ಕರಾವಳಿ ಭಾಗದ ಸುತ್ತಮುತ್ತಲ ಜನರ ಆಚಾರ, ವಿಚಾರ, ಸಂಸ್ಕೃತಿಯನ್ನು ಹೇಳುವ ಅನೇಕ ಸಿನಿಮಾಗಳು ನಿರ್ಮಾಣವಾಗಿವೆ, ಅಂಥ ಮತ್ತೊಂದು ಚಿತ್ರ ಅಧಿಪತ್ರ. ಈ ಶುಕ್ರವಾರ ರಾಜ್ಯಾದ್ಯಂತ ತೆರೆಕಾಣಲಿರೋ ಈ ಚಿತ್ರವನ್ನು ದಿವ್ಯಾ ನಾರಾಯಣ್, ಕುಲ್‌ದೀಪ್ ರಾಘವ್ ಲಕ್ಷ್ಮೇ ಗೌಡ ಅವರು ನಿರ್ಮಾಣ ಮಾಡಿದ್ದಾರೆ. ನಟ, ನಿರ್ದೇಶಕ ರೂಪೇಶ್ ಶೆಟ್ಟಿ ದಿಟ್ಟ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಚಿತ್ರ ಇದಾಗಿದ್ದು ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಟ್ರೈಲರ್ ಮೂಲಕ ಪ್ರೇಕ್ಷಕರ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಇತ್ತೀಚೆಗೆ ನಡೆದ ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ಚಿತ್ರದ ಕಲಾವಿದರು ತಂತ್ರಜ್ಞರೆಲ್ಲ ಭಾಗಿಯಾಗಿ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.
ಲಹರಿ ವೇಲು, ಹೀಗೂ ಉಂಟೇ ನಾರಾಯಣ ಸ್ವಾಮಿ, ಬೆಳ್ಳುಳ್ಳಿ ಕಬಾಬ್ ಚಂದ್ರು ಮುಂತಾದವರು ಇಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದರು. ಕರಾವಳಿ ಸಂಸ್ಕೃತಿ ಆಟಿ ಕಳಂಜಾ ಸೇರಿದಂತೆ ಹಲವು ವಿಚಾರಗಳನ್ನು ಸಸ್ಪೆನ್ಸ್, ಥ್ರಿಲ್ಲರ್ ಹಿನ್ನೆಲೆಯಲ್ಲಿ ಹೇಳಲಾಗಿದೆ.
ನಿರ್ದೇಶಕ ಚಯನ್ ಶೆಟ್ಟಿ, ಮಾತನಾಡುತ್ತ ಚಿತ್ರದ ಟ್ರೈಲರ್‌ಗೆ ಎಲ್ಲರಿಂದ ಅದ್ಭುತವಾದ ರೆಸ್ಪಾನ್ಸ್ ಬಂದಿದ್ದು ಚಿತ್ರದ ನಿರೀಕ್ಷೆಯನ್ನು ಹೆಚ್ಚಿಸಿದೆ, ಪ್ರತಿಯೊಬ್ಬ ನಿರ್ದೇಶಕನಿಗೂ ಒಂದು ಕನಸಿರುತ್ತೆ. ಅದಕ್ಕೆ ಕಲಾವಿದರ, ತಂತ್ರಜ್ಞರ ಸಹಕಾರ ತುಂಬಾ ಮುಖ್ಯ. ಅದು ನನಗೆ ಸಿಕ್ಕಿದೆ, ಜಾಹೀರಾತು ಕಂಪನಿ ಮುಲಕ ಆ್ಯಡ್‌ಫಿಲಂಸ್ ಹಾಗೂ ಕಿರುಚಿತ್ರಗಳನ್ನೂ ನಿರ್ದೇಶಿಸಿ, ಕೆಲ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದೇನೆ, ಇದು ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ, ಇದರ ಜೊತೆಗೆ ಕರಾವಳಿಯ ಆಟಿ ಕಳಂಜ ಸಂಸ್ಕೃತಿಯನ್ನು ತೋರಿಸಿದ್ದೇವೆ, ಅದು ದೈವರಾಧನೆ ಅಲ್ಲ ಎಂದು ಸ್ಪಷ್ಟನೆ ನೀಡಿದರು,
ನಿರ್ಮಾಪಕ ಕುಲದೀಪ್ ರಾಘವ್ ಮಾತನಾಡುತ್ತ ನಿರ್ದೇಶಕ ಚಯನ್ ಶೆಟ್ಟಿ ಅವರ ಮೇಲೆ ನಮಗೆ ಸಂಪೂರ್ಣ ಭರವಸೆಯಿದೆ, ಆತ ನನಗೆ 25 ವರ್ಷಗಳ ಸ್ನೇಹಿತ ಕೂಡ, ಅದರ ಜತೆ ಒಳ್ಳೇ ಟೀಮ್ ಕೂಡ ಸಿಕ್ತು, ಲಹರಿವೇಲು ಅವರ ಆಫೀಸಿಗೆ ಹೋದಾಗ ಅವರು ನಮ್ಮನ್ನು ಕೂರಿಸಿಕೊಂಡು ಪ್ರೀತಿಯಿಂದ ಮಾತನಾಡಿಸಿದರು, ಸಾಂಗ್ ಕೇಳಿ ಒಳ್ಳೇ ರೇಟ್ ಕೊಟ್ಟು ಆಡಿಯೋ ತಗೊಂಡಿದ್ದಾರೆ ಎಂದರು. ಮತ್ತೊಬ್ಬ ನಿರ್ಮಾಪಕಿ ದಿವ್ಯ ನಾರಾಯಣ್ ಮಾತನಾಡುತ್ತ ಪ್ರತಿಯೊಬ್ಬ ರೂ ಇದು ತಮ್ಮದೇ ಸಿನಿಮಾ ಅಂತ ಕೆಲಸ ಮಾಡಿದ್ದಾರೆ, ಇನ್ನು ನಾಡಿನ ಎಲ್ಲಾ ಜನತೆ ನಮಗೆ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಹೇಳಿದರು.
ನಾಯಕಿ ಜಾಹ್ನವಿ ಮಾತನಾಡಿ, ಅಧಿಪತ್ರ ನನ್ನ ಪ್ರಥಮಚಿತ್ರ. ಟ್ರೈಲರ್ ಬಿಡುಗಡೆಯಾದ ಆರೇ ದಿನದಲ್ಲಿ ಮಿಲಿಯನ್ ದಾಟಿದೆ, ಎಲ್ಲರೂ ಚೆನ್ನಾಗಿದೆ ಎಂದೇ ಹೇಳುತ್ತಿದ್ದಾರೆ, ಈ ಚಿತ್ರದ ಕಥೆ ತುಂಬಾ ಚೆನ್ನಾಗಿದೆ. ನಾನು ಬೃಹತಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು.
ನಾಯಕ ರೂಪೇಶ್ ಶೆಟ್ಟಿ ಮಾತನಾಡಿ, ನಿರ್ಮಾಪಕರು, ನಿರ್ದೇಶಕರು ಜನರನ್ನು ರೀಚ್ ಆಗಲು ಏನು ಮಾಡಬೇಕೋ ಅದೆಲ್ಲ ಪ್ರಯತ್ನವನ್ನು ಮಾಡುತ್ತಿದ್ದಾರೆ, ಇಂಥ ಒಂದು ಸಿನಿಮಾದ ಭಾಗವಾಗುವುದಕ್ಕೆ ತುಂಬಾ ಖುಷಿಯಿದೆ. ನಾನೀ ಸಿನಿಮಾ ಒಪ್ಪಲು ಕಥೆಯೇ ಮುಖ್ಯ ಕಾರಣ. ಇದು ನನ್ನ ಅಭಿನಯದ 16ನೇ ಚಿತ್ರ. ನಾನು ಪೊಲೀಸ್ ಪಾತ್ರದಲ್ಲಿ ನಟಿಸಿದ್ದೇನೆ ಎಂದು ಹೇಳಿದರು. ಉಳಿದಂತೆ ಎಂ.ಕೆ.ಮಠ, ಕಾಂತಾರ ಖ್ಯಾತಿಯ ಪ್ರಕಾಶ್ ತುಮಿನಾಡು, ರಘು ಪಾಂಡೇಶ್ವರ, ದೀಪಕ್ ರೈ ಪಾಣಂಜೆ, ಕಾರ್ತಿಕ್ ಭಟ್, ಅನಿಲ್ ಉಪ್ಪಾಲ, ಪ್ರಶಾಂತ್ ನಟಿಸಿದ್ದಾರೆ. ಶ್ರೀಹರಿ ಶ್ರೇಷ್ಠಿ ಅವರ ಸಂಗೀತ, ಶ್ರೀಕಾಂತ್ ಅವರ ಸಂಕಲನ, ರಿತ್ವಿಕ್ ಮುರುಳಿಧರ್ ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ. ಈ ಚಿತ್ರಕ್ಕೆ ಚಯನ್ ಶೆಟ್ಟಿ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದು, ನಿರ್ದೇಶಕರಾಗಿ ಇದು ಇವರ ಮೊದಲ ಪ್ರಯತ್ನ. ಬೆಳಕು ಫಿಲಂಸ್ ಅಡಿಯಲ್ಲಿ ಕಾರ್ತಿಕ್ ಶೆಟ್ಟಿ ಮತ್ತು ಸತೀಶ್ ಶೆಟ್ಟಿ, ಶ್ವೇತಾ ರವಿಚಂದ್ರ ಶೆಟ್ಟಿ ಚಿತ್ರದ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ,