`ಕೊತ್ತಲವಾಡಿ` ಕಾವೇರಿ ತೀರದಲ್ಲಿರೋ ಒಂದು ಪುಟ್ಟ ಗ್ರಾಮ. ಅಲ್ಲಿನ ಜನರಲ್ಲಿ ಬಹುತೇಕರು ರೈತರು. ಮನೆ ಕಟ್ಟುವ ಕೆಲಸ ಸೇರಿದಂತೆ ಬೇರೆ ಕೆಲಸಗಳಿಗೆ ಕೂಲಿ ಆಳುಗಳನ್ನು ಕಳಿಸಿಕೊಡುವ ಮೇಸ್ತ್ರಿ ಮೋಹನ (ಪೃಥ್ವಿ ಅಂಬರ್). ಇನ್ನು ಅಜ್ಜಿಯ ಆಸರೆಯಲ್ಲಿ ಬೆಳೆದಿರೋ ಮಂಜಿ (ಕಾವ್ಯ ಶೈವ) ಅಂಗನವಾಡಿ ಟೀಚರ್ ಆಗಿ ಕೆಲಸ ಮಾಡುತ್ತ ಮೋಹನನ ಮೇಲೆ ಅಪಾರ ಪ್ರೀತಿ ಇಟ್ಕೊಂಡಿರುತ್ತಾಳೆ. ಶಾಲಾ ದಿನಗಳಿಂದಲೂ ಇವರ ನಡುವೆ ಪ್ರೀತಿ ಅರಳಿರುತ್ತದೆ. ಆ ಊರಿನಲ್ಲಿ ಗುಜರಿ ವ್ಯಾಪಾರ ಮಾಡುವ ಗುಜರಿ ಬಾಬಣ್ಣ (ಗೋಪಾಲಕೃಷ್ಣ ದೇಶಪಾಂಡೆ) ಊರ ಜನರ ಜತೆ ಉತ್ತಮ ಒಡನಾಟ ಇಟ್ಟುಕೊಂಡು ಅವರ ಪ್ರೀತಿ, ನಂಬಿಕೆ ಗಳಿಸಿಕೊಂಡಿರುತ್ತಾನೆ. ಅಲ್ಲಿನ ಜನ ಕಷ್ಟ ಕಾಲದಲ್ಲಿ ಲಗೋರಿ ಕುಮಾರನ ಬಳಿ ತಮ್ಮ ಜಮೀನು ಅಡವಿಟ್ಟು ಸಾಲ ಪಡೆದು, ನಂತರ ತಮ್ಮ ಜಮೀನು ಉಳಿಸಿಕೊಳ್ಳಲಾಗದೆ ಪರದಾಡುತ್ತಾರೆ. ಆಗ ಬಾಬಣ್ಣ ಅವರನ್ನಲ್ಲ ಒಟ್ಟುಗೂಡಿಸಿ ಈ ಊರು ನಮ್ಮದು, ಗಾಳಿ ನಮ್ಮದು, ನದಿ ನೀರು ನಮ್ಮದು, ನದಿತೀರದ ಮರಳು ನಮ್ಮದೇ ನಾವೆಲ್ಲ ಮರಳನ್ನ ಸಂಗ್ರಹಿಸಿ ಮಾರಿ ಹಣ ಸಂಪಾದಿಸಿ, ಜಮೀನು ಉಳಿಸಿಕೊಳ್ಳೋಣ ಎಂದು ಒಪ್ಪಿಸುತ್ತಾನೆ. ಮರಳು ಮಾರಾಟದಿಂದ ಊರ ಜನರ ಬದುಕು ಹಸನಾಗುತ್ತದೆ. ಬಾಬಣ್ಣನ ಕೈಗೆ ಹಣದ ಸುರಿಮಳೆಯಾಗುತ್ತದೆ. ಆತನ ಬೆಂಬಲಕ್ಕೆ ನಿಲ್ಲುವ ಮೋಹನನಿಗೂ ಇದರ ಪರಿಣಾಮ ಏನಾಗಬಹುದು ಎಂಬ ಅರಿವಿರಲ್ಲ.
ಪೊಲೀಸರು ನೀವು ಮಾಡ್ತಿರೋದು ಅಕ್ರಮ, ಕಾನೂನುಬಾಹಿರ ಎಂದು ಎಚ್ಚರಿಸಿದರೂ ಜನ ಮರಳುಗಾರಿಕೆ ನಿಲ್ಲಿಸಲ್ಲ. ಇದೇ ಸಮಯದಲ್ಲಿ ಆ ಭಾಗದ ಎಂಎಲ್‌ಎ ತಮ್ಮಣ್ಣ ನಿಧನರಾಗುತ್ತಾರೆ. ಇದೇ ಸಮಯ ಉಪಯೋಗಿಸಿಕೊಂಡ ಬಾಬಣ್ಣ ಅವರ ಪತ್ನಿ ಮಾಲಿನಿ (ಮನಸಿ ಸುಧೀರ್) ಬಳಿ ಹೋಗಿ ಶಾಸಕರು ನಮಗೆಲ್ಲ ದೇವರಥರ ಇದ್ದರು. ನಮ್ಮಲ್ಲಿ ಕಮಿಷನ್ ವ್ಯವಹಾರವಿತ್ತು ಎನ್ನುತ್ತಾ ಅವರಿಗೆ ಕೊಡಬೇಕಾದ ಕಮಿಷನ್ ಹಣ ಎಂದು 75ಲಕ್ಷ ನೀಡುತ್ತಾನೆ.
ಹೀಗೆ ಅವರ ನಂಬಿಕೆ, ವಿಶ್ವಾಸ ಗಳಿಸುವ ಬಾಬಣ್ಣ, ಮಾಲಿನಿ ಕೃಪೆಯಿಂದ ಬೈ ಎಲೆಕ್ಷನ್ ನಲ್ಲಿ ಸ್ಪರ್ಧಿಸಿ ಗೆದ್ದು ಎಂಎಲ್‌ಎ ಆಗುತ್ತಾನೆ. ಇವನ ಆಟ, ಪೊಲೀಸರಿಗೆ ದೊಡ್ಡ ತಲೆ ನೋವಾಗುತ್ತದೆ. ಎಸ್.ಪಿ. ಪರಶುರಾಮ್ (ರಾಜೇಶ್ ನಟರಂಗ) ಕಮಿಷನರ್ (ಅವಿನಾಶ್) ಮಾರ್ಗದರ್ಶನ ದಂತೆ ಈ ದಂಧೆ ಕೊರರನ್ನು ಮಟ್ಟ ಹಾಕಲು ಅಖಾಡಕ್ಕೆ ಎಂಟ್ರಿಯಾಗುತ್ತಾರೆ.
ಈನಡುವೆ ಮರಳು ತೆಗೆಯುವ ವಿಚಾರದಲ್ಲಿ ಪೊಲೀಸ್ ಹಾಗೂ ಮೋಹನ ನಡುವೆ ಮಾತಿನ ಚಿಕಮಕಿ ನಡೆಯುತ್ತದೆ. ಒಂದಷ್ಟು ಅಹಿತಕರ ಘಟನೆ ಸಂಭವಿಸುತ್ತದೆ.
ಮಹಾ ಚುನಾವಣೆಯಲ್ಲಿ ಮಾಲಿನಿ ತಮಣ್ಣ ತಾವೇ ಸ್ಪರ್ಧಿಸಿ ಗೆಲ್ಲುತ್ತಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಾಬಣ್ಣ ಹೀನಾಯ ಸೋಲು ಕಾಣುತ್ತಾರೆ. ಇಲ್ಲಿಂದ ಬಾಬಣ್ಣನ ಹೊಸ ಅವತಾರ ಶುರುವಾಗುತ್ತದೆ. ಅದು ಏನು... ಮರಳುಗಾರಿಕೆಯಿಂದ ಊರಿನ ಪರಿಸ್ಥಿತಿ ಏನಾಯ್ತು .... ಪ್ರೇಮಿಗಳ ಬದುಕು ಏನಾಯ್ತು ಇದಕ್ಕೆಲ್ಲ ಚಿತ್ರದ ಕ್ಲೈಮ್ಯಾಕ್ಸ್ ಉತ್ತರ ನೀಡುತ್ತದೆ.
ನಿರ್ದೇಶಕ ಶ್ರೀರಾಜ್ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಸೂಕ್ಷ್ಮ ವಿಚಾರವಾಗಿದ್ದು, ಮರಳು ದಂಧೆಯ ಸುತ್ತ ಜನರ ಬದುಕು. ಬವಣೆ, ರಾಜಕೀಯದ ಆಟ ಇದನ್ನೆಲ್ಲ ಸೂಕ್ಷ್ಮವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ.
ನಟ ಪೃಥ್ವಿ ಅಂಬಾರ್ ಮೇಸ್ತ್ರಿ ಮೋಹನನಾಗಿ ರಗಡ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆ್ಯಕ್ಷನ್ ದೃಶ್ಯಗಳು ಸೇರಿದಂತೆ ಹಾಡಿನಲ್ಲೂ ಅದ್ಭುತ ನಟನೆ ನೀಡಿದ್ದಾರೆ.
ಬಾಬಣ್ಣನಾಗಿ ಗೋಪಾಲಕೃಷ್ಣ ದೇಶಪಾಂಡೆ ಪರಕಾಯ ಪ್ರವೇಶ ಮಾಡಿದ್ದಾರೆ. ನಾಯಕಿ ಕಾವ್ಯ ಶೈವ ತನ್ನ ಕಣ್ಣಲೇ ಮೋಡಿ ಮಾಡುತ್ತಾರೆ.
ಶಾಸಕನ ಪತ್ನಿ ಮಾಲಿನಿಯಾಗಿ ಮಾನಸಿ ಸುಧೀರ್ ಗಮನ ಸೆಳೆಯುತ್ತಾರೆ. ರಾಜೇಶ್ ನಟರಂಗ ಕಟ್ಟುನಿಟ್ಟಿನ ಪೊಲೀಸ್ ಅಧಿಕಾರಿಯಾಗಿ ಉತ್ತಮ ಅಭಿನಯ ನೀಡಿದ್ದಾರೆ. ಅವಿನಾಶ್ ಕೂಡ ಹಿರಿಯ ಪೊಲೀಸ್ ಅಧಿಕಾರಿಯಾಗಿ ಗಮನ ಸೆಳೆಯುತ್ತಾರೆ.
ಹಳ್ಳಿ ಸೊಗಡಿನ ಸಂಭಾಷಣೆಗಳಿಗೆ ರಘು ನಿಡುವಳ್ಳಿ ಜೀವಂತಿಕೆ ತುಂಬಿದ್ದಾರೆ ವಿಕಾಸ್ ವಸಿಷ್ಠ ಅವರ ಸಂಗೀತದ ಹಾಡುಗಳು ಗಮನ ಸೆಳೆಯುತ್ತವೆ. ಛಾಯಾಗ್ರಹಣ. ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್.