ಎಲ್ಲವೂ ಅಂದುಕೊಂಡಂತೆ ಆದರೆ ಜೂನ್ ತಿಂಗಳ ವೇಳೆಗೆ ಚಿತ್ರವನ್ನು ತೆರೆಗೆ ತರುವ ಆಲೋಚನೆ ಚಿತ್ರತಂಡಕ್ಕಿದೆ. ಈ ಚಿತ್ರದ ಮೂಲಕ ಪ್ರತಾಪ್ ಗಂಧರ್ವ ನಿರ್ದೇಶಕರಾಗಿ ಚಿತರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಯುವ ನಟ ರಕ್ಷಿತ್ ಚಿತ್ರರಂಗದಲ್ಲಿ ಅದೃಷ್ಟ ಕಂಡುಕೊಳ್ಳಲು ಮುಂದಾಗಿದ್ದಾರೆ. ನಾಯಕಿಯರಾಗಿ ಸಂಜನಾ ದಾಸ್ ಮತ್ತು ಅನೂಶಾ ನಟಿಸಿದ್ದಾರೆ.
ನಿರ್ದೇಶಕ ಹರಿ ಸಂತೋಷ್ ಕಥೆ ಬರೆಯುವ ಜೊತೆಗೆ ಕ್ರಿಯೇಟೀವ್ ಹೆಡ್ ಆಗಿ ಕೆಲಸ ಮಾಡಿದ್ದಾರೆ. ಪ್ರಶಾಂತ್ ಕಲ್ಲೂರು " ಕಂಗ್ರಾಜುಲೇಷನ್ ಬ್ರದರ್" ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಹರೀಶ್ ರೆಡ್ಡಿ ಮತ್ತು ಶ್ರೀಕಾಂತ್ ಕಶ್ಯಪ್ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ.
ಹೊಸಬರ ತಂಡದಲ್ಲಿ ಹಿರಿಯ ನಟ ಶಶಿಕುಮಾರ್ ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಗಮನ ಸೆಳೆದಿದ್ದಾರೆ. ಜೊತೆಗೆ ರಕ್ಷಿತ್ ಕಾಪು, ಸುದರ್ಶನ್, ಚೇತನ್ ದುರ್ಗಾ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಚಿತ್ರೀಕರಣ ಪೂರ್ಣಗೊಂಡ ಹಿನ್ನೆಲೆಯಲ್ಲಿ ಚಿತ್ರದ ಬಗ್ಗೆ ಹೇಳಿಕೊಳ್ಳಲು ಪತ್ರಿಕಾಗೋಷ್ಠಿ ಕರೆಯಲಾಗಿತ್ತು.
ಈ ವೇಳೆ ಮಾತಿಗಿಳಿದ ಹರಿ ಸಂತೋಷ್, ಹುಡುಗರಿಗೆ ಹುಡುಗಿ ಸಿಗದಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಅನೇಕ ಕಡೆ ಅನಾಹುತಗಳನ್ನು ಕಂಡಿದ್ದೇವೆ. ಇಂತಹುದರಲ್ಲಿ ಒಬ್ಬ ಹುಡುಗನಿಗೆ ಇಬ್ಬರು ಹುಡುಗಿಯರು ಸಿಕ್ಕಾಗ ಎಂತವರೂ "ಕಂಗ್ರಾಜುಲೇಷನ್ ಬ್ರದರ್" ಅಂತಾರೆ. ಅಂತಹುದೇ ಕಥೆ ಚಿತ್ರದಲ್ಲಿದೆ. ನಾಯಕನಾಗಿ ರಕ್ಷಿತ್ ನಾಗ್ ಮತ್ತು ನಾಯಕಿಯರಾಗಿ ಸಂಜನಾ ದಾಸ್ ಮತ್ತು ಅನೂಷಾ ನಟಿಸಿದ್ದಾರೆ. ಚಿತ್ರವನ್ನು ಕಾರವಾರ, ಬೆಂಗಳೂರು ಸೇರಿದಂತೆ 45 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಕಥೆ ನಾನೇ ಬರೆದಿದ್ದ ಹಿನ್ನೆಲೆಯಲ್ಲಿ ನಿರ್ಮಪಕ ಪ್ರಶಾಂತ್ ಕಲ್ಲೂರು ನೀವು ಜೊತೆ ಇರಬೇಕು ಎಂದರು. ಹೀಗಾಗಿ ಚಿತ್ರತಂಡದ ಜೊತೆಗೆ ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ್ದೇನೆ. ಚಿತ್ರ ಉತ್ತಮವಾಗಿ ಮೂಡಿಬಂದಿದೆ.ದುಬೈನಲ್ಲಿ ಚಿತ್ರದ ಮೊದಲ ಹಾಡು ಬಿಡುಗಡೆ ಮಾಡುವ ಉದ್ದೇಶವಿದೆ, ಇನ್ನೂ ದಿನಾಂಕ ನಿಗಧಿ ಮಾಡಿಲ್ಲ ಎಂದು ಮಾಹಿತಿ ಹಂಚಿಕೊಂಡರು.
ಹಿರಿಯ ನಟ ಶಶಿ ಕುಮಾರ್ ಮಾತನಾಡಿ, ಚಿತ್ರಮಾಡುವಾಗ ಪಕ್ಕಾ ಯೋಜನೆ ಹಾಕಿಕೊಳ್ಳುವುದು ಮುಖ್ಯ. ಅಂದುಕೊಂಡ ದಿನದಲ್ಲಿ ಹೆಚ್ಚು ಕಡಿಮೆ ಮುಗಿಸಿದರೆ ನಿರ್ಮಾಪಕರಿಗೂ ಅನುಕೂಲವಾಗಲಿದೆ, ಅದನ್ನು ಬಿಟ್ಟು ಹಾಕಿಕೊಂಡ ದಿನಾಂಕಕ್ಕೆ ಹೆಚ್ಚಾಗಿ ಮಾಡಿದರೆ ನಿರ್ಮಾಪಕರಿಗೂ ಹೊರೆ ಇದನ್ನು ಯುವ ಚಿತ್ರತಂಡ ಅರಿಯಬೇಕು. ನಾವು ಚಿತ್ರರಂಗಕ್ಕೆ ಬಂದ ಹೊಸದರಲ್ಲಿ ಮತ್ತು ನಂತರದ ದಿನಗಳಲ್ಲಿ ಪಕ್ಕಾ ಪ್ಲಾನಿಂಗ್ ಮಾಡಿಕೊಂಡು ಕೆಲಸ ಮಾಡುತ್ತಿದ್ದೆವು, ಅಂತಹುದೇ ವಾತಾವರಣ ಚಿತ್ರರಂಗದಲ್ಲಿ ಬರಬೇಕು. ಚಿತ್ರದಲ್ಲಿ ತಂದೆಯ ಪಾತ್ರ. ಚೆನ್ನಾಗಿ ಮೂಡಿ ಬಂದಿದೆ ಎಂದರು.
ನಿರ್ಮಾಪಕ ಪ್ರಶಾಂತ್ ಕಲ್ಲೂರು, ಎರಡು ಮೂರು ಚಿತ್ರಗಳಿಗೆ ಸಹ ನಿರ್ಮಾಪಕನಾಗಿ ಕೆಲಸ ಮಾಡಿದ್ದೆ, ಇದು ಪೂರ್ಣ ಪ್ರಮಾಣದ ನಿರ್ಮಾಪಕನಾಗಿ ಮೊದಲ ಚಿತ್ರ. ಕನ್ನಡದ ಪ್ರತಿಭೆಗಳನ್ನು ಬೆಳಸಲು ನಿರ್ಮಾಪಕರು ಮುಂದೆ ಬರಬೇಕು. ನಿರ್ದೇಶಕ ಪ್ರತಾಪ್ ಗಂಧರ್ವ ಅಂದುಕೊಂಡ ಶೆಡ್ಯೂಲ್ಡ್ ನಲ್ಲಿ ಚಿತ್ರೀಕರಣ ಮುಗಿಸಿಕೊಟ್ಟಿದ್ದಾರೆ. ಇದು ಖುಷಿಯ ವಿಚಾರ ಚಿತ್ರ ಮೂಡಿ ಬಂದಿರುವ ಪರಿಗೆ ಖುಷಿ ಇದೆ ಎಂದು ಹೇಳಿದರು.
ನಿರ್ದೇಶಕ ಪ್ರತಾಪ್ ಗಂಧರ್ವ ಮಾತನಾಡಿ, ನಿರ್ದೇಶಕ ಹರಿ ಸಂತೋಷ್ ಕಥೆ ಬರೆದು ಚಿತ್ರಕ್ಕೆ ಸಂಪೂರ್ಣ ಸಹಕಾರ ನೀಡಿದ ಹಿನ್ನೆಲೆಯಲ್ಲಿ ನಿಗಧಿತ ಸಮಯದಲ್ಲಿ ಚಿತ್ರವನ್ನು ಪೂರ್ಣಗೊಳಿಸಲು ಸಹಕಾರಿಯಾಗಿದೆ. ಮೊದಲ ಚಿತ್ರ. ಎಲ್ಲರ ಸಹಕಾರ ಮತ್ತು ಬೆಂಬಲ ಬೇಕು ಎಂದು ಕೇಳಿಕೊಂಡರು.
ನಾಯಕ ರಕ್ಷಿತ್, ಹಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದೆ. ಸಿನಿಮಾದಲ್ಲಿ ನಾಯಕನಾಗಿ ಮೊದಲ ಪ್ರಯತ್ನ, ನಿರ್ದೇಶಕ ಹರಿ ಸಂತೋಷ್ ಅವರ ತಂಡದಲ್ಲಿದ್ದೇನೆ. ಒಬ್ಬ ಹುಡುಗನ ಜೀವನದಲ್ಲಿ ಇಬ್ಬರು ಹುಡುಗಿಯರು ಬಂದಾಗ ಏನೆಲ್ಲಾ ಆಗಲಿದೆ ಎನ್ನುವುದು ಚಿತ್ರದ ತಿರುಳು ಎಂದರು.
ನಾಯಕಿ ಸಂಜನಾ ದಾಸ್, ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ, ಬೋಲ್ಡ್ ಮತ್ತ ಇಂಡಿಪೆಂಡೆಂಟ್ ಹುಡುಗಿ ಒಂದು ಥರ ಫೈಟರ್ ಇದ್ದಂತೆ ಅದು ಯಾಕೆ ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು., ನನ್ನ ಪಾತ್ರದ ಚಿತ್ರೀಕರಣವನ್ನು 30 ದಿನಗಳ ಕಾಲ ಮಾಡಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.
ಮತ್ತೊಬ್ಬ ನಟಿ ಅನೂಷಾ, ಮೊದಲ ಚಿತ್ರ, ಚಿತ್ರತಂಡದ ಸಹಕಾರದಿಂದ ಎಲ್ಲಿಯೂ ತೊಂದರೆ ಆಗಿಲ್ಲ ಆಡಿಷನ್ ಮೂಲಕ ಚಿತ್ರಕ್ಕೆ ಆಯ್ಕೆಯಾಗಿದೆ, ಕಂಟೆಂಟು ಓರಿಯೆಂಟ್ ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕಾರಿ ನಿರ್ಮಾಪಕ ಶ್ರೀಕಾಂತ್ ಕಶ್ಯಪ್ ಮಾತನಾಡಿ, ನವಂಬರ್ 18 ರಂದು ಮುಹೂರ್ತ ಮಾಡಿದ್ದೆವು, 45 ದಿನಗಳಲ್ಲಿ ಚಿತ್ರೀಕರಣ ಪೂರ್ಣ ಮಾಡಿದ್ದೇವೆ ರೀರೇಕಾರ್ಡಿಗ್ ನಡೆಯುತ್ತಿದೆ. ಒಳ್ಳೆಯ ಕಥೆ ಮತ್ತು ಸಿನಿಮಾವಾಗಲಿದೆ ಎಂದರು.