ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್, ಸೂಪರ್ ಸ್ಟಾರ್ ಉಪೇಂದ್ರ ಮತ್ತು ಪ್ರತಿನ್ವಿತ ನಟ ರಾಜ್ ಬಿ ಶೆಟ್ಟಿ ಅಭಿನಯದ "45" ಚಿತ್ರ ಆಗಸ್ಟ್ 15 ರಂದು ಬಹುಭಾಷೆಗಳಲ್ಲಿ ತೆರೆಗೆ ಬರಲು ಸಜ್ಜಾಗಿರುವುದು ಗೊತ್ತಾಗಿದೆ. ಇದೀಗ ಚಿತ್ರತಂಡ ಪ್ಯಾನ್ ಇಂಡಿಯಾ ಪ್ರಚಾರ ಆರಂಭಿಸಿದೆ.
ಸೂರಜ್ ಪ್ರೊಡಕ್ಷನ್ ಅಡಿ ಕನ್ನಡದ ಚಿತ್ರರಂಗದ ಸದಭಿರುಚಿಯ ನಿರ್ಮಾಪಕ ಎಂದೇ ಖ್ಯಾತಿ ಪಡೆದಿರುವ ಎಂ ರಮೇಶ್ ರೆಡ್ಡಿ ಅವರು ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ "45" ಚಿತ್ರವನ್ನು ಕನ್ನಡ ಚಿತ್ರರಂಗದಲ್ಲಿ ಸಂಗೀತ ಸುಧೆಯ ಮೂಲಕ ಮೋಡಿ ಮಾಡಿದ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಮೊದಲ ಬಾರಿಗೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಪ್ಯಾನ್ ಇಂಡಿಯಾ ಚಿತ್ರದ ಪ್ರಚಾರದ ಭಾಗವಾಗಿ ಮುಂಬೈಗೆ ಪ್ರೈವೇಟ್ ಜೆಟ್‍ನಲ್ಲಿ ನಟರಾದ ಶಿವರಾಜ್ ಕುಮಾರ್, ಉಪೇಂದ್ರ, ನಿರ್ಮಾಪಕ ರಮೇಶ್ ರೆಡ್ಡಿ, ನಿರ್ದೇಶಕ ಅರ್ಜುನ್ ಜನ್ಯ ಪ್ರಯಾಣ ಬೆಳಿಸಿದ್ದಾರೆ. ಮುಂಬೈನಲ್ಲಿ ಪತ್ರಿಕಾಗೋಷ್ಠಿ ಬಳಿಕ ಇಂದು ಸಂಜೆ 7 ಗಂಟೆಗೆ ಹೈದರಾಬಾದ್ ನ ಬಂಜಾರ ಹಿಲ್ಸ್ ನಲ್ಲಿರುವ ಪಿವಿಆರ್ ಆರ್ ಕೆ ಸಿನಿಪ್ಲಕ್ಸ್ ನಲ್ಲಿ ಸುದ್ದಿಗೋಷ್ಠಿ ನಡೆಸಲಿದೆ.
ನಾಳೆ ಬುಧವಾರ ಬೆ.11ಗಂಟೆಗೆ ಚೆನ್ನೈನ ಸತ್ಯಂ ಸಿನಿಮಾಸ್ ನಲ್ಲಿ ಹಾಗೂ ಅಂದು ಸಂಜೆ 7 ಗಂಟೆಗೆ ಕೇರಳದ ಕೊಚ್ಚಿಯ ಪಿವಿಆರ್ ಪೋರಂ ನಲ್ಲಿ "45" ಚಿತ್ರದ ಪತ್ರಿಕಾಗೋಷ್ಠಿ ನಡೆಯಲಿದೆ.
ಕನ್ನಡ ಚಿತ್ರರಂಗದಲ್ಲಿ ಬಹುಕೋಟಿ ವೆಚ್ಚದಲ್ಲಿ ಮತ್ತು ವಿಭಿನ್ನ ತಂತ್ರಜ್ಞಾನ ಬಳಕೆ ಮಾಡಿಕೊಂಡು ನಿರ್ಮಾಣ ಮಾಡಿದ ಚಿತ್ರ ಎನ್ನುವ ಹೆಗ್ಗಳಿಕೆಗೆ "45" ಚಿತ್ರ ಪಾತ್ರವಾಗಿದೆ. ಚಿತ್ರದ ಕಂಟೆಂಟು, ಪಾತ್ರಗಳು ದಿನದಿಂದ ದಿನಕ್ಕೆ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚು ಮಾಡುತ್ತಿದೆ.
ಬಹುನಿರೀಕ್ಷಿತ ಮಲ್ಟಿಸ್ಟಾರರ್ ಪ್ಯಾನ್ ಇಂಡಿಯಾ ``45`` ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಯುಗಾದಿ ಹಬ್ಬದಂದು ಈ ಚಿತ್ರದ ಟೀಸರ್ ಎಲ್ಲಾ ಭಾಷೆಗಳಲ್ಲೂ ಬಿಡುಗಡೆಯಾಗಿತ್ತು. ಈ ಅದ್ಭುತ ಟೀಸರ್ಗೆ ಕನ್ನಡಿಗರು ಮಾತ್ರವಲ್ಲದೆ ಎಲ್ಲಾ ಭಾಷೆಗಳ ಕಲಾಭಿಮಾನಿಗಳು ಫಿದಾ ಆಗಿದ್ದಾರೆ. ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಟೀಸರ್ನಲ್ಲೇ ಮೋಡಿ ಮಾಡಿರುವ ಈ ಚಿತ್ರ ಆಗಸ್ಟ್ 15 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ.