ಚಿತ್ರ : ಫೈರ್ ಫ್ಲೈ
ನಿರ್ದೇಶನ : ವಂಶಿ ಕೃಷ್ಣ
ನಿರ್ಮಾಣ : ನಿವೇದಿತಾ ಶಿವರಾಜ್‌ಕುಮಾರ್
ಸಂಗೀತ : ಚರಣ್ ರಾಜ್
ಛಾಯಾಗ್ರಹಣ : ಅಭಿಲಾಷ್
ತಾರಾಗಣ : ಶಿವರಾಜ್ ಕುಮಾರ್, ವಂಶಿ ಕೃಷ್ಣ , ರಚನಾ ಇಂದರ್, ಸುಧಾರಾಣಿ, ಅಚ್ಯುತ್ ಕುಮಾರ್,
ಮೂಗು ಸುರೇಶ್, ಶೀತಲ್ ಶೆಟ್ಟಿ , ಆನಂದ್ ನೀನಾಸಂ ಹಾಗೂ ಇತರರು...
ನಾವು ಜೀವನದಲ್ಲಿ ಎದುರಾಗೋ ಸುಖ, ದುಃಖ ಎರಡನ್ನೂ ಸಮನಾಗಿ ಸ್ವೀಕರಿಸುತ್ತ ಮುಂದೆ ಸಾಗಬೇಕು. ಆಗಲೇ ಲೈಫ್ ಲೀಡ್ ಮಾಡಲು ಸಾಧ್ಯ ಎಂಬ ಮೆಸೇಜ್ ಹೊತ್ತು ಬಂದಿರುವ ಚಿತ್ರ ಫೈರ್ ಫ್ಲೈ.
ನಾಯಕ ವಿಕ್ಕಿ(ವಂಶಿಕೃಷ್ಣ)ಯ ಬದುಕಲ್ಲಿ ಎದುರಾಗುವ ಅನಿರೀಕ್ಷಿತ ದುರ್ಘಟನೆ ಆತನ ಮೇಲೆ ಅದೆಂಥಾ ಪರಿಣಾಮ ಬೀರುತ್ತದೆ. ಆ ಸಮಯದಲ್ಲಿ ಸಂಬಂಧಿಕರು, ಸ್ನೇಹಿತರು ಹೇಗೆಲ್ಲಾ ನಡೆದುಕೊಳ್ಳುತ್ತಾರೆ, ಅವರ ವರ್ತನೆ ಯಾವರೀತಿ ಬದಲಾಗುತ್ತೆ, ತಮ್ಮ ಮಕ್ಕಳನ್ನು ನಿಸ್ವಾರ್ಥದಿಂದ ಪ್ರೀತಿಸುವವರು ಹೆತ್ತ ತಂದೆ ತಾಯಿ ಮಾತ್ರ ಎಂಬ ಸತ್ಯವನ್ನು ನಿರ್ದೇಶಕರು ತೆರೆದಿಟ್ಟಿದ್ದಾರೆ. ಅಂಥಾ ಮನಸ್ಥಿತಿಯುಳ್ಳವರಿಗೆ ಈ ಚಿತ್ರ ಒಂದು ಸಂದೇಶವನ್ನಂತೂ ನೀಡಿದೆ ಎನ್ನಬಹುದು.
ಜೊತೆಗೆ ಬದುಕಿನಲ್ಲಿ ಯಾವುದರ ಬಗ್ಗೆ ಗಮನ ಹರಿಸಬೇಕು, ಮಿಂಚುಹುಳುವಿನಂತೆ ಹೇಗೆ ಬೆಳಕಿನ ದಾರಿ ಕಂಡುಕೊಳ್ಳಬೇಕು ಎಂಬುದನ್ನೂ ನಿರ್ದೇಶಕರು ಫೈರ್ ಫ್ಲೈ ಚಿತ್ರದ ಮೂಲಕ ಹೇಳಿದ್ದಾರೆ.
ತನ್ನ ದೊಡ್ಡಪ್ಪನ ಮಗನ ಮದುವೆಗೆಂದು ನಾಲ್ಕು ವರ್ಷಗಳ ನಂತರ ವಿದೇಶದಿಂದ ಆಗಮಿಸುವ ವಿಕ್ಕಿಯನ್ನು ಬರಮಾಡಿಕೊಳ್ಳಲು ಸ್ವತಃ ತಂದೆ ತಾಯಿ (ಅಚ್ಚುತ್ ಕುಮಾರ್ , ಸುಧಾರಾಣಿ) ಇಬ್ಬರೂ ಏರ್ ಪೋರ್ಟ್ ಗೆ ಬಂದಿರುತ್ತಾರೆ. ಅಲ್ಲಿಂದ ಕಾರ್ ನಲ್ಲಿ ಮನೆಗೆ ಹೋಗುವಾಗ ಆಕ್ಸಿಡೆಂಟ್ ಸಂಭವಿಸಿ ತಂದೆ ತಾಯಿ ಇಬ್ಬರನ್ನೂ ಕಳೆದುಕೊಳ್ಳುವ ವಿಕ್ಕಿ ಕೋಮ ಸ್ಥಿತಿಗೆ ಹೋಗಿರುತ್ತಾನೆ. ಆರು ತಿಂಗಳ ನಂತರ ಪ್ರಜ್ಞೆ ಮರಳಿ ವಾಸ್ತವ ಸ್ಥಿತಿಗೆ ಬಂದ ವಿಕ್ಕಿಗೆ ತಂದೆ ತಾಯಿ ಇಬ್ಬರೂ ಮರಣಿಸಿರುವುದು ತಿಳಿದು ದಿಕ್ಕೇ ತೋಚದಂತಾಗಿ ಡಿಪ್ರಶನ್ ಗೆ ಹೋಗುತ್ತಾನೆ. ಆ ಸಮಯದಲ್ಲಿ ವಿಕ್ಕಿಯ ಸಂಬಂಧಿಕರು ಪ್ರೀತಿ ವಾತ್ಸಲ್ಯದಿಂದಲೇ ನೋಡಿಕೊಳ್ಳುತ್ತಾರೆ. ಆದರೆ ದಿನ ಕಳೆದಂತೆ ಅವನ ಮನಸ್ಥಿತಿ ಕೆಟ್ಟು ರೂಮಲ್ಲಿ ಒಬ್ಬನೇ ಇರುವುದು ಕಂಡು ದೊಡ್ಡಪ್ಪನ ಮನೆಯಲ್ಲಿ ಏನೇನೋ ಮಾತಾಡಿಕೊಳ್ಳುತ್ತಿರುವುದು ಆತನಿಗೆ ಬೇಸರ ತರುತ್ತದೆ. ಒಂಟಿಯಾದರೂ ತನ್ನ ಮನೆಯಲ್ಲಿ ತಾನಿರಬೇಕೆಂದು ನಿರ್ಧರಿಸುವ ವಿಕ್ಕಿಗೆ ಮನಪರಿವರ್ತನೆಯ ಹಾದಿಯಲ್ಲಿ ಒಂದಷ್ಟು ಕಹಿ, ಸತ್ಯದ ಜೊತೆಗೆ ಬೆಳಕಿನ ಅರಿವು ತೆರೆದುಕೊಳ್ಳುತ್ತಾ ಹೋಗುತ್ತದೆ. ಒಮ್ಮೆ ನೇಹಾ (ರಚನಾ ಇಂದರ್)ಎಂಬ ಯುವತಿಯ ಪರಿಚಯವಾಗಿ ಸ್ನೇಹದ ಮಾತುಕತೆ ನಡೆಯುತ್ತದೆ. ಮನದ ಮೂಲೆಯಲ್ಲಿ ಹೊಸಬೆಳಕು ಮೂಡುತ್ತದೆ. ಅಷ್ಟರಲ್ಲಾಗಲೇ ಆಕೆ ಕಣ್ಮರೆಯಾಗಿರುತ್ತಾಳೆ. ವರ್ಷದ ತಿಥಿ ಸಂದರ್ಭದಲ್ಲಿ ತಂದೆ ಜಮೀನು ಖರೀದಿಸಿದ್ದ ವಿಷಯ ವಿಕ್ಕಿಗೆ ತಿಳಿದು, ಆ ಜಮೀನಿಗೆ ಬರುವ ವಿಕ್ಕಿಗೆ ಬದುಕಿನ ಇನ್ನೊಂದು ರೂಪ ತಿಳಿಯುತ್ತದೆ. ಹೀಗೆ ಸಾಗುವ ಚಿತ್ರದಲ್ಲಿ ವಿಕ್ಕಿ ಮತ್ತೆ ಮೊದಲಿನಂತಾದನೇ ಇಲ್ಲವೇ ಎಂಬುದಕ್ಕೆ ಕ್ಲೈಮ್ಯಾಕ್ಸ್ ಸೀನ್ ನಲ್ಲಿ ಉತ್ತರ ಸಿಗುತ್ತದೆ.
ಅಣ್ಣಾವ್ರ ಮೊಮ್ಮಗಳು ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಮೊದಲ ಚಿತ್ರವಾಗಿ ಹೊರ ಬಂದಿರುವ ಫೈರ್ ಫ್ಲೈ ಒಂದು ಗಾಢವಾದ ವಿಷಯವನ್ನು ಸರಳವಾಗಿ ಹೇಳುತ್ತದೆ. ಚಿತ್ರವನ್ನು ಆಳವಾಗಿ ಪರಾಮರ್ಶಿಸಿದಾಗಷ್ಟೇ ಅದರ ಒಳಾರ್ಥ ತಿಳಿಯುವುದು. ಈಗಿನ ಜನರ ಮನಸ್ಥಿತಿ , ಸಂಬಂಧಗಳು, ಅಸ್ತಿತ್ವದ ಬಗ್ಗೆ ಚಿತ್ರದಲ್ಲಿ ಬೆಳಕು ಚೆಲ್ಲಿದ್ದು, ಗಮನ ಸೆಳೆಯುತ್ತದೆ.
ಬಹುತೇಕ ಕುಟುಂಬಗಳಲ್ಲಿ ಎದುರಾಗುವಂಥ ಒಂದಷ್ಟು ಘಟನೆಗಳನ್ನು ಎಲ್ಲರಿಗೂ ಮುಟ್ಟಿಸುವ ಪ್ರಯತ್ನವನ್ನು ನಿರ್ದೇಶಕರು ಫೈರ್ ಫ್ಲೈ ಚಿತ್ರದಲ್ಲಿ ಮಾಡಿದ್ದಾರೆ.
ಚಿತ್ರಕಥೆ ಹೇಳುವ ಶೈಲಿ ವಿಭಿನ್ನವಾಗಿದ್ದು, ದ್ವಿತೀಯ ಭಾಗದ ಪ್ರೀ ಕ್ಲೈಮ್ಯಾಕ್ಸ್ ಗಮನ ಸೆಳೆಯುತ್ತದೆ. ಛಾಯಾಗ್ರಾಹಕರ ಕೆಲಸ ಉತ್ತಮವಾಗಿದೆ. ಸಂಗೀತ ಕಥೆಗೆ ಪೂರಕವಾಗಿದ್ದು,. ತಾಂತ್ರಿಕವಾಗಿ ತಂಡ ಶ್ರಮಪಟ್ಟಿರುವುದು ಎದ್ದು ಕಾಣುತ್ತದೆ. ನಿರ್ದೇಶನದ ಜೊತೆಗೆ ನಟನೆ ಕೂಡ ಮಾಡಿರುವ ವಂಶಿ ಕೃಷ್ಣ ಇಡೀ ಚಿತ್ರವನ್ನ ಆವರಿಸಿಕೊಂಡಿದ್ದಾರೆ. ಪಾತ್ರವನ್ನ ಸಮರ್ಥವಾಗಿ ನಿರ್ವಹಿಸಿ, ಭಾವನೆಗಳನ್ನ ವ್ಯಕ್ತಪಡಿಸುವ ಮೂಲಕ ಜೀವ ನೀಡಿದ್ದಾರೆ. ನಟಿ ರಚನಾ ಇಂದರ್ ಮಿಂಚುಹುಳದಂತೆ ಬಂದು ಮಾಯವಾಗುತ್ತಾರೆ. ವಿಶೇಷ ಎಂದರೆ ಮಗಳ ಚಿತ್ರದಲ್ಲಿ ಶಿವರಾಜ್ ಕುಮಾರ್ ದಿ ಕಿಂಗ್ಸ್ ಪಿಜ್ಜಾ ಬಾಯ್ ಆಗಿ ವಿಶೇಷ ಪಾತ್ರದಲ್ಲಿ ಮಿಂಚಿದ್ದಾರೆ. ಶೀತಲ್ ಶೆಟ್ಟಿಯ ಪಾತ್ರ ಗಮನ ಸೆಳೆಯುತ್ತದೆ. ತಂದೆ ತಾಯಿಯಾಗಿ ಅಚ್ಚುತ್ ಕುಮಾರ್ , ಸುಧಾರಾಣಿ , ದೊಡ್ಡಪ್ಪ , ದೊಡ್ಡಮ್ಮರಾಗಿ ಆನಂದ್ ನೀನಾಸಂ , ಚಿತ್ಕಲಾ ಬಿರಾದಾರ್, ಜಮೀನು ಕಾಯುವ ರೈತನ ಪಾತ್ರದಲ್ಲಿ ಮೂಗು ಸುರೇಶ್ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಸಾತ್ ನೀಡಿದೆ. ಫೈರ್ ಫ್ಲೈ
ಎಲ್ಲಾ ವರ್ಗದ ಪ್ರೇಕ್ಷಕರು ನೋಡುವಂತಹ ಚಿತ್ರ ಎನ್ನಬಹುದು.