ಚಿತ್ರ : ವಾಮನ
ನಿರ್ದೇಶಕ : ಶಂಕರ್ ರಾಮನ್
ನಿರ್ಮಾಪಕ : ಚೇತನ್ ಗೌಡ
ಸಂಗೀತ : ಅಜನೀಶ್ ಲೋಕನಾಥ್, ಸಿ.ಆರ್.ಬಾಬಿ
ಛಾಯಾಗ್ರಹಣ : ಮಹೇನ್ ಸಿಂಹ
ಅವಧಿಯ ಸಮಯ : 134 ನಿಮಿಷಗಳು
ತಾರಾಗಣ : ಧನ್ವೀರ್ ಗೌಡ , ರೀಷ್ಮಾ ನಾಣಯ್ಯ , ತಾರಾ ಅನುರಾಧ, ಸಂಪತ್ ರಾಜ್, ಆದಿತ್ಯ ಮೆನನ್, ಅಚ್ಚುತ್ ಕುಮಾರ್, ಅವಿನಾಶ್, ಪೆಟ್ರೋಲ್ ಪ್ರಸನ್ನ, ಕಾಕ್ರೋಜ್ ಸುಧೀ ,ಭೂಷಣ್, ಶಿವರಾಜ್ ಕೆ.ಆರ್. ಪೇಟೆ ಮತ್ತು ಇತರರು...
ತಂದೆ, ತಾಯಿ, ಮಗ ಹೀಗೆ ಎಲ್ಲಾ ಸಂಬಂಧಗಳ ಹಿಂದೆ ಒಂದೊಂದು ಕಥೆ ಇದ್ದೇ ಇರುತ್ತದೆ. ಪ್ರೀತಿ, ತ್ಯಾಗ , ನೋವು, ದ್ವೇಷದ ನಡುವೆ ತಾಯಿ ಮಗನ ನಡುವಿನ ಮನಕಲಕುವ ಕಥೆ ಈ ವಾರ ತೆರೆಕಂಡಿರುವ ವಾಮನ ಚಿತ್ರದ ಹೈಲೈಟ್. ದುಷ್ಟ ವ್ಯಕ್ತಿಗಳ ಅಟ್ಟಹಾಸಕ್ಕೆ ತಕ್ಕ ಪಾಠ ಕಲಿಸುವ ನಾಯಕನ ಕಥೆಯೂ ಹೌದು.
ಭೂಗತ ಜಗತ್ತಿನ ನಂಡಿನೊಂದಿಗೆ ಗನ್ಸ್ ಹಾಗೂ ಡ್ರಗ್ಸ್ ದಂಧೆ ನಡೆಸುವ ಕರಂ ಲಲಾಲ್ ಸೇಟ್ (ಆದಿತ್ಯ ಮೆನನ್) ತನ್ನ ಗ್ಯಾಂಗ್ ಮೂಲಕ ಧಾಳಿ ನಡೆಸುತ್ತಾನೆ. ಇವನ ವಿರುದ್ಧ ಮತ್ತೊಬ್ಬ ಗ್ಯಾಂಗ್ ಲೀಡರ್ ಪಾಪಣ್ಣ (ಸಂಪತ್ ರಾಜ್) ಕೂಡ ದಂಧೆಯಲ್ಲಿ ತೊಡಗಿರುತ್ತಾನೆ. ಇಬ್ಬರ ಗ್ಯಾಂಗ್ ವಾರ್ ಮಧ್ಯೆ ಪೊಲೀಸರು ಸರಿಯಾದ ಸಮಯಕ್ಕಾಗಿ ಕಾಯುತ್ತಿರುತ್ತಾರೆ. ಇದರ ನಡುವೆ ತನ್ನ ತಾಯಿ ಪಾರ್ವತಿ (ತಾರಾ) ಹಾಗೂ ಗೆಳೆಯರೊಂದಿಗೆ ಗ್ಯಾರೇಜ್ ನೋಡಿಕೊಳ್ಳುತ್ತಾ ನೋವಿನ ಕಿಚ್ಚಿಗೆ ಕಾಯುವ _ಗಂಡೆದೆಯ ಯುವಕ ಗುಣ (ಧನ್ವೀರ್ ಗೌಡ). ಇವನ ಪ್ರೀತಿಗಾಗಿ ಸದಾ ಕಾಯುತ್ತಿರುವ ಶ್ರೀಮಂತನ ಉದ್ಯಮಿಯ ಮಗಳು ನಂದಿನಿ (ರೀಷ್ಮಾ ನಾಣಯ್ಯ). ಇವರಿಬ್ಬರ ಪ್ರೀತಿ, ಕಿತ್ತಾಟ, ಇದರ ನಡುವೆ ಕರಂಲಾಲ್ ಹೇಳಿದಂತೆ ಗುಣ, ಪಾಪಣ್ಣನ ಗ್ಯಾಂಗನ್ನು ಮಟ್ಟ ಹಾಕುತ್ತಾ ಬರುತ್ತಾನೆ. ಇದೆಲ್ಲದರ ನಡುವೆ ಫ್ಲಾಶ್ ಬ್ಯಾಕ್ ನಲ್ಲಿ ಮತ್ತೊಂದು ಕತೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಅಲ್ಲಿ ತಾಯಿ ಮಗನ ಬದುಕಿನ. ಹಿನ್ನೆಲೆ, ದುಷ್ಟ ವ್ಯಕ್ತಿಯ ನಂಟು ಕಾಣುತ್ತದೆ. ಮುಗ್ಧರ ಬದುಕಿನಲ್ಲಿ ನೋವಿನ ಸರಮಾಲೆಗಳೇ ಎದುರಾಗಿ ಅಮ್ಮ ಮಗನ ಗುರಿ, ದುಷ್ಟ ವ್ಯಕ್ತಿಗಳ ಆರ್ಭಟಕ್ಕೆ ಚಿತ್ರದ , ಕ್ಲೈಮ್ಯಾಕ್ಸ್ ನಲ್ಲಿ ಸಿಗುವ ಉತ್ತರ ಏನು ತಿಳಿದುಕೊಳ್ಳಲು ಒಮ್ಮೆ ಥೇಟರಿಗೆ ಹೋಗಿ ಚಿತ್ರ ವೀಕ್ಷಿಸಬೇಕು.
ಭರ್ಜರಿ ಆಕ್ಷನ್ ಜತೆಗೆ ಫ್ಯಾಮಿಲಿ ಸೆಂಟಿಮೆಂಟ್ ನಿಂದಲೇ ಪ್ರೇಕ್ಷಕರ ಗಮನ ಸೆಳೆಯಲು ನಿರ್ದೇಶಕ ಶಂಕರ್ ರಾಮನ್ ಪ್ರಯತ್ನಿಸಿದ್ದಾರೆ.
ದ್ವಿತೀಯ ಭಾಗದಲ್ಲಿ ಬರುವ ಪ್ರೀ ಕ್ಲೈಮ್ಯಾಕ್ಸ್ ಇಡೀ ಚಿತ್ರದ ಜೀವಾಳ. ಸಾಂಗ್, ಫೈಟ್ ಎಲ್ಲದರಲ್ಲೂ ನಿರ್ಮಾಪಕರು ಧಾರಾಳವಾಗಿ ಖರ್ಚು ಮಾಡಿರುವುದು ತೆರೆಮೇಲೆ ಕಾಣುತ್ತದ. ಮುದ್ದು ರಾಕ್ಷಸಿ ಹಾಡು ಗುನುಗುವಂತಿದ್ದು , ಛಾಯಾಗ್ರಾಹಕರ ಕೈಚಳಕ ಅದ್ಭುತವಾಗಿದೆ. ಅಲ್ಲದೆ ಸಾಹಸಪ್ರಿಯರಿಗೆ ಭರ್ಜರಿ ಆಕ್ಷನ್ ಗಳು ಹಬ್ಬದಂತಿವೆ. ಸಂಕಲನ ಕೆಲಸವೂ ಅಚ್ಚುಕಟ್ಟಾಗಿದೆ. ನಾಯಕ ಧನ್ವೀರ್ ಮಧ್ಯಮವರ್ಗದ ಹುಡುಗನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸೆಂಟಿಮೆಂಟ್ ಗೂ ಸೈ, ಆಕ್ಷನ್ ಗೂ ಸೈ ಎಂದಿರುವ ಧನ್ವೀರ್ ನಟನೆಗೆ ಶ್ರಮ ಪಟ್ಟಿದ್ದಾರೆ. ಇನ್ನು ಮುದ್ದು ಮುದ್ದಾಗಿ ಕಾಣುವ ರೀಷ್ಮಾ ನಾಣಯ್ಯ ಸಿಕ್ಕ ಅವಕಾಶದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ. ತಾಯಿಯ ಪಾತ್ರದಲ್ಲಿ ಹಿರಿಯನಟಿ ತಾರಾ ಮನ ಮುಟ್ಟುವ ಅಭಿನಯ ನೀಡಿದ್ದಾರೆ. ಇನ್ನು ಖಳನಾಯಕರಾಗಿ ಸಂಪತ್ ರಾಜ್ , ಆದಿತ್ಯ ಮೆನನ್ ಖಡಕ್ ಡೈಲಾಗ್ , ಹಾವ ಭಾವದ ಮೂಲಕವೇ ಮಿಂಚಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ಅವಿನಾಶ್ ಸೇರಿದಂತೆ ಎಲ್ಲ ಪಾತ್ರದಾರಿಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಮಾಸ್ , ಆಕ್ಷನ್ , ಲವ್ , ಸೆಂಟಿಮೆಂಟ್ ಹೀಗೆ ಎಲ್ಲದರ ಮಿಳಿತವಾಗಿರುವ ವಾಮನ ಫುಲ್ ಪ್ಯಾಕ್ಡ್ ಎಂಟರ್ ಟೈನರ್ ಎನ್ನಬಹುದು.