ರಿಪ್ಪನ್‌ಸ್ವಾಮಿ ಮಲೆನಾಡಿನ ಅರಣ್ಯ ಪ್ರದೇಶದಲ್ಲಿ ನಡೆಯುವ ಥ್ರಿಲ್ಲರ್ ಕಥೆ, ಸಣ್ಣಕೊಪ್ಪ ಎಂಬ ಊರಲ್ಲೊಂದು ಎಸ್ಟೇಟ್. ಅದರ ಮಾಲೀಕ ವೀರಸ್ವಾಮಿಗೆ ಇಬ್ಬರು ಮಕ್ಕಳು, ಅದರಲ್ಲಿ ಎರಡನೇ ಮಗನೇ ರಿಪ್ಪನ್‌ಸ್ವಾಮಿ (ವಿಜಯ್ ರಾಘವೇಂದ್ರ). ಬೇಟೆಗೆ ಹೋದ ತಂದೆಯ ಸಾವಿನ ನಂತರ ಈ ಸಹೋದರರ ಹೆಗಲಿಗೆ ಎಸ್ಟೇಟ್ ನೋಡಿಕೊಳ್ಳೋ ಜವಾಬ್ದಾರಿ ಬೀಳುತ್ತದೆ. ಸ್ನೇಹಿತ ಸಂತೋಷ್ ಹಾಗೂ ನಾಲ್ವರು ಕೆಲಸದವರ ಜೊತೆ ಜೀಪಿನಲ್ಲಿ ಓಡಾಡಿಕೊಂಡಿದ್ದ ರಿಪ್ಪನ್‌ಸ್ವಾಮಿ ಹಂದಿಗಳನ್ನು ಕೊಂದು ಮಾಂಸ ಮಾರಾಟ ಮಾಡೋ ಕಾಯಕದಲ್ಲಿರುತ್ತಾನೆ, ಆತನ ಮಡದಿ ಮಂಗಳ (ಅಶ್ವಿನಿ ಚಂದ್ರಶೇಖರ್) ಒಬ್ಬ ಡಾಕ್ಟರ್, ಜನರ ಸೇವೆ ಮಾಡುವುದೇ ಆಕೆಯ ಕನಸು. ಅಲ್ಲೆ ತನ್ನ ಗಂಡ ಹಾಗೂ ಕೆಲಸದವರ ಬಗ್ಗೆ ಗಮನ ಹರಿಸುತ್ತಾ ಅವರ ಆರೋಗ್ಯ ನೋಡಿಕೊಳ್ಳುವುದು ಹಾಗೂ ಅಡುಗೆ ಮಾಡುವುದೇ ಆಕೆಯ ನಿತ್ಯದ ಕಾಯಕವಾಗುತ್ತದೆ, ಕುಪ್ಪ ಹಾಗೂ ಆತನ ಗ್ಯಾಂಗ್ ವೈರಿ ರಿಪ್ಪನ್ ಸ್ವಾಮಿಯನ್ನು
ಹೇಗಾದರೂ ಮಾಡಿ ಕೊಲ್ಲಬೇಕೆಂದು ಹವಣಿಸುತ್ತಾರೆ, ತನ್ನವರ ವಿರುದ್ಧ ಯಾರೇ ಬಂದರೂ ಅವರನ್ನು ಕೊಲ್ಲಲು ಹಿಂಜರಿಯದಂಥವ ರಿಪ್ಪನ್‌ಸ್ವಾಮಿ, ಅದೇ ಊರಿಗೆ ಅಂಜುಮಲಾ (ಅನುಷ್ಕಾ) ಎಂಬ ಪೊಲೀಸ್ ಅಧಿಕಾರಿಯ ಎಂಟ್ರಿಯಾಗುತ್ತದೆ. ಸ್ಟೇಷನ್ ಉಸ್ತುವಾರಿ ನೋಡಿಕೊಳ್ಳುವ ದೇಚಣ್ಣ (ಕೃಷ್ಣಮೂರ್ತಿ ಕವತಾರ್) ಆ ಊರಿನ ಸ್ಥಿತಿಗತಿ, ವ್ಯವಹಾರ, ವ್ಯಕ್ತಿಗಳ ಬಗ್ಗೆ ಆಕೆಗೆ ಸೂಕ್ಷ್ಕವಾಗಿ ಹೇಳುತ್ತಾನೆ. ಈನಡುವೆ ಸ್ವಾಮಿ ಹಾಗೂ ಕುಪ್ಪು ನಡುವಿನ ಗಲಾಟೆ ಸಂಬಂಧ ಅಂಜುಮಾಲ ಇಬ್ಬರಿಗೂ ಎಚ್ಚರಿಕೆ ನೀಡುತ್ತಾಳೆ. ಈ ನಡುವೆ ಸ್ವಾಮಿ ಹೇಳಿದಂತೆ ತನ್ನ ಕೆಲಸದ ಜನ ತಮಗೆ ತಿಳಿಯದಂತೆ ಮಣ್ಣಲ್ಲಿ ವ್ಯಕ್ತಿಯೊಬ್ಬನನ್ನ ಮುಚ್ಚುತ್ತಾರೆ. ನಂತರ ನಡೆದ ಮಾತಿನ ಚಕಮಕಿಯಲ್ಲಿ ರಿಪ್ಪನ್‌ಸ್ವಾಮಿ ಕೆಲಸದವರನ್ನ ದೂರ ಇಡುತ್ತಾನೆ. ಕೋಪಗೊಂಡ ಅವರು ಪೊಲೀಸರಿಗೆ ದೂರು ನೀಡುತ್ತಾರೆ. ಆದರೆ ಅಲ್ಲಿ ಪೊಲೀಸರಿಗೆ ಯಾವುದೇ ಮನುಷ್ಯನ ದೇಹ ಸಿಗಲ್ಲ , ರಿಪ್ಪನ್‌ಸ್ವಾಮಿಯ ತಂದೆಯ ಪ್ರೇಯಸಿಯ ಮಗ ಸಂತೋಷ್ ನಾಪತ್ತೆಯಾಗಿರುತ್ತಾನೆ. ಇದಕ್ಕೆ ಪೂರಕವಾಗಿ ಪೊಲೀಸರಿಗೆ ಕೊಲೆಯ ವಾಸನೆ ಮೂಡಿರುತ್ತದೆ. ಇದರ ನಡುವೆ ಸ್ವಾಮಿ ತನ್ನ ಗೆಳೆಯ ಆನಂದ್ ಸಹಾಯ ಕೇಳುತ್ತಾನೆ. ಹೀಗೆ ಸಾಗೋ ಕಥೆಯಲ್ಲಿ ಕ್ಕೈಮ್ಯಾಕ್ಸ್ ಬೇರೆಯದೇ ತೆರುವು ತೆಗೆದುಕೊಳ್ಳುತ್ತದೆ. ರಿಪನ್ ಸ್ವಾಮಿ ಯಾರು, ಆತನ ಪತ್ನಿಯ ಹಿನ್ನೆಲೆ ಏನು. ಸಂತೋಷ ಹೇಗೆ ನಾಪತ್ತೆಯಾದ ಈ ಎಲ್ಲಾ ಪ್ರಶ್ನೆಗಳಿಗೆ ಚಿತ್ರದ ಅಂತ್ಯದಲ್ಲಿ ಉತ್ತರ ಸಿಗುತ್ತದೆ,
ನಟ ವಿಜಯ ರಾಘವೇಂದ್ರ ಇಡೀ ಚಿತ್ರವನ್ನ ಆವರಿಸಿಕೊಂಡಿದ್ದಾರೆ, ಅವರ ಹಾವಭಾವ, ಮೌನದ ಹಿಂದಿರೋ ಕ್ರೂರತೆಯನ್ನು ತೆರೆದಿಟ್ಟಿದ್ದಾರೆ. ನಾಯಕಿ ಅಶ್ವಿನಿ ಚಂದ್ರಶೇಖರ್ ಕೂಡ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದು, ವಿಭಿನ್ನ ಶೇಡ್ ಮೂಲಕ ತನ್ನ ಸಾಮರ್ಥ್ಯವನ್ನು ತೋರಿಸಿದ್ದಾರೆ. ಪೊಲೀಸ್ ಪೇದೆಯಾಗಿ ಕೃಷ್ಣಮೂರ್ತಿ ಕವತಾರ ನೈಜ ಅಭಿನಯ ನೀಡಿದ್ದು. ಅನುಷ್ಕಾ ಆದಿ ರಾಘವೇಂದ್ರ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಉಳಿದಂತೆ ಪ್ರಕಾಶ್ ತುಮ್ಮಿನಾಡು, ಯಮುನಾ ಶ್ರೀನಿಧಿ ಹೀಗೆ ಎಲ್ಲ ಪಾತ್ರಗಳು ಚಿತ್ರದ ಓಟಕ್ಕೆ ಸಾಥ್ ನೀಡಿವೆ. ಸಮಾಜದಲ್ಲಿ ಹೆಣ್ಣು ಮಕ್ಕಳ ಬದುಕು, ಆಸೆ, ಆಕಾಂಕ್ಷೆಗಳ ಸುತ್ತ ನಡೆಯುವ ಅನಾಹುತಗಳ ಬಗ್ಗೆ ಚಿತ್ರದಲ್ಲಿ ತೋರಿಸಲಾಗಿದ್ದು , ದ್ವಿತೀಯ ಭಾಗ ಹೆಚ್ಚು ಗಮನ ಸೆಳೆಯುತ್ತದೆ.