Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಕುಡ್ಲ ನಮ್ದು ಊರು` ಚಿತ್ರದ ಟ್ರೇಲರ್‌ ಮತ್ತು ಆಡಿಯೋ ಬಿಡುಗಡೆ ಕರಾವಳಿಯ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಹೊಸಚಿತ್ರ ತೆರೆಗೆ ಸಿದ್ದ
Posted date: 27 Fri, Dec 2024 08:41:44 AM
ಬಹುತೇಕ ದಕ್ಷಿಣ ಕನ್ನಡ ಜಿಲ್ಲೆಯ ಕಡಲತಡಿಯ ಪ್ರತಿಭೆಗಳೇ ಸೇರಿ ನಿರ್ಮಿಸಿರುವ `ಕುಡ್ಲ ನಮ್ದು ಊರು` ಸಿನೆಮಾ ತೆರೆಗೆ ಬರಲು ತಯಾರಾಗುತ್ತಿದೆ. ಸದ್ಯ ಅಂತಿಮ ಹಂತದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ನಿರತವಾಗಿರುವ `ಕುಡ್ಲ ನಮ್ದು ಊರು` ಚಿತ್ರತಂಡ ಇದೀಗ ಸಿನೆಮಾದ ಟ್ರೇಲರ್‌ ಮತ್ತು ಆಡಿಯೋವನ್ನು ಬಿಡುಗಡೆ ಮಾಡಿದೆ. `ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ` ಮಾಜಿ ಅಧ್ಯಕ್ಷ ಭಾ. ಮ. ಹರೀಶ್‌, `ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ ಬಣಕಾರ್‌, `ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್‌ ಕೆ. ವಿಶ್ವನಾಥ್‌, ನಟ ಚೇತನ್‌ ರಾಜ್ (ಭಜರಂಗಿ ಚೇತನ್‌)  ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಸಮಾರಂಭದಲ್ಲಿ ಹಾಜರಿದ್ದು, `ಕುಡ್ಲ ನಮ್ದು ಊರು` ಸಿನೆಮಾದ ಟ್ರೇಲರ್‌ ಮತ್ತು ಹಾಡುಗಳನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
 
`ಕೃತಾರ್ಥ ಪ್ರೊಡಕ್ಷನ್ಸ್‌` ಬ್ಯಾನರಿನಲ್ಲಿ ನಿರ್ಮಾಣವಾಗಿರುವ ʼಕುಡ್ಲ ನಮ್ದು ಊರುʼ ಸಿನೆಮಾವನ್ನು ಯುವ ಪ್ರತಿಭೆ ದುರ್ಗಾಪ್ರಸಾದ್‌ (ಅಲೋಕ್‌) ಮತ್ತು ಆರ್ಯ ಡಿ. ಕೆ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ. ಯುವನಟ ದುರ್ಗಾಪ್ರಸಾದ್‌ `ಕುಡ್ಲ ನಮ್ದು ಊರು` ಸಿನೆಮಾದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ಉಳಿದಂತೆ ರಮೇಶ್‌, ಪ್ರಕಾಶ್‌ ತುಮ್ಮಿನಾಡು, ಸ್ವರಾಜ್‌ ಶೆಟ್ಟಿ, ಶ್ರೇಯಾ ಶೆಟ್ಟಿ, ಅನಿಕಾ ಶೆಟ್ಟಿ, ನಯನ ಸಾಲಿಯಾನ್‌, ನಿರೀಕ್ಷಾ ಶೆಟ್ಟಿ, ದಿಲೀಪ್‌ ಕಾರ್ಕಳ, ಪ್ರಜ್ವಲ್‌ ಮೊದಲಾದವರು `ಕುಡ್ಲ ನಮ್ದು ಊರು` ಸಿನೆಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
 
`ಕುಡ್ಲ ನಮ್ದು ಊರು` ಸಿನೆಮಾದ ಟ್ರೇಲರ್‌ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಚಿತ್ರದ ನಾಯಕ ನಟ ಕಂ ನಿರ್ದೇಶಕ ದುರ್ಗಾಪ್ರಸಾದ್‌ (ಅಲೋಕ್‌), ʼಸಿನೆಮಾದ ಟೈಟಲ್ಲೇ ಹೇಳುವಂತೆ, ಇದೊಂದು ಅಪ್ಪಟ ದಕ್ಷಿಣ ಕನ್ನಡದ ಕರಾವಳಿ ಸೊಗಡಿನ ಸಿನೆಮಾ. ಇಡೀ ಸಿನೆಮಾವನ್ನು ಕರಾವಳಿ ಮತ್ತು ಅಲ್ಲಿನ ಜನ-ಜೀವನವನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ತೆರೆಗೆ ತರಲಾಗುತ್ತಿದೆ. ಕರಾವಳಿ ಭಾಗದಲ್ಲಿ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು, ಅದನ್ನು ಸಿನೆಮಾ ರೂಪದಲ್ಲಿ ತೆರೆಗೆ ತರುತ್ತಿದ್ದೇವೆ. 1990ರ ದಶಕದ ಹುಡುಗರ ಬಾಲ್ಯ, ಅವರ ಅನುಭವವನ್ನು ಈ ಸಿನೆಮಾ ನೆನಪಿಸುತ್ತದೆ. ಬಹುತೇಕ ಕರಾವಳಿ ಭಾಗದ ಸ್ಥಳೀಯ ಕಲಾವಿದರೇ ಈ ಸಿನೆಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇದು ಕರಾವಳಿಯ ಕಥೆಯಾದರೂ, ಕರ್ನಾಟಕದ ಎಲ್ಲಾ ಭಾಗದ ಜನರಿಗೂ ತಲುಪುವಂತಿದೆ. ಹಾಗಾಗಿ ಈ ಸಿನೆಮಾವನ್ನು ತುಳು ಭಾಷೆಯ ಬದಿಗೆ ಕನ್ನಡ ಭಾಷೆಯಲ್ಲೇ ನಿರ್ಮಿಸಿದ್ದೇವೆ. ಪ್ರೀತಿ, ಸ್ನೇಹ, ಆಕ್ಷನ್‌, ಕಾಮಿಡಿ ಹೀಗೆ ಎಲ್ಲಾ ಥರದ ಮನರಂಜನಾತ್ಮಕ ಅಂಶಗಳೂ ಈ ಸಿನೆಮಾದಲ್ಲಿದೆʼ ಎಂದು ʼಕುಡ್ಲ ನಮ್ದು ಊರುʼ ಸಿನೆಮಾದ ಕಥಾಹಂದರದ ಬಗ್ಗೆ ವಿವರಣೆ ನೀಡಿದರು. 

`ಕುಡ್ಲ ನಮ್ದು ಊರು` ಸಿನೆಮಾದ ಮತ್ತೊಬ್ಬ ನಟ ರಮೇಶ್‌ ಮಾತನಾಡಿ,  ಈ ಸಿನೆಮಾದಲ್ಲಿ ನಾನು ನಾಯಕನ ತಮ್ಮನ ಪಾತ್ರದಲ್ಲಿ ಅಭಿನಯಿಸಿದ್ದೇನೆ. ದಾವಣಗೆರೆಯ ಮೂಲದ ಐಟಿ ಹಿನ್ನೆಲೆಯವನಾದರೂ, ಈ ಸಿನೆಮಾದ ಪಾತ್ರಕ್ಕಾಗಿ ದಕ್ಷಿಣ ಕನ್ನಡ ಶೈಲಿಯ ಕನ್ನಡವನ್ನು ಕಲಿಯಬೇಕಾಯಿತು. ಸಾಕಷ್ಟು ಅಡೆ-ತಡೆಗಳನ್ನು ಎದುರಿಸಿ ಈ ಸಿನೆಮಾವನ್ನು ಮಾಡಿ ಮುಗಿಸಿದ್ದೇವೆ. ಹಣಕಾಸಿನ ತೊಂದರೆಯಿಂದಾಗಿ ಮಧ್ಯದಲ್ಲಿ ಸಿನೆಮಾ ಚಿತ್ರೀಕರಣಕ್ಕೆ ತೊಂದರೆಯಾಗಿತ್ತು. ಕೊನೆಗೆ ಹೇಗೋ, ಅಂದುಕೊಂಡಂತೆ ಸಿನೆಮಾ ಮಾಡಿದ್ದೇವೆ. ಬಹುತೇಕ ಹೊಸಬರೇ ಸೇರಿಕೊಂಡು ಈ ಸಿನೆಮಾ ಮಾಡಿದ್ದೇವೆ. ಸುಮಾರು ಮೂರು ವರ್ಷಗಳ ಹಿಂದೆ ಶುರುವಾದ ಈ ಸಿನೆಮಾ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. `ಕುಡ್ಲ ನಮ್ದು ಊರು` ಸಾಕಷ್ಟು ಅನುಭವಗಳನ್ನು ನೀಡಿದೆ. ನೋಡುಗರಿಗೂ ಈ ಸಿನೆಮಾ ಹೊಸಥರದ ಅನುಭವ ಕೊಡುತ್ತದೆʼ ಎಂಬ ವಿಶ್ವಾಸ ವ್ಯಕ್ತಪಡಿಸಿದರು. 

`ಕುಡ್ಲ ನಮ್ದು ಊರು` ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ನಟಿ ಶ್ರೇಯಾ ಶೆಟ್ಟಿ ಮಾತನಾಡಿ, ನಾನು ಈ ಸಿನೆಮಾದಲ್ಲಿ ನಾಯಕಿಯ ಸೋದರಿಯ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಸಾಕಷ್ಟು ಎಮೋಶನ್ಸ್‌ ಇರುವಂಥ ಪಾತ್ರವಿದು. ಸಿನೆಮಾ ಕೂಡ ತುಂಬ ಸೊಗಸಾಗಿ ಮೂಡಿಬಂದಿದೆ. ಈ ಸಿನೆಮಾದಿಂದ ಸಾಕಷ್ಟು ಕಲಿತಿದ್ದೇನೆ. ಸಿನೆಮಾದ ಬಗ್ಗೆ ಸಾಕಷ್ಟು ನಿರೀಕ್ಷೆಯಿದ್ದು, ಸಿನೆಮಾ ಬಿಡುಗಡೆಯನ್ನು ಎದುರು ನೋಡುತ್ತಿದ್ದೇನೆ  ಎಂದರು. 

`ಕುಡ್ಲ ನಮ್ದು ಊರು` ಸಿನೆಮಾದಲ್ಲಿ ಮೂರು ಹಾಡುಗಳಿದ್ದು, ಈ ಹಾಡುಗಳಿಗೆ ನಿತಿನ್‌ ಶಿವರಾಮ್‌ ಸಂಗೀತ ಸಂಯೋಜಿಸಿದ್ದಾರೆ. ಸಿನೆಮಾಕ್ಕೆ ಶ್ರೀಶಾಸ್ತ ಹಿನ್ನೆಲೆ ಸಂಗೀತ, ಮಯೂರ್‌ ಆರ್‌. ಶೆಟ್ಟಿ ಛಾಯಾಗ್ರಹಣ, ನಿಶಿತ್‌ ಪೂಜಾರಿ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರಕ್ಕೆ ರಕ್ಷಿತ್‌ ಎಸ್‌. ಜೋಗಿ ನೃತ್ಯ ಮತ್ತು ಚಂದ್ರು ಬಂಡೆ ಸಾಹಸ ಸಂಯೋಜಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ `ಕುಡ್ಲ ನಮ್ದು ಊರು`  ಸಿನೆಮಾದ ಚಿತ್ರೀಕರಣ ನಡೆಸಲಾಗಿದೆ. 

ಸದ್ಯ ಟ್ರೇಲರ್‌ ಮತ್ತು ಆಡಿಯೋ ಬಿಡುಗಡೆ ಮಾಡುವ ಮೂಲಕ `ಕುಡ್ಲ ನಮ್ದು ಊರು` ಸಿನೆಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಹೊಸವರ್ಷದ ಆರಂಭದಲ್ಲಿ ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ಸಿನೆಮಾವನ್ನು ಬಿಡುಗಡೆ ಮಾಡಿ ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಕುಡ್ಲ ನಮ್ದು ಊರು` ಚಿತ್ರದ ಟ್ರೇಲರ್‌ ಮತ್ತು ಆಡಿಯೋ ಬಿಡುಗಡೆ ಕರಾವಳಿಯ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಹೊಸಚಿತ್ರ ತೆರೆಗೆ ಸಿದ್ದ - Chitratara.com
Copyright 2009 chitratara.com Reproduction is forbidden unless authorized. All rights reserved.