ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ ಒಂದು ರೀತಿಯ ಲವ್ ಎಪಿಸೋಡ್ ಇದ್ದೇ ಇರುತ್ತದೆ. ಕೆಲವೊಂದು ಪ್ರೇಮ ಪ್ರಕರಣಗಳು ಯಶಸ್ವಿಯಾಗಿ ಮದುವೆಯಾಗಿ ಸುಖ ಜೀವನ ಸಾಗಿಸುತ್ತಿದ್ದರೆ, ಕೆಲವು ಕಥೆಗಳು ದುರಂತ ಅಂತ್ಯ ಕಾಣುತ್ತವೆ. ಸಾಕಷ್ಟು ಪ್ರೇಮ ಪ್ರಕರಣಗಳಲ್ಲಿ ಪ್ರಮುಖವಾಗಿ ಎದುರಾಗುವುದೇ ಜಾತಿ, ಧರ್ಮ, ಮೇಲು ಕೀಳು, ಶ್ರೀಮಂತ, ಬಡವ ಎನ್ನುವ ವಿವಿಧ ಪಿಡುಗುಗಳು. ಇದು ಆ ಮುಗ್ಧ ಪ್ರೇಮಿಗಳ ಬಾಳಿಗೆ ಮುಳ್ಳಾಗಿ ಕಾಡುತ್ತದೆ.
ಇಂಥದ್ದೇ ಮತ್ತೊಂದು ದುರಂತ ಪ್ರೇಮ ಕಥೆಯನ್ನು ಹೊತ್ತ ಸಿನಿಮಾ `ಸೂರಿ ಲವ್ಸ್ ಸಂಧ್ಯಾ` ಈವಾರ ತೆರೆಕಂಡಿದೆ. ಕಥೆಯ ಪಾತ್ರಗಳಿಗೆ ತಕ್ಕಂತೆ ಅನುಭವಿ ಕಲಾವಿದರನ್ನು ಬಳಸಿಕೊಂಡು ಚಿತ್ರವನ್ನು ನಿರೂಪಿಸಿರುವ ನಿರ್ದೇಶಕರ ಶೈಲಿ ಉತ್ತಮವಾಗಿದೆ.
ಚಿತ್ರವನ್ನು ನೋಡುತ್ತಾ ಹೋದಂತೆ ಕೆಲವು ನೈಜ ಘಟನೆಗಳು ಕಥೆಯಲ್ಲಿ ಹಾದುಹೋದಂತೆ ಅನಿಸೋದು ಸಹಜ.
ಪೊಲೀಸ್ ಠಾಣೆಯಲ್ಲಿ ನಾಯಕನ ವಿಚಾರಣೆಯ ಮೂಲಕ ಚಿತ್ರದ ಕಥೆ ತೆರೆದುಕೊಳ್ಳುತ್ತದೆ.
ನಾಯಕಿ ಸಂಧ್ಯಾ(ಅಪೂರ್ವ) ಸಮಾಜದಲ್ಲಿ ಪ್ರಭಾವಿ ವ್ಯಕ್ತಿಯೊಬ್ಬನ ತಂಗಿ. ನಾಯಕ ಸೂರಿ (ಅಭಿಮನ್ಯು ಕಾಶೀನಾಥ್) ತಂದೆ ತಾಯಿ ಇಲ್ಲದ ಅನಾಥ, ತಂದೆಯ ಗೆಳೆಯನ ಆಶ್ರಯದಲ್ಲಿ ಬೆಳೆದು ಬಿಬಿಎಂಪಿಯಲ್ಲಿ ಗೋಡೆಗೆ ಬಣ್ಣ ಹಚ್ಚುವ ಫೈಂಟರ್ ಕೆಲಸ ಮಾಡಿಕೊಂಡಿರುತ್ತಾನೆ. ಒಂದು ಸಂದರ್ಭದಲ್ಲಿ ಭೇಟಿಯಾದ ಪೈಂಟರ್ ಸೂರಿ ಹಾಗೂ ಸಂಧ್ಯಾ ನಡುವೆ ಪ್ರೀತಿ ಮೊಳಕೆಯೊಡೆಯುತ್ತದೆ.
ಈ ವಿಚಾರ ಆಕೆಯ ಅಣ್ಣನ ಸ್ನೇಹಿತರಿಗೆ ತಿಳಿದು ಅದನ್ನು ವಿಡಿಯೋ ಮಾಡಿ ಆತನಿಗೆ ತೋರಿಸುತ್ತಾರೆ. ಇದರಿಂದ ಕೆಂಡಾಮಂಡಲವಾದ ಅಣ್ಣ, ತಂಗಿಗೆ ಹೊಡೆದು ಬಡಿದು ಬೆದರಿಕೆ ಹಾಕುತ್ತಾನೆ.
ಆದರೆ ಪ್ರೀತಿಗೆ ಬೆಲೆ ಕೊಡುವ ಸಂಧ್ಯಾ, ನನ್ನ ಜೀವ ಹೋದರೂ, ತನ್ನ ಪ್ರೀತಿಯನ್ನು ಬಿಟ್ಟುಕೊಡಲ್ಲ ಎಂದು ಪಟ್ಟು ಹಿಡಿಯುತ್ತಾಳೆ. ಮತ್ತಷ್ಟು ಕುಪಿತಗೊಂಡ ಆಕೆಯ ಅಣ್ಣ, ತಂಗಿಯ ಮೊಬೈಲ್ ಕಿತ್ತುಕೊಂಡು ಇಬ್ಬರೂ ಸಂಪರ್ಕಿಸದಂತೆ ಮಾಡುತ್ತಾನೆ. ಅಲ್ಲದೆ ಸೂರಿಯ ಮೇಲೆ ಸುಳ್ಳು ಕೇಸ್ ದಾಖಲಿಸಿ, ಆತನನ್ನು ಜೈಲಿಗೆ ಕಳಿಸುತ್ತಾನೆ.
ಕೆಲ ತಿಂಗಳ ನಂತರ ಜೈಲಿಂದ ಹೊರಬಂದ ಸೂರಿ ಎಲ್ಲಾಕಡೆ ಸಂಧ್ಯಾಳನ್ನು ಹುಡುಕುತ್ತಾನೆ. ಆದರೆ ಆಕೆಯ ಸುಳಿವು ಎಲ್ಲೂ ದೊರೆಯದೆ, ಹತಾಶನಾದ ಸೂರಿ ಹುಚ್ಚನಂತಾಗಿ ದುಶ್ಚಟಗಳಿಗೆ ದಾಸನಾಗುತ್ತಾನೆ. ಈತನ ಪರಿಸ್ಥಿತಿಯನ್ನು ನೋಡಲಾಗದ ಆತನ ಅಂಕಲ್, ಆಕೆ ಕೊಟ್ಟು ಹೋದ ಪತ್ರವನ್ನು ನೀಡುತ್ತಾರೆ. ಸೂರಿ ಮತ್ತೆ ಸಂಧ್ಯಾಳನ್ನು ಭೇಟಿಯಾಗುತ್ತಾನೆ. ಇಡೀ ಚಿತ್ರದಲ್ಲಿ ಕ್ಲೈಮಾಕ್ಸ್ ನಿಜಕ್ಕೂ ಅದ್ಭುತವಾಗಿ ಮೂಡಿಬಂದಿದೆ. ಚಿತ್ರದಲ್ಲಿ ಎದುರಾಗುವ ಅನಿರೀಕ್ಷಿತ ತಿರುವು ವೀಕ್ಷಕರ ಕಣ್ಣಾಲಿಗಳನ್ನು ಒದ್ದೆಯಾಗಿಸುತ್ತದೆ.
ಅದೇನೆಂದು ತಿಳಿಯಬೇಕಾದರೆ ನೀವು ಥೇಟರಿಗೆ ಹೋಗಿ ಸೂರಿ ಮತ್ತು ಸಂಧ್ಯಾಳ ಅಮರ ಪ್ರೇಮಕಥೆಯನ್ನು ಕಣ್ತುಂಬಿಕೊಳ್ಳಬೇಕು.
ನಾಯಕ ಸೂರಿ ಪಾತ್ರಕ್ಕೆ ಹಾಸ್ಯ ನಟ ಕಾಶಿನಾಥ್ ಪುತ್ರ ಅಭಿಮನ್ಯು ಕಾಶಿನಾಥ್ ಜೀವ ತುಂಬಿ ಅಭಿನಯಿಸಿದ್ದಾರೆ. ನಾಯಕಿ ಸಂಧ್ಯಾ ಆಗಿ ಅಪೂರ್ವ ಮನೋಜ್ಞ ಅಭಿನಯದ್ದಾರೆ. ಖಳನಾಯಕನ ಪಾತ್ರದಲ್ಲಿ ಪ್ರತಾಪ್ ನಾರಾಯಣ್ ಮಿಂಚಿದ್ದಾರೆ ಚಿತ್ರದಲ್ಲಿ ಎಸ್. ಎನ್. ಅರುಣಗಿರಿ ಅವರ ಸಂಗೀತ ಸಂಯೋಜನೆ ಗಮನ ಸೆಳೆಯುತ್ತದೆ.
ನಿರ್ದೇಶಕರಾಗಿ ಯಾದವ್ ರಾಜ್ ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ. ರಾಯರ ಭಕ್ತರಾದ ಕೆ.ಟಿ. ಮಂಜುನಾಥ್ ರಾಯರ ಜಯಂತಿಯಂದೇ ಚಿತ್ರವನ್ನು ಜನರ ಮುಂದೆ ತಂದಿದ್ದಾರೆ.
ಪ್ರದೀಪ್ ಕಬೀರ, ಭಜರಂಗಿ ಪ್ರಸನ್ನ, ಪಲ್ಲವಿ, ಬೌ ಬೌ ಜಯರಾಂ, ಕೌಶಿ ಆಚಾರ್ ಇವರೆಲ್ಲ ತಂತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಕ್ಯಾಮೆರಾ ವರ್ಕ್ ಗಮನ ಸೆಳೆಯುತ್ತದೆ.
ಖಳ ನಾಯಕನ ಎಂಟ್ರಿ ಮತ್ತು ಲುಕ್, ಅರ್ಥ ಗರ್ಭಿತ ಡೈಲಾಗ್ ಗಳು ನೀರಸ ಎನಿಸುವ ಜಾಗದಲ್ಲಿ ಶಕ್ತಿ ತುಂಬುತ್ತದೆ. ಹಾಗೆ ನೋಡಿದರೆ ಚಿತ್ರದ ನಿಜವಾರ ಕಥೆ ಶುರುವಾಗೋದೇ ಸೆಕೆಂಡ್ ಆಫ್ ನಲ್ಲಿ ಎನ್ನಬಹುದು.