ಪ್ರತಿಯೊಂದು ಜೀವರಾಶಿಗೂ ಅದರದೇ ಆದ ಆಹಾರ ಕ್ರಮವಿದೆ. ಕಪ್ಪೆಯನ್ನು ತಿಂದರೆ, ಹಾವನ್ನು ತಿಂದು ನವಿಲು, ನವಿಲನ್ನು ತಿಂದು ಹದ್ದು ಜೀವಿಸುತ್ತದೆ, ಹೀಗೇ ಅರಣ್ಯದಲ್ಲಿ ಬದುಕುವ ಬಹುತೇಕ ವನ್ಯಜೀವಿಗಳು ಮತ್ತೊಂದು ಜೀವಿಯನ್ನು ಅವಲಂಬಿಸಿರುತ್ತವೆ, ಪ್ರಕೃತಿಯಲ್ಲಿರುವ ಪ್ರಾಣಿ, ಪಕ್ಷಿಗಳು ಅಲ್ಲದೆ ಮನುಷ್ಯ ಕೂಡ ಅದಕ್ಕೆ ಹೊರತಾಗಿಲ್ಲ, ಇದೇ ಅಂಶವನ್ನಿಟ್ಟುಕೊಂಡು ನಿರ್ದೇಶಕ ರಕ್ಷಿತ್ ತೀರ್ಥಳ್ಳಿ ಅವರು ತಿಮ್ಮನ ಮೊಟ್ಟೆಗಳು ಎಂಬ ಸುಂದರ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ, ತಂದೆ, ತಾಯಿಗೆ ಮಕ್ಕಳು ಎಷ್ಟು ಮುಖ್ಯವೋ, ಹಾಗೇ ಪ್ರಾಣಿ, ಪಕ್ಷಿಗಳಿಗೆ ಕೂಡ ತನ್ನ ಮೊಟ್ಟೆ ಹಾಗೂ ಮರಿಗಳು ಬಹುಮುಖ್ಯ. ಹೆಬ್ಬಾವು, ಅದರ ಮೊಟ್ಟೆಗಳು ಹಾಗೂ ಕಾಡಿನ ಮುಗ್ಧ ತಿಮ್ಮ ಹಾಗೂ ಆತನ ಕುಟುಂಬವನ್ನು ದೃಷ್ಟಾಂತವಾಗಿಟ್ಟುಕೊಂಡು ನಿರ್ದೇಶಕರು `ತಿಮ್ಮನ ಮೊಟ್ಟೆಗಳು` ಚಿತ್ರವನ್ನು ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ.
ಪ್ರಕೃತಿಯ ನಿಯಮಕ್ಕೆ ತದ್ವಿರುದ್ಧವಾಗಿ ನಾವು ಯಾವತ್ತೂ ಹೋಗಬಾರದು ಎಂದು ಈ ಚಿತ್ರದ ಮೂಲಕ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಾವುಗಳ ಸಂತತಿ ಕಡಿಮೆಯಾಗುತ್ತಿದೆ, ಹಾವುಗಳು ಒಮ್ಮೆಗೆ ಹತ್ತಾರು ಮೊಟ್ಟೆಗಳನ್ನಿಟ್ಟರೂ ಅವು ಬೇರೆ ಪ್ರಾಣಿಗಳಿಗೆ ಆಹಾರವಾಗಿ ಒಂದೆರಡು ಮಾತ್ರವೇ ಕೊನೆಗುಳಿಯುತ್ತವೆ, ಹಾಗಾಗಿ ಹಾವುಗಳ ಮೊಟ್ಟೆಗಳನ್ನು ಸಂರಕ್ಷಿಸಿ ಅವುಗಳ ಸಂತತಿಯನ್ನು ಅಭಿವೃದ್ದಿಪಡಿಸಬೇಕೆಂದು ಸುಚೇಂದ್ರ ಪ್ರಸಾದ್ ನೇತೃತ್ವದ ಸಂಶೋಧಕರ ತಂಡವೊಂದು ಮಲೆನಾಡಿನ ಅರಣ್ಯ ಪ್ರದೇಶದಲ್ಲಿ ಪ್ರಯತ್ನಿಸುತ್ತದೆ. ಆ ಕಾಡಲ್ಲೇ ಹುಟ್ಟಿಬೆಳೆದ, ಅಡಿಕೆ ಮರಗಳಿಗೆ ಔಷಧಿ ಸಿಂಪಡಿಸುವ ಕಾಯಕ ಮಾಡಿಕೊಂಡಿದ್ದ ತಿಮ್ಮ(ಕೇಶವ ಗುತ್ತಳಿಕೆ) ಇವರ ಪ್ರಯತ್ನಕ್ಕೆ ಸಾಥ್ ಕೊಡುತ್ತಾನೆ. ಆ ಕಾಡಿನ ಪ್ರತಿಯೊಂದು ಜಾಗವೂ ತಿಮ್ಮನಿಗೆ ಗೊತ್ತು. ಕಾಡಲ್ಲಿ ಹೆಬ್ಬಾವುಗಳು ಯಾವ ಯಾವ ಜಾಗದಲ್ಲಿ ಮೊಟ್ಟೆಗಳನ್ನಿಡುತ್ತವೆ ಎಂಬುದನ್ನೂ ಆತ ಬಲ್ಲ. ಹಾವಿನ ಮೊಟ್ಟೆಗಳನ್ನು ಹುಡುಕುವ ಕೆಲಸಕ್ಕೆ ಆ ತಂಡ ತಿಮ್ಮನನ್ನು ಉಪಯೋಗಿಸಿಕೊಳ್ಳುತ್ತದೆ. ಆದರೆ ಆ ಊರ ಹಿರಿಯ ಮುಖಂಡ ವೆಂಕಟಯ್ಯ(ಶೃಂಗೇರಿ ರಾಮಣ್ಣ)ನಿಗೆ ಅದು ಇಷ್ಟವಿರಲ್ಲ, ಇವರು ಪ್ರಕೃತಿಯ ಸಮತೋಲನವನ್ನು ಹಾಳು ಮಾಡುತ್ತಾರೆಂದು ವೆಂಕಯ್ಯ ಅವರಿಗೆ ವಿರೋಧ ವ್ಯಕ್ತಪಡಿಸುತ್ತಾನೆ.
ಆದರೆ ಬಡವನಾದ ತಿಮ್ಮನಿಗೆ ತನ್ನ ಗುಡಿಸಲನ್ನು ಕೆಡವಿ ಸೂರು ಕಟ್ಟಿಕೊಳ್ಳಲು ಹಣದ ಅವಶ್ಯಕತೆಯಿರುತ್ತದೆ, ಹಣದ ಆಸೆಯಿಂದ ತಿಮ್ಮ ಹಾವಿರುವ ಜಾಗ, ಮೊಟ್ಟೆಗಳನ್ನು ಹುಡುಕಿಕೊಡುವ ಕೆಲಸ ಒಪ್ಪಿಕೊಳ್ಳುತ್ತಾನೆ, ಹೀಗೆ ಸಾಗುವ ಕಥೆಯಲ್ಲಿ ಕೊನೆಗೂ ತಿಮ್ಮ ಹೆಬ್ಬಾವು, ಅದು ಮೊಟ್ಟೆಗಳನ್ನಿಟ್ಟ ಜಾಗವನ್ನು ತೋರಿಸಿದನೇ ಇಲ್ಲವೇ ಎನ್ನುವುದೇ ಕುತೂಹಲ. ಮಲೆನಾಡಿನ ಅರಣ್ಯ, ಪ್ರಕೃತಿಯ ಸೊಗಬು, ಕಾಡಲ್ಲೇ ವಾಸಿಸುವ ಜನರ ಜೀವನ ಶೈಲಿ ಇದನ್ನೆಲ್ಲ ಕಣ್ಣಿಗೆ ಕಟ್ಟುವ ಹಾಗೆ ನಿರ್ದೇಶಕರು ತೆರೆಮೇಲೆ ತಂದಿದ್ದಾರೆ, ಅವರೇ ಬರೆದ ಕಾಡಿನ ನೆಂಟರು ಕಥಾ ಸಂಕಲನದಿಂದ ಆಯ್ದ ಒಂದು ಕಥೆಯನ್ನಿಲ್ಲಿ ಚಲನಚಿತ್ರವಾಗಿಸಿದ್ದಾರೆ. ಅವರು ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಬಹಳ ಅರ್ಥಪೂರ್ಣವಾಗಿದೆ.
ಮನುಷ್ಯ ಪ್ರಕೃತಿಗೆ ವಿರುದ್ಧವಾಗಿ ಹೋಗಬಾರದು ಎನ್ನುವ ಸಾಮಾಜಿಕ ಕಳಕಳಿ ಚಿತ್ರದಲ್ಲಿದೆ.
ಇಂತಹ ಕಲಾತ್ಮಕ ಚಿತ್ರಗಳಿಗೆ ಬಂಡವಾಳ ಹಾಕಿರುವ ನಿರ್ಮಾಪಕರ ಯೋಚನಾಲಹರಿ ಮೆಚ್ಚುವಂತದ್ದು , ಇಡೀ ಚಿತ್ರದ ಹೈಲೈಟ್ ಅಂದರೆ ಛಾಯಾಗ್ರಾಹಕರ ಕೈಚಳಕ. ಮಲನಾಡನ್ನು ಅದ್ಭುತವಾಗಿ ತೋರಿಸಿದ್ದಾರೆ. ಅದೇ ರೀತಿ ಸಂಗೀತ , ಸಂಕಲನ ಕೂಡ ಚಿತ್ರದ ಓಟಕ್ಕೆ ಸಾಥ್ ನೀಡಿದೆ. ತಿಮ್ಮನ ಪಾತ್ರ ಮಾಡಿರುವ ಕೇಶವ್ ಗುತ್ತಳಿಕೆ ಇಡೀ ಚಿತ್ರದ ಕೇಂದ್ರ ಬಿಂದುವಾಗಿ ಗಮನ ಸೆಳೆಯುತ್ತಾರೆ. ಆತನ ಪತ್ನಿ ಲಕ್ಷ್ಮಿ ಪಾತ್ರಕ್ಕೆ ಪ್ರಗತಿ ಪ್ರಭು ಜೀವ ತುಂಬಿದ್ದಾರೆ.