Chief Editor
Manohar. R (Manu)
Photo Journalist
chitrataramanu@gmail.com
+91 9845549026
``ಲ್ಯಾಂಡ್ ಲಾರ್ಡ್``ಚಿತ್ರದ ಚಿತ್ರೀಕರಣದಲ್ಲಿ ನಟ ವಿಜಯ್ ಕುಮಾರ್(ದುನಿಯಾ ವಿಜಯ್) ಹುಟ್ಟುಹಬ್ಬ
Posted date: 21 Tue, Jan 2025 02:28:25 PM
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಯಕರಾಗಿ ನಟಿಸಿದ್ದ "ಸಾರಥಿ" ಚಿತ್ರವನ್ನು ನಿರ್ಮಿಸಿದ್ದ ಕೆ‌.ವಿ.ಸತ್ಯಪ್ರಕಾಶ್ ಅವರು ಹನ್ನೆರಡು ವರ್ಷಗಳ ನಂತರ "ಸಾರಥಿ ಫಿಲಂಸ್" ಮೂಲಕ ನೂತನ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ನಿರ್ಮಾಣಕ್ಕೆ ಸತ್ಯಪ್ರಕಾಶ್ ಅವರ ಪುತ್ರ ಸೂರಜ್ ಗೌಡ ಅವರು ಸಾಥ್ ನೀಡಿದ್ದಾರೆ. "ಜಂಟಲ್ ಮ್ಯಾನ್",   "ಗುರುಶಿಷ್ಯರು" ಚಿತ್ರಗಳ ನಿರ್ದೇಶಕ, "ಕಾಟೇರ" ಚಿತ್ರದ ಲೇಖಕ ಜಡೇಶ ಕೆ ಹಂಪಿ ನಿರ್ದೇಶನದ ಹಾಗೂ ವಿಜಯ್ ಕುಮಾರ್(ದುನಿಯಾ ವಿಜಯ್) ನಾಯಕರಾಗಿ ನಟಿಸುತ್ತಿರುವ ಚಿತ್ರ "ಲ್ಯಾಂಡ್ ಲಾರ್ಡ್". ಪ್ರಸ್ತುತ ಈ ಚಿತ್ರದ ಚಿತ್ರೀಕರಣ ನೆಲಮಂಗಲದ ಬಳಿ ನಿರ್ಮಿಸಲಾಗಿರುವ ಅದ್ದೂರಿ ಸೆಟ್ ನಲ್ಲಿ ನಡೆಯುತ್ತಿದೆ. ಇದೇ‌ ಸಂದರ್ಭದಲ್ಲಿ ನಾಯಕ ದುನಿಯಾ ವಿಜಯ್ ಅವರ ಹುಟ್ಟುಹಬ್ಬ ಆಚರಣೆ ಹಾಗೂ ಪತ್ರಿಕಾಗೋಷ್ಠಿಯನ್ನು ಚಿತ್ರತಂಡ ಆಯೋಜಿಸಿತ್ತು. ದುನಿಯಾ ವಿಜಯ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಚಿತ್ರತಂಡದ ಸದಸ್ಯರು, " ಲ್ಯಾಂಡ್ ಲಾರ್ಡ್" ಚಿತ್ರದ ಕುರಿತು ಮಾತನಾಡಿದರು.
 
ಇದೊಂದು ಗ್ರಾಮೀಣ ಸೊಗಡಿನ ಕಥೆ. 1980 ರ ಕಾಲಘಟ್ಟದಲ್ಲಿ ನಡೆಯುವ‌ ಕಥೆಯೂ ಹೌದು. ನಮ್ಮ ಚಿತ್ರಕ್ಕೆ "ಲ್ಯಾಂಡ್ ಲಾರ್ಡ್" ಅಂತ ಹೆಸರಿಡಲಾಗಿದ್ದು, 'ಆಳಿದವರ ಕಥೆಯಲ್ಲ. ಅಳಿದು ಉಳಿದವರ ಕಥೆ" ಎಂಬ ಅಡಿಬರಹವಿದೆ. "ಸಾರಥಿ" ಅಂತಹ ಸೂಪರ್ ಹಿಟ್ ಚಿತ್ರದ ನಿರ್ಮಾಪಕರಾದ ಕೆ.ವಿ.ಸತ್ಯಪ್ರಕಾಶ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಅವರ ಪುತ್ರ ಸೂರಜ್ ಗೌಡ ಅವರು ತಂದೆಗೆ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಇನ್ನೂ, ಈ ಕಥೆಗೆ ವಿಜಯ್ ಅವರೆ ಸೂಕ್ತ ನಾಯಕ. ರಚಿತಾರಾಮ್ ಈ ಚಿತ್ರದ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ‌‌. ವಿಜಯ್ ಅವರ ಪುತ್ರಿ ರಿತನ್ಯ ಸಹ ಈ ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಚಾಮಿ ಗೌಡ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನವಿದೆ. ಮಾಸ್ತಿ ಹಾಗೂ ಶ್ರೀಕಾಂತ್ ಸಂಭಾಷಣೆ ಬರೆದಿದ್ದಾರೆ ಎಂದು ನಿರ್ದೇಶಕ ಜಡೇಶ್ ಕೆ ಹಂಪಿ ತಿಳಿಸಿದರು.
 
ಈ ಬಾರಿ ನನ್ನ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆಗೆ ಆಚರಿಸಿಕೊಳ್ಳಲು ಆಗಲಿಲ್ಲ. ಅದಕ್ಕಾಗಿ ಅವರಲ್ಲಿ ಕ್ಷಮೆ ಕೇಳುತ್ತೇನೆ ಎಂದು ಮಾತನಾಡಿದ ನಾಯಕ ವಿಜಯ್ ಕುಮಾರ್, ಜಡೇಶ್ ಒಂದೊಳ್ಳೆ ಗ್ರಾಮೀಣಾ ಸೊಗಡಿನ ಕಥೆ ಮಾಡಿಕೊಂಡಿದ್ದಾರೆ‌. ನನ್ನ ಬಾಲ್ಯದಲ್ಲಿ ನಮ್ಮ ಹಳ್ಳಿಯಲ್ಲಿ ವಿದ್ಯುತ್ ದೀಪಗಳು ಹೆಚ್ಚು ಇರಲಿಲ್ಲ. ಬುಡ್ಡಿ ದೀಪಗಳೆ ಹೆಚ್ಚು. ನಾನು ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಗೆಟಪ್ ನಲ್ಲಿ ನಮ್ಮ ಹಳ್ಳಿಯ ಹಿರಿಯರು ಇರುತ್ತಿದ್ದರು. ಅಲ್ಲಿ ಜಾತಿ, ಮತ ಎಂಬ ಭೇದಭಾವ ಇರಲಿಲ್ಲ. ಇದ್ದದ್ದು ಎರಡೇ. ಒಂದು ಬಡವ. ಮತ್ತೊಂದು ಶ್ರೀಮಂತ. ಈ ಚಿತ್ರದಲ್ಲಿ ನಾನು ಬಡವರ ಪ್ರತಿನಿಧಿಯಾಗಿ ಅಭಿನಯಿಸುತ್ತಿದ್ದೇನೆ. ಸತ್ಯಪ್ರಕಾಶ್ ಹಾಗೂ ಸೂರಜ್ ಗೌಡ ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡುತ್ತಿದ್ದಾರೆ. ಉತ್ತಮ ಚಿತ್ರತಂಡದ ಜೊತೆಗೆ ಕೆಲಸ ಮಾಡುತ್ತಿರುವ ಖುಷಿ ಇದೆ ಎಂದರು.
 
"ಸಾರಥಿ" ಚಿತ್ರ ನನಗೆ ತುಂಬಾ ಕೀರ್ತಿ ತಂದುಕೊಟ್ಟ ಚಿತ್ರ. ಆನಂತರ ಕೆಲವು ಚಿತ್ರಗಳ ಕಥೆ ಕೇಳಿದ್ದೆ. ಕಾರಣಾಂತರದಿಂದ ನಿರ್ಮಿಸಲು ಆಗಿರಲಿಲ್ಲ. ಜಡೇಶ್ ಅವರ ಕಥೆ ಇಷ್ಟವಾಯಿತು. ಕೆಲವೇ ದಿನಗಳಲ್ಲಿ ಈ ಚಿತ್ರ ಆರಂಭವಾಯಿತು. ನಿರ್ಮಾಣದಲ್ಲಿ ನನ್ನ ಜೊತೆಗೆ ಮಗ ಸೂರಜ್ ಗೌಡ ಇದ್ದಾರೆ. ನಾಯಕ ದುನಿಯಾ ವಿಜಯ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದು ನಿರ್ಮಾಪಕ ಸತ್ಯಪ್ರಕಾಶ್ ತಿಳಿಸಿದರು.
 
ವಿಜಯ್ ಅವರಿಗೆ ಶುಭಾಶಯ ತಿಳಿಸಿ ಮಾತನಾಡಿದ ಸಹ ನಿರ್ಮಾಪಕ ಸೂರಜ್ ಗೌಡ, ಈಗಾಗಲೇ ಚಿತ್ರಕ್ಕೆ ಎರಡು ಹಂತಗಳ ಚಿತ್ರೀಕರಣ ಮುಕ್ತಾಯವಾಗಿ, ಈಗ ಮೂರನೇ ಹಂತದ ಚಿತ್ರೀಕರಣ ನಡೆಯುತ್ತಿದೆ‌. ಮಾರ್ಚ್ ವೇಳೆಗೆ ಚಿತ್ರೀಕರಣ ಪೂರ್ಣಗೊಳಿಸಿ, ಆದಷ್ಟು ಬೇಗ ಚಿತ್ರವನ್ನು ತೆರೆಗೆ ತರುತ್ತೇವೆ ಎಂದರು.  

ಇದು ಈ ನೆಲದ ಕಥೆ.‌ ಕೋಲಾರ ಭಾಗದಲ್ಲಿ ನಡೆಯುವ ಕಥೆ. ಜಡೇಶ್ ಈ ನೆಲದ ಕಥೆಗಾರ. ಕಥೆ ತುಂಬಾ ಚೆನ್ನಾಗಿದೆ. ಶ್ರೀಕಾಂತ್ ಅವರು ನನ್ನ ಜೊತೆಗೆ ಈ ಚಿತ್ರಕ್ಕೆ‌ ಸಂಭಾಷಣೆ ಬರೆಯುತ್ತಿದ್ದಾರೆ ಎಂದು ಸಂಭಾಷಣೆಕಾರ ಮಾಸ್ತಿ ತಿಳಿಸಿದರು.  

ನಾನು ಹಾಗೂ ಅಪ್ಪ‌, ಈ ಚಿತ್ರದಲ್ಲೂ ಅಪ್ಪ, ಮಗಳಾಗಿಯೇ ಅಭಿನಯಿಸುತ್ತಿದ್ದೇವೆ‌. ಮೊದಲ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ದುನಿಯಾ ವಿಜಯ್ ಪುತ್ರಿ ರಿತನ್ಯ. ಸಂಭಾಷಣೆಕಾರ ಶ್ರೀಕಾಂತ್, ನಿರ್ಮಾಣ ನಿರ್ವಾಹಕ ನರಸಿಂಹ ಜಾಲಹಳ್ಳಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ``ಲ್ಯಾಂಡ್ ಲಾರ್ಡ್``ಚಿತ್ರದ ಚಿತ್ರೀಕರಣದಲ್ಲಿ ನಟ ವಿಜಯ್ ಕುಮಾರ್(ದುನಿಯಾ ವಿಜಯ್) ಹುಟ್ಟುಹಬ್ಬ - Chitratara.com
Copyright 2009 chitratara.com Reproduction is forbidden unless authorized. All rights reserved.