ಚಿತ್ರ : "X&Y"
ನಿರ್ದೇಶಕ : ಡಿ. ಸತ್ಯಪ್ರಕಾಶ್
ನಿರ್ಮಾಣ : ಸತ್ಯ ಪಿಕ್ಚರ್ಸ್
ಸಂಗೀತ : ಕೌಶಿಕ್ ಹರ್ಷ
ಛಾಯಾಗ್ರಹಣ : ಲವಿತ್
ತಾರಾಗಣ : ಡಿ.ಸತ್ಯಪ್ರಕಾಶ್ , ಬೃಂದಾ ಆಚಾರ್ಯ, ಅಯಾನ , ಅಥರ್ವ ಪ್ರಕಾಶ್, ದೊಡ್ಡಣ್ಣ , ವೀಣಾ ಸುಂದರ್, ಸುಂದರ್ ವೀಣಾ, ಹರಿಣಿ, ಧರ್ಮಣ್ಣ ಕಡೂರು ಹಾಗೂ ಇತರರು...
ಹುಟ್ಟು ಯಾವಾಗ ಆಗುತ್ತೆ, ಸಾವು ಯಾವಾಗ ಆಗುತ್ತೆ ಎಂದು ಯಾರಿಂದಲೂ ನಿರ್ಧರಿಸಲು ಸಾಧ್ಯವಿಲ್ಲ. ಹುಟ್ಟನ್ನು ವೈಜ್ಞಾನಿಕವಾಗಿ ಹೇಳೋದಾದರೆ, ಕ್ರೋಮೋಸೋಮ್ ಜೀವಿಗಳ ಒಂದು ಭಾಗ. ಗಂಡು-ಹೆಣ್ಣು ಸೇರಿದಾಗ, ಹೆಣ್ಣಿನ ಗರ್ಭಕೋಶದಲ್ಲಿ xy ಕ್ರೋಮೋಜೋಮ್ ಸಂಗಮ ವಾದಾಗ ಗಂಡು ಮಗು, xx ಸೇರಿದಾಗ ಹೆಣ್ಣು ಮಗು ಜನಿಸುತ್ತದೆ. ಇದರ ಸುತ್ತ ಭೂಮಿಗೆ ಬರುವ ಜೀವವೊದು ತನ್ನ ತಂದೆ ತಾಯಿ ಯಾರೆಂದು ತಿಳಿಯುವ ಆತುರದಲ್ಲಿ ಎದುರಿಸುವ ಬದುಕಿನ ಸತ್ಯದ ದರ್ಶನ ಹೂವಾಗಬೇಕಾ... ಮುಳ್ಳಾಗಬೇಕಾ... ಎಂಬ ವಿಚಾರವನ್ನು ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನವೇ X & Y.
ತುರ್ತು ಪರಿಸ್ಥಿತಿಯಲ್ಲಿದ್ದವರಿಗೆ ಸಹಾಯ ಮಾಡುವ ಆಟೋ ಆಂಬುಲೆನ್ಸ್ ಚಾಲಕ ಕ್ರೀಡೆ (ಸತ್ಯಪ್ರಕಾಶ್). ಆತನ ಅಕ್ಕ(ಹರಿಣಿ) ಭಾವ (ಸುಂದರ್ ವೀಣಾ)ನಿಗೆ ಕ್ರೀಡೆಗೆ ತಕ್ಕ ಹುಡುಗಿಯನ್ನು ಹುಡುಕುವುದೇ ಹರಸಾಹಸ. ಭಾವನ ಜೊತೆ ಹಾಸ್ಪಿಟಲ್ ನಲ್ಲಿ ಕೆಲಸ ಮಾಡುವ ಕ್ರೀಡೆಗೆ ಪ್ರತಿ ರೋಗಿಗೂ ತನ್ನ ಕೈಲಾದ ಸಹಾಯ ಮಾಡುತ್ತಾನೆ. ಆ ಹಾದಿಯಲ್ಲಿ ಆಶಾ ಎಂಬ ಹುಡುಗಿಯ ಕೊನೆಯ ದಿನಗಳ ಬದುಕಿನಲ್ಲೂ ಧೈರ್ಯ ತುಂಬುತ್ತಾನೆ. ಈ ನಡುವೆ ಮಾವನ ಒತ್ತಾಯಕ್ಕೆ ಮಣಿದು, ಮಗಳನ್ನು ಮದುವೆಯಾಗಲು ಮುಂದಾಗುವ ಕ್ರೀಡೆಗೆ, ತನ್ನತ್ತೆಯ ಮಗಳು ಬೇರೊಬ್ಬನನ್ನು ಪ್ರೀತಿಸುತ್ತಿರುವ ವಿಚಾರ ತಲೆ ನೋವಾಗುತ್ತದೆ. ಇದರ ನಡುವೆ ಮನೆಯ ಹಿರಿಯ ಜೀವ ತಾತ (ದೊಡ್ಡಣ್ಣ) ತಾಯಿ (ವೀಣಾ ಸುಂದರ್) ಒತ್ತಾಯಕ್ಕೆ ಮಣಿದು ಮದುವೆಗೆ ಮುಂದಾಗುವ ಕೃಪಾ (ಬೃಂದಾ ಆಚಾರ್ಯ) ಬದುಕಲ್ಲಿ ಹೊಸ ಹಾದಿ ತೆರೆಯುತ್ತದೆ. ಇದೇ ಸಮಯದಲ್ಲು ಕ್ರೀಡೆ ಹಾಗೂ ಕೃಪಾ ಭೇಟಿಯಾಗುವ ಸಂದರ್ಭ ಎದುರಾಗಿ ಮತ್ತೊಂದು ಪಯಣ ಶುರುವಾಗುತ್ತದೆ. ಇದೆಲ್ಲದಕ್ಕೂ ಒಬ್ಬ ಬುದ್ಧಿಮಾಂದ್ಯ ವ್ಯಕ್ತಿ (ಅಥರ್ವ ಪ್ರಕಾಶ್) ಕಾರಣನಾಗುತ್ತಾನೆ. ಅಪ್ಪ ಅಮ್ಮ ಎನ್ನುತ್ತಾ ಕ್ರೀಡೆ ಹಾಗೂ ಕೃಪ ಸುತ್ತಾ ಸಾಗುತ್ತಾನೆ. ಅವನ ಹಿನ್ನೆಲೆ ಏನು... ಯಾಕೆ ಇವರಿಬ್ಬರನ್ನ ಅಪ್ಪ-ಅಮ್ಮ ಎನ್ನುತ್ತಾನೆ. ಬದುಕಿನಲ್ಲಿ ಹೂವಾಗಬೇಕಾ... ಮುಳ್ಳಾಗಬೇಕಾ... XY ಅಂದರೇನು? ಇದೆಲ್ಲದಕ್ಕೂ ಉತ್ತರ X & Y ಚಿತ್ರದಲ್ಲಿ ಸಿಗಲಿದೆ.
ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಅದ್ಬುತವಾಗಿದೆ. ಪ್ರಸ್ತುತ ಕಾಲಘಟ್ಟಕ್ಕೆ ಎಲ್ಲರಿಗೂ ಇಷ್ಟವಾಗುವಂಥ ಅಂಶವನ್ನ ಮನರಂಜನಾತ್ಮಕವಾಗಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಜೀವ ಹಾಗೂ ಜೀವನದ ಮೌಲ್ಯದ ಬಗ್ಗೆ ಅರಿವು ಎಷ್ಟು ಮುಖ್ಯ ಎಂಬ ಸೂಕ್ಷ್ಮವನ್ನು ಮನಮುಟ್ಟುವ ಹಾಗೆ ಹೇಳಿದ್ದಾರೆ. ಚಿತ್ರದ ಸೆಕೆಂಡ್ ಹಾಫ್ ಹೆಚ್ಚು ಗಮನ ಸೆಳೆಯುತ್ತದೆ. ಈ ಚಿತ್ರದಲ್ಲಿ
ಸತ್ಯಪ್ರಕಾಶ್ ಉತ್ತಮ ನಟನೆಯ ಮೂಲಕ ಗಮನ ಸೆಳೆದಿದ್ದಾರೆ. ಈ ಹಿಂದೆ ಬರುತ್ತಿದ್ದ ಕಾಶೀನಾಥ್ ಚಿತ್ರಗಳನ್ನು ಈ ಚಿತ್ರ ನೆನಪಿಸುತ್ತದೆ. ಚಿತ್ರದಕ್ಲಿ ಛಾಯಾಗ್ರಾಹಕರ ಕೈಚಳಕ, ಸಂಗೀತದ ಮೋಡಿ, ಗ್ರಾಫಿಕ್ ಕೆಲಸ , ಎಟಿಟಿಂಗ್, ಆಟೋ ಡಿಸೈನ್ ಹಾಗೂ ಆರ್ಟ್ ವರ್ಕ್ ಸೇರಿದಂತೆ ತಾಂತ್ರಿಕವಾಗಿ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ.
ಕ್ರೀಡೆಯ ಪಾತ್ರದಲ್ಲಿ ಸತ್ಯಪ್ರಕಾಶ್ ನೈಜ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ. ಬುದ್ಧಿಮಾಂದ್ಯನಾಗಿ ಅಥರ್ವ ಪ್ರಕಾಶ್ ಅದ್ಭುತ ಅಭಿನಯ ನೀಡಿ, ಪಾತ್ರದಲ್ಲಿ ಜೀವಿಸಿದ್ದಾರೆ. ತೆರೆಮೇಲೆ ಮುದ್ದಾಗಿ ಕಾಣಿಸುವ ಬೃಂದಾ ಆಚಾರ್ಯ ಸಿಕ್ಕ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ.
ಉಳಿದಂತೆ ನಟಿ ಆಯಾನ , ಸುಂದರ್ ವೀಣಾ , ಹರಿಣಿ ಶ್ರೀಕಾಂತ್ , ದೊಡ್ಡಣ್ಣ , ವೀಣಾ ಸುಂದರ್ , ಧರ್ಮ ಕಡೂರ್ ಸೇರಿದಂತೆ ಎಲ್ಲಾ ಕಲಾವಿದರು ಚಿತ್ರದ ಓಟಕ್ಕೆ ಸಾಥ್ ನೀಡಿದ್ದಾರೆ. ಒಟ್ಟರೆ ಎಲ್ಲರೂ ನೋಡುವಂತಹ ಚಿತ್ರ ಇದಾಗಿದ್ದು , ಚಿತ್ರದ ಆರಂಭ ಹಾಗೂ ಅಂತ್ಯದ ಸನ್ನಿವೇಶಗಳನ್ನು ಮಿಸ್ ಮಾಡ್ಕೋಬೇಡಿ.