ಎರಡು ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಈ ವಾರ ತೆರೆಕಂಡಿರುವ ರುದ್ರಗರುಡಪಪುರಾಣ ಚಿತ್ರವನ್ನು ನಿರೂಪಿಸಲಾಗಿದೆ.
1955ರಲ್ಲಿ ನ್ಯೂಯಾರ್ಕ್ನಿಂದ ಮಿಯಾನ್‌ಗೆ ಹೊರಟಿದ್ದ ವಿಮಾನವೊಂದು ಮಿಸ್ ಆಗಿ, ಅದರ ಚಿಕ್ಕ ಸುಳಿವು ಕೂಡ ಸಿಕ್ಕಿರುವುದಿಲ್ಲ. ಇದಾದ ಮೂವತ್ತು ವರ್ಷಗಳ ನಂತರ ಅಂದರೆ 1985ರಲ್ಲಿ ಮತ್ತೆ ಆ ವಿಮಾನ ವಾಪಸ್ ಬರುತ್ತದೆ. ಇನ್ನೊಂದು ಘಟನೆ ಒಬ್ಬ ರಾಜ ಇಡೀ ಭೂಮಂಡಲವನ್ನೇ ಗೆಲ್ಲಬೇಕೆಂಬ ಆಸೆಯಿಂದ ಪಕ್ಕದ ದೇಶದ ಜತೆ ಯುದ್ದಮಾಡಿ ಗೆಲ್ಲುತ್ತಾನೆ. ಯುದ್ದ ಮುಗಿದನಂತರ ರಣರಂಗಕ್ಕೆ ಹೋದ ಆತನಿಗೆ ಹೆಣಗಳ ರಾಶಿ ಕಂಡುಬರುತ್ತದೆ. ಅಲ್ಲಿದ್ದ ಮನುಷ್ಯನೊಬ್ಬ ಸತ್ತ ಸೈನಿಕನ ಮಾಂಸ ತಿನ್ನುತ್ತಿರುತ್ತಾನೆ. ಅದೇ ಸಮಯಕ್ಕೆ ಅಲ್ಲಿಗೆ ಹೋದ ರಾಜನ ಕುರಿತು ಆತ ಕ್ಷಮಿಸು ರಾಜ, ನಾನು ನಿನ್ನ ಆಹಾರವನ್ನು ತಿನ್ನುತ್ತಿದ್ದೇನೆ ಎನ್ನುತ್ತಾನೆ. ಆಗ ಆ ರಾಜ ನಾನು ನಿನ್ನಂತೆ ನರಭಕ್ಷಕನಲ್ಲ ಎನ್ನುತ್ತಾನೆ. ಆಗ ಆ ಮನುಷ್ಯ, ಹಾಗಾದರೆ ನೀನು ಇಷ್ಟೊಂದು ಜನರನ್ನು ಏಕೆ ಸಾಯಿಸಿದ್ದೀಯಾ ಎಂದು ಪ್ರಶ್ನಿಸುತ್ತಾನೆ. ಈ ಎರಡು ಉಪಕಥೆಗಳ ಸ್ಪೂರ್ತಿಯಿಂದ ರುದ್ರಗರುಡಪುರಾಣವಾಗಿದೆ.
ಸಚಿವರೊಬ್ಬರ ಮಗ ಇದ್ದಕ್ಕಿದ್ದ ಹಾಗೆ ಕಣ್ಮರೆಯಾಗಿರುತ್ತಾನೆ, ಅದನ್ನು ಅಧಿಕೃತವಾಗಿ ತನಿಖೆ ಮಾಡಿಸಲು ಹೋದರೆ, ಅದೇ ತನ್ನ ರಾಜಕೀಯ ಜೀವನಕ್ಕೆ ಈ ಪ್ರಕರಣ ಎಲ್ಲಿ ಕುತ್ತಾಗುತ್ತೋ ಎಂದು ಅನಧಿಕೃತವಾಗಿ ತನಿಖೆ ಮಾಡಿಸುತ್ತಾನೆ. ಇನ್ ಸ್ಪೆಕ್ಟರ್ ರುದ್ರ(ರಿಶಿ) ತನಿಖಾಧಿಕಾರಿಯಾಗಿ ನೇಮಕಗೊಳ್ಳುತ್ತಾನೆ.
ಪ್ರಕರಣದ ತನಿಖೆ ಮಾಡುತ್ತಾ ಹೋದ ರುದ್ರನಿಗೆ ಆ ಕಿಡ್ನಾಪ್ ಪ್ರಕರಣಕ್ಕೆ ಕಾರಣವಾದ ಅಂಶಗಳು ಬಯಲಾಗುತ್ತಾ ಹೋಗುತ್ತದೆ. 25 ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ಕಂದಕಕ್ಕೆ ಬಿದ್ದ ಬಸ್ಸೊಂದು ಈ ಪ್ರಕರಣದ ಮೂಲ ಎಂದು ತಿಳಿಯುತ್ತದೆ, ಇದಕ್ಕೂ ಸಚಿವರ ಮಗನ ಕಣ್ಮರೆ ಪ್ರಕರಣಕ್ಕೂ ಏನು ಸಂಬಂಧ ? ಇದನ್ನೆಲ್ಲ ಮಾಡಿಸುತ್ತಿರೋದು ಯಾರು, ಈ ಎಲ್ಲ ಗೊಂದಲಗಳಿಗೆ ಉತ್ತರ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿದೆ, ನಮ್ಮ ಸುತ್ತಮುತ್ತ ನಡೆಯುವ ಅನೇಕ ಸಮಸ್ಯೆಗಳನ್ನಿಟ್ಟುಕೊಂಡು ನಂದೀಶ್ ಅವರು ಈ ಚಿತ್ರವನ್ನು ಕುತೂಹಲಕಾರಿಯಾಗಿ ನಿರೂಪಿಸಿದ್ದಾರೆ ಸಾಕಷ್ಟು ಟ್ವಿಸ್ಟ್ ಗಳ ಜತೆ ಹಾರರ್, ಥ್ರಿಲ್ಲರ್, ಮಾಟ ಮಂತ್ರ ಎಲ್ಲವೂ ಚಿತ್ರದಲ್ಲಿದೆ. ಈ ಮೂಲಕ ನಿರ್ದೇಶಕ ನಂದೀಶ್ ಹಲವು ವಿಷಯಗಳನ್ನು ಹೇಳುವ ಪ್ರಯತ್ನ ಮಾಡಿದ್ದಾರೆ.
ನಾಯಕ ರಿಷಿ ಅವರು ಇಡೀ ಚಿತ್ರವನ್ನು ಬೆನ್ನ ಮೇಲೆ ಹೊತ್ತೊಯ್ಯುತ್ತಾರೆ. ನಾಯಕಿ ಪ್ರಿಯಾಂಕಾ ಕುಮಾರ್ ಅವರ ಪಾತ್ರಕ್ಕೆ ಹೆಚ್ಚು ಅವಕಾಶವಿಲ್ಲ. ಅಶ್ವಿನಿ ಲೋಹಿತ್ ಅವರ ನಿರ್ಮಾಣದ ಈ ಚಿತ್ರದಲ್ಲಿ ಸಿದ್ಲಿಂಗು ಶ್ರೀಧರ್, ಗಿರೀಶ್ ಶಿವಣ್ಣ, ಶಿವರಾಜ ಕೆ.ಆರ್. ಪೇಟೆ ಎಲ್ಲರೂ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಕೆಪಿ ಅವರ ಸಂಗೀತ ನಿರ್ದೇಶನ ಚಿತ್ರದ ಹೈಲೈಟ್ ಎನ್ನಬಹುದು. ಸಂದೀಪ್‌ಕುಮಾರ್ ಅವರ ಕ್ಯಾಮೆರಾ ವರ್ಕ್ ಚಿತ್ರಕ್ಕೆ ಹೊಸ ಲುಕ್ ನೀಡಿದೆ.