ಉಸಿರು ಈವಾರ ತೆರೆಕಂಡ ಬಹು ನಿರೀಕ್ಷಿತ ಚಿತ್ರಗಳಲ್ಲೊಂದು. ಭರ್ಜರಿ ಪ್ರಚಾರದ ಮೂಲಕ ಕುತೂಹಲ ಕೆರಳಿಸಿದ್ದ ಈ ಚಿತ್ರ ಸಿನಿ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ. ಮರ್ಡರ್ ಮಿಸ್ಟ್ರಿ ಸುತ್ತ ನಡೆವ ಪೊಲೀಸ್ ತನಿಖೆಯ ಕಥೆ ಇದಾದರೂ, ಕನ್ನಡ ಬೆಳ್ಳಿತೆರೆಯ ಮೆಲೆ ಈವರೆಗೆ ಹೇಳಿರದ ಕಂಟೆಂಟ್ ಇದರಲ್ಲಿದೆ. ಆಗಂತುಕನೊಬ್ಬ ಗರ್ಭಿಣಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಕೊಲೆ ಮಾಡುತ್ತಿರುವ ಪ್ರಕರಣದ ಸುತ್ತ ನಡೆಯುವ ಘಟನಾವಳಿಗಳು ನೋಡುಗರಲ್ಲಿ ಕುತೂಹಲ ಕೆರಳಿಸುತ್ತ ಸಾಗುತ್ತವೆ. ನಿರ್ದೇಶಕ ಪನೇಮ್ ಪ್ರಭಾಕರ್ ಅವರು ರೋಚಕವಾಗಿ ಇಡೀ ಚಿತ್ರವನ್ನು ನಿರೂಪಿಸಿದ್ದಾರೆ, ಕಥೆಯಲ್ಲಿ ಬರೋ ಆ ಅನಾಮಧೇಯ ವ್ಯಕ್ತಿ, ಆತನ ದ್ವೇಷದ ಕಿಚ್ಚು , ಕ್ರೂರತೆಯ ನಡುವೆ ಮುಗ್ಧರ ಸಾವು. ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು ಎಂಬ ಮೆಸೇಜನ್ನು ಅತ್ಯಂತ ಸ್ಪಷ್ಟವಾಗಿ ತೆರೆಮೇಲೆ ತಂದಿದ್ದಾರೆ. ಕುಟುಂಬಕ್ಕೆ ಎದುರಾಗುವ ತೊಂದರೆಗೆ ಸಿಲುಕಿ ಜೈಲು ಸೇರುವ ಯುವಕನಿಗೆ ಪೊಲೀಸ್ ಅಧಿಕಾರಿ (ಬಲ ರಾಜವಾಡಿ) ಎಚ್ಚರಿಕೆ ನೀಡೋ ಜೊತೆ ಬುದ್ಧಿ ಮಾತನ್ನೂ ಹೇಳುತ್ತಾನೆ. ಅಲ್ಲಿಂದ ಹೊರಬರುವ ಸೂರ್ಯ(ಅರುಣ್ ಕುಮಾರ್) ವ್ಯಕ್ತಿಯೊಬ್ಬನ ಫೋಟೋ ಹಿಡಿದುಕೊಂಡು ಅವನನ್ನು ಹುಡುಕಾಡುತ್ತಾನೆ. ಈ ನಡುವೆ ತನ್ನ ಹೆತ್ತವರ ಬಗ್ಗೆ ತಿಳಿದುಕೊಳ್ಳಲು ಪರದಾಡುತ್ತಾನೆ. ಇದರ ಹಿಂದೆ ಫ್ಲಾಶ್ ಬ್ಯಾಕ್ ಕತೆ ತೆರೆದುಕೊಳ್ಳುತ್ತದೆ. ಪೊಲೀಸ್ ಅಧಿಕಾರಿಯ ಮಗಳು ಸಿರಿ (ಅಪೂರ್ವ) ಸೂರ್ಯನಿಗೆ ಸಾಥ್ ನೀಡುತ್ತಾ, ಆತನನ್ನ ಪ್ರೀತಿಸುತ್ತಾಳೆ.
ಮಡಿಕೇರಿ ಅರಣ್ಯಪ್ರದೇಶಕ್ಕೆ ಹೊಸದಾಗಿ ಬರುವ ಪೊಲೀಸ್ ಅಧಿಕಾರಿ ರಾಜೀವ್ (ತಿಲಕ್) ಹಾಗೂ ಅವನ ಮಡದಿ ಐಶು (ಪ್ರಿಯ ಹೆಗಡೆ), ಆ ಪ್ರದೇಶದಲ್ಲಿ ಯಾವುದೇ ಕೊಲೆ, ದರೋಡೆ, ಡ್ರಗ್ಸ್ ದಂದೆ ನಡೆದರೂ ಮೊದಲು ಮಾಹಿತಿ ತಿಳಿಯುವುದು ಪೊಲೀಸ್ ಪೇದೆ ನಾರಾಯಣ (ರಘು ರಾಮನಕೊಪ್ಪ)ನಿಗೆ. ಆ ಏರಿಯಾದಲ್ಲಿ ಯಾವುದೇ ಘಟನೆ ನಡೆದರೂ, ಸುಮ್ಮನಿರುತ್ತಾನೆ. ಇದರ ನಡುವೆ ಕೊಲೆ, ಡ್ರೆಸ್ ಮಾಫಿಯಾ ನಿರಂತರವಾಗಿ ಸಾಗುತ್ತದೆ. ಬಾಲ್ಯದಿಂದಲೂ ಕ್ರೂರ ಮನಸ್ಥಿತಿಯನ್ನು ಮೈಗೂಡಿಸಿಕೊಂಡು ಬೆಳೆದ ರಾಕೆಟ್ ಹಾಗೂ ಸೈಮನ್ ಗೆಳೆಯರ ಉಪಟಳ ಅತಿಯಾಗುತ್ತದೆ. ಈ ನಡುವೆ ಸೈಮನ್ ಪ್ರೀತಿಸುವ ಹುಡುಗಿಯನ್ನ ಒತ್ತಾಯ ಮಾಡಿ ರಾಕೆಟ್ ಮುಂದೆ ನಿಂತು ಮದುವೆ ಮಾಡಿಸುತ್ತಾನೆ.
ಆಕೆ ಗರ್ಭಿಣಿಯಾದಾಗ ಅವನ ಸಂಭ್ರಮ, ನಂತರ ಎದುರಾಗುವ ಕರಾಳ ಸತ್ಯ ಬೇರೆಯದೇ ರೂಪ ಪಡೆಯತ್ತದೆ. ಇನ್ ಸ್ಪೆಕ್ಟರ್ ರಾಜ್ ತನ್ನ ಪತ್ನಿ ಗರ್ಭಿಣಿಯಾದ ಸಂಭ್ರಮದಲ್ಲಿರುವಾಗಲೇ ಮತ್ತೊಬ್ಬ ಗರ್ಭಿಣಿಯ ಕೊಲೆ ಬಹಳ ಘೋರವಾಗಿ ನಡೆದು ಹೋಗುತ್ತದೆ. ಇದರಿಂದ ವಿಚಲಿತನಾದ ರಾಜೀವ್ ತನ್ನ ಹೆಂಡತಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾನೆ. ಗರ್ಭಿಣಿಯರ ಸರಣಿ ಕೊಲೆಗಳ ಹಿಂದಿರೋ ರಹಸ್ಯವನ್ನು ಪತ್ತೆ ಹಚ್ಚಲು ಹೊರಟ ಆತನಿಗೆ ಅದರ ಹಿಂದಿರೋ ರಹಸ್ಯ ಹೇಗೆ ತಿಳಿಯುತ್ತದೆ, ಇದರ ಹಿಂದಿನ ಸೂತ್ರಧಾರಿ ಯಾರು. ಆತ ಗರ್ಭಿಣಿಯರನ್ನೇ ಯಾಕೆ ಟಾರ್ಗೆಟ್ ಮಾಡುತ್ತಾನೆ ಎನ್ನುವುದಕ್ಕೆಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಉತ್ತರ ಸಿಗುತ್ತದೆ. ಚಿತ್ರದ ಪ್ರತಿ ಸೀನ್ ರೋಚಕ ತಿರುವುಗಳನ್ನ ತೆರೆದುಕೊಳ್ಳುತ್ತ ಸಾಗುತ್ತದೆ. ನಿರ್ಮಾಪಕರು ಹಾಕಿರೋ ಬಂಡವಾಳ ತೆರೆಯ ಮೇಲೆ ಕಾಣುತ್ತದೆ. ಈ ಹಿಂದೆ ತೆರೆಕಂಡ ರಂಗಿತರಂಗ ಚಿತ್ರದ ಛಾಯೆ ಅಲ್ಲಲ್ಲಿ ಕಾಣಿಸುತ್ತದೆ. ಚಿತ್ರದ ಸೆಕೆಂಡ್ ಹಾಫ್ ತುಂಬಾ ಇಂಟರೆಸ್ಟಿಂಗ್ ಆಗಿದೆ. ಗರ್ಭಿಣಿಯರ ಕೊಲೆಗಳ ಹಿಂದಿರೋ ಅನಾಮಧಯನ ನೋವಿನ ಕಥೆ, ತಾಯಿ ಮಗನ ಬಾಂಧವ್ಯ, ಗೆಳೆತನ, ಪ್ರೀತಿ, ದ್ವೇಷದ ಕಥೆ ಈ ಚಿತ್ರದ ಹೈಲೈಟ್. ಹಿನ್ನೆಲೆ ಸಂಗೀತ ಹಾಗೂ ಛಾಯಾಗ್ರಾಹಕರ ಕೈಚಳಕ ಗಮನ ಸೆಳೆಯುತ್ತದೆ, ತಿಲಕ್ ಪೊಲೀಸ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿರೋ ಪ್ರಿಯಾ ಹೆಗಡೆ ಸಿಕ್ಕ ಅವಕಾಶದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ. ಅನಾಮದೇಯನ ಪಾತ್ರ ಗಮನ ಸೆಳೆಯುತ್ತದೆ.