ಚಿತ್ರಸಾಹಿತಿ ಕವಿರಾಜ್ ಸಿನಿ ರಂಗದಲ್ಲಿ 25 ವರ್ಷಗಳನ್ನು ಪೂರೈಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕರಿಯ ಸಿನಿಮಾದ ನನ್ನಲಿ ನಾನಿಲ್ಲ ಹಾಡಿನಿಂದ ಸಿನಿ ಪಯಣ ಪ್ರಾರಂಭವಾಯ್ತು. ಸಂಗೀತ ನಿರ್ದೇಶಕ ಗುರುಕಿರಣ್ ಕವಿರಾಜ್ ರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ರು. ತದನಂತರ ಇವರಿಬ್ಬರ ಕಾಂಬಿನೇಷನ್ ಬಹುತೇಕ ಹಾಡುಗಳು ಸೂಪರ್ ಹಿಟ್ ಆದವು.
ಕವಿರಾಜ್ ಈವರೆಗೂ ಸುಮಾರು 2300 ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿದ್ದಾರೆ, 2 ಸಿನಿಮಾಗಳನ್ನು ನಿರ್ದೇಶಿದ್ದಾರೆ, ಬುಲ್ ಬುಲ್ ಸಿನಿಮಾವನ್ನು ದಿನಕರ್ ತೂಗುದೀಪ್ ಜೊತೆಗೂಡಿ ನಿರ್ಮಾಣ ಕೂಡ ಮಾಡಿದ್ದಾರೆ. ಸದ್ಯ ಕವಿರಾಜ್ 25 ವರ್ಷದ ಸಿನಿಬದುಕಿನ 28 ರೋಚಕ ಘಟನೆಗಳನ್ನು ದಾಖಲಿಸಿ `ಕವಿರಾಜ್ ಮಾರ್ಗದಲ್ಲಿ`ಅನ್ನೋ ಪುಸ್ತಕವನ್ನು ಹರಿವು ಕ್ರಿಯೇಷನ್ಸ್ ಅಡಿಯಲ್ಲಿ ಹೊರತಂದಿದ್ದಾರೆ. ಗುರುಕಿರಣ್, ಶ್ರೀಮತಿ ಪಲ್ಲವಿ ಗುರುಕಿರಣ್, ಸ್ನೇಹಿತರಾದ ವಿ ಹರಿಕೃಷ್ಣ, ದಿನಕರ್ ತೂಗುದೀಪ್, ನಟಿ ಮೇಘನಾ ಗಾಂವ್ಕರ್, ವಿ ನಾಗೇಂದ್ರ ಪ್ರಸಾದ್, ಹರಿವು ಬುಕ್ಸ್ ನ ರತೀಶ್ ಸೇರಿ ಗಣ್ಯರು ಪುಸ್ತಕ ಬಿಡುಗಡೆ ಮಾಡಿದ್ರು.ಕವಿರಾಜ್ ರಚಿತ ಆಪ್ತಮಿತ್ರ ಸಿನಿಮಾದ ಕಣಕಣದೇ ಶಾರದೆ ಹಾಡಿಗೆ ಭರತನಾಟ್ಯ ಮಾಡಿ ನೃತ್ಯದ ಮುಖೇನವೇ ವಿಶೇಷ ರೀತಿಯಲ್ಲಿ ಬುಕ್ ಅನಾವರಣಗೊಂಡಿತು. ಪುಸ್ತಕದ ಮೊದಲ ಪ್ರತಿಯನ್ನು ಕವಿರಾಜ್ ರ ತಾಯಿ ಶ್ರೀಮತಿ ಜಾನಕಿರವರಿಗೆ ಸಂಗೀತ ನಿರ್ದೇಶಕ ಗುರುಕಿರಣ್ ಹಸ್ತಾಂತರಿಸಿದ್ರು.
28 ಅಧ್ಯಾಯಗಳ ಪೈಕಿ ಪುನೀತ್ ರಾಜ್ ಕುಮಾರ್ ಕುರಿತ ಒಂದು ಅಧ್ಯಾಯವನ್ನು ಕಲಾವಿದ ಅರುಣ್ ಸಾಗರ್ ಮೊಂಬತ್ತಿ ಬೆಳಕಲ್ಲಿ, ಶಿವಲಿಂಗುರವರ ಲಯವಾದ ಕೊಳಲು ವಾದನದೊಂದಿಗೆ ಓದಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದರು.
ಗಾಯಕಿ ಶಮಿತಾ ಮಲ್ನಾಡ್, ವಾಣಿ ಹರಿಕೃಷ್ಣ, ಇಂದು ನಾಗರಾಜ್, ಅನಿರುದ್ಧ್ ಶಾಸ್ತ್ರೀ, ನಾಗಚಂದ್ರಿಕಾ ಭಟ್, ಭಾಗ್ಯಶ್ರೀ ಗೌಡ, ವಿನೋದ್ ಗೌಡ, ಕವಿರಾಜ್ ರಚಿತ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ಮನರಂಜಿಸಿದ್ರು.
ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಟೈಗರ್ ಬಿ.ಬಿ ಅಶೋಕ್ ಕುಮಾರ್, ತಬಲಾ ನಾಣಿ, ಸಾಕಷ್ಟು ಪ್ರಕಾಶಕರು, ಸಿನಿರಂಗದ ಹಲವು ಗಣ್ಯರು, ಪತ್ರಕರ್ತರು, ಸಾಹಿತಿಗಳು, ಕವಿ ರಾಜ್ ಅಭಿಮಾನಿಗಳು, ಕುಟುಂಬಸ್ಥರು ಭಾಗಿಯಾಗಿದ್ರು.