Chief Editor
Manohar. R (Manu)
Photo Journalist
chitrataramanu@gmail.com
+91 9845549026
ರೊಮ್ಯಾಂಟಿಕ್ ಕಾಮಿಡಿ ಸಿನಿಮಾ `ನಮೋ ವೆಂಕಟೇಶ` ಶೀಘ್ರದಲ್ಲೇ ತೆರೆಗೆ
Posted date: 15 Thu, May 2025 05:06:55 PM
`ನಮೋ ವೆಂಕಟೇಶ` - ಹೀಗೊಂದು ಹೆಸರಿನ ಸಿನಿಮಾ ಸದ್ದಿಲ್ಲದೆ ತೆರೆಗೆ ಬರಲು ತಯಾರಾಗುತ್ತಿದೆ. ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ `ನಮೋ ವೆಂಕಟೇಶ` ಸಿನಿಮಾದ ಬಹುತೇಕ ಕೆಲಸಗಳು ಈಗಾಗಲೇ ಪೂರ್ಣಗೊಂಡಿದ್ದು, ಸದ್ಯ ಚಿತ್ರತಂಡ `ನಮೋ ವೆಂಕಟೇಶ` ನ ಅಂತಿಮ ಹಂತದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ನಿರತವಾಗಿದೆ. ಚಿತ್ರತಂಡದ ಪ್ಲಾನ್‌ ಪ್ರಕಾರ ಎಲ್ಲವೂ ನಡೆದರೆ, ಇನ್ನು ಎರಡು-ಮೂರು ತಿಂಗಳಲ್ಲಿ ತೆರೆಮೇಲೆ `ನಮೋ ವೆಂಕಟೇಶ`ನ ದರ್ಶವನ್ನು ಕಣ್ತುಂಬಿಕೊಳ್ಳಬಹುದು ಎಂಬುದು ಚಿತ್ರತಂಡದ ಮೂಲಗಳ ಮಾಹಿತಿ. 

ಅಂದಹಾಗೆ, ಈ ಸಿನಿಮಾದ ಹೆಸರು `ನಮೋ ವೆಂಕಟೇಶ` ಅಂತಿದ್ದರೂ, ಈ ಸಿನಿಮಾಕ್ಕೂ ಪುರಾಣ, ಪುಣ್ಯಕಥೆಗಳಲ್ಲಿ ಬರುವ `ವೆಂಕಟೇಶ`ನಿಗೂ ಯಾವುದೇ ಸಂಬಂಧವಿಲ್ಲ! ಇದು ಇಂದಿನ ಕಾಲದ ಕಥೆಯನ್ನು ಹೊಂದಿರುವ ಔಟ್‌ ಆಂಡ್‌ ಔಟ್‌ ಕಮರ್ಷಿಯಲ್‌ ಎಂಟರ್‌ಟೈನ್ಮೆಂಟ್‌ ಸಿನಿಮಾ. ಕಥಾಹಂದರಕ್ಕೆ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ಚಿತ್ರತಂಡ, ತಮ್ಮ ಚಿತ್ರಕ್ಕೆ `ನಮೋ ವೆಂಕಟೇಶ` ಎಂದು ಹೆಸರಿಟ್ಟಿದೆ. ನವಿರಾದ ಹಾಸ್ಯದ ಜೊತೆಗೊಂದು ಪ್ರೇಮಕಥೆಯನ್ನು ಹೊತ್ತು ರೊಮ್ಯಾಂಟಿಕ್‌-ಕಾಮಿಡಿ ಶೈಲಿಯಲ್ಲಿ `ನಮೋ ವೆಂಕಟೇಶ` ಸಿನಿಮಾ ತೆರೆಗೆ ಬರುತ್ತಿದೆ.

`ಆರುಶ್ ಪಿಕ್ಚರ್ಸ್`(AARUSH PICTURES) ಬ್ಯಾನರಿನಲ್ಲಿ ಶ್ರೀನಿವಾಸ ಗೆಜ್ಜಲಗೆರೆ (Srinivasa Gejjalagere) ಮೊದಲ ಬಾರಿಗೆ ನಿರ್ಮಿಸುತ್ತಿರುವ `ನಮೋ ವೆಂಕಟೇಶ` ಸಿನಿಮಾಕ್ಕೆ ಕಿರುತೆರೆ ಮಾಂತ್ರಿಕ ಟಿ. ಎನ್. ಸೀತಾರಾಮ್ ಅವರ ಗರಡಿಯಲ್ಲಿ ಪಳಗಿದ, ಮೈಸೂರು ಮೂಲದ ಯುವ ಪ್ರತಿಭೆ ವಿಜಯ್‌ ಭಾರದ್ವಾಜ್‌ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಜೊತೆಗೆ ತೆರೆಮೇಲೆ ನಾಯಕ ನಟನಾಗಿಯೂ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಕಿರುತೆರೆಯ `ಗಟ್ಟಿಮೇಳ` ಧಾರಾವಾಹಿಯ ಆಧ್ಯ ಪಾತ್ರದಲ್ಲಿ ಹಾಗೂ ಹಿರಿತೆರೆಯ ಕೆಲ ಸಿನಿಮಾಗಳಲ್ಲಿ ಅಭಿನಯಿಸಿ, ನಟಿಯಾಗಿ ಗುರುತಿಸಿಕೊಂಡಿರುವ ಅನ್ವಿತಾ ಸಾಗರ್‌ (ಪಾರ್ವತಿ) `ನಮೋ ವೆಂಕಟೇಶ` ದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಶ್ಯಾಮ್‌ ಸುಂದರ್, ನಾಗರಾಜ ರಾವ್‌, ರವಿಕುಮಾರ್‌, ದೀಪಾ, ಮಂಜುನಾಥ್‌ ಹೆಗ್ಡೆ, ಸುಧಾ ಪ್ರಸನ್ನ ಮೊದಲಾದ ಕಲಾವಿದರು `ನಮೋ ವೆಂಕಟೇಶ` ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 

ಇನ್ನು `ನಮೋ ವೆಂಕಟೇಶ` ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಶರತ್‌ ಆರೋಹಣ ಸಂಗೀತ ಸಂಯೋಜಿಸಿದ್ದಾರೆ. ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್ `ನಮೋ ವೆಂಕಟೇಶ` ಚಿತ್ರದ ಶೀರ್ಷಿಕೆ ವಿನ್ಯಾಸದ ಜೊತೆಗೆ, ಚಿತ್ರದ ಶೀರ್ಷಿಕೆ ಹಾಡನ್ನು ಬರೆದಿದ್ದಾರೆ. ಇನ್ನುಳಿದ ಮೂರು ಹಾಡುಗಳಿಗೆ ನಿರ್ಮಾಪಕ ಶ್ರೀನಿವಾಸ ಗೆಜ್ಜಲಗೆರೆಯವರು ಸಾಹಿತ್ಯ ರಚಿಸಿದ್ದು, ಮತ್ತೊಂದು ಗೀತೆಗೆ ಗಣೇಶ್ ಪ್ರಸಾದ್ ಸಾಲುಗಳನ್ನು ಬರೆದು ಹಾಡಿರುವುದು ವಿಶೇಷ. ನಿರಂಜನ್‌ ದಾಸ್‌ ಮತ್ತು ವಿನೋದ್‌ ಲೋಕಣ್ಣನವರ್ ಛಾಯಾಗ್ರಹಣವಿದ್ದು, ಸಮೀರ್‌ ನಗರದ್‌ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಮೈಸೂರು, ಚಿಕ್ಕಮಗಳೂರಿನ ಬಾಳೂರು, ಕೊಟ್ಟಿಗೆಹಾರ, ದೇವರಮನೆ, ಬಣಕಲ್ ಮುಂತಾದ ಸುಂದರ ತಾಣಗಳಲ್ಲಿ `ನಮೋ ವೆಂಕಟೇಶ` ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. 

-- ಕಥಾ ಸಾರಾಂಶ --
ಈ ಸಿನಿಮಾದ ಕಥಾವಸ್ತುವಿನ ವಿಶೇಷವೇನೆಂದರೆ ಎರಡು ಬೇರೆ, ಬೇರೆ ಪೀಳಿಗೆಗೆ ಸೇರಿದ ಇಬ್ಬರು ವ್ಯಕ್ತಿಗಳ ಸುತ್ತ ಸುತ್ತವ ಕಥೆ. ಒಂದು ಪೀಳಿಗೆಯ ವ್ಯಕ್ತಿಗಳ ಭಿನ್ನ, ಭಿನ್ನ ಆಲೋಚನೆಗಳಿಂದ ಮತ್ತೊಂದು ಪೀಳಿಗೆಗೆ ಸೇರಿದ ವ್ಯಕ್ತಿಗಳ ಜೀವನದ ಮೇಲೆ ಬೀರುವ ಸೂಕ್ಷ್ಮ ಪ್ರಭಾವಗಳು ಅದರಿಂದ ಅವರವವರ ಬದುಕು ಪಡೆದುಕೊಳ್ಳುವ ಕೈಮೀರಿದ ತಿರುವುಗಳು, ಆ ತಿರುವುಗಳಿಂದ ಕೆಲವೊಮ್ಮೆ ಸೃಷ್ಠಿಯಾಗುವ ಹೊಸ ದಾರಿಗಳು, ಆ ದಾರಿಗಳು ಆಗಾಗ್ಗೆ ಮುಚ್ಚಿಹೋದಂತಹ ಅನುಭವಗಳು, ಈ ಎಲ್ಲ ಏರಿಳಿತಗಳ ದಾಟಿ ಎಲ್ಲವು , ಎಲ್ಲರು ಬಂದು ಸೇರುವ ಗಮ್ಯಸ್ಥಾನ ಯಾವುದು…? ಎಂದು ಹೇಳುವ ಹಾಸ್ಯ ಪ್ರಧಾನ ಸಾಮಾಜಿಕ ಕಥೆಯೆ !!...ನಮೋ ವೆಂಕಟೇಶ…!!
Kannada Cinema's Latest Wallpapers
Kannada Cinema's Latest Videos
Kannada Movie/Cinema News - ರೊಮ್ಯಾಂಟಿಕ್ ಕಾಮಿಡಿ ಸಿನಿಮಾ `ನಮೋ ವೆಂಕಟೇಶ` ಶೀಘ್ರದಲ್ಲೇ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.