ಕನ್ನಡದಲ್ಲಿ ರೈತನ ಕುರಿತು ಸಾಕಷ್ಟು ಚಿತ್ರಗಳು ಬಂದಿವೆಯಾದರೂ, "ರಾಮನಗರ" ಚಿತ್ರ ವಿಭಿನ್ನ ಈವರೆಗೂ ಬಂದಿರದ ವಿಭಿನ್ನ ಕಥಾಹಂದರದೊಂದಿಗೆ ಬರುತ್ತಿದೆ. ಇತ್ತೀಚೆಗೆ ಈ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು. ರಾಮನಗರ ಜಿಲ್ಲೆಯ ಬೇವೂರು ಮಠದ ಪರಮಪೂಜ್ಯರು ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಆಶೀರ್ವದಿಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
`ರಾಮನಗರ`ಊರಿನ ಶೀರ್ಷಿಕೆಯಾದರೂ ಇದು ರೈತನ ಕಥೆ. ಅದರಲ್ಲೂ ವಿದ್ಯಾವಂತ ದೇಶಾಭಿಮಾನಿ ರೈತನ ಕಥೆ. ಹಳ್ಳಿಯಲ್ಲಿ ಓದಿದ ಹುಡುಗನೊಬ್ಬ ಕೆಲಸಕ್ಕಾಗಿ ಸಿಟಿಗೆ ಬರದೆ, ಹಳ್ಳಿಯಲ್ಲೇ ರೈತನಾಗಿದುಕೊಂಡು ವ್ಯವಸಾಯ ಮಾಡಿ ಇತರ ವಿದ್ಯಾವಂತ ಯುವಕರಿಗೂ ಮಾದರಿಯಾಗುವ ಕಥೆಯೂ ಹೌದು. ಚಿತ್ರತಂಡದ ಸಹಕಾರದಿಂದ ಅಂದುಕೊಂಡ ಹಾಗೆ ಚಿತ್ರ ಬಂದಿದೆ. ಯುಗಾದಿ ವೇಳೆಗೆ ಚಿತ್ರ ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ ಎಂದರು ನಿರ್ದೇಶಕ ವಿಜಯ್ ರಾಜ್.
ಹಳ್ಳಿ ಹುಡುಗರು ವಿದ್ಯಾವಂತರಾಗಿ ಕೃಷಿಕನಾಗುತ್ತೇನೆ ಎಂದರೆ ಏನೆಲ್ಲಾ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಈ ಚಿತ್ರದಲ್ಲಿ ತೋರಿಸಲಾಗಿದೆ ಎಂದು ಮಾತನಾಡಿದ ನಾಯಕ ಪ್ರಭುಸೂರ್ಯ, ಹಳ್ಳಿ ಹುಡುಗ ವಿದ್ಯಾವಂತನಾಗಿ ರೈತನಾಗುತ್ತೇನೆ ಎಂದರೆ ಪೋಷಕರಿಂದ, ಊರಿನವರಿಂದ ಹಾಗೂ ಎಲ್ಲರಿಂದಲೂ ಮಾತು ಕೇಳ ಬೇಕಾಗುತ್ತದೆ. ಇವನು ಇಷ್ಟು ಓದಿದ್ದು ದಂಡ. ಸಿಟಿಗೆ ಹೋಗಿ ಕೆಲಸ ಮಾಡದೆ ಇಲ್ಲೇ ಇದ್ದಾನೆ ಎನ್ನುತ್ತಾರೆ. ಇನ್ನೂ ಕೆಲವರಂತೂ ಇವನು ಓದಿದ್ದನೋ ? ಇಲ್ಲ. ಸುಳ್ಳು ಹೇಳುತ್ತಿದ್ದಾನೋ? ಅಂತಲೂ ಕೇಳುತ್ತಾರೆ. ನಮ್ಮ ಚಿತ್ರದ ನಾಯಕನಿಗೂ ಹೀಗೆ. ಆದರೆ ಆತ ಈ ಎಲ್ಲಾ ಸಮಸ್ಯೆಗಳನ್ನು ದಾಟಿ ಆದರ್ಶ ರೈತನಾಗುತ್ತಾನೆ. ಈ ರೈತ ಮಹಾನ್ ದೇಶಾಭಿಮಾನಿಯೂ ಹೌದು. ಇಷ್ಟೇ ಮಾತ್ರವಲ್ಲದೆ ಈ ಚಿತ್ರದಲ್ಲಿ ಈಗಿನ ಪ್ರೇಕ್ಷಕರು ಬಯಸುವ ಎಲ್ಲಾ ಅಂಶಗಳು ಇದೆ ಎಂದರು.
ನಾನು ಮೂಲತಃ ಉದ್ಯಮಿ. ಇದು ಮೊದಲ ನಿರ್ಮಾಣದ ಚಿತ್ರ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಸಿ.ಕೆ ಮಂಜುನಾಥ್.
ಚಿತ್ರದಲ್ಲಿ ನಟಿಸಿರುವ ಶಿವಕುಮಾರ್ ಆರಾಧ್ಯ, "ತಿಥಿ" ಖ್ಯಾತಿಯ ತಮ್ಮಣ್ಣ ಹಾಗೂ ಛಾಯಾಗ್ರಾಹಕ ಭರತ್ ಇಂಡಿಯಾ ಚಿತ್ರದ ಕುರಿತು ಮಾತನಾಡಿದರು.
ಕೆವಿನ್ ಅವರು ಸಂಗೀತ ನೀಡಿರುವ ಮೂರು ಹಾಡುಗಳು ನಮ್ಮ ಸಿರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ಹಾಡುಗಳು ಚೆನ್ನಾಗಿದೆ ಎಂದು ಸುರೇಶ್ ಚಿಕ್ಕಣ್ಣ ತಿಳಿಸಿದರು.