾಡಿಸಿದ್ದಾರೆ‌ ಎಂದು ಮ್ಯೂಸಿಕ್ ಬಗ್ಗೆ ಸಾಕಷ್ಟು ವಿವರಗಳನ್ನು ನೀಡಿದರು. 
 
ನಾಯಕಿ ರೀಶ್ಮಾ ನಾಣಯ್ಯ ಮಾತನಾಡುತ್ತ ಈ ಚಿತ್ರದಲ್ಲಿ ನನಗೆ ಸಾಕಷ್ಟು ಕಲಿಯುವುದಿತ್ತು. ಪ್ರೇಮ್ ಸರ್, ನನಗೆ ಎರಡನೇಬಾರಿಗೆ ಅವಕಾಶ ಕೊಟ್ಟಿದ್ದಾರೆ.  ಫ್ಯಾಮಿಲಿ ಆಡಿಯನ್ಸ್ ಗೆ ತುಂಬಾ ಇಷ್ಟವಾಗುವಂಥ ಸಿನಿಮಾ  ಎಂದು ಹೇಳಿದರು.       ಕಲಾನಿರ್ದೇಶನ ಮೋಹನ್ ಬಿ.ಕೆರೆ ಮಾತನಾಡಿ ಸುಮಾರು 20 ಎಕರೆ ಪ್ರದೇಶದಲ್ಲಿ ಸೆಟ್‌ಹಾಕಿ ಬಹುತೇಕ ಶೂಟಿಂಗ್ ನಡೆಸಿದ್ದೇವೆ. ಅಲ್ಲಿ ಟೌನ್ ಹಾಲ್, ಕೆ.ಆರ್.ಮಾರ್ಕೆಟ್, ಮೈಸೂರು ಬ್ಯಾಂಕ್, ಧರ್ಮರಾಯ ಟೆಂಪಲ್, ಶಿವಾಜಿ ಟಾಕೀಸ್ ಹೀಗೆ ಎಲ್ಲವನ್ನೂ ರಿಕ್ರಿಯೇಟ್ ಮಾಡಿದ್ದೇವೆ  ಎಂದು ಹೇಳಿದರು.  ಉಳಿದಂತೆ ಆನಂದ್ ಆಡಿಯೋದ ಶ್ಯಾಮ್,  ನೃತ್ಯ ನಿರ್ದೇಶಕ ಮೋಹನ್, ಛಾಯಾಗ್ರಾಹಕ‌ ಡೇವಿಡ್, ಸಾಹಿತಿ ಮಂಜುನಾಥ್ ಬಿ.ಎಸ್. ತಂತಮ್ಮ ಕೆಲಸಗಳ ಬಗ್ಗೆ ವಿವರಿಸಿದರು.
 
ಪ್ಯಾನ್ ಇಂಡಿಯಾ ಕೆಡಿ ಚಿತ್ರದಲ್ಲಿ ಬಾಲಿವುಡ್ ನ  ಸಂಜಯ್‌ದತ್, ಶಿಲ್ಪಾ ಶೆಟ್ಟಿ ಪ್ರಮುಖ ಪಾತ್ರದಲ್ಲಿದ್ದಾರೆ. 
 
ಅಂದಹಾಗೆ, 1970-75ರ ಸಮಯದಲ್ಲಿ ನಡೆದ ನೈಜಘಟನೆ ಆಧಾರಿತ ಗ್ಯಾಂಗ್‌ಸ್ಟರ್ ಕಥೆ ಈ ಚಿತ್ರಲ್ಲಿದೆ, ಚಿತ್ರಕ್ಕಾಗಿಯೇ 20 ಎಕರೆಯಷ್ಟು ವಿಶಾಲವಾದ ಜಾಗದಲ್ಲಿ ಬಹು ಕೋಟಿ ವೆಚ್ಚದಲ್ಲಿ ಅದ್ದೂರಿ ಸೆಟ್‌ಹಾಕಲಾಗಿತ್ತು. ಆರು ಕಲರ್ ಫುಲ್  ಹಾಡುಗಳಿಗೆ ಆರು ಜನ ಕೊರಿಯಾಗ್ರಾಫರ್‌ಗಳು ಕೆಲಸ ಮಾಡುತ್ತಿದ್ದಾರೆ. ವಿಕ್ರಾಂತ್ ರೋಣ ಖ್ಯಾತಿಯ ವಿಲಿಯಂ ಡೇವಿಡ್ ಅವರ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ  ಅಲ್ಲದೆ ನೋರಾ ಫತೇಹಿ ಸೇರಿದಂತೆ ಬಾಲಿವುಡ್‌ನ ಅನೇಕ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್, ನಟ ರಮೇಶ್ ಅರವಿಂದ್ ಹೀಗೆ ಹೆಸರಾಂತ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಕನ್ನಡ, ತೆಲುಗು ತಮಿಳು ಹಿಂದಿ ಹಾಗೂ ಮಲಯಾಳಂ ಸೇರಿದಂತೆ  ಬಹುಭಾಷೆಗಳಲ್ಲಿ  ಕೆಡಿ ಚಿತ್ರ ಮುಂದಿನ ವರ್ಷದ ಯುಗಾದಿ ವೇಳೆಗೆ ತೆರೆಕಾಣಲಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಚಿತ್ರದ ಮೊದಲ ಹಾಡು ಶಿವ ಶಿವ ಲಿರಿಕಲ್ ವಿಡಿಯೋ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.