ಕಾಡಿನ ಮುಗ್ಧ ಜನರನ್ನು ಒಕ್ಕಲೆಬ್ಬಿಸುವ, ಅವರ ಹಕ್ಕುಗಳನ್ನು ಕಿತ್ತುಕೊಳ್ಳುವವವ ವಿರುದ್ದ ನಿಂತು ಹೋರಾಡಿ ಗೆಲುವು ಸಾಧಿಸುವ ಯುವಕನ ಕಥೆ ಹೊತ್ತ ಕೋರ ಆಕ್ಷನ್ ಜತೆಗೆ ಮನರಂಜನೆಗೆ ಒತ್ತುಕೊಟ್ಟು ಮಾಡಿರುವಂಥ ಚಿತ್ರ.
ದಟ್ಟ ಕಾನನದೊಳಗೆ ತೆರೆದುಕೊಳ್ಳುವ, ವಿಭಿನ್ನ ಕಥಾ ವಸ್ತುವಿನೊಂದಿಗೆ ಪ್ರೇಕ್ಷಕರನ್ನು ತೃಪ್ತಿಪಡಿಸುವಲ್ಲಿ ಕೋರ ಯಶಸ್ವಿಯಾಗಿದ್ದಾನೆಂದೇ ಹೇಳಬಹುದು. ಟ್ರೈಲರ್ ನಲ್ಲೇ ಕುತೂಹಲ ಕೆರಳಿಸಿದ್ದ ಕೋರ ತೆರೆಯ ಮೇಲೂ ಅಷ್ಟೇ ಚಮತ್ಕಾರ ಮಾಡಿದ್ದಾನೆ. ಕೋರ(ಸುಮಾಮಿ ಕಿಟ್ಟಿ) ಕಾಡಲ್ಲೇ ಹುಟ್ಟಿ ಬೆಳೆದ ಯುವಕ. ನಲವತ್ತು ವರ್ಷಗಳ ಹಿಂದೆ ಕರಿಘಟ್ಟ ಎನ್ನುವ ಪ್ರಕೃತಿ ರಮಣೀಯ ಕಾಡಿನ ಮಧ್ಯೆ ಹಾಡಿ ಜನರು ಹೊಟ್ಟೆಪಾಡಿಗಾಗಿ ನಿರಂತರ ದುಡಿಯುತ್ತ ಸ್ವಚ್ಚಂದವಾಗಿ ಬದುಕುತಿದ್ದರು. ಈ ಮುಗ್ಧ ಜನರು ತಾವಾಯಿತು, ತಮ್ಮ ಕಾಯಕವಾಯಿತು ಎಂದು ತಮ್ಮ ಪಾಡಿಗೆ ತಾವಿರುತಗತಾರೆ. ಜನಪದಗಳನ್ನು ಹಾಡುತ್ತ, ನೃತ್ಯ ಮಾಡುತ್ತ, ತಮಟೆ ತಯಾರಿಸಿ ನುಡಿಸುತ್ತಾ, ನಲಿಯುತ್ತಾ ಇರುವಾಗ, ಸಮಾಜದ ಬಲಾಢ್ಯ ವರ್ಗಗಳ ಜನರ ಕಣ್ಣು ಈ ಹಾಡಿಯ ಮುಗ್ಧ ಜನರ ಮೇಲೆ ಬೀಳುತ್ತದೆ. ಅವರ ಮೇಲೆ ದೌರ್ಜನ್ಯವೆಸಗುತ್ತ, ಬಡಜನರನ್ನು ಸುಲಿಗೆಮಾಡಿ ದೌಲತ್ತಿನಿಂದ ಮೆರೆಯುತ್ತಿರುತ್ತಾರೆ.
ಅಲ್ಲಿನ ಜಿಲ್ಲಾಧಿಕಾರಿ, ಸರ್ಕಾರಿ ಅಧಿಕಾರಿಗಳೊಂದಿಗೆ ಒಳಒಪ್ಪಂದ ಮಾಡಿಕೊಂಡು ಹಾಡಿ ಜನರ ಮುಖ್ಯಸ್ಥ ತಮಟೆ ಮಾಚಯ್ಯ ಮತ್ತು ಅಲ್ಲಿನ ಮುಗ್ಧ ಜನರಿಂದ, ಖಾಲಿ ಪೇಪರ್ ಮೇಲೆ ಮೋಸದಿಂದ ಸಹಿ ಹಾಕಿಸಿಕೊಂಡು ಅವರನ್ನು ಒಕ್ಕಲೆಬ್ಬಿಸುತ್ತಾನೆ. ಕಾಡನ್ನೇ ತಮ್ಮ ಜೀವ, ಜೀವನವೆಂದು ನಂಬಿದ್ದ ಆ ಮುಗ್ಧ ಜನರಿಗೆ ನೀವೆಲ್ಲ ಕಾಡನ್ನು ಅಕ್ರಮವಾಗಿ ಒತ್ತವರಿ ಮಾಡಿಕೊಂಡುದಲ್ಲದೆ, ಕಾನೂನುಬಾಹಿರ ಚಟುವಟಿಕೆಗಳ ಜೊತೆಗೆ ಕಾಡುಪ್ರಾಣಿಗಳಿಗೆ ತೊಂದರೆ ನೀಡುತ್ತೀರೆಂದು ಇಲ್ಲಸಲ್ಲದ ಆಪಾದನೆಗಳನ್ನು ಅವರಮೇಲೆ ಹೊರಿಸಿ ಅವರನ್ನು ಕಾಡಿನಿಂದ ಹೊಡೆದೊಡಿಸಲು ಮುಂದಾಗುತ್ತಾರೆ. ಸಿಕ್ಕಸಿಕ್ಕವರನ್ನು ಬಡಿದು, ಕೊಂದು ಅಳಿದುಳಿದವರನ್ನು ಸಂಕೋಲೆಗಳಿಂದ ಬಂಧಿಸಿ, ಅವರನ್ನು ತೋಟದಲ್ಲಿ ಜೀತದಾಳುಗಳಾಗಿಸುತ್ತಾರೆ. ಒಂದು ತುತ್ತು ಅನ್ನ, ಸೆಣಬಿನ ಚೀಲದ ಬಟ್ಟೆ, ಚಾಟಿಯ ಏಟು, ನಿರಂತರ ದುಡಿಮೆ, ಸುತ್ತಲೂ ದುರುಳರ ಕಾವಲು ಹೀಗೆ ತಮ್ಮ ಮನೆ, ಮಠ, ಮಕ್ಕಳನ್ನು ಬಿಟ್ಟ ಬಂದ ಕಾಡಿನ ಜನರು ಅಕ್ಷರಶಃ ನರಕಯಾತನೆಯನ್ನೇ ಅನುಭವಿಸುತ್ತಾರೆ. ಈ ಘಟನೆಯಲ್ಲಿ ಬದುಕುಳಿದ ಅಜ್ಜ ಮತ್ತು ಆತನ ಮೊಮ್ಮಗ ಕೋರ ಇವರ ಮೇಲೆ ಮುಂದಿನ ಚಿತ್ರಕಥೆ ಸಾಗುತ್ತದೆ.
ಅಜ್ಜನ ಆಶ್ರಯದಲ್ಲೇ ಬೆಳೆಯುತ್ತಿದ್ದ ಕೋರ ಅನಿರೀಕ್ಷಿತವಾಗಿ ದುಷ್ಟನ ಬಲೆಗೆ ಬೀಳುತ್ತಾನೆ. ಮುಂದೆ ಕರಿಘಟ್ಟದ ಇತಿಹಾಸ ತಿಳಿದ ಕೋರ ಏನು ಮಾಡುತ್ತಾನೆ. ಕಾಡಿನಲ್ಲಿ ಸಿಕ್ಕ ಆ ಕನ್ಯೆ ಯಾರು? ಕಾಡಿನ ಆರಾಧ್ಯ ದೈವ, ದೇವರ ಶಕ್ತಿ ಎಂಥದ್ದು? ಅಂತಿಮವಾಗಿ ಕಾಡುಜನರ ಬದುಕು, ಜಾಗ ಮತ್ತೆ ಅವರ ಕೈಸೇರಿತೇ? ಇತ್ಯಾದಿ ಪ್ರಶ್ನೆಗಳಿಗೆ ಕೋರ ಸಿನಿಮಾ ನೋಡಿದ ಬಳಿಕವೇ ಉತ್ತರ ಸಿಗುತ್ತದೆ. ಇಡೀ ಚಿತ್ರವನ್ನು ಎಲ್ಲೂ ಸಹ ಬೋರಾಗದಂತೆ ಅಚ್ಚುಕಟ್ಟಾಗಿ ನಿರೂಪಿಸಿಕೊಂಡು ಹೋಗಿರುವುದು ನಿರ್ದೇಶಕ ಶ್ರೀ ಅವರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ, ಬಡಜನರಿಗೆ ಸಿಗುವ ಸೌಲಭ್ಯ ಮೀಸಲಾತಿಯನ್ನು ನುಂಗುವ ರಾಜಕಾರಣಿಗಳ ವಾಸ್ತವಸ್ಥಿತಿಗೆ ಕೋರ ಬೆಳಕು ಚೆಲ್ಲಿದೆ. ಕಾಡಿನೊಳಗಿರುವ ಕಾಣದ ಪ್ರಪಂಚವನ್ನು ಕಂಡುಹಿಡಿದು ಕಾಡುಜನರ ಬದುಕು ಬವಣೆಗೆ ಬೆಳಕು ಚೆಲ್ಲುವ ಈ ಚಿತ್ರದಲ್ಲಿ ಜಾನಪದ ಹಾಡು, ನೃತ್ಯ ಅದ್ಭುತವಾಗಿದೆ. ಕೋರನ ಪಾತ್ರದಲ್ಲಿ ಸುನಾಮಿ ಕಿಟ್ಟಿ ಮತ್ತು ನಾಯಕಿಯಾಗಿ ಚರಿಷ್ಮಾ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಹಿರೀಕನಾಗಿ ಎಂ.ಕೆ.ಮಠ ಮನೋಜ್ಞವಾಗಿ ಅಭಿನಯಿಸಿದ್ದು ಖಳನಾಯಕನ ಪಾತ್ರದಲ್ಲಿ ನಿರ್ಮಾಪಕ ಪಿ.ಮೂರ್ತಿ ಗಮನ ಸೆಳೆಯುತ್ತಾರೆ.