Chief Editor
Manohar. R (Manu)
Photo Journalist
chitrataramanu@gmail.com
+91 9845549026
ಪಾರು ಪಾರ್ವತಿ ಪಯಣದ ಹಾದಿಯಲ್ಲಿ ಪರಿಸರ ಕಲಿಸಿದ ಪಾಠಗಳು...ರೇಟಿಂಗ್ : 3/5 ***
Posted date: 01 Sat, Feb 2025 10:22:21 AM
ಜೀವನದ ಪಯಣದಲ್ಲಿ ನಾವು ಹಲವಾರು ಏಳು, ಬೀಳುಗಳನ್ನು ಕಂಡಿರುತ್ತೇವೆ, ಒಂದಷ್ಟು ವಿಶೇಷ ವ್ಯಕ್ತಿಗಳನ್ನು ಸಂಧಿಸಿರುತ್ತೇವೆ, ಮತ್ತೊಂದಷ್ಟು ವ್ಯಕ್ತಿಗಳು ತಾವಾಗೇ ನಮ್ಮ ಜೀವನದಲ್ಲಿ ಬಂದು ಹೋಗುತ್ತಾರೆ. ಈ ದಾರಿಯಲ್ಲಿ ನಾನಾ ಥರದ ಅನುಭವಗಳಾಗುತ್ತವೆ. ಆ ಆನುಭವಗಳೇ  ನಮ್ಮ ಬದುಕಿಗೆ ಸಾಕ್ಷಿಯಾಗಿ ಸಂಬಂಧಗಳ ಮೌಲ್ಯಗಳನ್ನು ತೆರೆದಿಡುತ್ತಾ ಹೋಗುತ್ತವೆ.  ತಂದೆ, ತಾಯಿ, ಮಕ್ಕಳು, ಮೊಮ್ಮಕ್ಕಳು, ಪ್ರೀತಿಸುವ ಹೃದಯಗಳ ಜತೆ ಸಾಗುವ ಜೀವನ ಪಯಣದ ಕಥೆಯನ್ನು ಪಾರು ಪಾರ್ವತಿ ಚಿತ್ರದ ಮೂಲಕ  ನಿರ್ದೇಶಕ  ರೋಹಿತ್ ಕೀರ್ತಿ ಅವರಿಲ್ಲಿ  ತೆರೆದಿಟ್ಟಿದ್ದಾರೆ.  ಎರಡು ಹೃದಯಗಳ ನೋವು, ನಲಿವಿನ ಪಯಣವನ್ನು ತೆರೆಯಮೇಲೆ ಹರವಿಟ್ಟಿದ್ದಾರೆ. 
 
ಎಲ್ಲ ಇದ್ದರೂ, ಯಾರೂ ಇಲ್ಲದಂತೆ ಬದುಕುತ್ತಿರುವ ಒಂಟಿ ಜೀವ ಪಾರ್ವತಿ (ಪೂನಂ ಸರ್‌ನಾಯಕ್). ನಾನಾ ಕಾರಣಗಳಿಂದ ಗಂಡನ ಜೊತೆ ಮಾತು ಬಿಟ್ಟಿದ್ದ  ಪಾರ್ವತಿಗೆ, ತನ್ನ 50 ನೇ ವರ್ಷದ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ಸಮಯದಲ್ಲಿ  ದೂರದ ಉತ್ತರಕಾಂಡ್‌ನ ಮಿಲಿಟರಿಯಲ್ಲಿರುವ ಗಂಡನನ್ನು ಕಾಣುವ ತವಕ. ಮಕ್ಕಳ ನಿರ್ಲಕ್ಷ್ಯದಿಂದ ಬೇಸತ್ತ ಪಾರ್ವತಿ, ಯೂಟ್ಯೂಬರ್ ಹಾಗೂ ಗೆಳತಿ ಪಾಯಲ್ (ದೀಪಿಕಾದಾಸ್) ಬಳಿ ತಾನೊಮ್ಮೆ ತನ್ನ  ಗಂಡನನ್ನು ಭೇಟಿಯಾಗಬೇಕು ಎಂಬಾಸೆ  ವ್ಯಕ್ತಪಡಿಸುತ್ತಾಳೆ. 
 
ಪ್ರೇಮಿಯಿಂದ ದೂರವಾಗಿದ್ದ  ಪಾಯಲ್ ಬದುಕಿನಲ್ಲೂ ಒಂದು ನೋವಿನ ಕಥೆಯಿರುತ್ತದೆ,   ಪಾರ್ವತಿ, ಪಾಯಲ್ ಇಬ್ಬರೂ ಉತ್ತರ ಭಾರತದೆಡೆಗೆ ಜೀಪ್‌ನಲ್ಲಿ  ಪಯಣ ಬೆಳೆಸುತ್ತಾಳೆ. ಮನೆಯಲ್ಲಿ  ಮಕ್ಕಳಿಗೂ ತಿಳಿಸದೆ ಪಾರ್ವತಿ ಹೊರಟಿದ್ದ ಪಾರ್ವತಿಗೆ ಒಂದು‌ ಮಾರಣಾಂತಿಕ‌ ಖಾಯಿಲೆ ಆವರಿಸಿಕೊಂಡಿರುತ್ತದೆ.  ಇದು ಅವಳಿಗೂ ಗೊತ್ತಿರಲ್ಲ. ತಾಯಿಗೆ ಖಾಯಿಲೆ ಇರೋ ವಿಚಾರ ತಿಳಿದಿದ್ದ ಮಕ್ಕಳು ಆಕೆಯನ್ನು ಹುಡುಕುತ್ತಾರೆ. ಸಿಗದೆ ಹೋದಾಗ ಕೊನೆಗೆ ಪೊಲೀಸ್ ಠಾಣೆಯಲ್ಲಿ  ಮಿಸ್ಸಿಂಗ್ ಕಂಪ್ಲೇಂಟ್ ನೀಡುತ್ತಾರೆ.  ಇವರಿಬ್ಬರ ಪಯಣದ ಹಾದಿಯುದ್ದಕ್ಕೂ ಒಂದಷ್ಟು ವಿಶೇಷ ಘಟನೆಗಳು ನಡೆದು ಅವರ ಬದುಕಿಗೆ ಹೊಸ ದಿಕ್ಕನ್ನೇ ತೋರುತ್ತಾ ಹೋಗುತ್ತದೆ. ಕೊನೆಗೂ ಪಾರ್ವತಿ ತನ್ನ ಗಂಡನನ್ನು ಸಂಧಿಸಿದಳೇ ಇಲ್ಲವೇ ಎನ್ನುವುದೇ ಚಿತ್ರದ ನಿರ್ಣಾಯಕ ಘಟ್ಟ.
 
ಪ್ರತಿಯೊಬ್ಬರ ಬದುಕಿನಲ್ಲೂ ಒಂದು ಆಸೆ, ಕನಸು, ಗುರಿ ಇದ್ದೇ ಇರುತ್ತದೆ. ಅದನ್ನು ಈಡೇರಿಸಿಕೊಳ್ಳಲು  ಒಂದು ಅವಕಾಶ ಸಿಗಬೇಕು ಅಷ್ಟೇ. ವಯಸಿನ ತಾರತಮ್ಯ ಇಲ್ಲದೆ, ಎಲ್ಲರಲ್ಲಿ ಒಬ್ಬರಾಗಿ ಬದುಕಬಹುದು ಎಂಬ ಸೂಕ್ಷ್ಮವನ್ನು ಬಹಳ ಸೊಗಸಾಗಿ ನಿರ್ದೇಶಕರು  ತೆರೆಮೇಲೆ ಮೂಡಿಸಲು ಪ್ರಯತ್ನಿಸಿದ್ದಾರೆ. 
 
ಅರವತ್ತರ ಆಸುಪಾಸಿನಲ್ಲಿರುವ ಪಾರ್ವತಿಗೆ ತನ್ನ   ಯೌವನದಲ್ಲಿ ಸಾಧ್ಯವಾಗದ ಹೊಸ ಸಾಹಸಗಳನ್ನು ಮಾಡುವಾಸೆ. ಆಕೆಯ  ಸಾಹಸಗಳಿಗೆ ಆಸರೆಯಾಗಿ ನಿಲ್ಲೋ  ಯುವತಿಯೇ  ಪಾಯಲ್ (ಪಾರು). ಪಾರು ಮತ್ತು ಪಾರ್ವತಿ ಇಬ್ಬರ ಸುದೀರ್ಘ ಪಯಣದ ಹಾದಿಯಲ್ಲಿ  ಕಣ್ಣು ಹಾಯಿಸಿದಷ್ಟು ನಿಸರ್ಗದ ವಿಹಂಗಮ ನೋಟ ಗೋಚರಿಸುತ್ತದೆ. ಇವರಿಬ್ಬರ ಜರ್ನಿಯಲ್ಲಿ ಮಾತಿಗಿಂತ ಪ್ರಕೃತಿ ಸೌಂದರ್ಯವೇ ಹೆಚ್ಚು ಗಮನ ಸೆಳೆಯುತ್ತದೆ.
 
ಪಾರ್ವತಿ, ಪಾಯಲ್ ಪಯಣದಲ್ಲಿ ಹಲವು ಸುಂದರ ಸ್ಥಳಗಳ ಜೊತೆ ಅಲ್ಲಿನ ಆಚಾರ, ವಿಚಾರ, ಪದ್ದತಿಗಳನ್ನು ಹೇಳುತ್ತಾ ಸಾಗುವ ಈ ಪಯಣವೇ ಒಂದು  ರೋಚಕ,  ಇಡೀ ಚಿತ್ರದ ಹೈಲೈಟ್ ಎಂದರೆ  ಛಾಯಾಗ್ರಾಹಕರ ಕೈಚಳಕ.  ಹಿನ್ನೆಲೆ ಸಂಗೀತ ಗಮನ ಸೆಳೆಯುವಂತಿದೆ. ಸಾಹಸ, ಸೌಂಡ್ ಡಿಸೈನಿಂಗ್ ಉತ್ತಮವಾಗಿದೆ.  ಹಿರಿಯ ಕಲಾವಿದೆ ಪೂನಂ ಸರ್‌ನಾಯಕ್ ಅವರು ಪಾರ್ವತಿ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿ, ಪ್ರೇಕ್ಷಕರ  ಗಮನ ಸೆಳೆದಿದ್ದಾರೆ.  ನಟಿ ದೀಪಿಕಾದಾಸ್ ಕಲೆಯ ಜೊತೆಗೆ ಪ್ರೀತಿಸುವ ಮನಸಿಗೆ ಆಸರೆಯಾಗುವ ಪಾಯಲ್ ಪಾತ್ರವನ್ನು ಅಚ್ಚುಕಟ್ಟಾಗಿ‌ ನಿಭಾಯಿಸಿದ್ದಾರೆ.
 
ಇನ್ನು ಕೇರಳದ ಯುವಕನ ಪಾತ್ರದಲ್ಲಿ ಫವಾಜ್ ಅಶ್ರಫ್ ಉತ್ತಮ ಅಭಿನಯ ನೀಡಿದ್ದಾರೆ. ಉಳಿದಂತೆ  ಕೆ.ಎಸ್.ಶ್ರಿಧರ್, ಮಹಾಂತೇಶ್ ಹಿರೇಮಠ, ರಘು ರಾಮನಕೊಪ್ಪ , ಪ್ರಶಾಂತ್ ನಟನ ಸೇರಿದಂತೆ ಎಲ್ಲ ಕಲಾವಿದರೂ ಕಥೆಯ ಓಟಕ್ಕೆ ಸಾಥ್ ನೀಡಿದ್ದಾರೆ. ಜೀವನದ ಜಂಜಾಟಗಳನ್ನು ಬದಿಗಿಟ್ಟು  ಇವರಿಬ್ಬರ ಜತೆ ಪ್ರೇಕ್ಷಕ  ಸಹ  ಸುಂದರ ಜರ್ನಿ ಮಾಡುತ್ತಾನೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪಾರು ಪಾರ್ವತಿ ಪಯಣದ ಹಾದಿಯಲ್ಲಿ ಪರಿಸರ ಕಲಿಸಿದ ಪಾಠಗಳು...ರೇಟಿಂಗ್ : 3/5 *** - Chitratara.com
Copyright 2009 chitratara.com Reproduction is forbidden unless authorized. All rights reserved.