ಅಗಾಧ ದುಷ್ಟಶಕ್ತಿಯನ್ನು ಹೊಂದಿದ್ದ ವಿಲನ್ ಎದುರಿದ್ದವರ ಮೈಂಡ್ ಕಂಟ್ರೋಲ್ ಮಾಡಿದರೆ ಏನಾಗಬಹುದು ?, ಅದು ಸಾಮಾನ್ಯ ಜನರ ಮೇಲೆ ಏನೆಲ್ಲ ಪರಿಣಾಮ ಬೀರುತ್ತದೆ, ಹಿಪ್ನಟೈಸ್ ಮಾಡಿ ನಾಯಕಿಯನ್ನೂ ಸಹ ಆ ವಿಲನ್ ತನ್ನ ವಶಕ್ಕೆ ತೆಗೆದುಕೊಂಡಿರುತ್ತಾನೆ. ಅಂಥಾ ಅಗಾಧ ಪವರ್ ಇರೋ ವಿಲನ್ ಎದುರಿಸುವ ಶಕ್ತಿ ಚಿತ್ರದ ನಾಯಕನಿಗೆ ಮಾತ್ರ ಇರುತ್ತದೆ. ಇಂಥ ಸಂದರ್ಭದಲ್ಲಿ ನಾಯಕ ಹೇಗೆ ಆ ದುಷ್ಟನನ್ನು ಎದುರಿಸಿ, ಆತನ ವಶದಲ್ಲಿದ್ದ ತನ್ನ ಪ್ರೇಮಿಯನ್ನು ಬಿಡಿಸಿಕೊಂಡು ಬರುತ್ತಾನೆ
ಪ್ರೀತಿಯ ಶಕ್ತಿ, ದುಷ್ಟ ಶಕ್ತಿ ಈ ಎರಡರಲ್ಲಿ ಯಾವುದಕ್ಕೆ ಜಯ ಲಭಿಸುತ್ತದೆ ಎನ್ನುವ ಕಾನ್ಸೆಪ್ಟ್ ಇಟ್ಟುಕೊಂಡು ತಯಾರಾದ ಚಿತ್ರವೇ ಬ್ಲಡಿಬಾಬು. ವಿಲ್ ಪವರ್, ಮೈಂಡ್ ಕಂಟ್ರೋಲ್ ಪವರ್, ಲವ್ ಪವರ್ ಈ ಮೂರರ ನಡುವಿನ ಸಂಘರ್ಷದ ಕಥೆಯನ್ನಿಟ್ಟುಕೊಂಡು ನಿರ್ದೇಶಕ ರಾಜೇಶ್ ಮೂರ್ತಿ ಅವರು ಬ್ಲಡಿ ಬಾಬು ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಅಗಾಧ ಪವರ್ ಇರುವ ಖಳನಾಯಕನನ್ನು ಎದುರಿಸಿ ಹೀರೋ ಹೇಗೆ ಜಯ ಗಳಿಸುತ್ತಾನೆ ಅನ್ನೋದನ್ನು ಬ್ಲಡಿ ಬಾಬು ಚಿತ್ರದಲ್ಲಿ ಅದ್ಭುತವಾಗಿ ದೃಶ್ಯೀಕರಿಸಲಾಗಿದೆ.
ವಿಭಿನ್ನ ಶೈಲಿಯ ಚಿತ್ರಗಳನ್ನು ನಿರ್ದೇಶಿಸಿ ಗುರುತಿಸಿಕೊಂಡಿರುವ ರಾಜೇಶ್ ಮೂರ್ತಿ, ಈ ಚಿತ್ರದಲ್ಲಿ ತಮ್ಮ ಪುತ್ರ ಯಶಸ್ವಾ ರನ್ನು ಎರಡನೇ ಬಾರಿಗೆ ನಾಯಕನನ್ನಾಗಿ ಪರಿಚಯಿಸಿದ್ದಾರೆ. ಸದ್ಯ ಬ್ಲಡಿ ಬಾಬು ಸೆನ್ಸಾರ್ ಮನೆಗೆ ಹೋಗಲು ಸಿದ್ದವಾಗಿದ್ದು, ಜೂನ್ ನಲ್ಲಿ ತೆರೆಗೆ ಬರಲಿದೆ.
ಈ ಚಿತ್ರದ ಮೂಲಕ ಹಿರಿಯ ಛಾಯಾಗ್ರಾಹಕ, ನಿರ್ಮಾಪಕ, ನಿರ್ದೇಶಕ ಹಾಗೂ ನಿರ್ಮಾಪಕರ ಸಂಘದ ಪ್ರಥಮ ಅಧ್ಯಕ್ಷರೂ ಆಗಿದ್ದ ಹೆಚ್.ಎಂ.ಕೆ. ಮೂರ್ತಿ ಅವರ ಮೊಮ್ಮಗ ಯಶಸ್ವಾ ಎರಡನೇ ಬಾರಿಗೆ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಈ ಚಿತ್ರಕ್ಕೆ ತಂದೆ ರಾಜೇಶ್ ಮೂರ್ತಿ ಅವರೇ ಆಕ್ಷನ್ ಕಟ್ ಹೇಳಿದ್ದಾರೆ. ಏಂಜಲ್ ಡ್ರೀಮ್ಸ್ ಎಂಟರ್ ಟೈನ್ ಮೆಂಟ್ಸ್ ಮೂಲಕ ಡೋಮ್ನಿಕ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಸೈಕಲಾಜಿಕಲ್, ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಬ್ಲಡಿ ಬಾಬು ಚಿತ್ರಕ್ಕೆ ಬೆಂಗಳೂರು, ನಂದಿ ಹಿಲ್ಸ್ ಹಾಗೂ ಚಿಕ್ಕಮಗಳೂರು ಸುತ್ತಮುತ್ತ 25ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಿಸಲಾಗಿದೆ. ನವನಟಿ ಸ್ಮಿತಾ ಈ ಚಿತ್ರದ ನಾಯಕಿಯಾಗಿದ್ದು, ಬಾಲಿವುಡ್ ಖಳನಟ ದಿಲೀಪ್ ಕುಮಾರ್ ಈ ಚಿತ್ರದ ವಿಲನ್ ಪಾತ್ರ ನಿರ್ವಹಿಸಿದ್ದಾರೆ. ನಟ, ರಾಜಕಾರಣಿ ನೆ.ಲ.ನರೇಂದ್ರ ಬಾಬು ಅವರು ಚಿತ್ರದಲ್ಲಿ ನಾಯಕಿಯ ತಂದೆಯ ಪಾತ್ರ ನಿರ್ವಹಿಸಿದ್ದಾರೆ. ಹಿಪ್ನಟೈಸ್ ಮೂಲಕ ಎಲ್ಲರನ್ನು ತನ್ನ ಕೈವಶ ಮಾಡಿಕೊಳ್ಳುತ್ತಿದ್ದ ಖಳನಾಯಕನನ್ನು ತನ್ನ ಬುದ್ದಿ ಮತ್ತು ಶಕ್ತಿಯಿಂದಲೇ ನಾಯಕ ಮಣಿಸುತ್ತಾನೆ.
ಯಶಸ್ವಾ ಈಗಾಗಲೇ ಒಂದೆರಡು ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಕನ್ನಡಿಗರಿಗೆ ಪರಿಚಿತರಾಗಿದ್ದಾರೆ.
ಈ ಹಿಂದೆ ಲಿಪ್ ಸ್ಟಿಕ್ ಮರ್ಡರ್, ಜೋಕರ್ ಜೋಕರ್, ಸೈಕೋಮ್ಯಾಕ್ಸ್ ನಂಥ ಕ್ರೈಂ, ಥ್ರಿಲ್ಲರ್ ಚಿತ್ರಗಳನ್ನೇ ಮಾಡಿಕೊಂಡು ಬಂದಿದ್ದ ರಾಜೇಶ್ ಮೂರ್ತಿ ಅವರು ಮತ್ತೊಮ್ಮೆ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಕೈ ಹಾಕಿದ್ದಾರೆ. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿ ಸಂಕಲನದ ಕೆಲಸವನ್ನೂ ನಿರ್ವಹಿಸಿದ್ದಾರೆ. ವಿಭಿನ್ನ ಶೈಲಿಯ 4 ಸಾಹಸ ದೃಶ್ಯಗಳು ಚಿತ್ರದಕ್ಲಿವೆ.
ಜತೆಗೆ ಈ ಚಿತ್ರದಲ್ಲಿ 3 ಹಾಡುಗಳಿದ್ದು ನಿತೀಶ್ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿನೋದ್ ಆರ್.ಅವರು ಛಾಯಾಗ್ರಹಣ ಕಾರ್ಯ ನಿರ್ವಹಿಸಿದ್ದಾರೆ.