ಕನ್ನಡ ಚಿತ್ರರಂಗದ ಘಟಾನುಘಟಿ ನಾಯಕರಾದ ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಚಿತ್ರ "45"ರ ಟೀಸರ್ ಬಿಡುಗಡೆಯಾಗಿದ್ದು ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಠಿ ಮಾಡಿದ್ದು ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ಅರ್ಜುನ್ ಜನ್ಯ ಪ್ರಯತ್ನಕ್ಕೆ ಮೆಚ್ಚುಗೆ ಮಹಾಪೂರ ಹರಿದು ಬಂದಿದೆ.
ಚಿತ್ರರಂಗದಲ್ಲಿ ಸಧಬಿರುಚಿಯ ನಿರ್ಮಾಪಕ ಎಂದೇ ಖ್ಯಾತಿ ಪಡೆದಿರುವ ರಮೇಶ್ ರೆಡ್ಡಿ ನಿರ್ಮಾಣದ ಚಿತ್ರ ಒಂದಷ್ಟು ಹೊಸತನ ಮತ್ತು ಕುತೂಹಲಗಳ ಮೂಲಕ ಗಮನ ಸೆಳೆದಿದೆ. ಯುಗಾದಿ ಹಬ್ಬದಂದು ಟೀಸರ್ ಬಿಡುಗಡೆಯಾಗಿದ್ದು ಭರ್ಜರಿ ಬೆಳೆ ತರುವ ಮುನ್ಸೂಚನೆ ನೀಡಿದೆ.
ಕರುನಾಡ ಚಕ್ರವರ್ತಿ ಡಾ. ಶಿವರಾಜ್‍ಕುಮಾರ್ "45" ಚಿತ್ರದ ಟೀಸರ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡ ನಂತರ ಪಾಲ್ಗೊಂಡ ಸಿನಿಮಾ ಕಾರ್ಯಕ್ರಮ ಇದಾಗಿದೆ.
ಈ ವೇಳೆ ಮಾತಿಗಿಳಿದ ಶಿವರಾಜ್ ಕುಮಾರ್, ಡಿಕೆಡಿ ರಿಯಾಲಿಟಿ ಶೋ ಮಾಡುತ್ತಿದ್ದ ವೇಳೆ ಅರ್ಜುನ್ ಜನ್ಯ 4 ರಿಂದ 5 ನಿಮಿಷದಲ್ಲಿ ಹೇಳಿದ್ದರು. ಪಾಸಿಟೀವ್ ನೆಗಟೀವ್ ಆಗೋದು ನಾಲ್ಕು ಐದು ನಿಮಿಷದಲ್ಲಿ ಮಾತ್ರ. ಕಥೆ ಕೇಳಿ ಥ್ರಿಲ್ ಆದೆ. ಕಥೆ ಕೊಟ್ಟು ಬಿಡುತ್ತೇನೆ ಯಾರಾದರೂ ನಿರ್ದೇಶನ ಮಾಡಲಿ ಎಂದರು, ಯಾಕಪ್ಪ ಕಥೆ ಚೆನ್ನಾಗಿ ಹೇಳಿದ್ದೀಯಾ ನೀನೆ ಸಿನಿಮಾ ಮಾಡು ಅಂದೆ, ಆಗ ಬಂದವರೇ ನಿರ್ಮಾಪಕ ರಮೇಶ್ ರೆಡ್ಡಿ ಬಂದರು. ಪ್ರೀತ್ಸೆ, ಲವ ಕುಶ ಚಿತ್ರಗಳಲ್ಲಿ ನಟ ಉಪೇಂದ್ರ ಜೊತೆ ಕೆಲಸ ಮಾಡಿದ್ದೆ. ಇಗೀಗ ಅವರೊಂದಿಗೆ ಮೂರನೇ ಚಿತ್ರ. ಚಿತ್ರವನ್ನು ಬೇರೆಯವರು ನಿರ್ದೇಶನ ಮಾಡಿದ್ದರೆ ಕನ್ನಡಕ್ಕೆ ಸಿಗುತ್ತಿದ್ದ ಒಳ್ಳೆಯ ನಿರ್ದೇಶಕನ್ನು ಕಳೆದುಕೊಳ್ಳುತ್ತಿದ್ದೆವು ಎಂದರು.
45 ಚಿತ್ರ ಶೇಕಡಾ ನೂರರಷ್ಟು ಇಷ್ಟವಾದ ಚಿತ್ರ. ಉತ್ತಮ ಕಥೆ ಇದೆ, ಚಿತ್ರ ಚೆನ್ನಾಗಿ ಮೂಡಿಬಂದಿದೆ. ಚಿತ್ರದಲ್ಲಿ ಅವರು ಇವರು ಎನ್ನುವುದಕ್ಕಿಂತ ಚಿತ್ರ ಸ್ಕೋರ್ ಮಾಡಿದೆ. ಪಾತ್ರ ನೋಡಿದವರು ಅಹಂಕಾರ ಅನ್ನಬಹುದು,ಆದರೆ ಅಲ್ಲೊಂದು ಪ್ರೀತಿ ಇದೆ. ಚಿತ್ರದಲ್ಲಿ ಕೆಲಸ ಮಾಡಿ ಖುಷಿ ಆಗಿದೆ. ಕ್ಲೈಮ್ಯಾಕ್ ಚಿತ್ರೀಕರಣ ಮಾಡುವಾಗ ಬೇರೊಂದು ಲೋಕದಲ್ಲಿದ್ದೆ. ಅದು ಯಾವುದು ಅಂತ ಗೊತ್ತಿಲ್ಲ, ಸದಾ ನಾನು ಸ್ಟೂಡೆಂಟ್ ಆಗಿ ಇರಬೇಕು ಆಸೆ. ಇದರಿಂದ ಕಲಿಯಲು ಅವಕಾಶ ಇರುತ್ತದೆ ಎಂದು ಹೇಳಿದರು.
ನಟ ಉಪೇಂದ್ರ ಮಾತನಾಡಿ, ಒಳ್ಳೆಯ ಕಥೆ ನೀವೇ ಮಾಡಿ ಎಂದು ಅರ್ಜುನ್ ಜನ್ಯಗೆ ಹೇಳಿದ್ದರ ಫಲ 45 ಚಿತ್ರ. ನಮ್ಮಲ್ಲಿಯೂ ನಿರ್ದೇಶಕರು ಇದ್ದಾರೆ ಎನ್ನುವುದನ್ನು ನಾನೂ ಏನೂ ಮಾಡದಿದ್ದಾಗ ಹೇಳಿದವರು ಶಿವಣ್ಣ. ಅವರಿಂದ ಎಷ್ಟು ಜನ ನಿರ್ದೇಶಕರು ಬಂದಿದ್ಧಾರೆ. ಕೆಲವರು ಸೂಪರ್ ಸ್ಟಾರ್ ಆಗಿದ್ದಾರೆ. ಶಿವಣ್ಣ ಅಪರಂಜಿ. ಸಂಗೀತದಲ್ಲಿ ಸಿನಿಮಾ ಸೂಪರ್ ಹಿಟ್ ಮಾಡ್ತಾರೆ. ಸಿನಿಮಾ ಹೇಗೆ ಮಾಡಿರಬೇಕು ಊಹಿಸಿ ನೋಡಿ. ಮೈಸೂರಿನಲ್ಲಿ ಸುಮ್ಮನೆ ಕೂತಿದ್ದೆ, ಅರ್ಜುನ್ ಜನ್ಯ ಎಲ್ಲವನ್ನೂ ನಟಿಸಿ ತೋರಿಸುತ್ತಿದ್ದರು. ಚಿತ್ರರಂಗಕ್ಕೆ ಬೇಕಾಗಿರುವುದು ರಮೇಶ್ ರೆಡ್ಡಿ ಅವರಂತಹ ಸೂಪರ್ ಸ್ಟಾರ್ ನಿರ್ಮಾಪಕರು ಬೇಕಾಗಿದ್ದಾರೆ. ಮುಂದಿನ ಸಿನಿಮಾ ಬೇರೆ ಭಾಷೆಯಲ್ಲಿ ಮಾಡಿದರೆ ನಾವೂ ಮೂರು ಜನ ನಿಮ್ ಮನೆ ಮುಂದೆ ಪ್ರತಿಭಟನೆ ಮಾಡ್ತೇವೆ ಎಂದು ಅರ್ಜುನ್ ಜನ್ಯಗೆ ಎಚ್ಚರಿಕೆಯ ಸಲಹೆ ನೀಡಿದರು.
ನಟ ರಾಜ್ ಬಿ ಶೆಟ್ಟಿ ಮಾತನಾಡಿ, ಚಿತ್ರದಲ್ಲಿ ಶಿವಣ್ಣ ಮತ್ತು ಉಪೇಂದ್ರ ಎನ್ನುವ ಇಬ್ಬರು ಸೂಪರ್ ಸ್ಟಾರ್ ಇದ್ದಾರೆ. ಚಿತ್ರದಲ್ಲಿ ನಾನೊಬ್ಬ ಕಲಾವಿದ ಅಷ್ಟೇ. ಶಿವಣ್ಣ ಮತ್ತು ಉಪೇಂದ್ರ ಅವರು ತೆರೆಯ ಮೇಲೆ ಬರವಾಗ ಅವರ ಮದ್ಯೆ ಕುಳಿತು ವಿಷಲ್ ಹಾಕುವುದು ನನ್ನ ಭಾಗ್ಯ. ಚಿತ್ರದಲ್ಲಿ ನಟಿಸಿ ಎಂದಾಗ ಅದರಿಂದ ತಪ್ಪಿಸಿಕೊಳ್ಳಲು ನಿರ್ದೇಶಕ ಅರ್ಜುನ್ ಜನ್ಯ ಅವರನ್ನು ಹಲವು ಭಾರಿ ಕನ್ವಿನ್ಸ್ ಮಾಡಿದೆ. ಬೇರೆ ಚೆನ್ನಾಗಿರುವ ಯಾರಾದರೂ ಹಾಕಿಕೊಳ್ಳಿ ಎಂದು ಕೇಳಿಕೊಂಡೆ. ನನ್ನನ್ನು ಒಪ್ಪಿಕೊಂಡಿದ್ದು ನನ್ನ ಭಾಗ್ಯ.
ಒಳ್ಳೆಯ ಕನ್ನಡ ಸಿನಿಮಾವನ್ನು ಕನ್ನಡದವರ ಜೊತೆಗೆ ಹೊರಗಿನ ಮಂದಿಯೂ ನೋಡಬೇಕು ಎನ್ನುವ ಆಸೆ. ಮುಂದಿನ ಸಿನಿಮಾ ಬೇರೆ ಭಾಷೆಯಲ್ಲಿ ಮಾಡಿದ್ದರೆ ಸರಿ ಇರಲ್ಲ. ಕನ್ನಡದಲ್ಲಿಯೇ ಮಾಡಬೇಕು ಎನ್ನುವ ಷರತ್ತನ್ನು ನಿರ್ದೇಶಕ ಅರ್ಜುನ್ ಜನ್ಯಾ ಅವರಿಗೆ ಹಾಕಿದ್ದೇನೆ. ಚಿತ್ರದಲ್ಲಿ ಪ್ರತಿ ಪಾತ್ರಕ್ಕೆ ಡಬ್ ಮಾಡಿ ಅದನ್ನು ಎಲ್ಲರಿಗೂ ತೋರಿಸುವ ಹುಚ್ಚ ಯಾರಾದರೂ ಇದ್ದರೂ ಅದು ಅರ್ಜುನ್ ಜನ್ಯ ಮಾತ್ರ. ಸಿನಿಮಾ ಕಳೆದ ವರ್ಷ ಮುಗಿದಿದೆ. ಈ ವರ್ಷ ಬಿಡುಗಡೆಯಾಗುತ್ತಿದೆ. ನಿರ್ದೇಶಕರು ಮತ್ತು ನಿರ್ಮಾಪಕರ ತಾಳ್ಮೆ ಮೆಚ್ಚಬೇಕು. ಸ್ಟಾರ್ ನಟ ರ ಸಿನಿಮಾದಲ್ಲಿ ನಟಿಸಿದ್ದೇನೆ ಎಂದು ಅನ್ನಿಸಿಲ್ಲ. ಚೆನ್ನಾಗಿ ನಟಿಸಲು ಪ್ರೋತ್ಸಾಹಿಸಿದವರು ಶಿವಣ್ಣ ಮತ್ತು ಉಪೇಂದ್ರ ಅವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಿರ್ದೇಶಕ ಅರ್ಜುನ್ ಜನ್ಯ ಮಾತನಾಡಿ ಶಿವಣ್ಣ ಅವರಿಂದಲೇ ಚಿತ್ರ ಆಗಿರುವುದು, ನಿರ್ಮಾಪಕ ರಮೇಶ್ ರೆಡ್ಡಿ ಅವರು ದುಡ್ಡಿನ ಮುಖ ನೋಡಿಲ್ಲ, ಗಾರೆ ಕೆಲಸದಿಂದ ಈ ಮಟ್ಟಕ್ಕೆ ಬೆಳೆದು ಸಿನಿಮಾ ನಿರ್ಮಾಣ ಮಾಡಿರುವುದು ನಮ್ಮ ಗೌರವ. 45 ಎನ್ನುವ ಶೀರ್ಷಿಕೆಯನ್ನು ಸುಮ್ಮನೆ ಇಟ್ಟಿಲ್ಲ. ಚಿತ್ರದ ಟೀಸರ್‍ನಲ್ಲಿ ಕಥೆ ಹೇಳುವ ಪ್ರಯತ್ನ ಮಾಡಿದ್ದೇವೆ. ಅದು ಏನು ಎನ್ನುವುದನ್ನು ಪ್ರೇಕ್ಷಕರೇ ಗೆಸ್ ಮಾಡಲಿ. ಚಿತ್ರದಲ್ಲಿ ಕಂಪೂಟರ್ ಗ್ರಾಫಿಕ್ ಕೆಲಸ ಹೆಚ್ಚಿಗೆ ಇದ್ದು ಕೆನಡಾದಲ್ಲಿ ಸಿಜಿ ಕೆಲಸ ನಡೆಯುತ್ತಿದೆ. ನಾನೋ ಪಿಯುಸಿ ಫೇಲ್, ಎಸ್ ಎಸ್ ಎಲ್ ಸಿಪಾಸು, ನನಗೆ ಬಂದ ಇಂಗ್ಲೀಷ್ ನಲ್ಲಿ ಕೆನಡಾದ ತಂತ್ರಜ್ಞರೊಂದಿಗೆ ವ್ಯವಹಿಸಿದ್ದೇನೆ, ಟೀಸರ್‍ನ ಒಂದೊಂದು ಶಾಟ್‍ನಲ್ಲಿಯೂ ಕಥೆ ಹೇಳಿದ್ದೇವೆ,ಅದನ್ನು ಊಹೆ ಮಾಡಿ ಎನ್ನುವ ಮೂಲಕ ಕುತೂಹಲ ಹೆಚ್ಚು ಮಾಡಿದರು.
ಚಿತ್ರ ಸಿಜಿ ಕೆಲಸದಿಂದ ತಡವಾಗಿ ಚಿತ್ರದಲ್ಲಿ "ಓಂ" ಬಳಸಲು ಅವಕಾಶ ಮಾಡಿಕೊಟ್ಟ ಉಪೇಂದ್ರ, ಅದಕ್ಕೆ ಸಹಕಾರ ನೀಡಿದ ಶಿವಣ್ಣ ಜೊತೆಗೆ ಹಂಸಲೇಖ ಅವರಿಗೆ ಅಬಾರಿ. ಓಂ ಅನ್ನುವುದನ್ನು ಗಿಮಿಕ್ ಆಗಿ ಮಾಡಿಲ್ಲ ಯಾಕೆ ಎನ್ನುವುದನ್ನು ಚಿತ್ರ ನೋಡಿ ಗೊತ್ತಾಗುತ್ತದೆ. ನಾನು 28 ಬಾರಿ "ಓಂ" ಸಿನಿಮಾ ನೋಡಿದ್ದೇನೆ. ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ ಎಂದು ಹೇಳಿದರು
ನಿರ್ಮಾಪಕ ರಮೇಶ್ ರೆಡ್ಡಿ ಚಿತ್ರ ಮೂಡಿ ಬಂದಿರುವ ಪರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಈ ರೀತಿಯ ಸಿನಿಮಾ ಭಾರತದಲ್ಲಿಯೇ ಬಂದಿಲ್ಲ ಎಂದರು.
ಛಾಯಾಗ್ರಾಹಕ ಸತ್ಯ ಹೆಗಡೆ ಮಾತನಾಡಿ ಮ್ಯಾಜಿಕಲ್ ಕಂಪೋಸರ್ ಈಗ ಮ್ಯಾಜಿಕಲ್ ನಿರ್ದೇಶಕರಾಗಿದ್ದಾರೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಟೀಸರ್ ಮೂಲಕ ಕಥೆ ಹೇಳುವ ಪ್ರಯತ್ನ ಮಾಡಲಾಗಿದೆ. ನಿರ್ದೇಶಕರ ವಿಷನ್ ನಿರ್ಮಾಪಕ ಫ್ಯಾಶನ್ ನಿಂದ ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದು ಮಾಹಿತಿ ಹಂಚಿಕೊಂಡರು.