ನಾಯಿಯನ್ನು ಮುಖ್ಯಭೂಮಿಯಲ್ಲಿ ಇಟ್ಟುಕೊಂಡು ತೆರೆಗೆ ಬಂದ "ನಾನು ಮತ್ತು ಗುಂಡ" ಚಿತ್ರ ಯಶಸ್ಸಿನ ಬಳಿಕ ಇದೀಗ "ನಾನು ಮತ್ತು ಗುಂಡ-2 " ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಕುತೂಹಲ ಕೆರಳಿಸಿದೆ.
ಚಿತ್ರಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದ್ದ "ಹೊಂಬಾಳೆ ಸಂಸ್ಥೆ"ಯ ಒಡತಿ ಶೈಲಜಾ ವಿಜಯ್ ಕಿರಂಗೂರು ಟೀಸರ್ ಬಿಡುಗಡೆ ಮಾಡಿ ಚಿತ್ರಕ್ಕೆ ಮತ್ತು ತಂಡಕ್ಕೆ ಶುಭ ಹಾರೈಸಿದರು. ಈ ವೇಳೆ ನಿರ್ಮಾಪಕ, ನಿರ್ದೇಶಕ ರಘು ಹಾಸನ್, ನಟ ರಾಕೇಶ್ ಅಡಿಗ, ಹಿರಿಯ ಪ್ರಚಾರಕರ್ತ ನಾಗೇಂದ್ರ ಸೇರಿದಂತೆ ಮತ್ತಿತರು ಈ ವೇಳೆ ಹಾಜರಿದ್ದರು.
ನಾನು ಮತ್ತು ಗುಂಡ-2 ಚಿತ್ರ ಕನ್ನಡ ಸೇರಿದಂತೆ ಪಂಚ ಭಾಷೆಯಲ್ಲಿ ತೆರೆಗೆ ಬರಲು ಸಜ್ಜಾಗಿದ್ದು ಮೊದಲ ಭಾಗಕ್ಕಿಂತಲೂ ಎರಡನೇ ಭಾಗ ಮತ್ತಷ್ಟು ಕುತೂಹಲ ಮೂಡಿಸಿದ್ದು ಚಿತ್ರತಂಡದ ಮುಖದಲ್ಲಿ ಮಂದಹಾಸ ಮೂಡಿಸಿದೆ.
ನಿರ್ದೇಶಕ, ನಿರ್ಮಾಪಕ ರಘು ಹಾಸನ್ ಮಾತನಾಡಿ, ಮೊದಲ ಭಾಗದಲ್ಲಿದ್ದ ನಾಯಕನ ಮಗನ ಪಾತ್ರದಲ್ಲಿ ನಟ ರಾಕೇಶ್ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಬಾಳೆ ಹೊನ್ನೂರು, ಚಿಕ್ಕಮಗಳೂರು, ತೀರ್ಥಹಳ್ಳಿ,ಊಟಿ, ಸಕಲೇಶಪುರ ಹಾಗು ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಬಹಳ ದಿನನಗಳ ನಂತರ ಸಂಗೀತ ನಿರ್ದೇಶಕ ಆರ್.ಪಿ ಪಟ್ನಾಯಕ್ ಸಂಗೀತ ನೀಡಿದ್ದಾರೆ. 6 ಹಾಡುಗಳಿವೆ. ಹಾಡು ಒಂದಕ್ಕಿಂತ ಒಂದು ಬೇರೆ ಮಟ್ಟದಲ್ಲಿವೆ. ಮುಂದಿನ ತಿಂಗಳು ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದೆ. ಚಿತ್ರಕ್ಕೆ ಬೆಂಬಲ ಮತ್ತು ಸಹಕಾರ ಇರಲಿ ಎಂದು ಕೇಳಿಕೊಂಡರು
ನಾಯಕಿ ರಚನಾ ಇಂದರ್ ಮಾತನಾಡಿ, ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ, ಮುಂದೆ ಹಾಗುವುದಿಲ್ಲ. ನಾನು ಮತ್ತು ಗುಂಡ-2 ಚಿತ್ರ ಚೆನ್ನಾಗಿ ಮೂಡಿ ಬಂದಿದೆ, ಮಕ್ಕಳು ಸೇರಿದಂತೆ ಎಲ್ಲರಿಗೂ ಚಿತ್ರ ಇಷ್ಟವಾಗಲಿದೆ. ಟೀಸರ್ ಚೆನ್ನಾಗಿದೆ. ಪಾತ್ರದ ಹೆಸರು ಇಂದು. ಚಿತ್ರದಲ್ಲಿ ಒಳ್ಳೆಯ ಪಾತ್ರವಿದೆ.ಊಟಿಯಲ್ಲಿ ನಡೆಯುವ ಕಥೆ. ಇಡೀ ಸಿನಿಮಾ ನಾಯಿಯ ಮೇಲೆ ಕೇಂದ್ರೀಕೃತವಾಗಿರುವುದರಿಂದ ನಾಯಿ ಇರುವ ಕಡೆ ನಾನು ಇದ್ದೇನೆ ಎಂದರು.
ನಾಯಕ ರಾಕೇಶ್ ಅಡಿಗ ಮಾತನಾಡಿ, ನಿರ್ದೇಶಕರು ಚಿತ್ರೀಕರಣ ಸಮಯದಲ್ಲಿ ಮಳೆ ಸೇರಿದಂತೆ ಎದುರಾದ ಅಡೆ ತಡೆ ಬಂದರೂ ಯಾವುದಕ್ಕೂ ರಾಜಿ ಮಾಡಿಕೊಂಡಿಲ್ಲ. ನಾಯಿ ಇಟ್ಟುಕೊಂಡು ಚಿತ್ರೀಕರಣ ಮಾಡುವುದು ಕಷ್ಟ. ಚಿತ್ರೀಕರಣದ ಅವಧಿಯಲ್ಲಿ ಬಂಟಿಗೆ ರಾಯಲ್ ಟ್ರೀಟ್ ಮೆಂಟ್ ಇರುತ್ತಿತ್ತು. ಕ್ಲೀಷೆಯಿಲ್ಲದ ಚಿತ್ರ. ಇನ್ನುಳಿದಿದ್ದು ಚಿತ್ರ ಮಾತನಾಡಲಿ. ಚಿತ್ರೀಕರಣದ ಸಮಯದಲ್ಲಿ ಸವಾಲು ಇರಲಿಲ್ಲ, ಎಂಜಾಯ್ ಮಾಡಿಕೊಂಡು ಚಿತ್ರೀಕರಣ ಮಾಡಿದ್ದೇವೆ. ನಾಯಿ ಬಂಟಿ ಜೊತೆ ಆರಂಭದಲ್ಲಿ ಅಡ್‍ಜೆಸ್ಟ್ ಆಗುವುದು ಕಷ್ಟ ಆಗಿತ್ತು. ಆ ಮೇಲೆ ಹೊಂದಿದ್ದುಕೊಂಡೆವು. ಚಿತ್ರೀಕರಣದ ಸಮಯದಲ್ಲಿ ಅಳು,ನಗು ಬಂದಿದೆ.ಎಮೋಷನ್ ಚಿತ್ರ ಎಂದು ಮಾಹಿತಿ ಹಂಚಿಕೊಂಡರು.
ನಾನು ಮತ್ತು ಗುಂಡ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ ಶಿವರಾಜ್ ಕೆ ಆರ್ ಪೇಟೆ ಮಾತನಾಡಿ, ನಾನು ಮತ್ತು ಗುಂಡ-2 ಚಿತ್ರ ದೊಡ್ಡ ಯಶಸ್ಸು ಕಾಣಲಿ, ಮೊದಲ ಚಿತ್ರದಲ್ಲಿ ನಿರ್ಮಾಪಕರಾಗಿದ್ದ ರಘು ಮುಂದುವರಿದ ಭಾಗವನ್ನು ಅವರೇ ನಿರ್ದೇಶಿಸಿದ್ದಾರೆ. ಭಾಗ-2 ಕೂಡ ಇಷ್ಟವಾಗುತ್ತದೆ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಹೇಳಿದರು.
ಕಲಾವಿದ ಗೋವಿಂದೇ ಗೌಡ ಮಾತನಾಡಿ ನಾನು ಮತ್ತು ಗುಂಡದಲ್ಲಿ ನಟಿಸಿದ್ದೆ. ಮುಂದುವರಿದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಎಲ್ಲೇ ಹೋದರೂ ಕೆಜಿಎಫ್ ಚಿತ್ರದಲ್ಲಿ ನಟಿಸಿದ್ದೀರಾ ಅನ್ನುತ್ತಿದ್ದ ಜನ, ನಾನು ಮತ್ತು ಗುಂಡ ಚಿತ್ರದಲ್ಲಿ ನಟಿಸಿದ್ದೀರಾ ಎಂದು ಮಕ್ಕಳು ಕುತೂಹಲದಿಂದ ಕೇಳುತ್ತಿದ್ದರು. ಕಾಮಿಡಿ ಕಿಲಾಡಿಯ ನಯನಾ ಮತ್ತು ನಾನು ಗಂಡ ಹೆಂಡತಿಯಾಗಿ ಕಾಣಿಸಿಕೊಂಡಿದ್ದೇನೆ. ಚಿತ್ರ ಎಮೋಷನಲ್ ಜರ್ನಿ ಇದೆ. ಎಲ್ಲರಿಗೂ ಕತೆ ಚಿತ್ರ ಇಷ್ಟವಾಗಲಿದೆ ಎಂದರು.
ಮಹಂತೇಶ್ ಹಿರೇಮಠ ಮಾತನಾಡಿ, ಹಿರಿಯ ಹಾಸ್ಯ ಕಲಾವಿದ ಸಾಧುಕೋಕಿಲ ಜೊತೆ ನಟಿಸಿದ್ದೇನೆ ಚಿತ್ರ ಎಲ್ಲರಿಗೂ ಹಿಡಿಸಲಿದೆ. ನಾಯಕ, ನಾಯಕಿಗಿಂತ ಚಿತ್ರದಲ್ಲಿ ಗುಂಡನ ಪಾತ್ರದಲ್ಲಿ ನಾಯಿ ಎಲ್ಲರಿಗೂ ಇಷ್ಟವಾಗಲಿದೆ ಎಂದು ಹೇಳಿದರು.
ಕಲಾವಿದ ಕಮಲ್ ಅಂಥೋನಿ,ಬಾಲ ಕಲಾವಿದ ಯುವನ್,ಛಾಯಾಗ್ರಾಹಕ ತನ್ವಿಕ್, ಸಂಭಾಷಣೆ ಬರೆದಿರುವ ರೋಹಿತ್ ರಮಣ ಮತ್ತಿತರರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.