ಕುತೂಹಲದಿಂದಲೇ ಆರಂಭವಾಗಿ, ಕುತೂಹಲದಲ್ಲೇ ಸಾಗಿ, ಕೊನೆಗೆ ಮತ್ತಷ್ಟು ಕುತೂಹಲದಿಂದಲೇ ಅಂತ್ಯವಾಗುವ ಸಿನಿಮಾ ಇದಾಗಿದ್ದು, ಟೈಮ್ ಲೈನ್ ಕಥೆಯೊಂದಕ್ಕೆ ರೋಚಕತೆಯ ಅಂಶ ಸೇರಿಸಿದಾಗ ಸಿಗುವ ಉತ್ತರವಾಗಿ ಈ ಗಣ ಮೂಡಿಬಂದಿದೆ.
ಈಗಾಗಲೇ ಟೈಮ್ ಲೈನ್ ಕಥೆಯಾಧಾರಿತ ಸಿನಿಮಾಗಳು ಸಾಕಷ್ಟು ಬಂದಿವೆಯಾದರೂ, ಅವೆಲ್ಲ ಚಿತ್ರಗಳ ಸಾಲಿನಲ್ಲಿ ಗಣ ವಿಭಿನ್ನ ಚಿತ್ರವಾಗಿ ಗುರುತಿಸಿಕೊಳ್ಳುತ್ತದೆ. ನಿರ್ದೇಶಕ ಹರಿಪ್ರಸಾದ್ ಜಕ್ಕ ಅವರು ಇಡೀ ಚಿತ್ರವನ್ನು ತುಂಬಾ ಕುತೂಹಲಕರವಾಗಿ ನಿರೂಪಿಸಿದ್ದಾರೆ.
ಇಲ್ಲಿ ಟೈಮ್‌ಲೈನ್ ಕಾನ್ಸೆಪ್ಟ್ ಒಂದೇ ಪ್ರಧಾನವಾಗಿಲ್ಲ. ಚಿತ್ರದಲ್ಲಿ ಒಂದು ಹಿತವಾದ ಪ್ರೀತಿಯೂ ಸಹ ಅಡಕವಾಗಿದೆ. ಆ ಪ್ರೀತಿ ಯಾವುದೆಂದು ಚಿತ್ರದಲ್ಲಿ ನೋಡಿಯೇ ತಿಳಿದುಕೊಂಡರೆ ಉತ್ತಮ. ಹಿತವಾದ ಆತ್ಮೀಯ ಸಂಭಾಷಣೆ, ಪ್ರೇಮಿಗಳ ನವಿರಾದ ಶೃಂಗಾರ ಒಂದು ಕಡೆಯಾದರೆ, ಭೀಕರ ಕೊಲೆ, ದ್ವೇಷ, ದುರಂತ ಇನ್ನೊಂದು ಕಡೆ ಹೀಗೆ ಎರಡು ಮುಖಗಳಲ್ಲಿ ಸಾಗುವ ಗಣ ಚಿತ್ರ ಪ್ರೇಕ್ಷಕರಿಗೆ ಹೊಸತನದ ಅನುಭವವನ್ನು ನೀಡುತ್ತದೆ.
ಟೈಮ್ ಲೈನ್ ಕಥೆಯಲ್ಲಿ ವ್ಯಕ್ತವಾಗುವ ತಾಯಿ-ಮಗನ ಪ್ರೀತಿ, ವಾತ್ಸಲ್ಯ ಚಿತ್ರದ ಒನ್ ಲೈನ್ ಸ್ಟೋರಿ ಎನ್ನಬಹುದು. ಚಿತ್ರದ ಕಥೆಯನ್ನು ನಿರ್ದೇಶಕರು ಬಹು ರೋಚಕವಾಗಿಯೇ ಕಟ್ಟಿಕೊಟ್ಟಿದ್ದಾರೆ. ಚಿತ್ರಕಥೆಯೂ ಇಂಟರೆಸ್ಟಿಂಗ್ ಆಗಿದ್ದು ಸಿನಿಮಾದ ಓಟಕ್ಕೆ ಸಾಥ್ ನೀಡಿದೆ. ನಾಯಕಿ ವೇದಿಕಾ, ನಾಯಕ ಪ್ರಜ್ವಲ್ ಇಬ್ಬರ ಪ್ರಬುದ್ದ ನಟನೆ ಇಲ್ಲಿ ಪ್ರಶಂಸನಾರ್ಹ. ಯಶಾ ಶಿವಕುಮಾರ್, ರವಿ ಕಾಳೆ ಅವರ ಪಾತ್ರ ಗಮನ ಸೆಳೆಯುತ್ತದೆ. ಉಳಿದಂತೆ ವಿಶಾಲ್ ಹೆಗ್ಡೆ, ಕೃಷಿ ತಾಪಂಡ, ಶಿವರಾಜ್ ಕೆ.ಆರ್. ಪೇಟೆ, ಸಂಪತ ರಾಜ್ ತಂತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಅಪ್ಪಟ ಕೌಟುಂಬಿಕ ಕಥಾಹಂದರ ಚಿತ್ರದಲ್ಲಿದ್ದು ಇಡೀ ಕುಟುಂಬ ಕೂತು ನೋಡುವಂಥ ಚಿತ್ರವಾಗಿದೆ.