ಕಳೆದ ವರ್ಷ ತೆರೆಕಂಡಿದ್ದ ಕನ್ನಡದ ಲೀಗಲ್-ಥ್ರಿಲ್ಲರ್ ಶೈಲಿಯ `ದಿ ಜಡ್ಜ್ ಮೆಂಟ್` ಸಿನಿಮಾಕ್ಕೆ ಥಿಯೇಟರಿನಲ್ಲಿ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. `ದಿ ಜಡ್ಜ್ ಮೆಂಟ್` ಸಿನಿಮಾವನ್ನು ನೋಡಿದ್ದ ಅನೇಕರು ಕನ್ನಡದಲ್ಲಿ ಇದೊಂದು ವಿಭಿನ್ನ ಪ್ರಯತ್ನ ಎಂದು ಚಿತ್ರತಂಡದ ಪರಿಶ್ರಮಕ್ಕೆ ಬೆನ್ನು ತಟ್ಟಿದ್ದರು. ಥಿಯೇಟರಿನಲ್ಲಿ ಉತ್ತಮ ಪ್ರದರ್ಶನ ಕಂಡು, ಗಲ್ಲಾ ಪೆಟ್ಟಿಗೆಯಲ್ಲೂ ಗೆಲುವಿನ ನಗು ಬೀರಿದ್ದ `ದಿ ಜಡ್ಜ್ ಮೆಂಟ್` ಸಿನಿಮಾ, ಇದೀಗ ಕಿರುತೆರೆಗೂ ಎಂಟ್ರಿಯಾಗಿದೆ.
ಹೌದು, ‘ದಿ ಜಡ್ಜ್ ಮೆಂಟ್’ ಸಿನಿಮಾದ ಓಟಿಟಿ ಹಕ್ಕುಗಳು ‘ಅಮೇಜಾನ್ ಪ್ರೈಮ್’ ಪಾಲಾಗಿದ್ದು, ಇದೇ ಜುಲೈ 25 ರಿಂದ ‘ದಿ ಜಡ್ಜ್ ಮೆಂಟ್’ ಸಿನಿಮಾ ‘ಅಮೇಜಾನ್ ಪ್ರೈಮ್’ ಮತ್ತು ‘ಬುಕ್ ಮೈ ಶೋ’ ಪ್ಲಾಟ್ ಫಾರ್ಮ್ ಗಳಲ್ಲಿ ಏಕಕಾಲಕ್ಕೆ ಪ್ರದರ್ಶನವಾಗುತ್ತಿದೆ. ಥಿಯೇಟರಿನಲ್ಲಿ ‘ದಿ ಜಡ್ಜ್ ಮೆಂಟ್’ ಸಿನಿಮಾವನ್ನು ನೋಡಲು ಮಿಸ್ ಮಾಡಿಕೊಂಡ ಪ್ರೇಕ್ಷಕರು ಇದೀಗ ಓಟಿಟಿ ವೇದಿಕೆಯಲ್ಲಿ ಈ ಲೀಗಲ್ ಥ್ರಿಲ್ಲರ್ ಡ್ರಾಮಾವನ್ನು ಕಣ್ತುಂಬಿಕೊಳ್ಳಬಹುದು.
ಇನ್ನು ಬಹು ವರ್ಷಗಳ ನಂತರ ನಟ ಕ್ರೇಜಿಸ್ಟಾರ್ ರವಿಚಂದ್ರನ್ `ದಿ ಜಡ್ಜ್ ಮೆಂಟ್` ಸಿನಿಮಾದಲ್ಲಿ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟ ದಿಗಂತ್, ನಟಿಯರಾದ ಮೇಘನಾ ಗಾಂವ್ಕರ್, ಧನ್ಯಾ ರಾಮಕುಮಾರ್, ಪ್ರಕಾಶ್ ಬೆಳವಾಡಿ, ಲಕ್ಷ್ಮೀ ಗೋಪಾಲಸ್ವಾಮಿ, ಬಾಲಾಜಿ ಮನೋಹರ್ ಹೀಗೆ ಬೃಹತ್ ಕಲಾವಿದರ ತಾರಾಬಳಗವೇ `ದಿ ಜಡ್ಜ್ ಮೆಂಟ್` ಸಿನಿಮಾದಲ್ಲಿದೆ. ಒಂದು ಕೊಲೆಯ ಸುತ್ತ ನಡೆಯುವ ನಿಗೂಢ ಕೌತುಕ ಮತ್ತು ರಹಸ್ಯ ಸಂಗತಿಗಳ ಸುತ್ತ ನಡೆಯುವ `ದಿ ಜಡ್ಜ್ ಮೆಂಟ್` ಸಿನಿಮಾಕ್ಕೆ ಗುರುರಾಜ ಕುಲಕರ್ಣಿ (ನಾಡಗೌಡ) ನಿರ್ದೇಶನ ಮಾಡಿದ್ದಾರೆ.
`ಜಿ9 ಕಮ್ಯುನಿಕೇಶನ್ ಅಂಡ್ ಮೀಡಿಯಾ` ಬ್ಯಾನರಿನಲ್ಲಿ ಶರದ ನಾಡಗೌಡ, ವಿಶ್ವನಾಥ್ ಗುಪ್ತ, ರಾಮು ರಾಯಚೂರ, ಪ್ರತಿಮಾ ಬಿರಾದಾರ್ ಜಂಟಿಯಾಗಿ `ದಿ ಜಡ್ಜ್ ಮೆಂಟ್` ಸಿನಿಮಾವನ್ನು ನಿರ್ಮಿಸಿ ತೆರೆಗೆ ತಂದಿದ್ದಾರೆ.