Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಜಸ್ಟ್ ಮ್ಯಾರಿಡ್` ಮದುವೆ ಸಂಭ್ರಮದಲ್ಲಿ ತಲ್ಲಣದ ಛಾಯೆ !....ರೇಟಿಂಗ್ :- 3/5
Posted date: 23 Sat, Aug 2025 01:05:33 PM
ಚಿತ್ರ:                   ಜಸ್ಟ್ ಮ್ಯಾರಿಡ್
ನಿರ್ದೇಶಕಿ:           ಸಿ.ಆರ್. ಬಾಬಿ
ನಿರ್ಮಾಪಕರು:    ಸಿ.ಆರ್.ಬಾಬಿ ,ಅಜನೀಶ್ ಲೋಕನಾಥ್, 
ಛಾಯಾಗ್ರಹಣ :    ಪಾರ್ತಿಭನ್
ಸಂಗೀತ:               ಅಜನೀಶ್ ಬಿ.ಲೋಕನಾಥ್,
ತಾರಾಗಣ : ಶೈನ್ ಶೆಟ್ಟಿ , ಅಂಕಿತಾ ಅಮರ್, ದೇವರಾಜ್, ಶ್ರುತಿ ಕೃಷ್ಣ , ಅಚ್ಯುತ್ ಕುಮಾರ್, ಶ್ರೀಮಾನ್ , ಅನೂಪ್ ಭಂಡಾರಿ, ರವಿಶಂಕರ್ ಗೌಡ, ಶೃತಿ ಹರಿಹರನ್ ಹಾಗೂ  ಇತರರು...

 ದಶಕಗಳ ಇತಿಹಾಸ ಹೊಂದಿರುವ ತುಂಬಿದ ಸಂಸಾರದಲ್ಲಿ ಮೊಮ್ಮಗನ ಮದುವೆ ಮಾಡಲು ಹೊರಟಾಗ ನಡೆಯುವ ಘಟನೆಗಳನ್ನು ಪ್ರೇಕ್ಷಕರ ಮನ ಮುಟ್ಟುವಂತೆ ಹೇಳುವ ಪ್ರಯತ್ನದಲ್ಲಿ ಮೂಡಿಬಂದ ಚಿತ್ರ  ಜಸ್ಟ್ ಮ್ಯಾರಿಡ್. ಹಿರಿಯರು, ಕಿರಿಯರು, ಮಕ್ಕಳು, ಮೊಮ್ಮಕ್ಕಳ ಪ್ರೀತಿ ವಾತ್ಸಲ್ಯ, ಗೌರವಗಳ ನಡುವೆ ಸಮಾಜದಲ್ಲಿ ಉತ್ತಮ ಸ್ಥಾನಮಾನ ಹೊಂದಿದ  ನಿವಾಸದಲ್ಲಿ ಮೊಮ್ಮಗನ ಮದುವೆಯ ಸಂದರ್ಭದಲ್ಲಿ ಎದುರಾಗುವ ಒಂದಷ್ಟು ಘಟನೆಗಳ ಜತೆ ಕೌಟುಂಬಿಕ ಮೌಲ್ಯಗಳನ್ನು ಸೂಕ್ಷ್ಮವಾಗಿ ತೆರೆದಿಡುವ ಪ್ರಯತ್ನವನ್ನು  ನಿರ್ದೇಶಕಿ ಸಿ.ಆರ್.ಬಾಬಿ ಅವರು ಈ ಚಿತ್ರದಲ್ಲಿ ಮಾಡಿದ್ದಾರೆ.
 
ಮನೆಯ ಹಿರಿಯ ನಿವೃತ್ತ ಮುಖ್ಯ ನ್ಯಾಯಾಧೀಶ ಪೂರ್ಣಚಂದ್ರ (ದೇವರಾಜ್ ಶಿಸ್ತಿನ ವ್ಯಕ್ತಿ , ತನ್ನ  ಮೂವರು ಮಕ್ಕಳನ್ನು ಪ್ರೀತಿಯಿಂದ ಬೆಳೆಸಿರುತ್ತಾರೆ. ಒಬ್ಬ ಗೃಹಮಂತ್ರಿ(ಶ್ರೀಮಾನ್), ಮತ್ತೊಬ್ಬ ಡಾಕ್ಟರ್ (ಅನುಪ ಭಂಡಾರಿ) ಉಳಿದಂತೆ ಗಾಯಕ (ರವಿಶಂಕರ್ ಗೌಡ) ಅಗಿರುತ್ತಾನೆ. ತಂತಮ್ಮ ಕ್ಷೇತ್ರಗಳಲ್ಲಿ ಹೆಸರು ಮಾಡುತ್ತಾ , ಪತ್ನಿ, ಮಕ್ಕಳ ಜೊತೆ ಸುಖಸಂಸಾರ ನಡೆಸುತ್ತಿದ್ದರೂ ಒಬ್ಬೊಬ್ಬರದು ಒಂದೊಂದು ರೀತಿಯ ಬದುಕು. ಇದರ ನಡುವೆ ಮನೆಯ ಮುದ್ದಿನ ಮೊಮ್ಮಗ ಸೂರ್ಯ (ಶೈನ್ ಶೆಟ್ಟಿ) ಸದಾ ಜಾಲಿ ಮೂಡ್ ನಲ್ಲಿರುತ್ತಾನೆ. ಆ್ಯಡ್ ಫಿಲಂ ಮೇಕರ್ ಕೆಲಸ ಮಾಡುತ್ತಾ, ಕುಟುಂಬದ ಕಡೆಗೂ ಗಮನ ಹರಿಸುವ ಚತುರ. ಜ್ಯೋತಿಷ್ಯದ ಪ್ರಕಾರ  ಸೂರ್ಯನಿಗೆ 25 ವರ್ಷ ತುಂಬುವ ಮುನ್ನವೇ ಮದುವೆ ಆಗಬೇಕಾಗಿರುತ್ತದೆ. ಆತನಿಗೆ ಸೂಕ್ತ  ಹುಡುಗಿಯನ್ನು ಹುಡುಕುವ ಕುಟುಂಬಕ್ಕೆ ಸಿಗುವ ಬೀಗರ ಫ್ಯಾಮಿಲಿ ಹುಡುಗಿ (ಸಹನಾ) ಅಂಕಿತಾ ಅಮರ್.  ಸದ್ಯಕ್ಕೆ ಮದುವೆ ಮಾಡಿಕೊಳ್ಳಲು ಇಷ್ಟವಿರದ ಸಹನಾ ಉತ್ತಮ ಕೆಲಸಕ್ಕಾಗಿ ಆಸ್ಟ್ರೇಲಿಯಾಗೆ ಹೋಗುವ ಕನಸು ಕಂಡಿರುತ್ತಾಳೆ. ನಂತರ ಸೂರ್ಯ ಹಾಗೂ ಆತನ ಕುಟುಂಬದ ಹಿನ್ನೆಲೆ ತಿಳಿದ ಸಹನಾ ಕೆಲವು ಕಂಡೀಶನ್ ಹಾಕಿ ಸೂರ್ಯನನ್ನ ಮದುವೆಯಾಗಲು ಒಪ್ಪುತ್ತಾಳೆ. ಮೊಮ್ಮಕ್ಕಳ ಮದುವೆಯನ್ನ ಸಂಭ್ರಮಿಸಿದ ಹಿರಿಯ ಜೀವ, ಆದರೂ ಈ ಜೋಡಿಗಳ ನಡುವೆ ತರ್ಲೆ, ತುಂಟಾಟ, ಗೊಂದಲವಿದ್ದರೂ ಮನೆಯಲ್ಲಿರೋ  ಮಕ್ಕಳ ಹಾದಿಯಲ್ಲಿ ಎಡವಟ್ಟು , ಸ್ತ್ರೀ ಮೋಹಕ್ಕೆ ಸಿಕ್ಕು ಪರದಾಡುತ್ತಾರೆ. ಈ ನಡುವೆ  ಸೂರ್ಯ ಮುದ್ದಾದ ಮಗುವನ್ನ ಮನೆಗೆ ತರುತ್ತಾನೆ. ಆದರೆ ಇಡೀ ಮನೆಯವರಿಗೆ ಆ ಮಗು ಯಾರದು ಎಂಬ ಗೊಂದಲ ಸೃಷ್ಟಿಯಾಗುತ್ತದೆ.  ಇದಲ್ಲದೆ, ಮತ್ತೊಂದು ಫ್ಲಾಶ್ ಬ್ಯಾಕ್ ಕಥೆಯಲ್ಲಿ ಮನೆಯ ಹಿರಿಯ ವ್ಯಕ್ತಿಯ ಬದುಕಿನ ತಲ್ಲಣವನ್ನ ಹೇಳಲಾಗಿದೆ. ಹಾಗೆಯೇ ಸರ್ಕಾರದಿಂದ ಸಿಎಂ ಹಾಗೂ ಸಚಿವ ಸಂಪುಟದ ನಿರ್ಧಾರದಂತೆ ಇನ್ನೂರು ಐವತ್ತು ವರ್ಷಗಳ  ಇತಿಹಾಸ ಇರೋ ಈ ಕೂಡು ಕುಟುಂಬದ ವಂಶಕ್ಕೆ ಸನ್ಮಾನಿಸುವ ಕಾರ್ಯಕ್ರಮ  ಹಮ್ಮಿಕೊಂಡಿರುತ್ತಾರೆ ಇದಕ್ಕೂ ಒಂದು ಕಾರಣವಿರುತ್ತದೆ. ಕ್ಲೈಮಾಕ್ಸ್ ನಲ್ಲಿ ಬರೋ ಮನ ಮುಟ್ಟುವ ವಿಚಾರವೇ ಈ ಚಿತ್ರದ ಹೈಲೈಟ್.  ಅದನ್ನು  ಚಿತ್ರಮಂದಿರದಲ್ಲಿ  ನೋಡಿದರೇನೇ ಚೆನ್ನ.

ಪ್ರಥಮ ಬಾರಿಗೆ ನಿರ್ದೇಶನದ ಜವಾಬ್ದಾರಿಯನ್ನು ನಿರ್ವಹಿಸಿರುವ  ನಿರ್ದೇಶಕಿ ಸಿ. ಆರ್. ಬಾಬಿ ರವರ ಶ್ರಮ ತೆರೆಯ ಮೇಲೆ ಕಾಣುತ್ತದೆ. ಕೂಡು  ಕುಟುಂಬದ ವಿಚಾರ , ಸಂಬಂಧಗಳ ಮೌಲ್ಯ , ಪ್ರೀತಿ , ತುಂಟಾಟ , ರಾಜಕೀಯ , ಮಾನವೀಯತೆಯ ನಡುವೆ ಮನೋರಂಜನಾತ್ಮಕ ಅಂಶಗಳನ್ನು ಬೆಸೆದುಕೊಂಡಿರುವ ರೀತಿ ಸೊಗಸಾಗಿದೆ. ದ್ವಿತೀಯ ಭಾಗ ಹೆಚ್ಚು  ಸೆಳೆಯುತ್ತದೆ. ಚಿತ್ರಕಥೆಯಲ್ಲಿ ಇನ್ನಷ್ಟು ಏರಿಳಿತ ಮಾಡಬಹುದಿತ್ತು , ಸಂಭಾಷಣೆ ಕಥೆಗೆ ಪೂರಕವಾಗಿದೆ. ನಿರ್ಮಾಪಕ ಬಿ. ಅಜನೀಶ್ ಲೋಕನಾಥ್ ಅದ್ದೂರಿತನ ತೆರೆಯ ಮೇಲೆ ಕಾಣುತ್ತದೆ. ಸಂಗೀತದ ಸೆಳೆತ ಇನ್ನಷ್ಟು ಬೇಕಿತ್ತು ಅನಿಸುತ್ತದೆ. ಛಾಯಾಗ್ರಾಹಕರ ಕೈಚಳ ಉತ್ತಮವಾಗಿದ್ದು , ಸಂಕಲನವು ಗಮನ ಸೆಳೆಯುತ್ತದೆ. ನಾಯಕನಾಗಿ ಶೈನ್ ಶೆಟ್ಟಿ ಬಹಳ ಲವ ಲವಿಕೆಯಿಂದ ಅಭಿನಯಿಸಿದ್ದು , ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇನ್ನು ನಾಯಕಿ ಅಂಕಿತಾ ಅಮರ್ ಸಿಕ್ಕ ಪ್ರತಿ ಅವಕಾಶವನ್ನು ಸಮರ್ಥವಾಗಿ ನಿರ್ವಹಿಸಿ ಎಲ್ಲರ ಗಮನ ಸೆಳೆಯುತ್ತಾರೆ. ವಿಶೇಷ ಪಾತ್ರದಲ್ಲಿ ಬರುವ ಶ್ರುತಿ ಹರಿಹರನ್  ಚಿತ್ರದ ತಿರುವಿಗೆ ಕಾರಣರಾಗಿದ್ದಾರೆ.
 
ಇನ್ನು ಇಡೀ ಚಿತ್ರದ ಹೈಲೈಟ್ ಹಿರಿಯ ನಟ ದೇವರಾಜ್ ರವರ ಪಾತ್ರ.  ಅದರಲ್ಲೂ ಕ್ಲೈಮ್ಯಾಕ್ಸ್ ಸನ್ನಿವೇಶ ನೆನಪಿನಲ್ಲಿ ಉಳಿಯುವಂತೆ ಮಾಡಿದ್ದಾರೆ. ಸಿಎಂ ಪಾತ್ರದಲ್ಲಿ ಹಿರಿಯ ನಟ ಅಶೋಕ್  ಸೇರಿದಂತೆ ಅಚ್ಚುತ್ ಕುಮಾರ್ , ತಮಿಳಿನ ನಟ ಶ್ರೀಮಾನ್ , ರವಿಶಂಕರ್ ಗೌಡ , ಅನೂಪ್ ಭಂಡಾರಿ ,  ಶ್ರುತಿ ಕೃಷ್ಣ , ಸಾಕ್ಷಿ ಅಗರವಾಲ್ , ವಾಣಿ ಹರಿಕೃಷ್ಣ , ಮಾಳವಿಕಾ ಅವಿನಾಶ್ , ಸಂಗೀತ ಅನಿಲ್ ಸೇರಿದಂತೆ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದು , ಇಡೀ ಕುಟುಂಬ ಸಮೇತ ನೋಡುವಂತಹ ಚಿತ್ರ ಇದಾಗಿದೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಜಸ್ಟ್ ಮ್ಯಾರಿಡ್` ಮದುವೆ ಸಂಭ್ರಮದಲ್ಲಿ ತಲ್ಲಣದ ಛಾಯೆ !....ರೇಟಿಂಗ್ :- 3/5 - Chitratara.com
Copyright 2009 chitratara.com Reproduction is forbidden unless authorized. All rights reserved.