ಈಗಾಗಲೇ ತೊಂಭತ್ತರ ದಶಕದ ಪ್ರೇಮಕಥೆಯನ್ನು ಹೊತ್ತ ಅದೆಷ್ಟೋ ಚಲನಚಿತ್ರಗಳು ತೆರೆಮೇಲೆ ಬಂದುಹೋಗಿವೆ. ಕಳೆದ ವಾರವಷ್ಟೇ ಇದೇ ಕಾಲಘಟ್ಟದ ಇನ್‌ಟೆನ್ಸ್ ಲವ್ ಸ್ಟೋರಿಯೊಂದು ತೆರೆಗೆ ಬಂದಿತ್ತು, ಅದೆಲ್ಲಕ್ಕಿಂತ ವಿಶೇಷ ಎನ್ನವಂತೆ ತನ್ನ ಟೈಟಲನ್ನೇ `1990s` ಅಂತಿಟ್ಟುಕೊಂಡ ಮತ್ತೊಂದು ವಿಭಿನ್ನ. ನಿರೂಪಣೆಯ ನವಿರು ಪೇಮಕಾವ್ಯ ಈವಾರ ತೆರೆಗೆ ಬಂದಿದೆ.
ಆಗಿನ ಕಾಲದಲ್ಲಿ ಈಗಿದ್ದಂತೆ ಮೊಬೈಲ್, ವಾಟ್ಸಾಪ್ ಇದಾವುದೂ ಇರಲಿಲ್ಲ, ಸೋಷಿಯಲ್ ಮೀಡಿಯಾದ ಪರಿಚಯವೇ ಇಲ್ಲದಂಥ ಕಾಲವದು, ಇಂಥ ಪರಿಸ್ಥಿತಿಯಲ್ಲಿ ಅಪರಿಚಿತ ಹುಡುಗ, ಹುಡುಗಿಯ ನಡುವೆ ಪ್ರೀತಿ ಅರಳುವುದಾದರೂ ಹೇಗೆ ? ಅಂತ ನೀವೆಲ್ಲ ಯೋಚಿಸಬಹುದು, ಆಗ ಎರಡು ಹೃದಯಗಳ ನಡುವೆ ಪ್ರೀತಿ ಹುಟ್ಟುವ ಪರಿಯೇ ಬೇರೆಯಾಗಿತ್ತು, ಅದನ್ನು ಈಗಿನಕಾಲದ ಲವರ‍್ಸ್ ಕಣ್ಣಾರೆ ಕಾಣಬೇಕೆಂದರೆ ಇವತ್ತೇ ಥೆಟರಿಗೆ ಹೋಗಿ ಈ ಚಿತ್ರವನ್ನು ವೀಕ್ಷಿಸಬೇಕು.
ತುಂಬಾ ಕಷ್ಟಕರವಾಗಿದ್ದ ಆ ದಿನಗಳಲ್ಲಿ ಸಾಮಾನ್ಯ ಹುಡುಗನೊಬ್ಬ ಸಂಪ್ರದಾಯಸ್ತ ಕುಟುಂಬದ ಹುಡುಗಿಯನ್ನು ಪ್ರೇಮಿಸಿ, ಆ ಮೂಲಕ ಪ್ರೇಮದ ಅಗ್ನಿಯಲ್ಲಿ ದಹಿಸಿ ಹೋಗುವ ಕಥೆಯನ್ನು ನಿರ್ದೇಶಕ ನಂದಕುಮಾರ್ ಬಹು ಸುಂದರವಾಗಿ ತೆರೆಮೇಲೆ ಅರಳಿಸಿದ್ದಾರೆ,
ಟೈಗರ್ ಎಂಬ ಒರಟುತನ ಜತೆಗೆ ತುಂಟುತನವನ್ನೇ ಮೈದಳೆದುಕೊಂಡಿದ್ದ, ಚಿಕ್ಕವಯಸ್ಸಿನಲ್ಲೇ ತನ್ನ ಹುಡುಗಾಟದ ಮೂಲಕ ಹೆತ್ತವರಿಗೂ ತಲೆನೋವಾಗಿದ್ದ ನಾಯಕ, ಆಟೋ ಓಡಿಸುತ್ತ ದುಡಿಮೆಗೆ ಒಂದು ಮಾರ್ಗ ಕಂಡುಕೊಂಡಿರುತ್ತಾನೆ. ಇತ್ತ ಚಿಕ್ಕ ವಯಸಿನಲ್ಲೇ ಆತನ ಕಾಟದಿಂದ ನಲುಗಿದ್ದ ಯುವತಿ ಪ್ರತಿಭಾ ನಿಜಕ್ಕೂ ಸ್ನಿಗ್ಧ ಸುಂದರಿ. ಇವರಿಬ್ಬರ ನಡುವೆ ಪ್ರೀತಿ ಹುಟ್ಟುವುದೇ ಒಂದು ರೋಚಕ.
ಸದಾಕಾಲ ಮೋಡಗಳಿಂದ ಆವೃತವಾದ ಮತ್ತು ತಿಳಿಗಾಳಿಯಿಂದ ಕಂಗೊಳಿಸುವ ದೇವಾಲಯದ ತಪ್ಪಲು; ಊರಿನ ಒಳನೋಟ, ಇದೆಲ್ಲವೂ ಇವರ ನಡುವಿನ ಅಮರ ಪ್ರೀತಿಗೆ ಮೂಕಸಾಕ್ಷಿಯಾಗುತ್ತದೆ. ಕಿವಿಗಿಂಪಾದ ಮತ್ತು ಹೃದಯಕ್ಕೆ ಆಹ್ಲಾದವೆನಸುವ ಸಂಗೀತ ಈ ಎರಡೂ ಹೃದಯಗಳನ್ನು ಒಂದಾಗಿಸುತ್ತದೆ. ಈ ನಡುವೆ ಆ ಪ್ರೇಮ ಪಯಣವನ್ನು ನೋಡುತ್ತಿರುವ ಪ್ರೇಕ್ಷಕನಲ್ಲೂ, ಪ್ರೇಮಿಗಳಿಗೆ ಎಲ್ಲಿ ಏನಾಗುವುದೋ ಎಂದು ಆತಂಕದಿಂದ ಪರಿತಪಿಸುತ್ತಾನೆ, ತನ್ನಲ್ಲೆ ಬಚ್ಚಿಟ್ಟಿದ್ದ ಪ್ರೇಮವನ್ನು ವ್ಯಕ್ತಪಡಿಸಲಾಗದೆ ಪರಿತಪಿಸುವ ನಾಯಕನ ಆತಂಕ ಪ್ರೇಕ್ಷಕನನ್ನೂ ಕಾಡುತ್ತದೆ. ಜೊತೆಗೆ ಇವರಿಬ್ಬರ ಅಸಹಾಯಕ ಪ್ರೇಮ ವೈರಾಗ್ಯವನ್ನೂ ಮೂಡಿಸುತ್ತದೆ.
ಓ ಮಳೆಯೇ ಕಾಪಾಡು ಎಂಬ ಸುಂದರ ಹಾಡಿನಲ್ಲಿ ಪ್ರಕೃತಿಯ ತಂಪು, ಸಂಗೀತದ ಇಂಪು, ಕಣ್ಣಿಗೆ, ಕಿವಿಗೆ ಹಿತವೆನಿಸುತ್ತದೆ. ಚಿತ್ರದ ಅಂತಿಮ ಘಟ್ಟದ ದೃಶ್ಯಗಳನ್ನು ಸ್ವಲ್ಪ ಮೊಟಕುಗೊಳಿಸಿದ್ದರೆ, ನಿಜಕ್ಕೂ ಅದ್ಭುತವಾದ ಪ್ರೇಮಕಾವ್ಯವೊಂದನ್ನು ಅನುಭವಿಸಿ ಆಹ್ಲಾದಿಸುವ ಪ್ರೇಕ್ಷಕ ಥೇಟರಿನಿಂದ ಹೊರಬಂದರೂ ಅದೇ ಗುಂಗಿನಲ್ಲಿರುವಂತಾಗುತ್ತಿತ್ತು. ನಾಯಕನ ಪಾತ್ರದಲ್ಲಿ ಅರುಣ್ ಹಾಗೂ ನಾಯಕಿಯಾಗಿ ರಾಣಿ ವರದ್ ಇಬ್ಬರೂ ತಮ್ಮ ಅಗಾಧ ನಟನಾ ಪ್ರತಿಭೆಯಿಂದ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೇ ನಿಂತುಬಿಡುತ್ತಾರೆ, ಒಂಥರಾ ಸ್ಪರ್ಧೆಗಿಳಿದವರಂತೆ ನಟಿಸಿದ್ದಾರೆ. ನಾಯಕಿಯ ತಂದೆಯಾಗಿ ನಿರ್ಮಾಪಕ ಅರುಣ್‌ಕುಮಾರ್ ಅವರ ನಟನೆ ಕೂಡ ಗಮನ ಸೆಳೆಯುತ್ತದೆ. ಮಹಾರಾಜ ಅವರ ಸಂಗೀತದ ಹಾಡುಗಳು ಹಾಗೂ ಹಾಲೇಶ್ ಅವರ ಅದ್ಭುತವಾದ ಛಾಯಾಗ್ರಹಣ 1990s ಚಿತ್ರದ ಎರಡು ಹೈಲೈಟ್‌ಗಳು ಎಂದೇ ಹೇಳಬಹುದು, ಎಲ್ಲ ವರ್ಗದ ಜನರಿಗೂ ಇಷ್ಟವಾಗುವ ಕಾನ್ಸೆಪ್ಟ್ ಇದಾಗಿರುವುದೇ ಚಿತ್ರದ ಹೆಚ್ಚುಗಾರಿಕೆ.