Chief Editor
Manohar. R (Manu)
Photo Journalist
chitrataramanu@gmail.com
+91 9845549026
ದಯಾಳ್ ಪದ್ಮನಾಭನ್ ನಿರ್ಮಾಣದ``ಕಪಟಿ`` ಚಿತ್ರ ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿದೆ ಸುಕೃತ ವಾಗ್ಲೆ ಅಭಿನಯದ ಚಿತ್ರ ಮಾರ್ಚ್ 7 ರಂದು ತೆರೆಗೆ
Posted date: 01 Sat, Mar 2025 09:50:09 AM
"ಹಗ್ಗದ ಕೊನೆ", "ಆ ಕಾರಾಳ ರಾತ್ರಿ" ಸೇರಿದಂತೆ ಅನೇಕ ಸದಭಿರುಚಿಯ ಚಿತ್ರಗಳನ್ನು ನಿರ್ಮಾಣ ಮಾಡಿರುವ ದಯಾಳ್ ಪದ್ಮನಾಭನ್ ಅವರು ಡಿ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಿಸಿರುವ, ರವಿಕಿರಣ್ - ಚೇತನ್ ಎಸ್ ಪಿ ನಿರ್ದೇಶಿಸಿರುವ ಹಾಗೂ ಸುಕೃತ ವಾಗ್ಲೆ, ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್ ಪ್ರಮುಖಪಾತ್ರದಲ್ಲಿ ನಟಿಸಿರುವ  ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ "ಕಪಟಿ" ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಯಿತು. ಹೆಸರಾಂತ ನಿರ್ಮಾಪಕರಾದ ಕೆ.ಮಂಜು, ರಮೇಶ್ ಯಾದವ್ ಹಾಗೂ ಅವಿನಾಶ್ ಯು ಶೆಟ್ಟಿ ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. 

ನಮ್ಮ ಚಿತ್ರಕ್ಕೆ ನೀವೆಲ್ಲಾ ನೀಡುತ್ತಿರುವ ಪ್ರೋತ್ಸಾಹಕ್ಕೆ ಧನ್ಯವಾದ ಎಂದು ಮಾತನಾಡಿದ ಚಿತ್ರದ ನಿರ್ಮಾಪಕ‌ ದಯಾಳ್ ಪದ್ಮನಾಭನ್, ಮೂಲತಃ ಸಾಫ್ಟ್‌ವೇರ್ ಉದ್ಯೋಗಿಗಳಾಗಿರುವ ಹಾಗು ಚಿತ್ರದ ನಿರ್ದೇಶಕರೂ ಆಗಿರುವ ರವಿಕಿರಣ್ ಹಾಗೂ ಚೇತನ್ ಎಸ್ ಪಿ ಮೊದಲು ಈ ಚಿತ್ರದ ನಿರ್ಮಾಣ‌ ಆರಂಭಿಸಿದ್ದರು. ನಂತರ ನನ್ನ ಬಳಿ ಬಂದು ಈ ಚಿತ್ರದ ಬಗ್ಗೆ ಹೇಳಿದರು. ನಾನು ಸಹ ಚಿತ್ರವನ್ನು ನೋಡಿದೆ. ನನಗೆ ಚಿತ್ರ ಇಷ್ಟವಾಯಿತು. ಆನಂತರ ನಾನು ಅವರ ಬಳಿ ಚಿತ್ರಕ್ಕೆ ಸಂಬಂಧಿಸಿದ ಹಾಗೆ ಕೆಲವು ಕಂಡೀಶನ್ ಗಳನ್ನು ಹೇಳಿದೆ. ನನ್ನ ಎಲ್ಲಾ ಕಂಡೀಶನ್ ಗಳಿಗೆ ಅವರು ಒಪ್ಪಿದರು. ಆನಂತರ ಚಿತ್ರದ ಪೂರ್ಣ ನಿರ್ಮಾಣದ ಜವಾಬ್ದಾರಿಯನ್ನು ನಾನು ತೆಗೆದುಕೊಂಡೆ. ಕನ್ನಡದಲ್ಲಿ ತೀರ ಅಪರೂಪ ಎನ್ನಬಹುದಾದ ಡಾರ್ಕ್ ವೆಬ್ ಜಾನರ್ ನ ಚಿತ್ರವಿದು. ಇಂದು ಟ್ರೇಲರ್ ಬಿಡುಗಡೆಯಾಗಿದೆ‌‌. ಮಾರ್ಚ್ 7 ರಂದು "ಕಪಟಿ" ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂದರು.

ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಸಾಮಾನ್ಯ ಜನರಿಗೆ ಮೊಬೈಲ್ ಮಾತ್ರ ಗೊತ್ತು. ಆದರೆ ಅದೇ ಮೊಬೈಲ್ ನಿಂದ  ನಾವು ಹೇಗೆ ಮೋಸ ಹೋಗುತ್ತೇವೆ ಎಂಬ ತಿಳುವಳಿಕೆ ನಮಗೆ ಕಡಿಮೆ. ನಮ್ಮ ಚಿತ್ರದಲ್ಲಿ ಕ್ಯಾಬ್ ಡ್ರೈವರ್, ಮೆಡಿಕಲ್ ವಿದ್ಯಾರ್ಥಿ ಹಾಗೂ ಫ್ಯಾಷನ್ ಡಿಸೈನರ್ ಮೂರು ಮುಖ್ಯಪಾತ್ರಗಳಿದ್ದು, ಆ ಪಾತ್ರಗಳನ್ನು ಸಾತ್ವಿಕ್ ಕೃಷ್ಣನ್, ದೇವ್ ದೇವಯ್ಯ ಹಾಗೂ ಸುಕೃತ ವಾಗ್ಲೆ ಮಾಡಿದ್ದಾರೆ. ಇದೊಂದು ಜನಸಾಮಾನ್ಯರ ಕಥೆ. ಆನ್‌ಲೈನ್ ಶೋಷಣೆಯ ಪರಿಣಾಮಗಳು,    ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಜನರಿಗೆ ಹೇಗೆ ಮೋಸ ಮಾಡಬಹುದು ಎಂಬುದನ್ನು ಸಹ ಚಿತ್ರದಲ್ಲಿ ತೋರಿಸಲಾಗಿದೆ. ಇದೊಂದು ತಾಂತ್ರಿಕತೆಯಲ್ಲೂ ಶ್ರೀಮಂತಿಕೆಯಿಂದ ಕೂಡಿರುವ ಚಿತ್ರ ಕೂಡ.‌ ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳನ್ನು ನಮ್ಮ ಚಿತ್ರ ಒಳಗೊಂಡಿದೆ.‌‌ ಪ್ರೇಕ್ಷಕರು ಕೊಟ್ಟ ದುಡ್ಡಿಗೆ ಬೇಸರ ಮೂಡಿಸದೆ, ಸಂಪೂರ್ಣ ಮನೋರಂಜನೆ ನೀಡುವ ಚಿತ್ರವಿದು ಎಂದು ನಿರ್ದೇಶಕರಾದ ರವಿಕಿರಣ್ ಹಾಗೂ ಚೇತನ್ ಎಸ್ ಪಿ ತಿಳಿಸಿದರು.  ‌  
 
ದಯಾಳ್ ಅವರ ನಿರ್ಮಾಣದ ಚಿತ್ರಗಳೆಂದರೆ ಅದು ಕಂಟೆಂಟ್ ಓರಿಯಂಟೆಡ್ ಚಿತ್ರಗಳೇ ಆಗಿರುತ್ತದೆ. ಒಂದು ಸೂಕ್ಷ್ಮವಾದ ಕಥೆಯನ್ನು ನಿರ್ದೇಶಕ ದ್ವಯರು ತುಂಬಾ ಚೆನ್ನಾಗಿ ನಿರೂಪಣೆ ಮಾಡಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ನಾಯಕಿ ಸುಕೃತ ವಾಗ್ಲೆ. 

ಪ್ರಮುಖಪಾತ್ರಗಳಲ್ಲಿ ನಟಿಸಿರುವ ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್, ನಟ ಶಂಕರ್ ನಾರಾಯಣ್ ಹಾಗೂ ಛಾಯಾಗ್ರಾಹಕರಾದ ವಿಕ್ರಮ್ ಮತ್ತು ಸತೀಶ್ ರಾಜೇಂದ್ರನ್ "ಕಪಟಿ" ಚಿತ್ರದ ಕುರಿತು ಮಾತನಾಡಿದರು.

 ಸತೀಶ್ ಹೆಚ್ ಎನ್ ಅವರು ವೇದಿಕೆಗೆ ಆಗಮಿಸಿ, ನಮ್ಮನ್ನು ಕೆಲವರು ಆಧುನಿಕ ತಂತ್ರಜ್ಞಾನದ ಮೂಲಕ ಹೇಗೆಲ್ಲಾ ಮೋಸ ಮಾಡುತ್ತಾರೆ ಎಂಬುದನ್ನು ಪರದೆಯ ಮೇಲೆ ತೋರಿಸುತ್ತಾ ವಿವರಿಸಿದರು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ದಯಾಳ್ ಪದ್ಮನಾಭನ್ ನಿರ್ಮಾಣದ``ಕಪಟಿ`` ಚಿತ್ರ ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿದೆ ಸುಕೃತ ವಾಗ್ಲೆ ಅಭಿನಯದ ಚಿತ್ರ ಮಾರ್ಚ್ 7 ರಂದು ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.