ಚಿತ್ರ: ಅನಾಮಧೇಯ ಅಶೋಕ್,
ನಿರ್ದೇಶನ: ಸಾಗರ್ ಕುಮಾರ್,
ನಿರ್ಮಾಣ: ಕೆ.ಎನ್. ಫಿಲಂಸ್,
ತಾರಾಗಣ: ಕಿಶೋರ್, ಹರ್ಷಿಲ್ ಕೌಶಿಕ್ ಇತರರು
ಒಂದು ಮರ್ಡರ್ ಆದಾಗ ಪೊಲೀಸರು ಅನೇಕ ವಿಧಾನಗಳನ್ನು ಅನುಸರಿಸಿ ಕೊಲೆಗಾರನನ್ನು ಪತ್ತೆ ಹಚ್ಚಬೇಕಾಗುತ್ತದೆ. ಈ ಹಂತದಲ್ಲಿ ಅನುಮಾನ ಬಂದವರನ್ನೆಲ್ಲ ವಿಚಾರಿಸಬೇಕಾಗುತ್ತದೆ. ಒಬ್ಬ ಆರೋಪಿ ಸಿಕ್ಕಾಗ ಅವನು ಕೊಲೆಗಾರನಾ? ಆರೋಪಿಯಾ? ಸಾಕ್ಷಿಯಾ? ಆತನನ್ನು ಹೇಗೆ ಪರಿಗಣಿಸಬೇಕೆಂಬ ಐಡಿಯಾ ಪೊಲೀಸರಿಗಿರುತ್ತದೆ.
ಈ ಚಿತ್ರ ಪ್ರಾರಂಭವಾಗುವಾಗ ವ್ಯಕ್ತಿಯೊಬ್ಬ ತಾನೇ ಏಟು ತಿಂದು ಪ್ರಜ್ಞೆತಪ್ಪಿ ಬಿದ್ದಿರುತ್ತಾನೆ. ನಂತರ ಸುಧಾರಿಸಿಕೊಂಡು ಮನೆಯಲ್ಲಿ ಏನಾಗಿದೆ ಎಂದು ನೋಡಿದಾಗ, ತಾನು ಸಂದರ್ಶನ ಮಾಡಲು ಬಂದಿದ್ದ ಕ್ರಿಮಿನಲ್ ಲಾಯರ್ ಸತ್ತಿರುವುದು ಗೊತ್ತಾಗುತ್ತದೆ. ಆ ಕೊಲೆಗಾರ ಯಾರು ಎಂದು ಹುಡುಕುವಾಗ, ತನ್ನ ಪ್ರಾಣ ಉಳಿಸಿಕೊಳ್ಳಲು ಒಬ್ಬನನ್ನು ಕೊಂದೇ ಹಾಕುತ್ತಾನೆ. ಕೊನೆಗೆ ತಾನೇ ಪೊಲೀಸರಿಗೆ ಫೋನ್ ಮಾಡಿ ಅವರು ಬರುವವರೆಗೂ ಕಾದು ಕುಳಿತು ಶರಣಾಗುತ್ತಾನೆ. ಅಲ್ಲೇನಾಯ್ತು ಎಂಬುದನ್ನು ವಿವರವಾಗಿ ಹೇಳುತ್ತಾನೆ. ಆ ಮನೆಯಲ್ಲಿ ನಡೆದ ಘಟನೆಗಳಿಗೆ ಅವನು ಸಾಕ್ಷಿಯೇನೋ ಹೌದು. ಆದರೆ, ಅವನೇ ಯಾಕೆ ಕೊಲೆ ಮಾಡಿರಬಾರದು? ಇಂಥದ್ದೊಂದು ಸಂಶಯ ಬರುತ್ತಿದ್ದಂತೆಯೇ ಪೊಲೀಸರು ಆತನನ್ನು ಕರೆದುಕೊಂಡು ಹೋಗಿ ತನಿಖೆ ಮಾಡುತ್ತಾರೆ. ಇಷ್ಟಕ್ಕೂ ಅಲ್ಲಿ ಆಗಿದ್ದೇನು ಮತ್ತು ಯಾಕಾಯ್ತು.
ಇತ್ತೀಚೆಗೆ ಸಾಕಷ್ಟು ಥ್ರಿಲ್ಲರ್ ಚಿತ್ರಗಳು ಬಿಡುಗಡೆಯಾಗಿವೆ. ಆ ಸಾಲಿಗೆ `ಅನಾಮಧೇಯ ಅಶೋಕ್ ಕುಮಾರ್` ಸಹ ಸೇರಲಿದೆ. ಮೊದಲ ಪ್ರಯತ್ನದಲ್ಲೇ ನಿರ್ದೇಶಕ ಸಾಗರ್ ಒಂದು ಗಾಢವಾದ ಚಿತ್ರವನ್ನು ಕಟ್ಟಿಕೊಡೋ ಮೂಲಕ ಇಡೀ ಚಿತ್ರವನ್ನು ಕುತೂಹಲಕರವಾಗಿ ತೆಗೆದುಕೊಂಡು ಹೋಗಿದ್ದಾರೆ.
`ಅನಾಮಧೇಯ ಅಶೋಕ್ ಕುಮಾರ್` ಒಂದೇ ರಾತ್ರಿ ನಡೆಯುವ ಕಥೆ. ಸಂಜೆ ಆರಕ್ಕೆ ಶುರುವಾಗಿ ಬೆಳಿಗ್ಗೆ ಆರಕ್ಕೆ ಮುಗಿಯುತ್ತದೆ. ಈ ನಡುವೆ ಒಂದು ಮನೆಯಲ್ಲಿ ಏನೆಲ್ಲಾ ಘಟನೆಗಳು ನಡೆಯುತ್ತವೆ, ಮತ್ತು ಪೊಲೀಸರು ಹೇಗೆ ತಮ್ಮದೇ ರೀತಿಯಲ್ಲಿ ತನಿಖೆ ಮಾಡುತ್ತಾರೆ ಎಂಬುದನ್ನು ಹಂತ ಹಂತವಾಗಿ ಬಿಚ್ಚಿಡಲಾಗಿದೆ. ಅನವಶ್ಯಕವಾಗಿ ಚಿತ್ರವನ್ನು ಬೆಳೆಸದೆ, ಏನು ಹೇಳಬೇಕೋ ಅದನ್ನು ಸಂಕ್ಷಿಪ್ತವಾಗಿ ಹೇಳಿ ಮುಗಿಸಿದ್ದಾರೆ.
ಹಾಗಾಗಿ, ಚಿತ್ರ ಇಂಟೆನ್ಸ್ ಆಗಿ ಮೂಡಿಬಂದಿದೆ. ತನಿಖಾ ಹಂತದಲ್ಲಿ ಚಿತ್ರ ನಿಧಾನ ಎನಿಸಿದರೂ, ನಿರ್ದೇಶಕರು ತಮ್ಮ ಟ್ರಾಕ್ ಬಿಟ್ಟು ಹೋಗಿಲ್ಲ. ಆಗಾಗ ಟ್ವಿಸ್ಟ್ ನೀಡಿ, ಗೊಂದಲ ಹುಟ್ಟುಹಾಕುತ್ತಾ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಕೊನೆಗೆ ಪ್ರೇಕ್ಷಕರ ಮನದ ಹಲವು ಪ್ರಶ್ನೆಗಳಿಗೆ ಉತ್ತರ ಕೊಡುತ್ತಾರೆ.
ಚಿತ್ರದಲ್ಲಿರುವುದು ಕೆಲವೇ ಪಾತ್ರಗಳು. ಅದರಲ್ಲೂ ಕಿಶೋರ್ ಅವರ ಪ್ರವೀಣ್ ರಾಜಶೇಖರ್ ಪಾತ್ರ ಮತ್ತು ಹರ್ಷಿಲ್ ಕೌಶಿಕ್ ಅವರ ತನಿಖಾಧಿಕಾರಿ ಅತಿರಥ್ ಪಾತ್ರದ ಸುತ್ತಲೇ ಚಿತ್ರಕಥೆ ಹೆಚ್ಚಾಗಿ ಸುತ್ತುತ್ತದೆ. ಹಾಗಾದರೆ, ಅಶೋಕ್ ಕುಮಾರ್ ಯಾರು? ಆತ ಅನಾಮಧೇಯ ಹೇಗಾಗುತ್ತಾನೆ? ಎಂಬ ವಿವರಗಳಿಗಾಗಿ ಚಿತ್ರ ನೋಡಬೇಕು. ಕಿಶೋರ್ ಮತ್ತು ಹರ್ಷಿಲ್ ಇಬ್ಬರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಸಮನಾಗಿಯೇ ಚಿತ್ರವನ್ನು ತೂಗಿಸಿಕೊಂಡು ಹೋಗುತ್ತಾರೆ. ಅವರಿಬ್ಬರ ಹಾವು-ಏಣಿಯಾಟದಲ್ಲಿ ಗೆಲ್ಲುವುದು ಯಾರು, ಯಾಕೆ ಮತ್ತು ಹೇಗೆ ಎಂಬುದು ಚಿತ್ರದ ಕೊನೆಯಲ್ಲಷ್ಟೇ ರಿವೀಲ್ ಆಗುತ್ತದೆ. ಅಭಿನಯ, ಚಿತ್ರಕಥೆ, ನಿರೂಪಣೆಯ ಜೊತೆಗೆ ಆಜಾದ್ ಅವರ ಹಿನ್ನೆಲೆ ಸಂಗೀತ ಮತ್ತು ಸುನೀಲ್ ಹೊನ್ನಾಳಿ ಛಾಯಾಗ್ರಹಣ ಕಥೆಗೆ ಪೂರಕವಾಗಿದೆ. ಸೀಟ್ ಎಡ್ಜ್ ನಲ್ಲಿ ಕೂರಿಸೋ ಸಿನಿಮಾ ಎಂಬ ಪದ ಈ ಚಿತ್ರಕ್ಕೆ ಕರೆಕ್ಟಾಗಿ ಅನ್ವಯಿಸುತ್ತದೆ.