ನಾಯಿ ಮತ್ತು ಮಾನವನ ನಡುವಿನ ಅವಿನಾಭಾವ ಸಂಬಂಧದ ಕಥೆಯಿದ್ದ `ನಾನು ಮತ್ತು ಗುಂಡ` ಚಿತ್ರದ ಮುಂದುವರಿದ ಭಾಗವಾದ `ನಾನು ಮತ್ತು ಗುಂಡ-2` ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಚಿತ್ರದಲ್ಲಿ ಶಂಕರನ ಮಗ(ರಾಕೇಶ್ ಅಡಿಗ) ಗುಂಡ(ನಾಯಿ ಸಿಂಬ) ಮತ್ತು ಇಂದು(ರಚನಾ ಇಂದರ್) ಸುತ್ತ ನಡೆಯುವ ಮನಮಿಡಿಯುವ, ಹೃದಯ ಕಲಕುವ ಕಥಾನಕವನ್ನು ನಿರ್ದೇಶಕರೂ ಆದ ರಘುಹಾಸನ್ ತೆರೆಯ ಮೇಲೆ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ, ಚಿತ್ರದ ಕಥೆ ಹಾಗೂ ನಿರೂಪಣೆ ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಕಾಡುತ್ತದೆ, ತನ್ನ ಮಾಲೀಕನ ಅಗಲಿಕೆಯ ನೋವನ್ನು ಅರಗಿಸಿಕೊಳ್ಳಲಾಗದ ನಾಯಿ ಗುಂಡ, ಆತನ ಸಮಾಧಿಯನ್ನು ಬಿಟ್ಟು ಕ್ಷಣವೂ ಅಗಲುತ್ತಿರಲ್ಲ. ಕಾಲ ಕಳೆದಂತೆ ಗರ್ಭಿಣಿಯಾಗಿದ್ದ ಶಂಕರನ ಪತ್ನಿ ಕವಿತಾ ಗಂಡು ಮಗುವಿಗೆ ಜನ್ಮನೀಡಿ ಅಸುನೀಗುತ್ತಾಳೆ. ಆ ಮಗುವನ್ನು ಶಂಕರನ ಗೆಳೆಯ ಭೂರಿಗೌಡ(ಗೋವಿಂದೇಗೌಡ) ದಂಪತಿ ಸಾಕುತ್ತಾರೆ.ಆತನಿಗೂ ಶಂಕರ ಎಂದೇ ಕರೆಯುತ್ತಾರೆ. ಬಾಲಕ ಶಂಕರ(ವಿವಾನ್)ನಲ್ಲಿ ಗುಂಡ ತನ್ನ ಮಾಲಿಕನನ್ನು ಕಾಣುತ್ತಾನೆ. ಸದಾ ಆತನ ಹಿಂದಿಂದೆಯೇ ಸುತ್ತುತ್ತಾನೆ, ಅದರಿಂದ ಬಾಲಕ ಶಂಕರನಿಗೆ ಕಿರಿಕಿರಿಯಾಗುತ್ತದೆ. ಆ ಸಮಯದಲ್ಲಿ ಭೂರಿಗೌಡ(ಜಿಜಿ) ಆತನ ತಂದೆಗೂ ಈ ಗುಂಡನಿಗೂ ಬಾಂಡಿಂಗ್ ಹೇಗಿತ್ತೆಂದು ವಿವರಿಸುತ್ತಾನೆ. ಅಂದಿನಿಂದ ಶಂಕರನಿಗೆ, ಗುಂಡ ಜೀವನದ ಒಂದು ಭಾಗವೇ ಆಗಿ ಹೋಗುತ್ತಾನೆ, ಆದರೆ ದಿನಗಳೆದಂತೆ ವಯಸ್ಸಾದ ಗುಂಡ, ಒಮ್ಮೆ ತನ್ನ ಉಸಿರು ನಿಲ್ಲಿಸುತ್ತಾನೆ, ಇದನ್ನು ಅರಗಿಸಿಕೊಳ್ಳಲಾಗದ ಶಂಕರ, ಗುಂಡ ಎಲ್ಲೋ ಒಂದುಕಡೆ ಪುನರ್ಜನ್ಮ ಪಡೆದಿದ್ದಾನೆ ಎಂದು ಆತನನ್ನು ಹುಡುಕಿಕೊಂಡು ಹೊರಡುತ್ತಾನೆ, ತಮಿಳುನಾಡಿನ ಊಟಿಯಲ್ಲಿ ಬ್ಯುಸಿನೆಸ್ ಮನ್ ಮಗಳಾದ ಇಂದು(ರಚನಾ ಇಂದರ್) ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಮುಂದಾಗಿ ಬೆಟ್ಟದ ಮೇಲೆ ನಿಂತಿರುವಾಗ ಅಲ್ಲಿ ಮರುಜನ್ಮ ಪಡೆದ ಗುಂಡ, ಆಕೆಯನ್ನ ತಡೆದು ಜೀವ ಉಳಿಸುತ್ತಾನೆ, ಹೀಗೇ ಆಕೆಗೂ ಗುಂಡನಿಗೂ ನಡುವೆ ಸ್ನೇಹ ಸಂಬಂಧ ಬೆಳೆಯುತ್ತದೆ, ಇತ್ತ ಗುಂಡನನ್ನು ಹುಡುಕುತ್ತಾ ಅದೇ ಊರಿಗೆ ಬರುವ ಶಂಕರನಿಗೆ ತನ್ನ ಗುಂಡ ಅಲ್ಲಿರುವುದು ತಿಳಿಯುತ್ತದೆ, ಇಂದು ಬಳಿ ತನ್ನ ಗುಂಡನನ್ನು ಬಿಟ್ಡು ಕೊಡುವಂತೆ ಪರಿ ಪರಿಯಾಗಿ ಬೇಡುತ್ತಾನೆ. ಅದರೆ ಇಂದು ನಾಯಿ ಬಿಡಲು ತಯಾರಿರಲ್ಲ.
ಹೀಗೇ ಅವರಿಬ್ಬರ ನಡುವೆ ವಾದವಿವಾದ ನಡೆಯುತ್ತದೆ.
ಕೊನೆಗೆ ಗುಂಡ ಯಾರಬಳಿ ಹೋಗುತ್ತಾನೆ ಎನ್ನುವುದೇ ಚಿತ್ರದ ಕ್ಲೈಮ್ಯಾಕ್ಸ್.
ರಚನಾ ಇಂದರ್ ತುಂಬಾ ಲವಲವಿಕೆಯ ಅಭಿನಯ ನೀಡುವ ಮೂಲಕ ಗಮನ ಸೆಳೆಯುತ್ತಾರೆ, ಶಂಕರನಾಗಿ ರಾಕೇಶ್ ಅಡಿಗ ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ, ಶಂಕರಣ್ಣನ ಸ್ನೇಹಿತ ಭೂರಿಗೌಡನಾಗಿ ಗೋವಿಂದೇಗೌಡರ ಅಭಿನಯ ನಿಜಕ್ಕೂ ಅದ್ಭುತವಾಗಿದೆ, ನಾಯಕಿ ತಂದೆಯ ಪಾತ್ರಕ್ಕೆ ಹಿರಿಯನಟ ಅವಿನಾಶ್ ಜೀವ ತುಂಬಿ ನಟಿಸಿದ್ದಾರೆ.
ಸೋಷಿಯಲ್ ಕನ್‌ಸರ್ನ್ ಜೊತೆಗೆ ಡಿವೈನ್ ಕಂಟೆಂಟ್ ಕೂಡ ಚಿತ್ರದಲ್ಲಿದ್ದು ದೈವದ ಬಗ್ಗೆ ನಂಬಿಕೆಯುಳ್ಳವರಿಗೆ ಈ ಚಿತ್ರ ತುಂಬಾ ಕಾಡುತ್ತದೆ, ಊಟಿಯ ಪ್ರಕೃತಿ ವೈಭವನ್ನು ಛಾಯಾಗ್ರಾಹಕ ತನ್ವಿಕ್ ಸುಂದರವಾಗಿ ಸೆರೆ ಹಿಡಿದಿದ್ದಾರ, ಚಿತ್ರದ ಹಾಡುಗಳಿಗೆ ಆರ್.ಪಿ. ಪಟ್ನಾಯಕ್ ಅವರ ಸಂಗೀತ ಸಂಯೋಜನೆ ಜೀವ ತುಂಬಿದೆ, ಅದರಲ್ಲೂ ಟೈಟಲ್‌ಸಾಂಗ್ ಅಂತೂ ಹೃದಯಕ್ಕೇ ತಟ್ಟುತ್ತದೆ, ಶಿವನ ಸಾಂಗ್ ಕೂಡ ಮನದಲ್ಲುಳಿತ್ತದೆ, ಶಂಕರನ ಮಗನ ಚಿಕ್ಕ ವಯಸಿನ ಪಾತ್ರಕ್ಕೆ ವಿವಾನ್ ಜೀವ ತುಂಬಿ ಅಭಿನಯಿಸಿದ್ದಾರೆ, ಮಧ್ಯಂತರದವರೆಗೆ ಆತನ ಪಾತ್ರವೇ ರಾರಾಜಿಸಿದೆ.
ಚಿತ್ರದಲ್ಲಿ ನಾಯಿ ಸಿಂಬನ ಮಗ ಬಂಟಿ ನಟಿಸಿದ್ದಾನೆ. ಸಿಂಬ ನಾಲ್ಕು ದಿನವಷ್ಟೇ ಶೂಟಿಂಗ್‌ನಲ್ಲಿ ಭಾಗವಹಿಸಿ ನಿಧನ ಹೊಂದಿದ ಮೇಲೆ ಆತನ ಮಗ ಸಿಂಬ ನಟಿಸಿದ್ದಾನೆ. ಶಂಕರನ ಮಗ ಹಾಗೂ ನಾಯಿಯ ಪಾತ್ರದ ಮೂಲಕ ಎರಡನೇ ಭಾಗದ ಚಿತ್ರಕಥೆ ಮುಂದುವರೆಯಲಿದೆ. ಅಲ್ಲದೆ ಸಿಂಬು ಜೊತೆ ಬಂಟಿ ಎಂಬ ನಾಯಿಯೂ ಚಿತ್ರದಲ್ಲಿ ಸುಂದರವಾಗಿ ಅಭಿನಯಿಸಿದೆ.