ಚಿತ್ರ: ನಿಂಬಿಯಾ ಬನಾದ ಮ್ಯಾಗ
ನಿರ್ದೇಶನ: ಅಶೋಕ್ ಕಡಬ
ನಿರ್ಮಾಣ: ವಿ.ಮಾದೇಶ್
ಸಂಗೀತ: ಅರೋನ ಕಾರ್ತೀಕ್
ಛಾಯಾಗ್ರಹಣ; ಸಿದ್ದು ಕಂಚನಹಳ್ಳಿ
ತಾರಾಗಣ: ಷಣ್ಮುಖ ಗೋವಿಂದರಾಜ್, ಸಂಗೀತಾ, ತನುಶ್ರೀ, ಪಂಕಜ್ ನಾರಾಯಣ್, ಸುನಾದ್ ರಾಜ್, ಸಂದೀಪ್ ಮಲಾನಿ, ಮೂಗು ಸುರೇಶ್ ಇತರರು.
ತಾಯಿ ಮಗನ ನಡುವಿನ ಸಂಬಂಧಕ್ಕೆ ಯಾರೊಬ್ಬರೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಂಥಾ ಗಹನವಾದ ವಿಷಯ ಇಟ್ಟುಕೊಂಡು ಮಲೆನಾಡ ಸೊಗಡಿನ ಜತೆ ಕಥೆ ಹೇಳಿರುವ ನಿರ್ದೇಶಕ ಅಶೋಕ್ ಕಡಬ ಅವರ ಶೈಲಿ ಮೆಚ್ಚುವಂಥಾದ್ದು.
ಮಲೆನಾಡಿನ ಪ್ರಕೃತಿ ಸೌಂದರ್ಯವನ್ನು ತನ್ನ ಪ್ರತಿ ಫ್ರೇಮ್‌ನಲ್ಲೂ ತುಂಬಿಕೊಂಡಿರುವ ನಿಂಬಿಯಾ ಬನಾದ ಮ್ಯಾಗ ಚಿತ್ರ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನಬಹುದು, ಅದರ ಜತೆಗೆ ಮಗನಿಗಾಗಿ ಹಂಬಲಿಸುವ ತಾಯಿ ಹಾಗೂ ತಾಯಿಗಾಗಿ ಒಬ್ಬ ಮಗ ಏನೆಲ್ಲ ಮಾಡಬಹುದು ಎಂಬುದನ್ನು ಮನಮಿಡಿಯುವ ಕಥಾಹಂದರದೊಂದಿಗೆ ನಿರ್ದೇಶಕ ಅಶೋಕ್ ಕಡಬ ಅವರು ಚಿತ್ರದಲ್ಲಿ ತೆರೆದಿಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಂಡುಬರುವ ಮಾಸ್, ಆಕ್ಷನ್ ಚಿತ್ರಗಳ ನಡುವೆ ಮನಕಲಕುವ, ತಾಯಿ ಮಗನ ಸಂಬಂಧದ ಮಹತ್ವವನ್ನು ಜಗತ್ತಿಗೆ ಸಾರುವ ಕಥೆ ಎಂಥ ಗಂಡೆದೆ ಪ್ರೇಕ್ಷಕರ ಕಣ್ಣನ್ನಾದರೂ ಒದ್ದೆ ಮಾಡುತ್ತದೆ, ಅಪ್ಪಟ ಫ್ತಾಮಿಲಿ ಡ್ರಾಮಾ ಕಥೆಯನ್ನು ನಿರ್ದೇಶಕರು ಪ್ರಕೃತಿಯ ಜತೆ ಜತೆಗೇ ನಿರೂಪಿಸಿಕೊಂಡು ಸಾಗಿದ್ದಾರೆ.
ಮಲೆನಾಡಿನ ದಟ್ಟ ಕಾಡಿನ ನಡುವಿನ ಬೆಂಗಾಡಿ ಎಂಬ ಊರಲ್ಲಿ ನಡೆಯುವ ಕಥೆಯಿದು. ಅಲ್ಲೊಂದು ದೊಡ್ಮನೆ ಕುಟುಂಬ. ಬೆಂಗಾಡಿಯ ದೊಡ್ಮನೆ ಎಂದರೆ ಊರ ಜನರಿಗೆಲ್ಲ ತುಂಬಾ ಗೌರವ, ಊರಲ್ಲಿ ಯಾರು ಏನೇ ತಕರಾರಾರು ಮಾಡಿಕೊಂಡರೂ ಅವರು ನ್ಯಾಯ ಕೇಳಲು ಬರುವುದು ಈ ದೊಡ್ಮನೆಗೇ.
ಅಲ್ಲಿ ತನ್ನ ಮಗನನ್ನು ಕಳೆದುಕೊಂಡ ತಾಯಿಯೊಬ್ಬಳ ಹೃದಯ ಮಗ ಇವತ್ತು ಬರ‍್ತಾನೆ, ನಾಳೆ ಬರ‍್ತಾನೆ ಅಂತ ಕಾಯುತ್ತಿರುತ್ತೆ. ಆ ತಾಯಿಯ ನಿರೀಕ್ಷೆ ಸುಳ್ಳಾಗಲ್ಲ. 25 ವರ್ಷಗಳ ನಂತರ ಆ ಮಗ ವಾಪಸ್ ಬರ್ತಾನೆ, ಕಣ್ಣೀರಲ್ಲೇ ಕೈತೊಳೆಯುತ್ತಿದ್ದ ತಾಯಿಯ ಮುಖದಲ್ಲಿ ಖುಷಿ ತರುತ್ತಾನೆ. ಆನಂತರ ಏನೆಲ್ಲ ನಡೆದು ಹೋಗುತ್ತದೆ ಎನ್ನುವುದೇ ಚಿತ್ರದ ಕುತೂಹಲ.
ಬೆಂಗಾಡಿಗೆ ವಾಪಸಾದ ವರಲಕ್ಷ್ಮಿ(ಸಂಗೀತಾ)ಯ ಮಗ ಅಚ್ಚಣ್ಣ (ಷಣ್ಮುಖ ಗೋವಿಂದರಾಜ್)ನ ಮನದಲ್ಲಿ ಸದಾ ಏನೋ ಆತಂಕ ಕಾಡುತ್ತಲೇ ಇರುತ್ತದೆ, ಒಮ್ಮೆ ಮಾವನ ಮಗಳು ವೈಶಾಲಿ(ತನುಶ್ರೀ) ಅಚ್ಚಣ್ಣ ಪ್ರತಿದಿನ ಬರೆಯುತ್ತಿದ್ದ ಡೈರಿಯನ್ನು ಓದುತ್ತಾಳೆ, ತನ್ನ ಸ್ನೇಹಿತನ ತಾಯಿಗೆ ಬ್ರೈನ್ ಟ್ಯೂಮರ್ ಆಗಿದ್ದು, ಆಕೆಯ ಆಪರೇಶನ್‌ಗೆ 25 ಲಕ್ಷ ರೂ.ಅವಶ್ಯಕತೆ ಇದೆಯೆಂದು ಅಚ್ಚಣ್ಣ ಹೇಳಿದಾಗ, ವರಲಕ್ಷ್ಮಿ ಕೂಡಲೇ ಹಣಕೊಟ್ಟು, ಬೆಂಗಳೂರಿಗೆ ಕಳಿಸುತ್ತಾಳೆ, ಮುಂದೆ ಮತ್ತೊಂದು ಕಥೆ ತೆರೆದುಕೊಳ್ಳುತ್ತದೆ, ಅದನ್ನು ಎರಡನೇ ಭಾಗದಲ್ಲಿ ನೋಡಬಹುದು. ಇಲ್ಲಿ ಷಣ್ಮುಖ ಅವರ ಮಾತುಗಳು, ಹಾವ ಭಾವದಲ್ಲಿ ಮಾವ ರಾಘವೇಂದ್ರ ರಾಜ್‌ಕುಮಾರ್, ಮಾತುಗಳಲ್ಲಿ ಶಿವರಾಜ್ ಕುಮಾರ್ ಅವರನ್ನೇ ನೆನಪಿಸುತ್ತಾರೆ. ತಾಯಿಯಾಗಿ ಸಂಗೀತಾ ಅವರು ಅದ್ಭುತವಾಗಿ ಅಭಿನಯಿಸಿದ್ದಾರೆ, ಚಿತ್ರದಲ್ಲಿ ಸಿದ್ದು ಕಾಂಚನಹಳ್ಳಿ ಅವರ ಕ್ಯಾಮೆರಾ ವರ್ಕ್ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ, ಆರೋನ್ ಕಾರ್ತಿಕ್ ಅವರ ಸಂಗೀತದ ಎಲ್ಲಾ ಹಾಡುಗಳು ಇಂಪಾಗಿವೆ, ಜತೆಗೆ ಪಳನಿ.ಡಿ.ಸೇನಾಪತಿ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕೆ ಮತ್ತಷ್ಟು ಮೆರಗನ್ನು ತಂದುಕೊಟ್ಟಿವೆ, ಒಟ್ಟಾರೆ ಕೊಟ್ಟ ಹಣಕ್ಕೆ ಮೋಸ ಮಾಡದೆ ನೋಡುಗರನ್ನು ಮನರಂಜಿಸುವಲ್ಲಿ ನಿಂಬಿಯಾ ಬನಾದ ಮ್ಯಾಗ ಸಫಲವಾಗಿದೆ.