ವಿಜಯನಗರ ರಾಜವಂಶಕ್ಕೆ ಸೇರಿದ ತಾಮ್ರದ ಪಟಶಾಸನವೊಂದು ಇತ್ತೀಚೆಗೆ ಬೆಂಗಳೂರು ಸಮೀಪ ಪತ್ತೆಯಾಗಿದೆ. ಕನ್ನಡ ಅಕ್ಷರಗಳ ಜತೆಗೆ ವಿಜಯನಗರ ಸ್ಥಾಪಕರಾದ ಹರಿ ಹರ ಮತ್ತು ಬುಕ್ಕರಾಯರ ಪೂರ್ವಜರ ಬಗ್ಗೆ ಹಳಗನ್ನಡದ ಮಾಹಿತಿಯನ್ನು ಈ ತಾಮ್ರ ಶಾಸನ ಒಳಗೊಂಡಿದ್ದು, ಇದನ್ನು ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿರುವ ಫಾಲ್ಕನ್ ಕಾಯಿನ್ಸ್ ಗ್ಯಾಲರಿಯಲ್ಲಿ ಸಂರಕ್ಷಿಸಿಡಲಾಗಿದೆ.
ಫಾಲ್ಕನ್ ಕಾಯಿನ್ಸ್ ಗ್ಯಾಲರಿಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಗ್ಯಾಲರಿಯ ವ್ಯವಸ್ಥಾಪಕ ನಿರ್ದೇಶಕ ಕೀರ್ತಿ ಎಂ.ಪರೇಖ್ ಹೊಸತಾಗಿ ಬೆಳಕಿಗೆ ಬಂದ ಈ ತಾಮ್ರ ಶಾಸನದ ಕುರಿತು ಮಾತನಾಡಿ, ತಾಮ್ರದ ಈ ಶಾಸನವು ಕರ್ನಾಟಕ ಮೂಲದ್ದಾಗಿದ್ದು, ವಿಜಯನಗರದ ಸಂಗಮದೊರೆ ಒಂದನೇ ದೇವರಾಯನ ಆಡಳಿತದಲ್ಲಿದ್ದವು ಎಂದು ತಿಳಿದುಬಂದಿದೆ. ಅಲ್ಲದೆ ಈ ತಾಮ್ರಶಾಸನದ ಮೇಲೆ ಶಕ ೧೩೨೮ ವ್ಯಾಯಾ, ಕಾರ್ತಿಕ, ಬಾ.೧೦, ಶುಕ್ರವಾರ ಎಂದು ಕೆತ್ತಲಾದ ಸಂಸ್ಕೃತ ಭಾಷೆಯಲ್ಲಿನ ನಾಗರಿ ಲಿಪಿಯಲ್ಲಿ ಕನ್ನಡ ಭಾಷೆಯ ಅಕ್ಷರಗಳೂ ಕಂಡುಬಂದಿವೆ. ಇದು ಚಂದ್ರ, ಯದು, ಸಂಗಮ ಮತ್ತು ಅವನ ಐದು ಮಕ್ಕಳಾದ ಹರಿಹರ, ಕಂಪ, ಬುಕ್ಕ ಮಾರಪ, ಮುದ್ದಪ್ಪರಿಂದ ಆರಂಭಗೊಂಡು ಸಂಗಮ ರಾಜವಂಶದ ವಂಶಾವಳಿಯನ್ನು ಪ್ರತಿನಿಧಿಸುತ್ತಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮುಳಬಾಗಿಲು ರಾಜ್ಯ ಹೊಡೆನಾಡ ಸ್ಥಳ ಎಂಬ ಕನ್ನಡ ಭಾಷಾ ಲಿಪಿ ಸಹ ಈ ತಾಮ್ರದ ಪಟ್ಟಿಗಳಲ್ಲಿದೆ ಎಂದು ಮಾಹಿತಿ ನೀಡಿದರು.
ವಿಜಯನಗರ ಸಾಮ್ರಾಜ್ಯದ ರಾಜ ಲಾಂಛನವಾದ ವರಾಹಮುದ್ರೆ ಸಾಮಾನ್ಯ ಚಿತ್ರದ ಸ್ಥಳದಲ್ಲಿ, ಮುದ್ರೆಯ ಚಿತ್ರದಂತೆ ಕಂಡುಬಂದಿದೆ. ಇದರೊಂದಿಗೆ ಈವರೆಗೆ ಎಲ್ಲೂ ದೃಢೀಕರಿಸದ ರಾಜ ದೇವರಾಯರ ಪಟ್ಟಾಭಿಷೇಕದ ದಿನಾಂಕವನ್ನು ಇದರಲ್ಲಿ ನಮೂದಿಸಲಾಗಿದೆ. ಹಾಗೂ ಪಟ್ಟಾಭಿಷೇಕ ನಡೆಯುತ್ತಿರುವಾಗ ಭೂಮಿಯನ್ನು ದತ್ತಿ ನೀಡಿರುವುದಾಗಿ ಹೇಳಲಾಗಿದೆ. ಈ ಐದು ತಾಮ್ರ ಪಟ್ಟಿಗಳುಳ್ಳ ಶಾಸನವು ವಿಜಯನಗರ ಸಾಮ್ರಾಜ್ಯದ ಇತಿಹಾಸವನ್ನು ತಿಳಿಸಿಕೊಡುತ್ತದೆ. ಸುದ್ದಿಗೋಷ್ಠಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ನಿರ್ದೇಶಕ ಡಾ.ಕೆ.ಎಂ. ರೆಡ್ಡಿ, ಫಾಲ್ಕನ್ ಗ್ಯಾಲರಿಯ ಎಂ.ಡಿ.ಕೀರ್ತಿ ಪರೇಖ್,ಹಾಗೂ ಹಾರ್ದಿಕ್ ಪರೇಖ್ ಉಪಸ್ಥಿತರಿದ್ದರು.