Chief Editor
Manohar. R (Manu)
Photo Journalist
chitrataramanu@gmail.com
+91 9845549026
ಶಿಡ್ಲಘಟ್ಟದಿಂದ ಸ್ವಿಟ್ಜರ್ ಲ್ಯಾಂಡ್ ವರೆಗೆ ಸಂಜು ವೆಡ್ಸ್ ಗೀತಾ ಕಥೆ..ಮಳೆಯಂತೇ ಬಾ... ಬೆಳಕಂತೇ ಬಾ...ಸುದೀಪ್ ಹರಸಿದ ಹಾಡು
Posted date: 30 Mon, Dec 2024 12:34:34 PM
ಪವಿತ್ರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ  ಚಲವಾದಿ ಕುಮಾರ್ ಅವರ  ನಿರ್ಮಾಣದ  ಬಹು ನಿರೀಕ್ಷಿತ ಸಂಜು ವೆಡ್ಸ್  ಗೀತಾ-2  ಜನವರಿ 10ರಂದು  ಪ್ರಪಂಚದಾದ್ಯಂತ  ಬಿಡುಗಡೆಯಾಗಲಿದೆ. ಶಿಡ್ಲಘಟ್ಟದ ರೇಶ್ಮೆ ಬೆಳೆಗಾರರ ವಿಷಯವನ್ನಿಟ್ಟುಕೊಂಡು ನವಿರಾದ ಪ್ರೇಮಕಥೆಯನ್ನು ನಿರ್ದೇಶಕ ನಾಗಶೇಖರ್  ಈ ಚಿತ್ರದಲ್ಲಿ ಹೇಳಲು ಪ್ರಯತ್ನಿಸಿದ್ದಾರೆ.
 
ಆನಂದ  ಆಡಿಯೋ ಮೂಲಕ ರಿಲೀಸಾಗಿರುವ ಹಾಡುಗಳು ಕೇಳುಗರ ಮನ ಗೆದ್ದಿವೆ. ಇದೀಗ ಈ ಚಿತ್ರದ ಮತ್ತೊಂದು  ಹಾಡನ್ನು  ಕಿಚ್ಚ ಸುದೀಪ್ ಬಿಡುಗಡೆಗೊಳಿಸಿ ಮಾತನಾಡುತ್ತ ಕಿಟ್ಟಿ ಹಾಗೂ ನಾಗಶೇಖರ್ ಸೇರಿ ಈ  ಸಿನಿಮಾ ಮಾಡಿದ್ದಾರೆ. ಹಿಂದೆ ಸಂಜ ವೆಡ್ಸ್ ಗೀತಾ ಸಕ್ಸಸ್ ಆಗಿತ್ತು. ಕವಿರಾಜ್ ಬರೆದ ಮಳೆಯಂತೇ ಹಾಡು ತುಂಬಾ ಚೆನ್ನಾಗಿ ಬಂದಿದೆ. ಇದನ್ನು ರಿಲೀಸ್ ಮಾಡೋದಕ್ಕೆ ತುಂಬಾ ಖುಷಿಯಾಗ್ತಿದೆ ಎಂದು ತಂಡಕ್ಕೆ ಶುಭ ಹಾರೈಸಿದ್ದಾರೆ, ಈ ಕುರಿತು ಮಾಹಿತಿ ಹಂಚಿಕೊಳ್ಳಲು ಆಯೋಜಿಸಲಾಗಿದ್ದ  ಪತ್ರಿಕಾ ಗೋಷ್ಟಿಯಲ್ಲಿ  ನಿರ್ದೇಶಕ ನಾಗಶೇಖರ್,  ಶ್ರೀನಗರ ಕಿಟ್ಟಿ, ಸಂಗೀತ ನಿರ್ದೇಶಕ ಶ್ರೀಧರ್ ವಿ.ಸಂಭ್ರಮ್, ನಿರ್ಮಾಪಕ ಚಲವಾದಿ ಕುಮಾರ್ ಹಾಜರಿದ್ದು ಚಿತ್ರದ ಕುರಿತಂತೆ ಮಾತನಾಡಿದರು. 
 
ಈ ಸಂದರ್ಭದಲ್ಲಿ ಮಾತು ಆರಂಭಿಸಿದ ನಾಗಶೇಖರ್, ರೇಶ್ಮೆ ಬೆಳೆಗಾರರ ಕುರಿತ ಗಹನವಾದ ವಿಚಾರ ಇಟ್ಟುಕೊಂಡು ಈ ಚಿತ್ರ ಮಾಡಿದ್ದೇನೆ, ಅದರ ಜತೆಗೊಂದು ಲವ್ ಸ್ಟೋರಿಯೂ ಸಾಗುತ್ತದೆ, ಈ ಚಿತ್ರದ ಎಳೆಯನ್ನು ಕಿಚ್ಚ ಸುದೀಪ್ ಅವರು ಮಾಣಿಕ್ಯ ಶೂಟಿಂಗ್ ಟೈಂನಲ್ಲಿ ನನಗೆ ಕೊಟ್ಟಿದ್ದರು. ಇಂಥ ಕಥೆಗಳನ್ನು ನೀನು ಚೆನ್ನಾಗಿ ಹ್ಯಾಂಡಲ್ ಮಾಡ್ತೀಯ ಅಂತ ನನಗೊಪ್ಪಿಸಿದ್ದರು. ಸಂಜು ವೆಡ್ಸ್ ಗೀತಾ-2 ಕಥೆಯ ಕ್ರೆಡಿಟ್ ಸುದೀಪ್ ಅವರಿಗೇ ಸಲ್ಲುತ್ತದೆ. ಇಂದು ನಮ್ಮ ಚಿತ್ರದ ಮೆಲೋಡಿ ಹಾಡನ್ನು ರಿಲೀಸ್ ಮಾಡುವ ಮೂಲಕ ನಮಗೆ ಮತ್ತೊಮ್ಮೆ ಹರಸಿದ್ದಾರೆ. ಶಿಡ್ಲಘಟ್ಟದಲ್ಲಿ ಪ್ರಾರಂಭವಾಗುವ ಕಥೆ  ಸ್ವಿಟ್ಜರ್‌ಲ್ಯಾಂಡ್‌ವರೆಗೂ ಹೋಗುತ್ತದೆ, ಚಿತ್ರದಲ್ಲಿ ರೇಶ್ಮೆ ಬೆಳೆಗಾರ ಸಂಜು ಆಗಿ ಶ್ರೀನಗರ ಕಿಟ್ಟಿ  ಕಾಣಿಸಿಕೊಂಡಿದ್ದು, ಗೀತಾ ಪಾತ್ರದಲ್ಲಿ ರಚಿತಾರಾಮ್ ಅಭಿನಯಿಸಿದ್ದಾರೆ. ಶಿಡ್ಲಘಟ್ಟದಲ್ಲಿ ಅತಿಹೆಚ್ಚು ರೇಶ್ಮೆ ಬೆಳೆಯುತ್ತಾರೆ, ಆದರೆ ಅದರ ಕ್ರೆಡಿಟ್ ಬೇರೊಂದು ಕಡೆ  ಹೋಗುತ್ತಿದೆ, ಇದೇ ವಿಷಯವನ್ನು ಚಿತ್ರದಕ್ಲಿ ತೆಗೆದುಕೊಂಡಿದ್ದೇನೆ. ಇದು ಬೇರೆಯದೇ ಪ್ಯಾಟ್ರನ್ ಸಿನಿಮಾ, ಒಂದು ಸಿನಿಮಾಗೆ ಹಾಡುಗಳೇ ಇನ್‌ವಿಟೇಶನ್, ಈ ಹಿಂದೆ 2 ಸಾಂಗ್ ಬಿಟ್ಟಿದ್ದೆವು, ಅವುಗಳಿಗೆ ನಮ್ಮ ನಿರೀಕ್ಷೆಗೂ ಮೀರಿ ಜನ ರಿಯಾಕ್ಟ್ ಮಾಡಿದ್ದಾರೆ.
 
ಈ ಸಾಂಗನ್ನು ಗಗನವೇ ಬಾಗಿ ಹಾಡಿದ್ದ ಶ್ರೇಯಾ ಘೋಷಾಲ್ ಕೈಲಿ ಹಾಡಿಸಬೇಕೆಂದಿತ್ತು, ಇತ್ತೀಚೆಗೆ ಅವರು ಕನ್ನಡದಲ್ಲಿ ಹಾಡಲ್ಲ ಎಂದು ಗೊತ್ತಾಗಿ  ಅಚ್ಚ ಕನ್ನಡದ  ಪ್ರತಿಭೆ  ಸಂಗೀತಾ ರವೀಂದ್ರನಾಥ್ ಕೈಲಿ ಹಾಡಿಸಿದೆವು ಅದ್ಭುತವಾಗಿ ಬಂತು, ಅವರಿಂದಲೇ ಮತ್ತೆರಡು  ಹಾಡುಗಳನ್ನು ಹಾಡಿಸಿದ್ದೇವೆ, ಜತೆಗೆ ನಂದಿತಾ ಕೂಡ ಹಾಡಿದ್ದಾರೆ, ಸ್ವಿಟ್ಜರ್‌ಲ್ಯಾಂಡ್‌ನಲ್ಲಿ 10 ಸುಂದರ  ಲೊಕೇಶನ್‌ಗಳನ್ನು ಗುರ್ತಿಸಿ ಶೂಟ್ ಮಾಡಿದ್ದೇವೆ. 
 
ನಿರ್ಮಾಪಕರು ಯಾವುದಕ್ಕೂ ಬೇಡ ಎನ್ನದೆ ಒಂದೊಳ್ಳೇ ಚಿತ್ರವನ್ನು ಕನ್ನಡಿಗರಿಗೆ ನೀಡಬೇಕೆಂಬ ಉದ್ದೇಶದಿಂದ ಪ್ರೀತಿಯಿಂದ ಖರ್ಚು ಮಾಡಿದ್ದಾರೆ. ಇವತ್ತು ಅವರ ಬರ್ತ್ಡೇ, ಈ ಹಾಡನ್ನು ಅವರಿಗೆ ಡೆಡಿಕೇಟ್ ಮಾಡುತ್ತಿದ್ದೇವೆ  ಎಂದು ಹೇಳಿದರು, ಈಗಾಗಲೇ ರಿಲೀಸಾಗಿರುವ ಅವನು ಸಂಜು, ಅವಳು ಗೀತಾ, ಅವರಿಬ್ಬರು ಸೇರಲೂ ಸಂಗೀತಾ ಎಂಬ ಮೆಲೋಡಿ ಹಾಡು ಸಂಗೀತ ಪ್ರಿಯರ ಮೆಚ್ಚಿನ ಗೀತೆಯಾಗಿದೆ.  
 
ನಂತರ ನಿರ್ಮಾಪಕ ಛಲವಾದಿ ಕುಮಾರ್ ಮಾತನಾಡುತ್ತ ನಿರ್ದೇಶಕರಿದ್ದಾಗ ನಾವು ಮಾತನಾಡಲು ಅವಕಾಶ ಇರಲ್ಲ,  ಈ ಹಿಂದೆ ನಾನೊಂದು ಸಿನಿಮಾ ಮಾಡಿದ್ದೆ, ಕಾರಣಾಂತರಗಳಿಂದ ಅದು ರಿಲೀಸಾಗಲಿಲ್ಲ, ಇದು ನನ್ನ ನಿರ್ಮಾಣದ ಎರಡನೇ ಚಿತ್ರ, ಈ ಮೊದಲು ನಾನೇ ಕಥೆಯನ್ನು ರೆಡಿ ಮಾಡಿಕೊಂಡಿದ್ದೆ, ನಂತರ ನಾಗಶೇಖರ ಬಂದು ಹೇಳಿದ ಈ ಸ್ಟೋರಿ ತುಂಬಾ ಇಷ್ಟವಾಯಿತು, ಎಲ್ಲರೂ ಸೇರಿ ಚಿತ್ರವನ್ನು ಪ್ರಾರಂಭಿಸಿದೆವು, ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಶೂಟ್ ಮಾಡಿದ್ದು, ಒಂದು ಟ್ರಿಪ್ ಹೋಗಿಬಂದ ಹಾಗಾಯ್ತು, ಇದು ಅಪ್ಪಟ ಪ್ಯಾಮಿಲಿ ಲವ್ ಸ್ಟೋರಿ. ನವಿರಾದ ಪ್ರೇಮದ ಜತೆ ರೈತರ ಬಗ್ಗೆಯೂ ಹೇಳಿದ್ದಾರೆ. ಅಣ್ಣಾವ್ರ  ಬಂಗಾರದ ಮನುಷ್ಯ ಚಿತ್ರವನ್ನು ನೆನಪಿಸುತ್ತದೆ. ಕ್ಯಾಮೆರಾ ಮ್ಯಾನ್ ಸತ್ಯ ಹೆಗಡೆ, ಸಂಗೀತ ನಿರ್ದೇಶಕ ಶ್ರೀಧರ ವಿ. ಸಂಭ್ರಮ್ ಎಲ್ಲರೂ  ಸಪೋರ್ಟ್  ಮಾಡಿದ್ದರಿಂದ ಚಿತ್ರ ತುಂಬಾ ಚೆನ್ನಾಗಿ ಬಂದಿದೆ. ಮೊನ್ನೆಯಷ್ಟೇ ಸೆನ್ಸಾರಾಯಿತು, ಒಂಚೂರೂ ಕಟ್ ಹೇಳದೆ ಯು ಕೊಟ್ಟಿದ್ದಾರೆ ಎಂದು ಹೇಳಿದರು,  
 
ನಾಯಕ ಶ್ರೀನಗರ ಕಿಟ್ಟಿ ಮಾತನಾಡುತ್ತ  ಚಿತ್ರದಲ್ಲಿ ಪ್ರತಿ ಹಾಡಿಗೂ ಅದರದೇ ಆದ ಪ್ರಾಮುಖ್ಯತೆಯಿದೆ. 2025ರ ಮೊದಲ ಸಿನಿಮಾವಾಗಿ  ನಾವು ಬರ್ತಿದ್ದೇವೆ.ಒಂದು ಲವ್ ಸ್ಟೋರಿ, ಅದರೊಂದಿಗೆ ಮುಖ್ಯವಾದ ವಿಷಯ ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಶ್ರೀಧರ್ ಬಹು ಸುಂದರವಾದ ಹಾಡುಗಳನ್ನು ಮಾಡಿಕೊಟ್ಟಿದ್ದಾರೆ. ಒಬ್ಬ ರೇಶ್ಮೆ  ಬೆಳೆಗಾರನಾಗಿ ನಾನು ಕಾಣಿಸಿಕೊಂಡಿದ್ದೇನೆ ಎಂದರು. 
 
ಶ್ರೀಧರ್ ಸಂಭ್ರಮ್ ಮಾತನಾಡುತ್ತ ಒಂದೊಂದು ಹಾಡೂ ಒಂದು ಪ್ಯಾಟ್ರನ್ ನಲ್ಲಿದೆ. ಹೊಸ ಸಿಂಗರ್ಸ್ ಪರಿಚಯಿಸಿದ್ದೇವೆ. ತುಂಬಾ ಚೆನ್ನಾಗಿ ಹಾಡಿದ್ದಾರೆ. ಇದರ ಎಲ್ಲಾ ಕ್ರೆಡಿಟ್ ನಾಗಶೇಖರ್ ಅವರಿಗೆ ಸಲ್ಲುತ್ತದೆ ಎಂದರು. ಪಿಆರ್ ಓ ನಾಗೇಂದ್ರ ಮಾತನಾಡಿ ನಾಗಶೇಖರ್ ಮೊದಲಿಂದಲೂ ಸದಭಿರುಚಿಯ ಸಿನಿಮಾ ಮಾಡಿಕೊಂಡು ಬಂದವರು. ಇಡೀ ಚಿತ್ರ ಒಂದು ಪೇಂಟಿಂಗ್ ಥರ ಇದೆ. ನೋಡುತ್ತಲೇ ಚಿತ್ರ ಮುಗಿದೇ ಹೋಯ್ತಾ ಅನಿಸುತ್ತೆ. ಇಂಥ ಚಿತ್ರಕ್ಕೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟ ನಿರ್ಮಾಪಕರಿಗೆ ಧನ್ಯವಾದ ಎಂದರು.
 
ವಿಶೇಷವಾಗಿ  ಚಿತ್ರದಲ್ಲಿ ನಟ ಚೇತನ್ ಚಂದ್ರ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ರಾಗಿಣಿ ದ್ವಿವೇದಿ ಅವರ ಡ್ಯಾನ್ಸ್ ನಂಬರ್ ಸಾಂಗ್ ಈಗಾಗಲೇ ವೈರಲ್  ಆಗಿದೆ.  ಸತ್ಯ ಹೆಗಡೆ ಅವರ ಛಾಯಾಗ್ರಹಣ, ಶ್ರೀಧರ್ ವಿ. ಸಂಭ್ರಮ್ ಅವರ ಸಂಗೀತ ನಿರ್ದೇಶನ, ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ, ರಂಗಾಯಣ ರಘು, ಸಾಧು ಕೋಕಿಲ, ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್ ಅಲ್ಲದೆ ಖಳನಟ ಸಂಪತ್‌ಕುಮಾರ್ ಹೆಸರಾಂತ ಕಲಾವಿದರೇ ಚಿತ್ರದಲ್ಲಿ ಅಭಿನಯಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಶಿಡ್ಲಘಟ್ಟದಿಂದ ಸ್ವಿಟ್ಜರ್ ಲ್ಯಾಂಡ್ ವರೆಗೆ ಸಂಜು ವೆಡ್ಸ್ ಗೀತಾ ಕಥೆ..ಮಳೆಯಂತೇ ಬಾ... ಬೆಳಕಂತೇ ಬಾ...ಸುದೀಪ್ ಹರಸಿದ ಹಾಡು - Chitratara.com
Copyright 2009 chitratara.com Reproduction is forbidden unless authorized. All rights reserved.