ಪೋಷಕರು ತಮ್ಮ ಸ್ವಪ್ರತಿಷ್ಠೆ ಕಾಪಾಡಿಕೊಳ್ಳಲು ಹೋಗಿ, ಹೆತ್ತ ಮಕ್ಕಳ ಜೀವನವನ್ನೇ ಹೇಗೆ ಹಾಳು ಮಾಡುತ್ತಾರೆ ಎನ್ನುವುದಕ್ಕೆ ಈವಾರ ತೆರೆಕಂಡಿರುವ ಓಂ ಶಿವಂ ಚಿತ್ರವೇ ನಿದರ್ಶನ. ನಾಯಕನ ಜೀವನದಲ್ಲಿ ಯುವತಿಯೊಬ್ಬಳು ಪ್ರವೇಶಿಸಿ ಆತನ ಜೀವನದ ದಿಕ್ಕನ್ನೇ ಬದಲಿಸುವ ಈ ಚಿತ್ರದ ಕಥೆ, ಈಗಿನ ಕಾಲದ ನಮ್ಮ ಯುವಜನತೆಗೆ ಅದ್ಭುತವಾದ ಮೆಸೇಜನ್ನು ನೀಡಿದೆ. ಮಧ್ಯಮ ವರ್ಗದ ಸುಸಂಸ್ಕೃತ ಮನೆಯ ಮುಗ್ಧ ಯುವಕ ಶಿವ, ಪಿವೋಟ್ ಆಗಲು ಕಾರಣವೇನೆಂದು ಹುಡುಕುತ್ತ ಹೋದಾಗ, ಶಿವನ ಕಾಲೇಜು ಜೀವನದಲ್ಲಿ ನಡೆದ ಕಥೆ ತೆರೆದುಕೊಳುತ್ತದೆ.
ಶಿವನಿಗೆ ಹಣ, ಆಸ್ತಿ ಏನೂ ಇಲ್ಲ. ನಮ್ಮ ಆಸ್ತಿಯ ಆಸೆಗಾಗಿ ಮಗಳ ಹಿಂದೆ ಬಿದ್ದಿದ್ದಾನೆ ಎಂಬ ತಪ್ಪು ಕಲ್ಪನೆಯಿಂದ ಅಂಜಲಿ (ವಿರಾನಿಕಾ ಶೆಟ್ಟಿ)ಯ ತಾಯಿ ಸರೋಜಮ್ಮ(ಅಪೂರ್ವ) ತನ್ನ ಮಗಳು ಶಿವ(ಭಾರ್ಗವ)ನ ಜತೆ ಬೆರೆಯದಂತೆ ಹದ್ದುಬಸ್ತಿನಲ್ಲಿಡುತ್ತಾಳೆ.
ತನ್ನ ಮಗಳ ಸುಂದರ ಜೀವನಕ್ಕೆ ತಾನೇ ಕೊಳ್ಳಿ ಇಟ್ಟು, ಬದುಕಿದ್ದ ಮಗಳು ಸತ್ತು ಹೋಗಿದ್ದಾಳೆಂದು ಊರವರನ್ನೆಲ್ಲ ನಂಬಿಸುವ ಪ್ರಪಂಚದ ಮೊದಲ ತಾಯಿಯಾಗುತ್ತಾಳೆ. ಓಂ ಶಿವಂ ಚಿತ್ರಕ್ಕಾಗಿ ನಿರ್ದೇಶಕ ಆಲ್ವಿನ್ ಅದ್ಭುತವಾದ ಸ್ಕ್ರಿಪ್ಟ್ ಮಾಡಿಕೊಂಡು, ಅದನ್ನು ಅಷ್ಟೇ ಚೆನ್ನಾಗಿ ತೆರೆಮೇಲೆ ಮೂಡಿಸಿದ್ದಾರೆ. ಇದರ ನಡುವೆ ಗ್ರಾಮಪಂಚಾಯ್ತಿ ಅಧ್ಯಕ್ಷನ ಕೊಲೆ ನಡೆದುಹೋಗುತ್ತದೆ.
ಸ್ವಾರ್ಥಿಯೊಬ್ಬನ ಧನದಾಹಕ್ಕೆ ನಾಯಕಿ ಬಲಿಯಾಗುವ ಸಂದರ್ಭ ಸೃಷ್ಠಿಯಾಗುತ್ತದೆ. ಇದರ ನಡುವೆ ಚಿತ್ರದಲ್ಲಿ ಒಂದಷ್ಟು ಅನಿರೀಕ್ಷಿತ ತಿರುವುಗಳು ಎದುರಾಗುತ್ತವೆ.
ಸಂಪ್ರದಾಯಸ್ಥ ಕುಟುಂಬದ ಯುವಕ ಶಿವ, ಹುಡುಗಿಯರನ್ನು ಕಣ್ಣೆತ್ತಿಯೂ ಸಹ ನೋಡದಂಥ ಮುಗ್ಧ ಯುವಕ. ಈತ ಗುಣ ನಡವಳಿಕೆಗೆ ಮನಸೋಲುವ ಅಂಜಲಿ, ಈತನ ಹಿಂದೆ ಬೀಳುತ್ತಾಳೆ. ಆರಂಭದಲ್ಲಿ ಅಂಜಲಿಯ ಪ್ರೀತಿಯನ್ನು ಶಿವ ಅಕ್ಸೆಪ್ಟ್ ಮಾಡದಿದ್ರೂ, ನಂತರ ಆಕೆಯ ಪ್ರೀತಿಗೆ ಮನಸೋಲುತ್ತಾನೆ. ಇವರಿಬ್ಬರ ಪ್ರೀತಿ ಪ್ರೇಮದ ವಿಷಯ ಊರ ಜನರಿಂದ ಸರೋಜಮ್ಮ(ಅಪೂರ್ವ)ನಿಗೆ ತಿಳಿಯುತ್ತದೆ, ತನ್ನ ಮಗಳನ್ನು ಬಡವರ ಮನೆಯ ಸೊಸೆಯಾಗಿ ಕಳಿಸಲು ಇಷ್ಟವಿಲ್ಲದೆ, ಹೇಗಾದರೂ ಮಾಡಿ ಇವರಿಬ್ಬರನ್ನು ಬೇರೆ ಮಾಡಬೇಕೆಂದು ಉಪಾಯ ಹುಡುಕುತ್ತಾಳೆ, ಐಶ್ವರ್ಯದ ಆಸೆಗಾಗಿ ಮಾಟ ಮಂತ್ರ ಮಾಡಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ನಂಬಿ, ಹೆತ್ತ ಮಗಳನ್ನೇ ಆತನ ಜತೆ ಕಳಿಸಿಕೊಡುತ್ತಾಳೆ, ಆತ ಹೇಳಿದಂತೆ ತನ್ನ ಮಗಳು ಸತ್ತು ಹೋದಳೆಂದು ಅತ್ತಂತೆ ಮಾಡುತ್ತಾಳೆ, ಇತ್ತ ನಾಯಕ ತನ್ನ ಪ್ರೇಯಸಿಯೇ ಇಲ್ಲದ ಜೀವನ ತನಗೇಕೆ ಎಂದು, ಕುಡಿತದ ಚಟಕ್ಕೆ ಬೀಳುತ್ತಾನೆ. ತಾನಿನ್ನು ಬದುಕಲೇಬಾರದೆಂದು ತೀರ್ಮಾನಿಸುತ್ತಾನೆ, ಈತನ ಅಸಾಯಕತೆ ತಿಳಿದುಕೊಂಡ ಪೊಲೀಸ್ ಅಧಿಕಾರಿ, ತನ್ನ ಕಾರ್ಯಸಾಧನೆಗೆ ಶಿವನನ್ನು ಬಳಸಿಕೊಳ್ಳಲು ಮುಂದಾಗುತ್ತಾನೆ. ಅಧ್ಯಕ್ಷನ ಕೊಲೆ ಆರೋಪವನ್ನು ಶಿವನ ತಲೆಗೆ ಕಟ್ಟುತ್ತಾನೆ. ಅಷ್ಟರಲ್ಲಿ ಸತ್ತುಹೋಗಿದ್ದ ನಾಯಕಿ ಪ್ರತ್ಯಕ್ಷವಾಗುತ್ತಾಳೆ. ತಾನು ಮಾಡದ ಕೊಲೆ ಅರೋಪ ಹೊತ್ತ, ನಾಯಕ ಅದರಿಂದ ಹೊರ ಬರುತ್ತಾನಾ, ಇಲ್ವಾ, ಆ ಪ್ರೇಮಿಗಳು ಮತ್ತೆ ಒಂದಾಗ್ತಾರಾ ಇಲ್ವಾ ಎನ್ನುವುದೇ ಓಂ ಶಿವಂ ಚಿತ್ರದ ಅಂತಿಮ ಘಟ್ಟ ಅಂಜಲಿಯ ಜೀವನದಲ್ಲಿ ವಿಧಿ ಹೇಗೆ ಆಟವಾಡಿತು ?, ಸಮಯವೇ ಅವರಿಗೆ ಹೇಗೆ ವಿಲನ್ ಆಯ್ತು. ಪೋಷಕರೇ ಮಕ್ಕಳ ಜೀವನಕ್ಕೆ ಶತೃಗಳಾದರೆ ಅದರ ಪರಿಣಾಮ ಹೇಗಿರುತ್ತದೆ ? ಇದೆಲ್ಲವನ್ನೂ ನಿರ್ದೇಶಕ ಅಲ್ವಿನ್ ಪ್ರೇಕ್ಷಕರ ಮನ ಮುಟ್ಟುವ ಹಾಗೆ ನಿರೂಪಿಸಿದ್ದಾರೆ, ನಾಯಕ ಭಾರ್ಗವ್ ಮೊದಲ ಚಿತ್ರದಲ್ಲೇ ಹೆಚ್ಚಿನ ಭರವಸೆ ಮೂಡಿಸಿದ್ದಾನೆ. ಭವಿಶ್ಯದಲ್ಲಿ ಆತನಿಗೆ ಓಳ್ಳೆ ಫ್ಯೂಚರ್ ಇದೆ. ಅಂಜಲಿಯ ಪಾತ್ರವೇ ತಾನಾಗಿ ವಿರಾನಿಕಾ ಶೆಟ್ಟಿ ಅವರು ಜೀವಿಸಿದ್ದಾರೆ.
ಚಿತ್ರದ ಸುಂದರ ಹಾಡುಗಳು, ಅದಕ್ಕೆ ತಕ್ಕಂತೆ ಸ್ಟೆಪ್ ಹಾಕಿರುವ ಕಲಾವಿದರು, ಇದೆಲ್ಲ ಚಿತ್ರದ ಮೆರಗನ್ನು ಹೆಚ್ಚಿಸಿವೆ, ವಿಜಯ್ ಯಾರ್ಡ್ಲಿ ಅವರ ಸಂಗೀತ ಸಂಯೋಜನೆಯ ಹಾಡುಗಳು ಗನುಗುವಂತಿವೆ, ಈಗಾಗಲೇ ಕೇಳುಗರ ಮನ ಗೆದ್ದಿರುವ, ಶಿವನ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ನಿಸ್ವಾರ್ಥ ಪ್ರೀತಿಯಲ್ಲಿ ಬಿದ್ದ ಹುಡುಗ-ಹುಡುಗಿಯು ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ತಮ್ಮ ಜೀವವನ್ನೇ ಪಣಕ್ಕಿಟ್ಟು ಯಾವರೀತಿ ಹೊರಾಟ ನಡೆಸುತ್ತಾರೆ, ನೋಡುಗರ ಮನ ಗೆಲ್ಲುತ್ತಾರೆ ಎಂಬುದನ್ನು ಚಿತ್ರದಲ್ಲಿ ನಿರ್ದೇಶಕ ಅಲ್ವಿನ್ ತುಂಬಾ ಪರಿಣಾಮಕಾರಿಯಾಗಿ ತೋರಿಸಿದ್ದಾರೆ. ನಾಯಕ ಭಾರ್ಗವ್ ಕೃಷ್ಣ ಹಾಗೂ ನಾಯಕಿ ವಿರಾನಿಕಾ ಶೆಟ್ಟಿ ಇಬ್ಬರ ಪಾತ್ರಗಳೂ ಪ್ರೇಕ್ಷಕರ ಥೇಟರಿನಿಂದ ಹೊರಬಂದ ಮೇಲೂ ಕಾಡುತ್ತವೆ.
ನಿರ್ಮಾಪಕ ಕೃಷ್ಣ ಅವರು ಸಹ ಚಿಕ್ಕ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾನೆ. ತಮ್ಮ ಘನತೆಗೋಸ್ಕರ ಮಕ್ಕಳ ಜೀವನವನ್ನು ಹಾಳು ಮಾಡಬೇಡಿ ಎಂಬ ಚಿತ್ರತಂಡದ ಸಂದೇಶ ಪ್ರೇಕ್ಷಕರನ್ನು ತಲುಪುತ್ತಿದೆ, ಕೊಲೆಯಾಗುವ ಅಧ್ಯಕ್ಷನ ಪಾತ್ರದಲ್ಲಿ ಬಲ ರಾಜವಾಡಿ, ಹಣ, ಅಧಿಕಾರಕ್ಕೋಸ್ಕರ ಏನು ಬೇಕಾದರೂ ಮಾಡಲು ಹೋಗುವ ಅಧ್ಯಕ್ಷನ ಮಗ ನಂದನ ಪಾತ್ರದಲ್ಲಿ ಕಾಕ್ರೋಚ್ ಸುಧೀ, ಆತನ ಸಹಚರರಾಗಿ ವರ್ಧನ್ ತೀರ್ಥಹಳ್ಳಿ, ಯಶ್ ಶೆಟ್ಟ, ನಾಯಕನ ತಂದೆ, ತಾಯಿಯಾಗಿ ನಟಿ ಲಕ್ಷ್ಮಿ ಸಿದ್ದಯ್ಯ, ನಾಯಕಿಯ ತಾಯಿಯಾಗಿ ಅಪೂರ್ವ, ವಾಮಾಚಾರದಿಂದ ಸಂಪತ್ತು ಗಳಿಸಲು ಹೊರಟ ಉಗ್ರಂ ರವಿ, ಪೊಲೀಸ್ ಕಮೀಷನರ್ ಆಗಿ ರವಿಕಾಳೆ ಇವರೆಲ್ಲ ತಮಗೆ ಕೊಟ್ಟ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ದೀಪಾ ಮೂವೀಸ್ ಬ್ಯಾನರ್ ಅಡಿ ಕೆ.ಎನ್. ಕೃಷ್ಣ ಅವರು ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಅಲ್ಲದೆ ವೀರೇಶ್ ಅವರ ಕ್ಯಾಮೆರಾ ವರ್ಕ್ ಅದ್ಭುತವಾಗಿದೆ, ಸಂಗೀತ ನಿರ್ದೇಶಕ ವಿಜಯ್ ಯಾರ್ಡ್ಲಿ ಕಂಪೋಜ್ ಮಾಡಿರುವ ಹಾಡುಗಳು ಸದಾ ಗುನುಗುವಂತಿವೆ. ವೀಕೆಂಡ್ನಲ್ಲಿ ಮನೆಯ ಸದಸ್ಯರೆಲ್ಲ ಕೂತು ನೋಡುವಂಡ ಸಿನಿಮಾ ಓಂ ಶಿವಂ.