Chief Editor
Manohar. R (Manu)
Photo Journalist
chitrataramanu@gmail.com
+91 9845549026
``ಜೈ`` ಚಿತ್ರದ ಟೀಸರ್ ಲಾಂಚ್ ಮಾಡಿದ ರೋರಿಂಗ್ ಸ್ಟಾರ್ ಶ್ರೀಮುರಳಿ
Posted date: 28 Thu, Aug 2025 12:13:35 PM
ಗೌರಿ ಗಣೇಶ ಹಬ್ಬದ ವಿಶೇಷ ಸಂದರ್ಭದಲ್ಲಿ ಕರಾವಳಿ ಭಾಗದ ಪ್ರತಿಭೆ ಬಿಗ್ ಬಾಸ್ ಖ್ಯಾತಿಯ ರಾಕ್‌ ಸ್ಟಾರ್‌ ರೂಪೇಶ್‌ ಶೆಟ್ಟಿ  ನಟಿಸಿ, ನಿರ್ದೇಶನ ಮಾಡಿರುವಂತಹ ತುಳು ಹಾಗೂ ಕನ್ನಡ ಚಿತ್ರದ ಟೀಸರ್ ಬಿಡುಗಡೆ ಸಮಾರಂಭವನ್ನು ಆಯೋಜನೆ ಮಾಡಿದ್ದು , ವಿಶೇಷವಾಗಿ ಕರಾವಳಿ ಚಂಡೆ ವಾದ್ಯದ ಮೂಲಕ ರೋರಿಂಗ್ ಸ್ಟಾರ್ ಶ್ರೀ ಮುರಳಿಯನ್ನು ಕಾರ್ಯಕ್ರಮಕ್ಕೆ ಬರಮಾಡಿಕೊಂಡು ದೀಪವನ್ನು ಬೆಳಗುವುದರ ಮೂಲಕ ಚಾಲನೆ ನೀಡಿದರು. ಇನ್ನು ವಿಶೇಷವಾಗಿ ಮೈಸೂರು ಮೂಲದ ರಾಪ್ ಗಾಯಕರು ಜೈ ಚಿತ್ರಕ್ಕೆ ಸೈ ಎಂಬ ಹಿಪಪ್ ರಾಪ್ ಸಾಂಗ್ ಮೂಲಕ ಗಮನ ಸೆಳೆದರು. ಇನ್ನು ಈ ಚಿತ್ರದ ಮುಖ್ಯ ಅತಿಥಿಯಾಗಿ ಆಗಮಿಸಿದ ನಟ ಶ್ರೀಮುರಳಿ ಚಿತ್ರದ ಟೀಸರ್ ಅನ್ನ ಬಿಡುಗಡೆ ಮಾಡಿದರು. 
 
ನಂತರ ಅತಿಥಿ ರೋರಿಂಗ್ ಸ್ಟಾರ್ ನಟ ಶ್ರೀಮುರಳಿ ಮಾತನಾಡುತ್ತಾ ಚಿತ್ರದ ಟೀಸರ್ ಬಹಳ ಅದ್ಭುತವಾಗಿ ಮೂಡಿ ಬಂದಿದೆ. ತಂಡದ ಶ್ರಮ ಕಾಣುತ್ತದೆ. ನಟ ರೂಪೇಶ್ ಶೆಟ್ಟಿ ಬಹಳ ಸುಂದರವಾದ ನಾಯಕ. ತುಳು ಭಾಷೆಯ ಸಂಸ್ಕೃತಿ , ಆಚಾರ ವಿಚಾರದ ಬಗ್ಗೆ ಅಪಾರ ಪ್ರೀತಿಯನ್ನು ಇಟ್ಟುಕೊಂಡು ಸಿನಿಮಾ ಮಾಡುತ್ತಾ ಬಂದಿದ್ದಾರೆ. ನಾನು ಅವರನ್ನ ಬಿಗ್ ಬಾಸ್ ನಿಂದ ನೋಡುತ್ತಾ ಬಂದಿದ್ದೇನೆ. ಈ ಚಿತ್ರದಲ್ಲಿ ನಾಯಕನಾಗಿ ಜೊತೆಗೆ ನಿರ್ದೇಶನವನ್ನ ಮಾಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಅದರಲ್ಲೂ ವಿಶೇಷವಾಗಿ ಸುನಿಲ್ ಶೆಟ್ಟಿ ಅಣ್ಣನ ತುಳು ಸಿನಿಮಾಗೆ ಕರೆ ತಂದಿದ್ದಾರೆ. ನಮಗೂ ಸ್ವಲ್ಪ ಹೇಳಿ ಅವರನ್ನ ಹೇಗೆ ಕರೆತರಬೇಕೆಂದು ಹೇಳುತ್ತಾ , ಚಿತ್ರದ ಸಂಗೀತ , ಛಾಯಾಗ್ರಹಣ ಹಾಗೂ ನಟಿ ಸೇರಿದಂತೆ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರಿಗೆ ಶುಭವಾಗಲಿ ಎಂದು ಹಾರೈಸಿದರು. ಹಾಗೆ ತಂಡದ ಜೊತೆ ಸೇರಿ ಹುಲಿ ವೇಷದ ಕುಣಿತಕ್ಕೆ ಹೆಜ್ಜೆ ಹಾಕಿ , ಚಿತ್ರ ತಂಡದ ಪ್ರೀತಿಯ ಸನ್ಮಾನವನ್ನು ಸ್ವೀಕರಿಸಿದರು.
 
ಈ ಚಿತ್ರದ  ನಟ , ನಿರ್ದೇಶಕ ರೂಪೇಶ್ ಶೆಟ್ಟಿ ಮಾತನಾಡುತ್ತಾ , ಇದು ನನ್ನ ಮೂರನೆಯ ನಿರ್ದೇಶನದ ಚಿತ್ರ. ಈ ಹಿಂದೆ ನಾನು ಗಿರ್ಗಿಟ್, ಸರ್ಕಸ್ ಎಂಬ ಚಿತ್ರ ಮಾಡಿದ್ದೆ ಅದು ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನವನ್ನು ಕಂಡಿದ್ದು , ಈಗ ಜೈ ಎನ್ನುವ ಚಿತ್ರವನ್ನು ನಿರ್ದೇಶನ ಮಾಡಿದ್ದೇನೆ. ಹಾಗೆ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದೇನೆ. ಇದೊಂದು ಕರಾವಳಿ ಭಾಗದ ಲೋಕಲ್ ಪೊಲಿಟಿಕಲ್ ಕಂಟೆಂಟ್ ಇರುವ ಚಿತ್ರ. ಇದು ತುಳು ಭಾಷೆಯಲ್ಲಿ ಸಿದ್ಧವಾಗಿದ್ದು , ಈ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿದ್ದೇವೆ. ಇನ್ನು ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಸುನಿಲ್ ಶೆಟ್ಟಿ ಸರ್ ಅಭಿನಯಿಸಿದ್ದಾರೆ. ತಮ್ಮ ಭಾಷೆಯ ಅಭಿಮಾನದಿಂದ ಒಂದು ರೂಪಾಯಿಯನ್ನು ಪಡೆಯದೆ ನಮ್ಮ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಬರೀ ಗೆಸ್ಟ್ ರೋಲ್ ಅಲ್ಲದೆ , ಸುಮಾರು 18 ನಿಮಿಷಗಳ ಕಾಲ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾವು ಶ್ರಮಪಟ್ಟು ಕೆಲಸ ಮಾಡಿದರೆ ಯಶಸ್ಸು ಖಂಡಿತ ಸಿಗುತ್ತೆ , ಬೆಂಬಲ ಇರುತ್ತೆ ಎನ್ನುವುದಕ್ಕೆ ಸುನಿಲ್ ಶೆಟ್ಟಿ ಸರ್ ಸಾಕ್ಷಿ , ನಮ್ಮ ನಿರ್ಮಾಪಕರು ನನಗೆ ಏನು ಬೇಕೋ ಅದನ್ನ ನೀಡಿದ್ದಾರೆ. ನಮ್ಮ ಚಿತ್ರದಲ್ಲಿ ಅನುಭವಿ ಕಲಾವಿದರ ದಂಡೆ ಇದೆ.  ಅಂದುಕೊಂಡಂತೆ ಚಿತ್ರ ಮುಗಿದಿದ್ದು ,  ನವೆಂಬರ್‌ 14ರಂದು ಎರಡು ಭಾಷೆಯಲ್ಲಿ ನಮ್ಮ ಚಿತ್ರವನ್ನ ರಿಲೀಸ್ ಮಾಡುವ ಪ್ಲಾನ್ ಮಾಡಿಕೊಂಡಿದ್ದೇವೆ. ನಿಮ್ಮೆಲ್ಲರ ಪ್ರೀತಿ , ಬೆಂಬಲ ಇರಲಿ ಎಂದು ಕೇಳಿಕೊಂಡರು.
 
ನಟಿ ಅದ್ವಿತಿ ಶೆಟ್ಟಿ ಮಾತನಾಡುತ್ತಾ ಇದು ನನ್ನ ಮೊದಲ ತುಳು ಚಿತ್ರ. ನನ್ನ ಮಾತೃಭಾಷೆ ತುಳು , ನನ್ನ ಅಪ್ಪನಿಗೆ ನಾನು ತುಳು ಸಿನಿಮಾದಲ್ಲಿ ನಡೆಸಬೇಕೆಂಬ ಆಸೆ ಇತ್ತು. ಅದರಂತೆ ನನ್ನ ಮೊದಲ ಚಿತ್ರ ಈಗ ಸಿದ್ಧವಾಗಿದೆ. ಆದರೆ ಎರಡು ವರ್ಷವಾಯಿತು ನನ್ನ ಅಪ್ಪ ನಮ್ಮನ್ನು ಅಗಲಿ. ಹಾಗೆ ಇಂದು ನನ್ನೊಂದಿಗೆ ನನ್ನ ತಾಯಿ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ. 13ವರ್ಷ ಕನಸು ಈಗ ನೆರವೇರಿತಿದೆ. ನನ್ನ ಈ ತುಳು ಭಾಷೆಯ  ಈ ಸಿನಿಮಾ ಕನ್ನಡದಲ್ಲಿ ಡಬ್ ಆಗುತ್ತಿದೆ. ಈ ಚಿತ್ರದಲ್ಲಿ ನನ್ನದು ಜರ್ನಲಿಸ್ಟ್  ಪಾತ್ರ ನಿರ್ವಹಿಸಿದ್ದೇನೆ.  ಇಡೀ ಚಿತ್ರ ತಂಡ ಬಹಳ ಹಾರ್ಡ್ ವರ್ಕ್ ಮಾಡಿದೆ. ನಿಮ್ಮೆಲ್ಲರ ಸಪೋರ್ಟ್ ನಮ್ಮ ಟೀಮ್ ಗೆ ಬೇಕು ಎಂದರು.
 
ಆರ್. ಎಸ್. ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರ ಚಿತ್ರಕ್ಕೆ ಬಂಡವಾಳ ಹೂಡಿದ್ದು, ದೀಕ್ಷಿತ್   ಸಹ ನಿರ್ಮಾಪಕರಾಗಿದ್ದಾರೆ. ಇನ್ನು ಚಿತ್ರಕಥೆಯನ್ನ ರೂಪೇಶ್ ಶೆಟ್ಟಿ ಹಾಗೂ ವೇಣು ಹಸ್ರಳ್ಳಿ ಅವರು ಬರೆದಿದ್ದಾರೆ. ಮೂರು ಹಂತದಲ್ಲಿ ಚಿತ್ರೀಕರಣ ಮುಗಿಸಿದ `ಜೈ` ಸಿನಿಮಾದಲ್ಲಿ ನಾಯಕನಾಗಿ ರೂಪೇಶ್‌ ಶೆಟ್ಟಿ ಮತ್ತು ನಾಯಕಿಯಾಗಿ ಅದ್ವಿತಿ ಶೆಟ್ಟಿ ಅಭಿನಯಿಸಿದ್ದಾರೆ. ಉಳಿದಂತೆ ದೇವದಾಸ್ ಕಾಪಿಕಾಡ್, ರಾಜ್‌ ದೀಪಕ್‌ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್ ಮೊದಲಾದವರು ಅಭಿನಯಿಸಿದ್ದಾರೆ. ತುಳು ಚಿತ್ರರಂಗದ ಖ್ಯಾತ ಡೈಲಾಗ್‌ ರೈಟರ್ ಪ್ರಸನ್ನ ಶೆಟ್ಟಿ ಬೈಲೂರು ಚಿತ್ರಕ್ಕೆ ಕತೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಚಿತ್ರಕ್ಕೆ ವಿನುತ್ ಛಾಯಾಗ್ರಹಣ , ಲೊಯ್ ವೆಲೆಂಟಿನ್ ಸಲ್ದಾನ ಸಂಗೀತ, ರಾಹುಲ್ ವಸಿಷ್ಠ ಸಂಕಲನವಿದೆ. ರೂಪೇಶ್‌ ಶೆಟ್ಟಿ ಸಾರಥ್ಯದ ಈ ಚಿತ್ರ ತುಳು ಮತ್ತು ಕನ್ನಡ ಭಾಷೆಗಳಲ್ಲಿ  ನವೆಂಬರ್‌ 14ರಂದು ತೆರೆಯ ಮೇಲೆ ಬರಲಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ``ಜೈ`` ಚಿತ್ರದ ಟೀಸರ್ ಲಾಂಚ್ ಮಾಡಿದ ರೋರಿಂಗ್ ಸ್ಟಾರ್ ಶ್ರೀಮುರಳಿ - Chitratara.com
Copyright 2009 chitratara.com Reproduction is forbidden unless authorized. All rights reserved.