Chief Editor
Manohar. R (Manu)
Photo Journalist
chitrataramanu@gmail.com
+91 9845549026
ಯುದ್ದಕಾಂಡ: ಅತ್ಯಾಚಾರಿಗಳ ವಿರುದ್ದಸಮರ ಸಾರಿದ ನಾಯಕ ...ರೇಟಿಂಗ್: 4/5****
Posted date: 19 Sat, Apr 2025 09:43:04 AM
ಕನ್ನಡದಲ್ಲಿ ಜಡ್ಜ್ ಮೆಂಟ್ ಸೇರಿದಂತೆ ಹಲವು  ಕೋರ್ಟ್ ಡ್ರಾಮಾ ಸಬ್ಜೆಕ್ಟ್  ಇರುವ ಚಿತ್ರಗಳು ಬಂದುಹೋಗಿವೆ, ಅದೇರೀತಿ ಈವಾರ ತೆರೆಕಂಡಿರುವ ಯುದ್ದಕಾಂಡ ಕೂಡ ಕೋರ್ಟ್ ಹಾಲ್‌ನಲ್ಲಿ ನಡೆಯುವ ವಾದ, ಪ್ರತಿವಾದಗಳ ಸುತ್ತ ಸುತ್ತುವ ಘಟನಾವಳಿಗಳನ್ನೇ ಒಳಗೊಂಡಿದ್ದರೂ,  ಇಲ್ಲಿ ನಿರ್ದೇಶಕರು ತೆಗೆದುಕೊಂಡಿರುವ ವಿಷಯ ತೂರ ಗಂಭೀರವಾದುದು. ಪುರುಷರೆಲ್ಲ ತಲೆತಗ್ಗಿಸುವಂಥ ವಿಕೃತ ಮನಸಿರುವ, ಸಮಾಜ ಕಂಟಕರಾದ ಕೆಲ ವ್ಯಕ್ತಿಗಳು ಹೇಗೆ ಸಮಾಜದ ನೆಮ್ಮದಿಯನ್ನು ಹಾಳು ಮಾಡುತ್ತಿದ್ದಾರೆ. ಅಂಥವರಿಗೆ ನಮ್ಮ ದೇಶದ ಕಾನೂನಿನಲ್ಲಿ ಏಕೆ ಕಠಿಣ ಶಿಕ್ಷೆ ಇಲ್ಲ, `ಹತ್ತು ಜನ ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಂಡರೂ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು` ಎಂಬ ನಿಲುವೇ ಇಂಥವರಿಗೆ ಶ್ರೀರಕ್ಷೆಯಾಗಬಾರದು ಎನ್ನುವ ಚರ್ಚೆಯನ್ನು ಯುದ್ದಕಾಂಡ ಹುಟ್ಟುಹಾಕುತ್ತದೆ.
 
ಬಹುತೇಕ ಸಿನಿಮಾಕಥೆ ಕೋರ್ಟ ಹಾಲ್‌ನಲ್ಲೇ  ಸಾಗುತ್ತದೆ. ನಟ, ನಿರ್ಮಾಪಕ ಅಜಯ್‌ರಾವ್  ಕೃಷ್ಣಲೀಲಾ  ನಂತರ ನಿರ್ಮಿಸಿರುವ ಚಿತ್ರವಿದು. 
 
ಈಗಿನ  ಸಮಾಜದಲ್ಲಿ ಜಗತ್ತನ್ನೇ ಅರಿಯದ ಪುಟ್ಟ ಮಕ್ಕಳು ಎಂಬುದನ್ನೂ ನೋಡದ ಕಾಮುಕರು, ಮಗುವಿನ‌ ಮೇಲೆ,  ಹೆಣ್ಣು ಮಕ್ಕಳ ಮೇಲೆ ನಡೆಸುತ್ತಿರುವ ಲೈಂಗಿಕ ದೌರ್ಜನ್ಯಕ್ಕೆ  ಕಡಿವಾಣ ಹಾಕುವ ನಿಟ್ಟಿನಲ್ಲಿ ಯುದ್ದಕಾಂಡ ಚಿತ್ರವನ್ನವರು ತೆರೆಮೇಲೆ  ತಂದಿದ್ದಾರೆ.
 
ನಿವೇದಿತಾ(ಅರ್ಚನಾ ಜೋಯಿಸ್)ಎಂಬ ಅಸಹಾಯಕ ತಾಯಿಯೊಬ್ಬಳು  ಕೋರ್ಟ್ ಆವರಣದಲ್ಲೇ  ಶಾಸಕನ ಸಹೋದರನ ಮೇಲೆ  ಪೊಲೀಸರ ಪಿಸ್ತೂಲ್‌ನಿಂದಲೇ ಗುಂಡು ಹಾರಿಸುತ್ತಾಳೆ. ಎರಡು ಬುಲೆಟ್‌ಗಳು ಆತನ ಎದೆಗೆ ಇಳಿದರೆ, ಒಂದು ಸೀದಾ ಹಣೆಯಿಂದ ತೂರಿಕೊಂಡು ಹೋಗಿರುತ್ತದೆ. ಹೀಗೆ ನ್ಯಾಯಾಲಯದ ಆವರಣದಲ್ಲೇ ಅತ್ಯಾಚಾರಿಯೊಬ್ಬನನ್ನು ಹತ್ಯೆಗೈದು ಪೊಲೀಸರ ಬಂಧಿಯಾದ ನಿವೇದಿತಾಳ ಕಥೆ ಏನು, ಆಕೆ ಯಾಕೆ ಆತನನ್ನು ಕೊಂದಳು ಎಂಬ ವಿಚಾರದೊಂದಿಗೆ ಮುಖ್ಯಕಥೆ ತೆರೆದುಕೊಳ್ಳುತ್ತದೆ. ಆಗ ಯುವ ಲಾಯರ್ ಭರತ್(ಅಜಯರಾವ್) ಈ ಕೇಸನ್ನು ಕೈಗೆತ್ತಿಕೊಂಡು ಹೇಗೆಲ್ಲಾ  ವಾದ ಮಾಡುತ್ತಾನೆ, ಕಾನೂನನ್ನು ಕೈಗೆ ತೆಗೆದುಕೊಂಡ ನಿವೇದಿತಾಗೆ ಶಿಕ್ಷೆ ಆಗಬೇಕೆಂಬ ಎಲ್ಲರ ಅಭಿಪ್ರಾಯದ ವಿರುದ್ದ ನಿಂತು ಭರತ್ ಹೇಗೆ ಕೇಸ್ ಗೆಲ್ಲುತ್ತಾನೆ ಎಂಬ ಹಾದಿಯೇ ರಣರೋಚಕ. 
 
ಆದರೆ ಆಗತಾನೇ ಲಾ ಮುಗಿಸಿ ಪ್ರಾಕ್ಟೀಸ್ ಮಾಡುತ್ತಿದ್ದ ಲಾಯರ್ ಭರತ್ (ಅಜಯ್‌ರಾವ್) ಯಾರಿಬ್ಬರೂ ಮುಟ್ಟದ  ಈ ಕೇಸನ್ನು ಕೈಗೆತ್ತಿಕೊಂಡು ನಿವೇದಿತಾಳನ್ನು  ಈ  ಕೇಸಿನಿಂದ ಹೇಗೆ ಹೊರತರುತ್ತಾನೆ.  ನಿವೇದಿತಾ ಯಾಕೆ, ಶಾಸಕನ ತಮ್ಮನನ್ನು ಕೊಲೆ ಮಾಡಿದಳು, ಆತನ ಮೇಲೆ ಆಕೆಗಿದ್ದ ಅಂಥಾ ದ್ವೇಶವಾದರೂ ಏನಾಗಿತ್ತು ಎಂದು ಮುಂದೆ ನಡೆಯುವ ಕಥೆಯಲ್ಲಿ ಅನಾವರಣಗೊಳ್ಳುತ್ತಾ ಸಾಗುತ್ತದೆ, ಎಂದೂ  ಸೋಲು ಕಂಡಿರದ ಖ್ಯಾತ ಡಿಫೆನ್ಸ್ ಲಾಯರ್ ರಾಬರ್ಟ ಡಿಸೋಜಾ(ಪ್ರಕಾಶ್ ಬೆಳವಾಡಿ) ಎದುರು, ತನ್ನ ವಾದ ಮಂಡಿಸಿ, ಭರತ್  ಈ ಕೇಸನ್ನು ಹೇಗೆ ಗೆಲ್ತಾನೆ? ಎಂಬ ಪ್ರಶ್ನೆಗೆ  ಯುದ್ದಕಾಂಡ ಚಿತ್ರ ಉತ್ತರವಾಗುತ್ತದೆ. 
 
ಪ್ರಸ್ತುತ ಸಮಾಜದಲ್ಲಿ ಪೋಷಕರು ಎಷ್ಟೇ ಎಚ್ಚರಿಕೆ ವಹಿಸಿದರೂ  ಯುವತಿಯರು, ಅಪ್ರಾಪ್ತ ಹೆಣ್ಣುಮಕ್ಕಳ  ಮೇಲೆ ನಡೆಯುತ್ತಿರೋ  ದೌರ್ಜನ್ಯಗಳು ಕಮ್ಮಿ ಆಗುತ್ತಿಲ್ಲ. ಈ ವಿಷಯದ ಮೇಲೆ ಯುದ್ದಕಾಂಡ  ಸಿನಿಮಾ ಬೆಳಕು ಚೆಲ್ಲಲಿದೆ. ಹಣವಂತರು, ರಾಜಕಾರಣಿಗಳು ತಮ್ಮ ಪ್ರಭಾವ ಬಳಸಿ, ಕಾನೂನನ್ನು  ಹೇಗೆಲ್ಲಾ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ, ನಮ್ಮ ದೇಶದಲ್ಲಿ ಯಾವೆಲ್ಲ  ಸೆಕ್ಷನ್ ಅಡಿ ಕಾನೂನು ರಚಿಸಲಾಗಿದೆ ಎಂದು  ಜನಸಾಮಾನ್ಯರಿಗೂ ಅರ್ಥವಾಗುವಂತೆ ವಿವರಿಸಲಾಗಿದೆ.  ಇಲ್ಲಿ ನಿರ್ದೇಶಕರು ಕಮರ್ಷಿಯಲ್ ಸಿದ್ಧಸೂತ್ರಗಳನ್ನು ಬದಿಗಿಟ್ಟು,  ನೇರವಾಗಿ ಕಥೆಯ ಮೇಲೆ ಫೋಕಸ್ ಮಾಡಿದ್ದಾರೆ. ಲಾಯರ್ ಭರತ್ ಪಾತ್ರವನ್ನು ಅಜಯ್‌ರಾವ್ ಎನರ್ಜಿಟಿಕ್ ಆಗಿ ನಿಭಾಯಿಸಿದ್ದು, ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅದೇರೀತಿ  ಹಿರಿಯ ನ್ಯಾಯವಾದಿಯಾಗಿ ಪ್ರಕಾಶ್ ಬೆಳವಾಡಿ ಅವರದ್ದು ತೂಕದ ನಟನೆ. ನಿವೇದಿತಾ ಪಾತ್ರವನ್ನ ಅರ್ಚನಾ ಜೋಯಿಸ್ ಜೀವಿಸಿದ್ದಾರೆ. ನ್ಯಾಯಾಧೀಶರಾಗಿ ನಾಗಾಭರಣ, ನಾಯಕನ ಸಹೋದ್ಯೋಗಿ ಲಾಯರ್ ಆಗಿ ಸುಪ್ರೀತಾ ಸತ್ಯನಾರಾಯಣ್ ತಂತಮ್ಮ ಪಾತ್ರಗಳನ್ನು ಉತ್ತಮವಾಗಿ ನಿಭಾಯಿಸಿದ್ದಾರೆ. ಚಿತ್ರದಲ್ಲಿ ಬರುವ ಚಿಕ್ಕ ಚಿಕ್ಕ ಹಾಡುಗಳು, ಚಿತ್ರಕಥೆಗೆ ಪೂರಕವಾಗಿವೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಯುದ್ದಕಾಂಡ: ಅತ್ಯಾಚಾರಿಗಳ ವಿರುದ್ದಸಮರ ಸಾರಿದ ನಾಯಕ ...ರೇಟಿಂಗ್: 4/5**** - Chitratara.com
Copyright 2009 chitratara.com Reproduction is forbidden unless authorized. All rights reserved.