ಚಿನ್ನದ ಆಸೆ ಮಾನವನಿಗಷ್ಟೇ ಅಲ್ಲ, ಆತ ಸತ್ತು ಅಂತರ್ ಪಿಶಾಚಿಯಾದರೂ ಸಹ ಹಾಗೇ ಇರುತ್ತದೆ ಎನ್ನುವುದು ಈವಾರ ತೆರೆಕಂಡಿರುವ ಫಾರೆಸ್ಟ್ ಚಿತ್ರದ ಮೂಲಕ ತಿಳಿಯುತ್ತದೆ. ಇಲ್ಲಿ ದೆವ್ವಗಳೇ ಮತ್ತೊಂದು ದೆವ್ವದ ಮೇಲೆ ಸೇಡು ತೀರಿಸಿಕೊಳ್ಳುತ್ತವೆ.
ದೆವ್ವಗಳೇ ಹೊಡೆದಾಡಿಕೊಳ್ಳುವುದನ್ನು ನೀವು ನೋಡಬೇಕೆಂದರೆ ಇವತ್ತೇ ನಿಮ್ಮ ಹತ್ತಿರದ ಥೇಟರ್‌ಗೆ ಹೋಗಿ ಫಾರೆಸ್ಟ್ ಚಿತ್ರವನ್ನು ನೋಡಿಕೊಂಡು ಬನ್ನಿ. ಮನರಂಜನೆಯನ್ನೇ ಪ್ರಮುಖವಾಗಿಟ್ಟುಕೊಂಡು ನಿರೂಪಿಸಿರುವ ಚಿತ್ರವಿದು. ಕಾಡಲ್ಲಿ ಅಡಗಿಸಿಟ್ಟಿರುವ ಕೋಟ್ಯಾಂತರ ಬೆಲೆ ಬಾಳುವ ಚಿನ್ನದ ಪೆಟ್ಟಿಗೆಯನ್ನು ಹುಡುಕಿಕೊಂಡು ಕಾಡಿಗೆ ಬರುವ ಗೋಪಾಲಸ್ವಾಮಿ (ರಂಗಾಯಣರಘು), ಮೀನಾಕ್ಷಿ(ಅರ್ಚನಾ ಕೊಟ್ಟಿಗೆ), ಸುನಿಲ(ಗುರುನಂದನ್), ಕುಮಾರ (ಚಿಕ್ಕಣ್ಣ) ಹಾಗೂ ಸತೀಶ(ಅನೀಶ್) ಹಾಗೂ ಆ ಚಿನ್ನದ ಪೆಟ್ಟಿಗೆ ಕಾಯುತ್ತಿರುವ ಬೀರನ ಆತ್ಮದ ಸುತ್ತ ನಡೆಯುವ ಕಥೆಯೇ ಓಅರೆಸ್ಟ್ ಚಿತ್ರದ ಕಾನ್ಸೆಪ್ಟ್. ಕಾಡುಗಳ್ಳ ವೀರಪ್ಪನ್ ಹೆಸರನ್ನು ಇಲ್ಲಿ ಬೀರ ಎಂದು ಬದಲಿಸಲಾಗಿದೆ. ಆ ಕಾಡುಗಳ್ಳ ವೀರಪ್ಪನ್ ಅದೆಷ್ಟೋ ಆನೆಗಳು, ಹುಲಿ ಚಿರತೆಗಳನ್ನು ತನ್ನನ್ನು ಹುಡುಕಿಕೊಂಡು ಬಂದ ಪೊಲೀಸ್ ಅಧಿಕಾರಿಗಳನ್ನು ಕೊಂದು ಹಾಕಿದ್ದಾನೆ. ಹಾಗೆಯೇ ಅವನ ಮದ್ದು ಗುಂಡಿನ ವೈವಾಟು, ರಾಜಕೀಯ ವ್ಯಕ್ತಿಗಳ ಜತೆ ಆತನಿಗಿದ್ದ ನಂಟು, ಆತನ ಆರ್ಭಟಕ್ಕೆ ಸೆಡ್ಡು ಹೊಡೆದು ನಿಂತ ಪೊಲೀಸರ ಕಾರ್ಯಚರಣೆ, ಇದನ್ನೆಲ್ಲ ಚಿತ್ರಕಥೆಗೆ ಪೂರಕವಾಗಿ ಬಳಸಿಕೊಳ್ಳಲಾಗಿದೆ, ಪಾಲಿಬೆಟ್ಟು ಎಂಬ ದಟ್ಟಾರಣ್ಯದಲ್ಲಿ ನಡೆಯುವ ಹಾರರ್ ಕಾಮಿಡಿ ಘಟನೆಗಳೇ ಚಿತ್ರದ ಕಥಾವಸ್ತು. ಸುಮಾರು 20 ವರ್ಷಗಳ ಹಿಂದೆ ಕೋಟ್ಯಾಂತರ ಬೆಲೆ ಬಾಳುವ ಚಿನ್ನ ಆ ಕಾಡಿಗೆ ಹೇಗೆ ಹೋಯಿತು, ಅದಕ್ಕೂ ಈ ಬೀರನಿಗೂ ಏನು ಸಂಬಂಧ ಇದಕ್ಕೆಲ್ಲ ಉತ್ತರ ಈ ಚಿತ್ರದಲ್ಲಿದೆ. ಚಿನ್ನವನ್ನು ಹುಡುಕಿ ಹೊರಟವರಿಗೆ ಆತ್ಮ ಎದುರಾಗಿ ಏನೆಲ್ಲ ನಡೆಯುತ್ತದೆ ಎಂಬುದನ್ನು ರೋಮಾಂಚನಕಾರಿಯಾಗಿ , ಹಾಸ್ಯ ಮಿಶ್ರಿತವಾಗಿ ಪ್ರೇಕ್ಷಕರ ಮುಂದಿಡಲಾಗಿದೆ, ಚಿನ್ನದ ನಿಕ್ಷೇಪ ಅರಸಿ ಹೊರಟವರಿಗೆ ಕಾಡಿನಲ್ಲಿ ಸಿಗುವ ವಿಚಿತ್ರ ವ್ಯಕ್ತಿ. ಮುಂದೆ ಅವರಿಗೆ ಎದುರಾಗುವ ರೋಚಕ ಘಟನೆಗಳು ಚಿತ್ರವನ್ನು ಬೇರೆಯದೇ ದಿಕ್ಕಿನತ್ತ ತೆಗೆದುಕೊಂಡು ಹೋಗುತ್ತವೆ. ನಿಧಿಯ ಆಸೆ ಪ್ರತಾತ್ಮವನ್ನೂ ಬಿಡುವುದಿಲ್ಲ ಎಂಬ ಅಂಶವನ್ನು ಗಮನ ಸೆಳೆಯುವ ರೀತಿಯಲ್ಲಿ ನಿರ್ದೇಶಕರು ತೆರೆಯ ಮೇಲೆ ತಂದಿದ್ದಾರೆ. ಚಿತ್ರದ ಕೆಲವು ಸಂಭಾಷಣೆಗಳು ನಗಿಸುತ್ತಲೇ ಮನಸ್ಸಿಗೆ ಇಷ್ಟವಾಗುತ್ತದೆ. ಚಿತ್ರದ ದ್ವಿತೀಯಾರ್ಧ ಹೆಚ್ಚು ಕುತೂಹಲ ಮೂಡಿಸುತ್ತಾ ಸಾಗುತ್ತದೆ. ಹಿನ್ನೆಲೆ ಸಂಗೀತ, ಗ್ರಾಫಿಕ್ಸ್, ಸಿಜಿ ವರ್ಕ್, ಕ್ಯಾಮೆರಾ ಕೈಚಳಕ, ಅದಕ್ಕೆ ತಕ್ಕಂತೆ ಹಿನ್ನೆಲೆ ಸಂಗೀತ ಎಲ್ಲವೂ ಸೊಗಸಾಗಿದೆ. ತಾಂತ್ರಿಕವಾಗಿ ಚಿತ್ರತಂಡ ತುಂಬಾ ಶ್ರಮ ಪಟ್ಟಿರುವುದು ಎದ್ದು ಕಾಣುತ್ತದೆ. ಇಂಥ ಚಿತ್ರಕ್ಕೆ ಧೈರ್ಯದಿಂದ ಐದಾರು ಕೋಟಿ ಬಂಡವಾಳ ಹಾಕಿರುವ ನಿರ್ಮಾಪಕ ಕಾಂತರಾಜು ಅವರ ಸಾಹಸ ಮೆಚ್ಚುವಂತಿದೆ. ಕಲಾವಿದರಾದ ಚಿಕ್ಕಣ್ಣ ಹಾಗೂ ರಂಗಾಯಣ ರಘು ಕಾಂಬಿನೇಷನ್ ಅದ್ಭುತವಾಗಿ ಮೂಡಿಬಂದಿದೆ.
ಅನೀಶ್ ಹಾಗೂ ಗುರುನಂದನ್ ತಮ್ಮ ಪಾತ್ರಕ್ಕೆ ಜೀವತುಂಬಿ ಗಮನ ಸೆಳೆಯುವ ಅಭಿನಯ ನೀಡಿದ್ದಾರೆ. ಅರ್ಚನಾ ಕೊಟ್ಟಿಗೆ, ಶರಣ್ಯ ಶೆಟ್ಟಿ ಕೂಡ ತಮ್ಮ ಪ್ರತಿಭೆಯನ್ನ ಹೊರಹಾಕಿದ್ದಾರೆ.