Chief Editor
Manohar. R (Manu)
Photo Journalist
chitrataramanu@gmail.com
+91 9845549026
``ಸೆಪ್ಟೆಂಬರ್‌ 21`` ಚಿತ್ರದ ಮೂಲಕ ಬಾಲಿವುಡ್‌ಗೆ ಹೊರಟ ಪ್ರಿಯಾಂಕಾ ಉಪೇಂದ್ರ
Posted date: 05 Mon, May 2025 06:21:38 PM
22 ವರ್ಷದ ಕನ್ನಡತಿ ಕರೆನ್ ಕ್ಷಿತಿ ಸುವರ್ಣ ಇದೀಗ ʻಸೆಪ್ಟೆಂಬರ್‌ 21ʼ ಹೆಸರಿನ ಬಾಲಿವುಡ್‌ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಬೆಂಗಳೂರು ಮೂಲದ ಆಲ್ಝೈಮರ್ ರೋಗಿ ಮತ್ತು ಆತನ ಆರೈಕೆ ಮಾಡುವ ನರ್ಸ್‌ವೊಬ್ಬಳ ನಡುವಿನ ಕಥೆಯನ್ನು ಈ ಸಿನಿಮಾ ಹೊಂದಿದೆ. ಬಹುತಾರಾಗಣದ ಈ ಸಿನಿಮಾದಲ್ಲಿ ಕನ್ನಡದ ನಟಿ ಪ್ರಿಯಾಂಕಾ ಉಪೇಂದ್ರ, ಕೇರ್‌ ಟೇಕರ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದಂತೆ, ಬಾಲಿವುಡ್‌ನ ಪ್ರವೀಣ್ ಸಿಂಗ್ ಸಿಸೋಡಿಯಾ, ಜರೀನಾ ವಹಾಬ್ ಮತ್ತು ಅಮಿತ್ ಬೆಹ್ಲ್ ಸಹ ಮುಖ್ಯಭೂಮಿಕೆಯಲ್ಲಿ ಇರಲಿದ್ದಾರೆ. 

"ಸೆಪ್ಟೆಂಬರ್ 21" ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಕಮಲಾ ಹೆಸರಿನ ಕೇರ್‌ಟೇಕರ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಖಿನ್ನತೆ ಮತ್ತು ಸ್ಮರಣಶಕ್ತಿ ಕಳೆದುಕೊಂಡ 60 ವರ್ಷದ ವ್ಯಕ್ತಿ ರಾಜ್‌ಕುಮಾರ್‌ ಪಾತ್ರದಲ್ಲಿ ಪ್ರವೀಣ್ ಸಿಂಗ್ ಸಿಸೋಡಿಯಾ ನಟಿಸುತ್ತಿದ್ದಾರೆ. ರಾಜ್ ಅವರ ಸ್ಥಿತಿ ಹದಗೆಡುತ್ತಿದ್ದಂತೆ, ಆರೈಕೆದಾರಳಾಗಿ ಕಮಲಾ ಅವರ ಜೀವನಾಡಿಯಾಗುತ್ತಾಳೆ. ಭಾವನಾತ್ಮಕ ಬೆಂಬಲದ ಜತೆಗೆ ಆರೈಕೆಯನ್ನು ಮಾಡುತ್ತಾರೆ. ರೋಗಿಯ ಆರೈಕೆ ಮಾಡುವ ಮಹಿಳೆಯ ಹೋರಾಟಗಳು, ಕಾಯಿಲೆಯನ್ನು ನಿಭಾಯಿಸುವಾಗ ಎದುರಾಗುವ ಸವಾಲುಗಳು, ಎಲ್ಲವನ್ನೂ ತ್ಯಜಿಸಿ ರೋಗಿಯ ಗುಣವಾಗುವಿಕೆಗೆ ಕೆಲಸ ಮಾಡುವವಳಾಗಿ ಪ್ರಿಯಾಂಕಾ ಉಪೇಂದ್ರ ಕಾಣಿಸಿಕೊಂಡಿದ್ದಾರೆ. 

ಈ ಚಿತ್ರವನ್ನು ಮಲಯಾಳಂ ಬರಹಗಾರ ನೆಲ್ಲೂಲಿ ಪಿ ರಾಜಶೇಖರನ್ ಬರೆದಿದ್ದಾರೆ. ಕನ್ನಡಿಗ ವಿನಯ್ ಚಂದ್ರ ಸಂಗೀತ ನೀಡಿದರೆ, ಅನಿಲ್ ಕುಮಾರ್ ಕೆ ಛಾಯಾಗ್ರಹಣವಿದೆ. ಈ ಚಿತ್ರದಲ್ಲಿ ಬಾಲಿವುಡ್ ನಟ ಪ್ರವೀಣ್ ಸಿಂಗ್ ಸಿಸೋಡಿಯಾ, ನಟ ಅಮಿತ್ ಬೆಹ್ಲ್, ಬಾಲಿವುಡ್ ನಟಿ ಆಯೇಷಾ ಐಮೆನ್, ನೆಲ್ಲೂಲಿ ಪಿ ರಾಜಶೇಖರನ್ ಮತ್ತು ರಿಕಿ ರುದ್ರ ನಟಿಸಿದ್ದಾರೆ. ಚಿತ್ರದಲ್ಲಿ ನಾನಾ ಪಾಟೇಕರ್ ಅವರ ಸೋದರಳಿಯ ಸಚಿನ್ ಪಾಟೇಕರ್ ಕೂಡ ನಟಿಸಿದ್ದಾರೆ.

ನಿರ್ದೇಶಕರ ಬಗ್ಗೆ ಹೇಳುವುದಾದರೆ, ಕರೆನ್ ಕ್ಷಿತಿ ಸುವರ್ಣ ಅವರಿಗೆ ಇದು ಮೊದಲ ಸಿನಿಮಾ ಆದರೂ, ಬಣ್ಣದ‌ಲೋಕದ ನಂಟಿದೆ. ಈ ಹಿಂದೆ ಹೈಡ್ ಅಂಡ್ ಸೀಕ್ ಅನ್ನೋ ಕಿರು ಚಿತ್ರವನ್ನು ನಿರ್ದೇಶಿಸಿದ್ದರು. ಈ ಕಿರು ಚಿತ್ರ ಜಾಗತಿಕ ಮಟ್ಟದಲ್ಲಿಯೂ ಗುರುತಿಸಿಕೊಂಡು, ಕಾನೆಸ್ ಸಿನಿಮೋತ್ಸವ ಸೇರಿ ಹಲವು ಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳನ್ನೂ ಪಡೆದಿದೆ. 

"ಸೆಪ್ಟೆಂಬರ್ 21" ಚಿತ್ರವನ್ನು ಬೆಲ್ಜಿಯಂ ಮೂಲದ ನಿರ್ಮಾಣ ಸಂಸ್ಥೆ "ಫಾಕ್ಸ್ ಆನ್ ಸ್ಟೇಜ್ ಬೆಲ್ಜಿಯಂ", "ವಿಸಿಕಾ ಫಿಲ್ಮ್ಸ್" ಮತ್ತು "ಫಿಲ್ಮ್ಸ್ ಮ್ಯಾಕ್ಸ್" ಜಂಟಿ ಸಹಯೋಗದಲ್ಲಿ ನಿರ್ಮಾಣವಾಗುತ್ತಿದೆ. ರಿಲಯನ್ಸ್ ಎಂಟರ್‌ಟೈನ್‌ಮೆಂಟ್‌ನಲ್ಲಿ ಮಾರ್ಕೆಟಿಂಗ್ ಉಪಾಧ್ಯಕ್ಷ ಅಮಿತ್ ಅವಸ್ಥಿ ಮತ್ತು "ಫಾಕ್ಸ್ ಆನ್ ಸ್ಟೇಜ್"ನ ಫ್ರೆಡ್ರಿಕ್ ಡಿ ವೋಸ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಸದ್ಯ ಶೂಟಿಂಗ್‌ ಹಂತದಲ್ಲಿರುವ ಈ ಸಿನಿಮಾ, ಎಲ್ಲ ಹಂತದಲ್ಲಿಯೂ ಸಿದ್ಧವಾದ ಬಳಿಕ, ಅಂತಾರಾಷ್ಟ್ರೀಯ ಮಟ್ಟದ ಸಿನಿಮೋತ್ಸವಗಳಲ್ಲಿ ಪ್ರಶಸ್ತಿಗೆ ಸ್ಪರ್ಧಿಸಲಿದೆ. ಅದಾದ ಬಳಿಕ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ``ಸೆಪ್ಟೆಂಬರ್‌ 21`` ಚಿತ್ರದ ಮೂಲಕ ಬಾಲಿವುಡ್‌ಗೆ ಹೊರಟ ಪ್ರಿಯಾಂಕಾ ಉಪೇಂದ್ರ - Chitratara.com
Copyright 2009 chitratara.com Reproduction is forbidden unless authorized. All rights reserved.