ಮಕ್ಕಳ ಆಟದ ಮೈದಾನ ಉಳಿಸಿಕೊಳ್ಳಲು ಯುವಕರಿಬ್ಬರ ಹೋರಾಟದ ಕಥನವೇ ಈ ವಾರ ತೆರೆಕಂಡಿರುವ ಬೇಗೂರು ಕಾಲೋನಿಯ ಕಥಾಹಂದರ. ಇದು ಒಂದು ಮೈದಾನಕ್ಕಾಗಿ ನಡೆಯೋ ಹೋರಾಟವಲ್ಲ, ನಾಡಿನ ಸಮಸ್ತ ಮಕ್ಕಳ ಒಳೊತೊಗಾಗಿ, ಅವರ ಆರೋಗ್ಯಕರ ಜೀವನ ಶೈಲಿಗಾಗಿ ನಡೆಸುವ ಯುದ್ದವೇ ಎನ್ನಬಹುದು. ಶ್ರೀಮಂತರ ಮಕ್ಕಳಿಗಾದರೆ ಮನೆಯ ಆವರಣದಲ್ಲೇ ಆಟವಾಡಲು ಸಾಕಷ್ಟು ಜಾಗವಿರುತ್ತದೆ, ಆದರೆ ಬಡವರ ಮಕ್ಕಳು ಎಲ್ಲಿ ಹೋಗಬೇಕು, ಅವರಿಗೆ ನಗರ ಪ್ರದೇಶದಲ್ಲಿ ಆಟಕ್ಕಂದೇ ಮೀಸಲಾದ ಆಟದ ಮೈದಾನಗಳೇ ಗತಿ. ಆದರೆ ಅಂಥಾ ಮೈದಾನಗಳೇ ಇದೀಗ ಪ್ರಭಾವಶಾಲಿಗಳ ಕೈವಶವಾಗುತ್ತಿವೆ, ಮಾಲ್, ಅಪಾರ್ಟ್ಮೆಂಟ್‌ಗಾಗಿ ದಿನದಿಂದ ದಿನಕ್ಕೆ ಒತ್ತುವರಿಯಾಗುತ್ತಿವೆ, ಇದಕ್ಕೆ ಸ್ಥಳಿಯ ಅಧಿಕಾರಿಗಳ, ಮಂತ್ರಿಗಳ ಕೃಪೆಯೂ ಇರುತ್ತದೆ. ಹೀಗಾಗಿ ಕೂಲಿ ಕಾರ್ಮಿಕರ, ಮಧ್ಯಮ ವರ್ಗದ ಕುಟುಂಬದ ಮಕ್ಕಳಿಗೆ ಆಟವಾಡಲು ಸೂಕ್ತ ಮೈದಾನಗಳೇ ಇಲ್ಲದಂತಾಗುತ್ತಿವೆ, ಹೀಗೆ ಕಣ್ಮರೆಯಾಗುತ್ತಿದ್ದ ಮೈದಾನವೊಂದನ್ನು ಉಳಿಸಿಕೊಳ್ಳಲು ಹೋರಾಟ ನಡೆಸುವ ಇಬ್ಬರು ಯುವಕರು ಆ ಪ್ರಯತ್ನದಲ್ಲಿ ಜಯ ಸಾಧಿಸಿದರೇ, ಇಲ್ಲವೇ ಎನ್ನುವುದೇ ಬೇಗೂರು ಕಾಲೋನಿ ಚಿತ್ರದ ಕ್ಲೆ`ಮ್ಯಾಕ್ಸ್. ಇದು ನಮ್ಮ ಮಣ್ಣಿನ ಕಥೆ.
ನಿರ್ದೇಶಕ ಫ್ಲೈಯಿಂಗ್ ಕಿಂಗ್ ಮಂಜು ಇಡೀ ಚಿತ್ರವನ್ನು ತುಂಬಾ ಕುತೂಹಲಕರವಾಗಿ, ಮುಖ್ಯವಾಗಿ ಕಮರ್ಷಿಯಲ್ ಆಗಿ ತೆಗೆದುಕೊಂಡು ಹೋಗಿದ್ದಾರೆ, ಇಲ್ಲಿ ನಿರ್ದೇಶಕರ ನಿರೂಪಣಾ ಶೈಲಿ ನೋಡುಗರ ಗಮನ ಸೆಳೆಯುತ್ತದೆ, ಚಿತ್ರದಲ್ಲಿ ರಾಜೀವ್ ಹನು ರಾಘವನ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ. ಅಲ್ಲದೆ ನಿರ್ದೇಶಕ ಫ್ಲೈಯಿಂಗ್ ಕಿಂಗ್ ಮಂಜು ಅವರೂ ಸಹ ಶಿವನ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ, ಇವರಿಬ್ಬರ ಪಾತ್ರಗಳೇ ಇಡಿ ಚಿತ್ರದ ಹೈಲೈಟ್ ಎನ್ನಬಹುದು. ಇನ್ನು ನಾಯಕಿಯಾಗಿ ಪಲ್ಲವಿ ಪರ್ವ ಕೂಡ ಗಮನ ಸೆಳೆಯುತ್ತಾರೆ, ಉಳಿದಂತೆ ಕೀರ್ತಿ ಭಂಡಾರಿ, ಸುನೀತಾ ತಂತಮ್ಮ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸಿದ್ದಾರೆ.
ಬೇಗೂರು ಕಾಲೋನಿ ಒಂದು ವರ್ಗಕ್ಕೆ ಸೀಮಿತವಾದ ಕಥೆಯಲ್ಲ, ಇಲ್ಲಿ ಎಲ್ಲಾ ವರ್ಗದ ಜನರೂ ಬರುತ್ತಾರೆ. ಮಕ್ಕಳಿಗೆ ಆರೋಗ್ಯ ತುಂಬಾ ಮುಖ್ಯ, ಅವರು ಚೆನ್ನಾಗಿ, ಆರೋಗ್ಯವಾಗಿರಬೇಕೆಂದರೆ ಆಟವಾಡಲು ಒಂದು ಮೈದಾನ ಇರಬೇಕು, ಆ ಮೈದಾನಕ್ಕಾಗಿ ಇಬ್ಬರು ಯುವಕರು ನಡೆಸುವ ಹೋರಾಟದ ಕಥೆಯನ್ನು ಅಚ್ಚುಕಟ್ಟಾಗಿ ಎಲ್ಲೂ ಬೋರಾಗದಂತೆ ನಿರ್ದೇಶಕ ಮಂಜು ಅವರು ನಿರೂಪಿಸಿರುವ ಶೈಲಿ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ.
ಶ್ರೀಮಾ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಎಂ. ಶ್ರೀನಿವಾಸ್ ಬಾಬು ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸ್ನೇಹಿತ ಮಾದೇವನ ನೆನಪಿಗಾಗಿ ಶ್ರೀಮಾ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಅದರ ಮೂಲಕ ಬೇಗೂರು ಕಾಲೋನಿ ಚಿತ್ರವನ್ನು ನಿರ್ಮಿಸಿದ್ದಾರೆ. ತೆಲುಗಿನ ಪೊಸಾನಿ ಕೃಷ್ಣ ಮುರಳಿ, ಬಲ ರಾಜ್ವಾಡಿ ಅವರ ಪಾತ್ರಗಳು ಗಮನ ಸೆಳೆಯುತ್ತವೆ. ಕಾರ್ತಿಕ್ ಅವರ ಸುಂದರ ಛಾಯಾಗ್ರಹಣ, ಅಭಿನಂದನ್ ಕಶ್ಯಪ್ ಅವರ ಸಂಗೀತ ಸಂಯೋಜನೆ ಈ ಚಿತ್ರದ ಹೈಲೈಟ್. ಮಕ್ಕಳ ಸಮೇತ ಇಡೀ ಕುಟುಂಬ ಕೂತು ನೋಡಲು ಬೇಗೂರು ಕಾಲೋನಿ ಉತ್ತಮ ಆಯ್ಕೆ.