Chief Editor
Manohar. R (Manu)
Photo Journalist
chitrataramanu@gmail.com
+91 9845549026
``ನಮ್ ಪೈಕಿ ಒಬ್ಬ ಹೋಗ್ಬುಟ``ವಿನೂತನವಾಗಿ ಬಿಡುಗಡೆಯಾಯಿತು ಮಡೆನೂರ್ ಮನು ಅಭಿನಯದ``ಕುಲದಲ್ಲಿ ಕೀಳ್ಯಾವುದೊ`` ಚಿತ್ರದ ಮೊದಲ ಹಾಡು
Posted date: 09 Sun, Feb 2025 03:12:20 PM
ಈಗಿನ ಜನತೆಗೆ ಬೇಕಾದಂತಹ ಹಾಡುಗಳನ್ನು ಬರೆಯುವ ಗೀತರಚನೆಕಾರರಲ್ಲಿ ಯೋಗರಾಜ್ ಭಟ್ ಮೊದಲಿಗರು ಎನ್ನಬಹುದು. ದಿನ ನಾವು ಆಡುವ ಮಾತುಗಳನ್ನೆ ಯೋಗರಾಜ್ ಭಟ್ ಅವರು ಹಾಡುಗಳ ರೂಪಕ್ಕೆ ತಂದು ಎಲ್ಲರೂ ಗುನುಗುವ ಹಾಗೆ ಮಾಡುತ್ತಾರೆ. ಪ್ರಸ್ತುತ ಯೋಗರಾಜ್ ಭಟ್ ಅವರು "ಕಾಮಿಡಿ ಕಿಲಾಡಿಗಳು" ಖ್ಯಾತಿಯ ಮಡೆನೂರ್ ಮನು ನಾಯಕನಾಗಿ ನಟಿಸಿರುವ "ಕುಲದಲ್ಲಿ ಕೀಳ್ಯಾವುದೊ" ಚಿತ್ರಕ್ಕೆ "ನಮ್ ಪೈಕಿ ಒಬ್ಬ ಹೋಗ್ಬುಟ" ಎಂಬ ಹಾಡನ್ನು ಬರೆದಿದ್ದಾರೆ. ಮನೋಮೂರ್ತಿ ಅವರು ಸಂಗೀತ ನೀಡಿದ್ದಾರೆ. ಖ್ಯಾತ ಗಾಯಕ ಆಂಥೋನಿ ದಾಸ್ ಅವರ ಕಂಠಸಿರಿಯಲ್ಲಿ‌ ಈ ಹಾಡು ಮೂಡಿಬಂದಿದೆ. ಇತ್ತೀಚೆಗೆ ಈ ಹಾಡು ಬಿಡುಗಡೆ ಸಮಾರಂಭ ನಡೆಯಿತು. ನಾಯಕ ನಟ ಮನು ಬ್ಯಾಂಡ್ ಬಾರಿಸಿಕೊಂಡು ಬ್ಯಾಂಡ್ ಸೆಟ್ ಅವರ ಹಾಗೂ ಅರ್ಕೆಸ್ಟ್ರಾ ಕಲಾವಿದರ ಜೊತೆಗೆ ವೇದಿಕೆಗೆ ಬಂದು ಈ‌ ಹಾಡನ್ನು ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. 
 
ನನಗೆ "ಕಾಮಿಡಿ ಕಿಲಾಡಿಗಳು" ಸಮಯದಲ್ಲಿ ಮನು ನಟನೆ ನೋಡಿ ನೀನು ಇಲ್ಲಿ ಮಾತ್ರ ಅಲ್ಲ. ಸಿನಿಮಾಗೂ ಸಲ್ಲುವವನು ಅಂತ ಹೇಳಿದ್ದೆ. ಈ ಚಿತ್ರದ ಕಥೆ ನಾನು ಹಾಗೂ ಇಸ್ಲಾಮುದ್ದೀನ್ ಸೇರಿ ಬರೆದಿದ್ದೇವೆ‌. ಈ ಕಥೆಗೆ ಮನು ಸೂಕ್ತ ನಾಯಕ. ಯೋಗರಾಜ್ ಸಿನಿಮಾಸ್ ಅರ್ಪಿಸುತ್ತಿರುವ ಈ ಚಿತ್ರವನ್ನು ಪರ್ಲ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಂತೋಷ್ ಹಾಗೂ ವಿದ್ಯಾ ದಂಪತಿ ನಿರ್ಮಾಣ ಮಾಡುತ್ತಿದ್ದಾರೆ. ರಾಮ್ ನಾರಾಯಣ್ ನಿರ್ದೇಶಿಸುತ್ತಿದ್ದಾರೆ. ಮನೋಮೂರ್ತಿ ಸಂಗೀತ ನೀಡಿದ್ದಾರೆ. ಇನ್ನು ಇಂದು ಬಿಡುಗಡೆಯಾಗಿರುವ ಈ ಹಾಡನ್ನು ನಾನು ಬರೆಯಲು ಮನೋಮೂರ್ತಿ ಅವರ ಕಾರು ಚಾಲಕ ಸ್ಪೂರ್ತಿ‌. ಆತ ಇಂದು ನಮ್ಮೊಂದಿಗಿಲ್ಲ. ಆತನ ಸಾವು ಹಾಗೂ ಆನಂತರ ನಡೆದ ಸನ್ನಿವೇಶಗಳೆ ನಾನು ಹಾಡು ಬರೆಯಲು ಕಾರಣ ಎಂದರು ಯೋಗರಾಜ್ ಭಟ್.  
 
ನಾನು ನನ್ನ ಜಾನಾರ್ ಹೊರತು ಪಡಿಸಿ ಸಂಗೀತ ನೀಡಿರುವ ಎರಡನೇ ಚಿತ್ರ ಇದು. ಇಂದು ಬಿಡುಗಡೆಯಾಗಿರುವ ಈ ಹಾಡನ್ನು ಯೋಗರಾಜ್ ಭಟ್ ಮನಮುಟ್ಟುವ ಹಾಗೆ ಬರೆದಿದ್ದಾರೆ ಎಂದು ಸಂಗೀತ ನಿರ್ದೇಶಕ ಮನೋಮೂರ್ತಿ ಹೇಳಿದರು.    
 
ಬಾಬು ಎಂಬ ನನ್ನ ಸ್ನೇಹಿತನಿಂದ ನನಗೆ ಈ ಚಿತ್ರತಂಡದ ಪರಿಚಯವಾಯಿತು ಎಂದು ಮಾತನಾಡಿದ ನಿರ್ದೇಶಕ ರಾಮ್ ನಾರಾಯಣ್, ತಾವೇ ಒಬ್ಬ‌ ನಿರ್ದೇಶಕನಾಗಿದರೂ ನನಗೆ ಸಿನಿಮಾ ನಿರ್ದೇಶನಕ್ಕೆ ಅವಕಾಶ ಕೊಟ್ಟಿದ್ದು ಅವರ ದೊಡ್ಡ ಗುಣ. ಇನ್ನೂ ಮನೋಮೂರ್ತಿ ಅವರ ಸಂಗೀತ ನಿರ್ದೇಶನದಲ್ಲಿ ಈ ಚಿತ್ರದ ಎಲ್ಲಾ ಹಾಡುಗಳು ಚೆನ್ನಾಗಿ ಬಂದಿದೆ. ಇಂದು ಮೊದಲ ಹಾಡು ಬಿಡುಗಡೆಯಾಗಿದೆ ಎಂದರು.  
 
ನಾನು ಈ ಸಿನಿಮಾ ಆರಂಭಿಸಿದ್ದು ಮನುಗೋಸ್ಕರ. ಆದರೆ, ಟೇಕ್ ಆಫ್ ಆಗಿದ್ದು ಯೋಗರಾಜ್ ಭಟ್ ಅವರಿಂದ ಇಡೀ ತಂಡದ ಶ್ರಮದಿಂದ ಒಂದೊಳ್ಳೆ ಸಿನಿಮಾ ನಿರ್ಮಾಣವಾಗುತ್ತಿದೆ ಎಂದು ನಿರ್ಮಾಪಕ ಸಂತೋಷ್ ತಿಳಿಸಿದರು.  
 
ನನಗೆ ಒಂದು ದೊಡ್ದ ಬ್ಯಾನರ್ ನಲ್ಲಿ ನಟಿಸುವ ಆಸೆ ಇತ್ತು. ಅದು ಈ ಚಿತ್ರದ ಮೂಲಕ ಈಡೇರಿದೆ ಎಂದು ಮಾತು ಆರಂಭಿಸಿದ ನಾಯಕ ಮಡೆನೂರ್ ಮನು, ಈ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ಯೋಗರಾಜ್ ಭಟ್ ಅವರಿಗೆ ಧನ್ಯವಾದ. ನಾನು ಮೂಲತಃ ಆರ್ಕೇಸ್ಟ್ರಾ ಕಲಾವಿದ. ಈ ಚಿತ್ರದಲ್ಲೂ ನನ್ನದು ಅದೇ ಪಾತ್ರ.  ಸಾವಿನ ಬಗ್ಗೆ ಎಲ್ಲರಿಗೂ ಅರ್ಥವಾಗುವ ಹಾಗೆ ಅರ್ಥಗರ್ಭಿತ ಹಾಡೊಂದನ್ನು ಯೋಗರಾಜ್ ಭಟ್ ಅವರು ಬರೆದಿದ್ದಾರೆ. ಮನೋಮೂರ್ತಿ ಸಂಗೀತ ನೀಡಿದ್ದಾರೆ ಹಾಗೂ ಅವರದೆ ಆಡಿಯೋ ಕಂಪನಿ ಮೂಲಕ ಬಿಡುಗಡೆ ಮಾಡಿದ್ದಾರೆ ಎಂದರು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ``ನಮ್ ಪೈಕಿ ಒಬ್ಬ ಹೋಗ್ಬುಟ``ವಿನೂತನವಾಗಿ ಬಿಡುಗಡೆಯಾಯಿತು ಮಡೆನೂರ್ ಮನು ಅಭಿನಯದ``ಕುಲದಲ್ಲಿ ಕೀಳ್ಯಾವುದೊ`` ಚಿತ್ರದ ಮೊದಲ ಹಾಡು - Chitratara.com
Copyright 2009 chitratara.com Reproduction is forbidden unless authorized. All rights reserved.