ಸ್ವಾತಂತ್ರ್ಯ ಪೂರ್ವದಲ್ಲಿ ನಡೆಯುವ ಸಾಧ್ವಿ ಹೆಣ್ಣುಮಗಳು ಶರಾವತಿಯ ಕಥೆಯನ್ನು ನಿರ್ದೇಶಕ ಕೂಡ್ಲು ರಾಮಕೃಷ್ಣ ಅವರು "ಶಾನುಭೋಗರ ಮಗಳು" ಚಿತ್ರದ ಮೂಲಕ ತೆರೆಮೇಲೆ ತಂದಿದ್ದಾರೆ. ಪತ್ರಕರ್ತೆ ಹಾಗೂ 33ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಂತಹ ಭಾಗ್ಯ ಕೃಷ್ಣಮೂರ್ತಿ ಅವರ ಇದೇ ಹೆಸರಿನ ಕಾದಂಬರಿಯನ್ನಾಧರಿಸಿ "ಶಾನುಭೋಗರ ಮಗಳು" ಚಿತ್ರ ತಯಾರಾಗಿದೆ. ಭುವನ್ ಫಿಲಂಸ್ ಲಾಂಛನದಲ್ಲಿ ಸಿ.ಎಂ.ನಾರಾಯಣ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.
ನಟಿ ರಾಗಿಣಿ ಪ್ರಜ್ವಲ್, ಕಿಶೋರ್, ನಿರಂಜನ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ ಕಳೆದವಾರ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಇತ್ತೀಚೆಗೆ ನಡೆದ ವಿಶೇಷ ಪ್ರದರ್ಶನದಲ್ಲಿ ಭಾಗವಹಿಸಿದ ಚಿತ್ರತಂಡ ಮಾಹಿತಿ ಹಂಚಿಕೊಂಡಿತು.
ಚಿತ್ರ ನೋಡಿದ ಎಲ್ಲರೂ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ ಎಂದೇ ಹೇಳುತ್ತಿದ್ದಾರೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಬರುತ್ತಿಲ್ಲ ಎಂದು ನಿರ್ದೇಶಕ ಕೂಡ್ಲು ರಾಮಕೃಷ್ಣ ಹೇಳಿದರು.
ಲೇಖಕಿ ಭಾಗ್ಯಕೃಷ್ಣಮೂರ್ತಿ ಕೂಡ ಅದೇ ಮಾತನ್ನು ಹೇಳಿ ಮಾಧ್ಯಮದವರು ಪ್ರೋತ್ಸಾಹಿಸಿದರೆ ನಮ್ಮ ಚಿತ್ರ ಇನ್ನಷ್ಟು ಜನರಿಗೆ ತಲುಪುತ್ತದೆ. ಅದಕ್ಕೆ ನಿಮ್ಮ ಸಹಕಾರ ಬೇಕೆಂದು ಕೇಳಿಕೊಂಡರು.
ಹೆಣ್ಣನ್ನು ಕೇಂದ್ರವಾಗಿಟ್ಟುಕೊಂಡು ಬರುತ್ತಿರುವ ಚಿತ್ರಗಳು ಕಡಿಮೆಯಾಗುತ್ತಿರುವ ಈ ಸಮಯದಲ್ಲಿ ಮಹಿಳಾ ಪ್ರಧಾನ ಚಿತ್ರವೊಂದು ಬಂದಿದೆ. ಚಿತ್ರದಲ್ಲಿ ಇತಿಹಾಸ, ಕಾಲ್ಪನಿಕ ಇತಿಹಾಸ ಹಾಗೂ ಸಮಾಜದಲ್ಲಿ ನಡೆಯುತ್ತಿರುವ ಕೆಲವು ವಿಷಯಗಳನ್ನು ತೋರಿಸಲಾಗಿದೆ. ಚಿತ್ರ ಚೆನ್ನಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಟ ಕಿಶೋರ್.