ಚಿತ್ರ : ಮನದ ಕಡಲು
ನಿರ್ಮಾಪಕ : E.K. ಎಂಟರ್ ಟೈನರ್ಸ್ ಲಾಂಛನದಲ್ಲಿ ಇ.ಕೃಷ್ಣಪ್ಪ
ಸಹ ನಿರ್ಮಾಪಕ : ಜಿ.ಗಂಗಾಧರ್
ನಿರ್ದೇಶನ : ಯೋಗರಾಜ್ ಭಟ್
ತಾರಾಗಣ; ಸುಮುಖ, ರಶಿಕಾ ಶೆಟ್ಟಿ, ಅಂಜಲಿ, ರಂಗಾಯಣ ರಘು, ದತ್ತಣ್ಣ ಮತ್ತಿತರರು
ಅವಧಿಯ ಸಮಯ : 2 ಗಂಟೆ 34 ನಿಮಿಷಗಳು
ರೇಟಿಂಗ್ : * 4/5 ****
ಮುಂಗಾರುಮಳೆ ಚಿತ್ರದ ನಿರ್ಮಾಪಕ ಈ. ಕೃಷ್ಣಪ್ಪ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಮತ್ತೊಮ್ಮೆ ಜೊತೆಯಾಗಿ ಮಾಡಿದ ಚಿತ್ರ ಮನದ ಕಡಲು. ಅಂಥಾ ಸೂಪರ್ ಹಿಟ್ ಚಿತ್ರದ ಜೋಡಿಯ ಸಿನಿಮಾ ಎಂದಾಗ ಸಹಜವಾಗಿಯೇ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿರುತ್ತದೆ. ಮೂರು ಹೃದಯಗಳ ನಡುವಿನ ತ್ರಿಕೋನ ಪ್ರೇಮ ಕಥಾಹಂದರವನ್ನು ನಿರ್ದೇಶಕ ಯೋಗರಾಜ ಭಟ್ಟರು ಹಸಿರು ದ್ವೀಪವೊಂದರಲ್ಲಿ ತೆರೆದಿಟ್ಟಿದ್ದಾರೆ.
ಪ್ರೇಕ್ಷಕರ ನಿರೀಕ್ಷೆಯನ್ನು ಮುಟ್ಟಲು ಭಟ್ಟರು ತುಂಬಾನೇ ಎಫರ್ಟ್ ಹಾಕಿರುವುದು ತೆರೆ ಮೇಲೆ ಎದ್ದು ಕಾಣಿಸುತ್ತದೆ. ಇಲ್ಲಿ ನಾಯಕ ಅಲ್ಲದೆ ನಾಯಕಿಯರಿಬ್ಬರೂ ಹೊಸಬರು. ಹಾಗಾಗಿ ಚಿತ್ರದ ನಿರೂಪಣೆಯಲ್ಲಿ ಫ್ರೆಶ್‌ನೆಸ್ ಇದೆ.
ಇನ್ನು ಭಟ್ಟರ ಕಥೆಗಳಲ್ಲಿ ಬರುವ ಪಾತ್ರಗಳೇ ಡಿಫರೆಂಟ್ ಆಗಿರುತ್ತವೆ. ಅದೇ ಅವರ ಸ್ಪೆಷಾಲಿಟಿ ಕೂಡ. ಮನದ ಕಡಲು ಚಿತ್ರದಲ್ಲೂ ಅದು ಮುಂದುವರಿದಿದೆ. ಎಂಬಿಬಿಎಸ್ ಓದುತ್ತಿದ್ದ ನಾಯಕ ಸುಮುಖ ಕೊನೇವರ್ಷ ಓದಿಗೆ ತಿಲಾಂಜಲಿ ಇಟ್ಟು ಒಬ್ಬ ಹುಡುಗಿಯನ್ನು ಹುಡುಕಿಕೊಂಡು ಎಂದೂ ಕಾಣದ ಜಾಗವೊಂದಕ್ಕೆ ಬರುತ್ತಾನೆ, ನಿರ್ದೇಶಕರು ಸುಮುಖನ ಪಾತ್ರವನ್ನು ಕೇಂದ್ರವಾಗಿಸಿಕೊಂಡು ಉಳಿದ ಪಾತ್ರಗಳನ್ನು ಪೇರಿಸುತ್ತ ಹೋಗಿದ್ದಾರೆ. ಲವಲವಿಕೆಯ ಪಾತ್ರಗಳೇ ಈ ಚಿತ್ರದ ಹೈಲೈಟ್ ಎನ್ನಬಹುದು. ನಾಯಕನ ಅಲ್ಲದೆ ನಾಯಕಿಯರ ಪಾತ್ರಗಳಲ್ಲೂ ಸಹ ಲವಲವಿಕೆ ಎದ್ದುಕಾಣುತ್ತದೆ. ತಾನು ಮನಸಾರೆ ಪ್ರೀತಿಸಿದ ರಾಶಿಕಾಳ ಜೀವ ಉಳಿಸಿಕೊಳ್ಳಲು ಎಂಥ ರಿಸ್ಕನ್ನಾದರೂ ತೆಗೆದುಕೊಳ್ಳಲು ಸಿದ್ದವಾಗುವ ಸುಮುಖ ಕೊನೆಗೆ ತನ್ನ ಪ್ರಾಣವನ್ನೇ ಪಣವಾಗಿಟ್ಟು ಆಕೆ ತನಗಿದ್ದ ವಿಚಿತ್ರ ಖಾಯಿಲೆಯಿಂದ ಹೊರಬರುವಂತೆ ಮಾಡುತ್ತಾನೆ, ಮುಂಗಾರು ಮಳೆಯಲ್ಲಿ ಎಲ್ಲರಿಗೂ ಚಿರಪರಿಚಿತವಾದ ಜೋಗ ಜಲಪಾತವನ್ನು, ಜೋಗ ಹೀಗೂ ಇದ್ಯಾ ಅಂತ ಅಲ್ಲಿದ್ದವರೇ ಅಚ್ಚರಿಪಡುವಂತೆ ಕ್ಯಾಮೆರಾಮನ್ ಕೃಷ್ಣ ಸಹಕಾರದಿಂದ ಕಟ್ಟಿಕೊಟ್ಟಿದ್ದರು. ಅದೇರೀತಿ ಈ ಬಾರಿಯೂ ಮಹಾರಾಷ್ಟ್ರ ರಾಯಘಡದ ಮರುದ್‌ಕೊಟೆ ಎಂಬ ದ್ವೀಪವನ್ನು ದೋಣಿದುರ್ಗವಾಗಿ ಈ ಚಿತ್ರದಲ್ಲಿ ತೋರಿಸಿದ್ದಾರೆ. ಚಿತ್ರದ ಬಹುಪಾಲು ಕಥೆ ನಡೆಯುವುದು ಇದೇ ಜಾಗದಲ್ಲಿ. ಆ ಕೋಟೆಯನ್ನಾಳುತ್ತಿದ್ದ ಪಶ್ಚಿಮ ರಾಜನಿಗೂ ಇಬ್ಬರು ಪತ್ನಿಯರಿರುತ್ತಾರೆ. ಅವರ ನೆನಪಿಗಾಗಿ ರಾಜ ಕಟ್ಟಿಸಿದ ಸ್ಮಾರಕಗಳು ಆ ಜಾಗದ ವಿಶೇಷ.
ರಂಗಾಯಣ ರಘು ಅಲ್ಲಿನ ಆದಿವಾಸಿ ಜನರ ನಾಯಕನಾಗಿ ಅಲ್ಲದೆ ಹಿರಿಯ ಆಯುರ್ವೇದ ವೈದ್ಯನಾಗಿ ದತ್ತಣ್ಣ ಅದ್ಭುತ ಅಭಿನಯ ನೀಡಿದ್ದಾರೆ.
ಈ ಸಿನಿಮಾದಲ್ಲಿ ಯುವ ಹೃದಯಗಳ ತ್ರಿಕೋನ ಪ್ರೇಮಕಥೆಯಿದೆ. ಇರುವುದೆಲ್ಲವನ್ನೂ ಬಿಟ್ಟು ಇನ್ನೇನನ್ನೋ ಹುಡುಕುವ ಜನರಿಗೆ ಒಂದು ಸಂದೇಶವನ್ನು ಈ ಸಿನಿಮಾ ಮೂಲಕ ಭಟ್ರು ರವಾನಿಸಿದ್ದಾರೆ.
ಅಲ್ಲಲ್ಲಿ ತಿಳಿಹಾಸ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸುವ ಪ್ರಯತ್ನವನ್ನೂ ಮಾಡಿದ್ದಾರೆ. ಹಾಗಂತ, ಎಲ್ಲ ದೃಶ್ಯಗಳಲ್ಲೂ ಅದನ್ನು ನಿರೀಕ್ಷಿಸುವಂತಿಲ್ಲ. ವಿಶೇಷವಾಗಿ ಚಿತ್ರದ ನಾಯಕ, ಇಬ್ಬರು ನಾಯಕಿಯರಿಗೆ ಚಿತ್ರದಲ್ಲೂ ಅವರ ನಿಜನಾಮಧೇಯವೇ ಇದೆ, ಬಹಳ ದಿನಗಳ ನಂತರ ನಾಯಕನ ತಂದೆಯ ಪಾತ್ರಕ್ಕೆ ನಟ ಶಿವಧ್ವಜ್ ಬಣ್ಣ ಹಚ್ಚಿದ್ದಾರೆ.
ನಾಯಕ ಸುಮುಖ, ಯೋಗರಾಜ್ ಭಟ್ಟರ ಹಿಂದಿನ ಸಿನಿಮಾಗಳ ಹೀರೋಗಳನ್ನು ನೆನಪಿಸುತ್ತಾರೆ. ನಾಯಕಿಯರಿಗೂ ಈ ಮಾತು ಅನ್ವಯ ಆಗುತ್ತದೆ. ಅಂಜಲಿ ಅನೀಶ್ ಮತ್ತು ರಾಶಿಕಾ ಶೆಟ್ಟಿ ಇಬ್ಬರೂ ತುಂಬ ಸಹಜವಾಗಿ ತಮ್ಮ ಪಾತ್ರಗಳನ್ನು ನಿಭಾಯಿಸಿದ್ದಾರೆ. ಅದರಲ್ಲೂ ನಾಯಕನನ್ನು ಬಿಟ್ಟರೆ ಅಂಜಲಿ ಅವರ ಪಾತ್ರಕ್ಕೆ ಹೆಚ್ಚಿನ ಅವಕಾಶವಿದ್ದು ಅದನ್ನವರು ಚೆನ್ನಾಗಿಯೇ ಉಪಯೋಗಿಸಿಕೊಂಡಿದ್ದಾರೆ, ಹಸಿರು ಪರಿಸರ, ಕಣ್ಣಿಗೆ ಹಬ್ಬವೆನಿಸುವ ಪ್ರಕೃತಿ ವೈಭವ, ಭೋರ್ಗರೆವ ಜಲಪಾತದ ಸೊಬಗು, ಚುರುಕಾದ ಸಂಭಾಷಣೆಗಳು ಇವೆಲ್ಲದರ ಮೂಲಕ ನಿರ್ದೇಶಕರಾಗಿ ಯೋಗರಾಜ್ ಭಟ್ಟರು ಪ್ರೇಕ್ಷಕರ ಮನ ಗೆದ್ದಿದ್ದಾರೆ. ಆದರೆ ಅದಕ್ಕೆ ತಕ್ಕಂತೆ ಗಟ್ಟಿಕಥೆ ಹೆಣೆಯುವಲ್ಲಿ ಇನ್ನಷ್ಟು ಎಫರ್ಟ್ ಹಾಕಬಹುದಿತ್ತೇನೋ ಅಂತ ಚಿತ್ರ ನೋಡಿ ಹೊರಬರುವಾಗ ಅನಿಸದಿರದು. ಅದೊಂದನ್ನು ಬದಿಗಿಟ್ಟು ನೋಡಿದರೆ ಮನದ ಕಡಲು ನಿಜಕ್ಕೂ ಒಂದೊಳ್ಳೇ ಮನರಂಜನಾತ್ಮಕ ಸಿನಿಮಾ ಅಂತ ನಿಸ್ಸಂದೇಹವಾಗಿ ಹೇಳಬಹುದು.