ಬೆಂಕಿ, ಗಾಬರಿ, ಪೆಟ್ಟಿಗೆ ತಮ್ಮ ಅಡ್ಡ ಹೆಸರುಗಳಿಂದಲೇ ಪ್ರಸಿದ್ದಿಯಾಗಿರುವ ಮೂವರು ಶುದ್ದ ಸೋಮಾರಿ ಹುಡುಗರು, ಅಡ್ಡ ಮಾರ್ಗದಲ್ಲಿ ಸಂಪತ್ತು ಗಳಿಸಲು ಹೋಗಿ ಏನೆಲ್ಲಾ ತೊಂದರೆ ತಾಪತ್ರಯಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ನಿರ್ದೇಶಕ ಅಭಿಜಿತ್ ತೀರ್ಥಳ್ಳಿ ಅವರು ಅಪಾಯವಿದೆ ಎಚ್ಚರಿಕೆ ಚಿತ್ರದ ಮೂಲಕ ಕುತೂಹಲಕಾರಿಯಾಗಿ ನಿರೂಪಿಸಿದ್ದಾರೆ.
ತಾವು ಡಿಗ್ರಿ ಕಾಲೇಜು ಹತ್ತಿದವರು, ಅಂತಿಂಥ ಸಣ್ಣಪುಟ್ಟ ಕೆಲಸಗಳನ್ನು ನಾವೇಕೆ ಮಾಡಬೇಕು ಎಂಬ ಮನಸ್ಥಿತಿಯುಳ್ಳ ಈ ಸೋಮಾರಿಗಳು ಸುಲಭವಾಗಿ ದುಡ್ಡು ಸಂಪಾದಿಸಬೇಕು, ಮಾಡಿಕೊಂಡ ಸಾಲಗಳನ್ನೆಲ್ಲ ತೀರಿಸಿ, ಹಾಯಾಗಿರಬೇಕೆಂದು ಒಂದಷ್ಡು ವಾಮಮಾರ್ಗಗಳನ್ನೂ ಟ್ರೈ ಮಾಡುತ್ತಾರೆ, ಅದಾವುದೂ ಕೈಗೂಡದಿದ್ದಾಗ, ಕಾಡಲ್ಲಿ ಗಂಧದ ಮರಗಳನ್ನು ಕದ್ದು ಅದರಿಂದ ದುಡ್ಡು ಗಳಿಸೋ ಪ್ರಯತ್ನಕ್ಕೂ ಮುಂದಾಗುತ್ತಾರೆ, ಪ್ಲಾನ್ ಮಾಡಿ, ಊರ ಹೊರಗಿನ ಕವಲೇದುರ್ಗದ ಕೋಟೆ ಬೆಟ್ಟಕ್ಕೆ ಹೋಗುತ್ತಾರೆ, ಅಲ್ಲಿ ಅವರು ರಣಪ್ರೇತದ ಬಲೆಗೆ ಸಿಕ್ಕಿಹಾಕಿಕೊಂಡು ಅಲ್ಲಿಂದ ಹೇಗೆ ಹೊರಬರುತ್ತಾರೆ, ಅಲ್ಲಿ ನಿಜವಾಗಿಯೂ ರಣಪ್ರೇತ ಇದೆಯಾ ಅಥವಾ ಅದು ಬರೀ ಆ ಊರ ಜನರ ನಂಬಿಕೆಯಾ ಇದೆಲ್ಲಕ್ಕೂ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಉತ್ತರ ಸಿಗುತ್ತದೆ.
ಕಷ್ಟಪಡದೆ ಹಣ ಸಂಪಾದಿಸಬೇಕು, ಆದರೆ ಯಾವುದೇ ರಿಸ್ಕ್ ತಗೋಬಾರದು ಎಂಬ ಮನಸ್ಥಿತಿಯುಳ್ಳ ಈ ಮೂವರಲ್ಲಿ ನಾಯಕ ಸೂರಿ ಸ್ಪಲ್ಪ ಧೈರ್ಯವಂತ.
ತಾವಿದ್ದ ರೂಮ್ ಬಾಡಿಗೆ ಕಟ್ಟದೆ ಇದ್ದರೂ, ಅಪಘಾತಕ್ಕೊಳಗಾಗಿ ಸಂಕಷ್ಟದಲ್ಲಿದ್ದ ಮಹಿಳೆಯ ಚಿಕಿತ್ಸೆಗೆ ತಮ್ಮಲ್ಲಿದ್ದ ಹಣವನ್ನೆಲ್ಲ ಕೊಟ್ಟ, ದೊಡ್ಡ ಮನಸಿರುವ ಈ ಹುಡುಗರು ಡೀಲ್ ಗಳನ್ನು ಕುದುರಿಸಿ ಹಣ ಮಾಡಲು ಹೋಗಿ, ಅದರಲ್ಲೂ ಸಫಲತೆ ಕಾಣದಾಗುತ್ತಾರೆ, ಏನೋ ಸಾಧಿಸಲು ಅರಣ್ಯಕ್ಕೆ ಹೋಗಿ ಅಲ್ಲಿ ನಾನಾ ಸಂಕಷ್ಟಗಳನ್ನು ಎದುರಿಸುವ ಅವರಿಗೆ ಅಲ್ಲೊಂದು ಭಯಾನಕ ಜಗತ್ತು ತೆರೆದುಕೊಳ್ಳುತ್ತದೆ.
ಮೊದಲರ್ಧ ಈ ಮೂವರ ಹುಡುಗಾಟದಲ್ಲೇ ಸಾಗುವ ಕಥೆ, ಮಧ್ಯಂತರದ ವೇಳೆಗೆ ಕುತೂಹಲಕರ ಘಟ್ಟ ತಲುಪುತ್ತದೆ. ಕಾಡಿನ ಭಯಾನಕತೆಗಿಂತ ಅಲ್ಲಲ್ಲಿ ಪ್ರತ್ಯಕ್ಷವಾಗುವ ಮುಖವಾಡಗಳು ಅವರಲ್ಲಿ ಮತ್ತಷ್ಟು ಭಯ ಹುಟ್ಟಿಸುತ್ತವೆ. ಆ ಮೂವರಲ್ಲಿ ಗಾಬರಿ ದೊಡ್ಡ ಪುಕ್ಕಲ.
ಉತ್ತರಾರ್ಧದಲ್ಲಿ ಹಂತ ಹಂತವಾಗಿ ಭಯ ಹುಟ್ಟಿಸುತ್ತಲೇ ಸಾಗುವ ಕಥೆ ಅಂತಿಮಘಟ್ಟ ತಲುಪುತ್ತದೆ, ಕಾಡಿನೊಳಗೆ ರಾತ್ರಿ ವೇಳೆಯಲ್ಲಿ ನಡೆಯುವ ಘಟನೆಗಳು, ಅಂತಿಮವಾಗಿ ಕಾಡನ್ನೇ ತಮ್ಮ ಅಡ್ಡೆಯನ್ನಾಗಿಸಿಕೊಂಡ ಕಳ್ಳಸಾಗಣೆ ಜಾಲದ ಕಿಂಗ್ ಪಿನ್ ಯಾರೆಂದು ಬಹಿರಂಗವಾಗುವಲ್ಲಿಗೆ ಕಥೆ ಅಂತ್ಯವಾಗುತ್ತದೆ.
ನಾಯಕ ವಿಕಾಶ್ ಉತ್ತಯ್ಯ, ಮಿಥುನ್ ತೀರ್ಥಹಳ್ಳಿ, ರಾಘವ್ ಕೊಡಚಾದ್ರಿ ಈ ಮೂವರ ಪಾತ್ರಗಳು ಬೇರೆ ಬೇರೆ ನೆಲೆಯಲ್ಲಿ ಗಮನ ಸೆಳೆಯುತ್ತವೆ. ಉಳಿದಂತೆ ಎರಡು ಶೇಡ್ ಪಾತ್ರ ನಿರ್ವಹಿಸಿರುವ ಅಶ್ವಿನ್ ಹಾಸನ್, ಟಾಲೆಂಟೆಡ್ ಪಾತ್ರದಲ್ಲಿ ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ, ಅಜ್ಜನ ಪಾತ್ರದಲ್ಲಿ ಮಿಮಿಕ್ರಿ ಕುಮಾರ್, ನಾಯಕಿ ಮುದ್ದುಮೊಗದ ರಾಧಾ ಭಗವತಿಯ ಪಾತ್ರಗಳು ಗಮನ ಸೆಳೆಯುತ್ತವೆ. `ಚಿಗುರು ನೋಟವೇ` ಹಾಡು ಸದಾ ಗುನುಗುವಂತಿದೆ, ಉಳಿದ ಹಾಡುಗಳು ಕೂಡ ಮನದಲ್ಲುಳಿಯುತ್ತವೆ.
ಛಾಯಾಗ್ರಹಣ ಹಾಗೂ ಸಂಗೀತ ಸಂಯೋಜನೆ ತಮಗೆ ಸಿಕ್ಕ ಈ ಎರಡೂ ಕೆಲಸಗಳನ್ನು ಸುನಾದ್ ಗೌತಮ್ ಅಚ್ಚುಕಟ್ಟಾಗಿಯೇ ನಿರ್ವಹಿಸಿದ್ದಾರೆ.