Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಮಾಯಾವಿ` ಗುಣಗಾನ, ಟ್ರೇಲರ್ ನಲ್ಲಿ `ಮಾಯಾವಿ` ದರ್ಶನ
Posted date: 26 Tue, Aug 2025 12:14:58 PM
ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ `ಮಾಯಾವಿ` ಚಿತ್ರ ತೆರೆಗೆ ಬರಲು ಸಿದ್ದವಾಗುತ್ತಿದೆ. ಈಗಾಗಲೇ `ಮಾಯಾವಿ` ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ‘ಮಾಯಾವಿ’ ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆಗೊಳಿಸಿದೆ. `ಮಾಯಾವಿ`ಯ ಮೊದಲ ಝಲಕ್ ತೋರಿಸುತ್ತ ಚಿತ್ರದ ಪ್ರಚಾರ ಕಾರ್ಯಗಳಿಗೆ ನಿಧಾನವಾಗಿ ಚಾಲನೆ ನೀಡಿದೆ. 

ಇನ್ನು ಚಿತ್ರದುರ್ಗ ಮೂಲದ ಯುವ ಪ್ರತಿಭೆ ರಘುರಾಮ್ `ಮಾಯಾವಿ` ಚಿತ್ರದಲ್ಲಿ ನಾಯಕ ನಟನಾಗಿ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಇವರಿಗೆ ನಿಶ್ಚಿತಾ ಶೆಟ್ಟಿ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ ಹಿರಿಯ ನಟ ಎಂ. ಕೆ. ಮಠ, ಸೂರ್ಯ ಪ್ರವೀಣ್, ಸುರೇಶ ಬಾಬು, ಅನುರಾಧಾ, ಶಿಲ್ಪಾ, ಖುಷಿ ಗೌಡ ಮತ್ತಿತರರು `ಮಾಯಾವಿ` ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. `ಶ್ರೀದುರ್ಗಾ ಸೆಕ್ಯುರಿಟಿ ಸರ್ವೀಸಸ್` ಬ್ಯಾನರಿನಲ್ಲಿ ಡಾ. ಮಹಂತೇಶ್ ಹೆಚ್. ನಿರ್ಮಿಸುತ್ತಿರುವ `ಮಾಯಾವಿ` ಚಿತ್ರಕ್ಕೆ ಶಂಕರ್ ಜಿ. ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. 

`ಮಾಯಾವಿ` ಚಿತ್ರದ ಟ್ರೇಲರ್ ಮತ್ತು ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಚಿತ್ರದುರ್ಗ ಜಿಲ್ಲೆಯ ಮಾಜಿ ಸಂಸದ ಜನಾರ್ಧನ ಸ್ವಾಮಿ, ನಟರಾದ ಸುನಾಮಿ ಕಿಟ್ಟಿ, ಗಣೇಶರಾವ್ ಕೇಸರ್ಕರ್ ಮೊದಲಾದವರು `ಮಾಯಾವಿ`ಯ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

`ಮಾಯಾವಿ` ಟ್ರೇಲರ್ ಮತ್ತು ಆಡಿಯೋ ಬಿಡುಗಡೆ ಬಳಿಕ ಮಾತನಾಡಿದ ಚಿತ್ರದ ನಾಯಕ ನಟ ರಘುರಾಮ್, ಚಿತ್ರದುರ್ಗ ಮೂಲದ ನಾನು ಇಂಜಿನಿಯರಿಂಗ್ ಪದವಿ ಪಡೆದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಸಿನಿಮಾದಲ್ಲಿ ನಟನಾಗಿ ಅಭಿನಯಿಸಬೇಕು ಎಂಬುದು ನನಗೆ ಮೊದಲಿನಿಂದಲೂ ಇದ್ದ ಕನಸು. ಆ ಕನಸು `ಮಾಯಾವಿ` ಸಿನಿಮಾದ ಮೂಲಕ ನನಸಾಗುತ್ತಿದೆ. ಈ ಸಿನಿಮಾದಲ್ಲಿ ನನಗೆ ಎರಡು ಶೇಡ್ ಇರುವಂಥ ಪಾತ್ರವಿದೆ. ಇದೊಂದು ವಾಸ್ತವತೆಗೆ ಹತ್ತಿರವಾಗಿರುವಂಥ ಸಿನಿಮಾ. ಚಾಲೆಂಜಿಂಗ್ ಆಗಿರುವ ನನ್ನ ಪಾತ್ರ ಎಲ್ಲರಿಗೂ ಇಷ್ಟವಾಗಲಿದೆ’ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು. 

‘ಮಾಯಾವಿ’ ಬಗ್ಗೆ ಮಾತನಾಡಿದ ನಿರ್ದೇಶಕ ಶಂಕರ್ ಜಿ. ‘ಇದೊಂದು ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ ಕಥಾಹಂದರದ ಸಿನಿಮಾ. ಸಿನಿಮಾದ ಕೊನೆಯಲ್ಲೊಂದು ಸಂದೇಶವಿದೆ. ಎಲ್ಲಾ ಥರದ ಆಡಿಯನ್ಸ್ ಗೂ ಇಷ್ಟವಾಗುವಂಥ ಸಿನಿಮಾ ಮಾಡಿದ್ದೇವೆ. ಲವ್, ಸೆಂಟಿಮೆಂಟ್, ಆ್ಯಕ್ಷನ್ ಹೀಗೆ ಎಲ್ಲಾ ಥರದ ಎಲಿಮೆಂಟ್ಸ್ ಈ ಸಿನಿಮಾದಲ್ಲಿದೆ. 
ಚಿತ್ರದುರ್ಗ, ಬೆಂಗಳೂರು, ಹೊಸಪೇಟೆ ಸುತ್ತಮುತ್ತ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. 
ಸೆನ್ಸಾರ್ ನಿಂದ ಸಿನಿಮಾಕ್ಕೆ ‘ಯು’ ಸರ್ಟಿಫಿಕೇಟ್ ಸಿಕ್ಕಿದೆ’ ಎಂದು ಮಾಹಿತಿ ನೀಡಿದರು. 

ನಿರ್ಮಾಪಕ ಡಾ. ಮಹಂತೇಶ್ ಹೆಚ್. ಮಾತನಾಡಿ, ‘ನಾವು ಆರಂಭದಲ್ಲಿ ಅಂದುಕೊಂಡಂತೆ, ಸಿನಿಮಾ ತುಂಬ ಚೆನ್ನಾಗಿ ಬಂದಿದೆ. ಚಿತ್ರದುರ್ಗದ ಮೂಲದ ಬಹುತೇಕ ಹೊಸ ಪ್ರತಿಭೆಗಳಿಗಾಗಿ ಈ ಸಿನಿಮಾ ಮಾಡಿದ್ದೇವೆ. ಆದಷ್ಟು ಬೇಗ ‘ಮಾಯಾವಿ’ಯನ್ನು ತೆರೆಗೆ ತರಲಿದ್ದೇವೆ’ ಎಂದರು. 

ಸಮಾರಂಭದಲ್ಲಿ ಹಾಜರಿದ್ದ ನಟ ಸೂರ್ಯ ಪ್ರವೀಣ್,  ಸುರೇಶ ಬಾಬು, ಸಾಹಸ ನಿರ್ದೇಶಕ ವಿಕ್ರಂ ಮೊದಲಾದವರು ‘ಮಾಯಾವಿ’ಯ ಕುರಿತು ತಮ್ಮ ಅನಿಸಿಕೆ, ಅನುಭವಗಳನ್ನು ಹಂಚಿಕೊಂಡರು. ‘ಮಾಯಾವಿ’ ಚಿತ್ರದ ಎರಡು ಹಾಡುಗಳಿಗೆ ಅಗಸ್ತ್ಯ ಸಂತೋಷ್ ಸಂಗೀತ ಸಂಯೋಜಿಸಿದ್ದು ವಿಜಯ ಪ್ರಕಾಶ್, ಮೇಘನಾ ಮತ್ತಿತರರು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಚಿತ್ರಕ್ಕೆ ಗುರುದತ್ತ ಮುಸುರಿ ಛಾಯಾಗ್ರಹಣ, ಅನಿಲ್ ಕುಮಾರ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಟ್ರೇಲರ್ ಮತ್ತು ಹಾಡುಗಳ ಮೂಲಕ ಹೊರಬಂದು ಸಿನಿಪ್ರಿಯರ ಗಮನ ಸೆಳೆಯುತ್ತಿರುವ ‘ಮಾಯಾವಿ’ ಥಿಯೇಟರಿನಲ್ಲಿ ಎಷ್ಟರ ಮಟ್ಟಿಗೆ ಸಸ್ಪೆನ್ಸ್-ಥ್ರಿಲ್ಲಿಂಗ್ ಅನುಭವ ಕೊಡಲಿದ್ದಾನೆ ಎಂಬುದು ‘ಚಿತ್ರ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಮಾಯಾವಿ` ಗುಣಗಾನ, ಟ್ರೇಲರ್ ನಲ್ಲಿ `ಮಾಯಾವಿ` ದರ್ಶನ - Chitratara.com
Copyright 2009 chitratara.com Reproduction is forbidden unless authorized. All rights reserved.