ಭರತ್ ಸಿನಿ ಕ್ರಿಯೇಶನ್ಸ್ ಲಾಂಛನದಲ್ಲಿ ಸಿದ್ದವಾಗುತ್ತಿರುವ `ಶ್ರೀ ಜಗನ್ಮಾತೆ ಅಕ್ಕಮಹಾದೇವಿ` ಚಿತ್ರದ ಮೂರು ಹಾಡುಗಳನ್ನು ವಿಷ್ಣುಕಾಂತ್-ಸುರಕ್ಷಾ ಅಭಿನಯದಲ್ಲಿ ಗಲ್ಬರ್ಗಾ, ಬೀದರ್, ಶ್ರೀಶೈಲ ಹಾಗೂ ಕಾಡು ಗುಡ್ಡದ ಸರೋವರ ಜಲಪಾತಗಳಲ್ಲಿ ಚಿತ್ರೀಕರಣ ಮುಗಿಸಿ, ಬಾಕಿ ವಚನಗಳ ದೃಶ್ಯಗಳನ್ನು ಸೆರೆಹಿಡಿಯಬೇಕಾಗಿದೆ ಎಂಬುದಾಗಿ ಚಿತ್ರತಂಡವು ಮಾಹಿತಿ ಹಂಚಿಕೊಂಡಿದೆ. ಹಿರಿಯ ತಂತ್ರಜ್ಘ ವಿಷ್ಣುಕಾಂತ್.ಬಿ.ಜೆ ನಿರ್ಮಾಣ, ನಿರ್ದೇಶನ ಜತೆಗೆ ಮಹತ್ವದ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಸುಮಾರು 900 ವರ್ಷಗಳ ಹಿಂದೆ ನಡೆದ ಅಕ್ಕಮಹಾದೇವಿ ಕಥೆಯನ್ನು ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಶ್ರೀ ಬಸವಣ್ಣ ಮತ್ತು ಅಕ್ಕಮಹಾದೇವಿ ಬರೆದಿರುವ 21 ವಚನಗಳನ್ನು ಬಳಸಿಕೊಂಡು ನಿರ್ದೇಶಕರು ಮೂರು ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ.
ಆರ್.ಪಳನಿಸೇನಾಪತಿ ಸಂಗೀತ ಸಾರಥ್ಯದಲ್ಲಿ ಲೈವ್ ವಾದ್ಯಗಳೊಂದಿಗೆ ಧ್ವನಿಗ್ರಹಣ ನಡೆಸಿರುವುದು ವಿಶೇಷ. ತಾರಾಗಣದಲ್ಲಿ ಭವ್ಯ, ಶ್ವೇತಾ, ಬಿರಾದಾರ್, ಡಾ.ಹೆಲನ್, ಪಲ್ಲಕ್ಕಿ ರಾಧಾಕೃಷ್ಣ, ತಬಲಾನಾಣಿ, ಸುಚೇಂದ್ರಪ್ರಸಾದ್, ಎಂ.ಪಾಟೀಲ್ ಮುಂತಾದವರು ನಟಿಸುತ್ತಿದ್ದಾರೆ. ಛಾಯಾಗ್ರಹಣ ರವಿಸುವರ್ಣ, ನೃತ್ಯ ಮದನ್‌ಹರಿಣಿ, ಸಂಕಲನ ಅಮಿತ್‌ಜವಳಕರ ಅವರದಾಗಿದೆ.