ದಕ್ಷಿಣ ಕನ್ನಡ ಜಿಲ್ಲೆಯ ಸಾಂಪ್ರದಾಯಿಕ ಕಲೆ ಯಕ್ಷಗಾನವನ್ನು ವಿಶ್ವಮಾನ್ಯ ಮಾಡಬೇಕೆಂಬ ಪ್ರಯತ್ನದಲ್ಲಿ ಸಂಗೀತ ಸಂಯೋಜಕ ರವಿ ಬಸ್ರೂರು ಅವರು ಬೆಳ್ಳಿತೆರೆಯ ಮೇಲೆ ಅರಳಿಸಿರುವ ಕಲಾಕೃತಿ ವೀರಚಂದ್ರಹಾಸ. ಮಕ್ಕಳನ್ನೇ ಇಟ್ಟುಕೊಂಡು ಗಿರ್ಮಿಟ್ ಎಂಬ ಪ್ರಯೋಗಾತ್ಮಕ ಚಿತ್ರ ನಿರ್ದೇಶಿಸಿದ್ದ ರವಿ ಬಸ್ರೂರು ಇದೀಗ ಒಂದು ಯಕ್ಷಗಾನ ಪ್ರಸಂಗವನ್ನು ತೆರೆಮೇಲೆ ತಂದಿದ್ದಾರೆ.
ಅನಾಥ ಬಾಲಕ ಚಂದ್ರಹಾಸ ಭವಿಷ್ಯದಲ್ಲಿ ರಾಜನ ಪಟ್ಟ ಅಲಂಕರಿಸುತ್ತಾನೆ ಎಂಬ ವಿಚಾರ ಮಂತ್ರಿ ದುಷ್ಟಬುದ್ಧಿಗೆ ತಿಳಿಯುತ್ತದೆ. ಕುಂತಲ ಸಾಮ್ರಾಜ್ಯದ ಯುವರಾಣಿಯನ್ನು ವರಿಸಿ, ನಂತರ ಆ ಸಾಮ್ರಾಜ್ಯಕ್ಕೆ ರಾಜನಾಗುತ್ತಾನೆ ಎಂಬ ಭವಿಷ್ಯವಾಣಿಯನ್ನು ಕೇಳಿ ಕ್ರೋಧಗೊಳ್ಳುವ ದುಷ್ಟಬುದ್ಧಿ, ಚಂದ್ರಹಾಸನನ್ನು ಕೊಲ್ಲಲು ಕಟುಕರಿಗೆ ಆಜ್ಞಾಪಿಸುತ್ತಾನೆ. ಆದರೆ ಚಂದ್ರಹಾಸ ಸಾಯುವುದಿಲ್ಲ.
ಆತ ರಾಜಕುಟುಂಬದಲ್ಲಿ ಬೆಳೆದು ೨೦ ವರ್ಷಗಳ ಬಳಿಕ ಮತ್ತೆ ದುಷ್ಟಬುದ್ಧಿಗೆ ಎದುರಾಗುತ್ತಾನೆ. ತನ್ನ ಲೆಕ್ಕಾಚಾರಗಳೆಲ್ಲ ತಲೆಕೆಳಗಾಗಿದ್ದನ್ನು ಅರಿತ ದುಷ್ಟಬುದ್ಧಿ ಮುಂದೇನು ಮಾಡುತ್ತಾನೆ ಅನ್ನೋದೇ ಚಿತ್ರದ ಕಥೆ. ಚಿತ್ರದ ಅಂತ್ಯದಲ್ಲಿ ವಿಧಿಯಾಟದ ಮುಂದೆ ತಾನೇನೂ ಅಲ್ಲ ಎಂಬ ಸತ್ಯ ಅರಿತ ದುಷ್ಟ ಬುದ್ದಿ ವೀರ ಚಂದ್ರಹಾಸನನ್ನು ತನ್ನ ಅಳಿಯ, ಮತ್ತು ಸಾಮ್ರಜ್ಯದ ಉತ್ತರಾಧಿಕಾರಿ ಎಂದು ಒಪ್ಪಿಕೊಳ್ಳುತ್ತಾನೆ.
ಜನಪ್ರಿಯ ಯಕ್ಷಗಾನ ಪ್ರಸಂಗವನ್ನು ಕೈಗೆತ್ತಿಕೊಂಡು, ಅದಕ್ಕೆ ಸಿನಿಮಾ ರೂಪ ನೀಡಿರುವ ರವಿ ಬಸ್ರೂರು ಚಿತ್ರದ ಎಲ್ಲ ಪಾತ್ರಗಳಿಗೂ ಯಕ್ಷಗಾನ ಕಲಾವಿದರನ್ನೇ ಬಳಸಿಕೊಂಡಿದ್ದಾರೆ. ಜೊತೆಗೆ ಗ್ರಾಫಿಕ್ಸ್ ಮೂಲಕ ಅರಮನೆಗಳನ್ನು ತೋರಿಸಿರುವ ರವಿ ಬಸ್ರೂರು, ಪ್ರೇಕ್ಷಕರಿಗೆ ಹೊಸ ರೀತಿಯ ಅನುಭವವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಚಂಡೆ, ಮದ್ದಳೆಯಲ್ಲಿ ಪ್ರೇಕ್ಷಕನಿಗೆ ಹೊಸ ಅನುಭವ ನೀಡುತ್ತದೆ. ಇಂತಹ ಸನ್ನಿವೇಶದಲ್ಲಿ ಹಿನ್ನಲೆ ಸಂಗೀತ ಚಿತ್ರದ ಮೆರಗನ್ನು ಹೆಚ್ಚಿಸಿಕೊಂಡು ಹೋಗುತ್ತದೆ.
ಸಿನಿಮಾ ಆರಂಭದಲ್ಲಿ ಕೊಂಚ ನಿಧಾನ ಎನಿಸಿದರೂ ಚಂದ್ರಹಾಸ, ದುಷ್ಟಬುದ್ಧಿ ಪಾತ್ರಗಳು ಪೂರ್ಣ ಪ್ರಮಾಣದಲ್ಲಿ ತೆರೆಯಮೇಲೆ ಬಂದ ನಂತರ ಸಿನಿಮಾದ ಓಘ ಚೆನ್ನಾಗಿದೆ.
ಕರಾವಳಿ ಭಾಗದ ಜನರಿಗೆ ಯಕ್ಷಗಾನ ಪ್ರಸಂಗ ಹೊಸದೇನಲ್ಲ. ಇದನ್ನು ಹೆಚ್ಚಾಗಿ ನೋಡದೇ ಇರುವವರಿಗೆ ಖಂಡಿತ ವೀರಚಂದ್ರಹಾಸ ಹೊಸ ಅನುಭವವನ್ನು ನೀಡುತ್ತದೆ.
ಅದೇರೀತಿ ಇಷ್ಟುದಿನ ರಂಗದ ಮೇಲೆ ಯಕ್ಷಗಾನವನ್ನು ನೋಡಿದವರು ಅದನ್ನು ಬೆಳ್ಳಿಪರದೆ ಮೇಲೆ ನೋಡಿದಾಗ, ಒಂಚೂರು ವಿಭಿನ್ನ ಎನಿಸುತ್ತದೆ.
ಯಕ್ಷಗಾನ ಪ್ರಹಸನಗಳಲ್ಲಿ ರಂಗ ಗೀತೆಗಳಿಗೆ ವಿಶೇಷವಾದ ಸ್ಥಾನವಿದೆ. ಆದರೆ ರವಿ ಬಸ್ರೂರು, ಸಿನಿಮಾದಲ್ಲಿ ಅದನ್ನು ಎಷ್ಟು ಬೇಕೋ ಅಷ್ಟನ್ನು ಮಾತ್ರ ಬಳಸಿಕೊಳ್ಳುವ ಮೂಲಕ, ಬ್ಯಾಲೆನ್ಸ್ ಮಾಡಿದ್ದಾರೆ. ಹಿನ್ನೆಲೆ ಸಂಗೀತ, ಸನ್ನಿವೇಶಕ್ಕೆ ತಕ್ಕಂತೆ ಪದ್ಯಗಳನ್ನು ಬಳಸಿಕೊಂಡಿರುವ ಶೈಲಿ ಸೊಗಸಾಗಿದೆ. ಹ್ಯಾಟ್ರಿಕ್ ಹೀರೊ ಶಿವರಾಜ ಕುಮಾರ್ ಚಿತ್ರದ ಕೇಂದ್ರ ಬಿಂದು, ಚಿತ್ರದಲ್ಲಿ ಶಿವಣ್ಣ ಸಿಂಗನಲ್ಲೂರು ಸಂಸ್ಥಾನದ ಮಹಾರಾಜರಾಗಿ ಕಾಣಿಸಿಕೊಂಡಿದ್ದಾರೆ.. ಅತಿಥಿ ಪಾತ್ರಗಳಲ್ಲಿ ಬರುವ ಗರುಡ ರಾಮ್, ಪುನೀತ್ ರುದ್ರನಾಗ್ ಗಮನ ಸೆಳೆಯುತ್ತಾರೆ. ಚಂದನ್ ಶೆಟ್ಟಿಗೂ ಇಲ್ಲಿ ಒಳ್ಳೆ ಪಾತ್ರವಿದೆ.
ಚಂದ್ರಹಾಸನ ಪಾತ್ರಧಾರಿ ಶಿಥಿಲ್ ಶೆಟ್ಟಿ ಅವರ ನಟನೆ ಚೆನ್ನಾಗಿದೆ. ದುಷ್ಟಬುದ್ಧಿಯ ಪಾತ್ರ ನಿರ್ವಹಿಸಿರುವ ನಟ ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ ಅವರ ದೇಹಭಾಷೆ, ನಗು, ಸಂಭಾಷಣೆ ಹೇಳುವ ಶೈಲಿ ಎಲ್ಲವೂ ಅದ್ಭುತವಾಗಿದೆ. ಜೊತೆಗೆ ಮದನ ಪಾತ್ರ ಮಾಡಿರುವ ಉದಯ ಹೆಗಡೆ ಕೂಡ ತೆರೆಮೇಲೆ ಇದ್ದಷ್ಟು ಹೊತ್ತು ನಗಿಸುತ್ತಾರೆ. ಒಟ್ಟಿನಲ್ಲಿ ಯಕ್ಷಗಾನ ಕಲೆಯನ್ನು ಆಸ್ವಾದಿಸುವವರಿಗೆ, ತೆರೆಮೇಲೆ ಒಂದು ವಿಭಿನ್ನ ಪ್ರಯುತ್ನ ನೋಡಬೇಕು ಎನ್ನುವವರು `ವೀರ ಚಂದ್ರಹಾಸ` ಅತ್ಯುತ್ತಮ ಆಯ್ಕೆ.