ಚಿತ್ರ : ಆಸ್ಟಿನ್ ನ ಮಹನ್ಮೌನ
ನಿರ್ದೇಶಕ : ವಿನಯ್ ಕುಮಾರ್ ವೈದ್ಯನಾಥನ್
ನಿರ್ಮಾಣ : AVV ಪ್ರೊಡಕ್ಷನ್
ಸಂಗೀತ : ವಿಶ್ವಿ
ರೇಟಿಂಗ್ : 3.5/5
ಛಾಯಾಗ್ರಹಣ :ರಾಜಕಾಂತ್, ಶ್ರೀನಿವಾಸ್
ತಾರಾಗಣ : ವಿನಯ್ ಕುಮಾರ್ ವೈದ್ಯನಾಥನ್, ರಿಷಾ ಗೌಡ , ಪ್ರಕೃತಿ ಪ್ರಸಾದ್, ಬಲರಾಜ್ವಾಡಿ , ರಘು ರಾಮನಕೊಪ್ಪ , ಜಗಪ್ಪ , ಸ್ವಾತಿ ಹಾಗೂ ಮುಂತಾದವರು...
ಪ್ರೀತಿಗಾಗಿ ಯುಗಗಳಿಂದಲೂ ಪ್ರೀತಿಸುವ ಮನಸ್ಸಿನ ಶಕ್ತಿ ಅಜರಾಮರ , ಒಮ್ಮೆ ಹೃದಯದಲ್ಲಿ ಪ್ರೀತಿಯ ಮಿಡಿತ ಶುರುವಾದರೆ ಮುಗೀತು, ಎಂತಹದೇ ಸಮಸ್ಯೆ ಬಂದರೂ ಎದುರು ನಿಲ್ಲುವ ಧೈರ್ಯ ಮಾಡುವುದು ಸರ್ವೇಸಾಮಾನ್ಯ. ಕಡಲ ತೀರದ ಕ್ರಿಶ್ಚಿಯನ್ ಧರ್ಮದ ಹುಡುಗ ಹುಡುಗಿಯ ನಿಷ್ಕಲ್ಮಶ ಪ್ರೀತಿಗೆ ಗೆಳೆಯನ ಸಹಕಾರವಿದ್ದರೂ, ಹುಡುಗಿಯ ತಂದೆಯ ಕೋಪ , ದ್ವೇಷ ಎರಡು ಕುಟುಂಬಗಳ ನೆಮ್ಮದಿಗೆ ಎದುರಾಗುವ ಸಂಕಷ್ಟ , ಹಿಂಸೆ , ಹೊಡೆದಾಟದ ಹಿಂದೆ ಮೌನದ ವರ್ತನೆ ಬೇರೆದೇ ಸತ್ಯವನ್ನು ಹೇಳುವ ಪ್ರಯತ್ನದ ಹಾದಿಯಲ್ಲಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ "ಆಸ್ಟಿನ್ ನ ಮಹನ್ಮೌನ" ತಂದೆ ತಾಯಿಯ ಪ್ರೀತಿಯ ಮಗ ಸ್ವಂತ ಫ್ಯಾಕ್ಟರಿ ನಡೆಸಿಕೊಂಡು ಗೆಳೆಯನಿಗೆ ಕೆಫೆಯನ್ನ ಮಾಡಿಕೊಟ್ಟು ನಿಮ್ಮದೇಯಿಂದ ಬದುಕುವ ವ್ಯಕ್ತಿ ಆಸ್ಟಿನ್ (ವಿನಯ್ ಕುಮಾರ್ ವೈದ್ಯನಾಥನ್) ತನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಗೆಳತಿ ಜಾಸ್ಮಿನ್ (ರಿಷಾ ಗೌಡ)ಳನ್ನು ಕುಟುಂಬದವರ ಒಪ್ಪಿಗೆ ಪಡೆದು ಮದುವೆ ಆಗುವ ನಿರ್ಧಾರ ಮಾಡುತ್ತಾನೆ. ಇದಕ್ಕೆ ಗೆಳೆಯ ಜೆರ್ರಿ (ಜಗಪ್ಪ) ಕೂಡ ಸಾಥ್ ಕೊಡುತ್ತಾನೆ. ಇನ್ನು ಇವರಿಬ್ಬರ ಓಡಾಟ , ಒಂದೇ ದಿನ ಹುಟ್ಟಿದ ಇವರ ಬರ್ತಡೇ ಸಂಭ್ರಮ ಎಲ್ಲವೂ ನೆಮ್ಮದಿ ಹಾದಿಯಲ್ಲಿರುವಾಗಲೇ ಜಸ್ಮಿನ್ ತಂದೆ ಡಿಸೋಜ (ಬಲರಾಜವಾಡಿ) ಮಗಳಿಗೆ ಮದುವೆ ಮಾಡಲು ಫಾದರ್ ಮೂಲಕ ಹುಡುಗನನ್ನು ಹುಡುಕಿಸುತ್ತಾನೆ. ಇದರ ನಡುವೆ ಪ್ರೇಮಿಗಳ ವಿಚಾರ ತಿಳಿಯುವ ಡಿಸೋಜ ತನ್ನ ಮರ್ಯಾದೆ , ಗೌರವಕ್ಕೆ ಧಕ್ಕೆ ತರುತ್ತಾಳೆಂದು ಮಗಳನ್ನು ಮನೆಯಲ್ಲಿ ಕೂಡಿ ಹಾಕುತ್ತಾನೆ. ಇನ್ನು ಆಸ್ಟಿನ್ ಪರದಾಟ ನೋಡುವ ತಂದೆ ಜಾರ್ಜ್ (ರಘು ರಾಮನಕೊಪ್ಪ) ಮಕ್ಕಳ ಪ್ರೀತಿಗೆ ಒಪ್ಪಿಗೆ ನೀಡಿ ಎಂದು ಡಿಸೋಜ ಮನೆಗೆ ಬಂದರು ಯಾವ ಪ್ರಯೋಜನವೂ ಆಗುವುದಿಲ್ಲ. ಇನ್ನು ಆಸ್ಟಿನ್ ಗೆ ಪೊಲೀಸ್ ಕಂಪ್ಲೇಂಟ್ ನೀಡಿ ವಾರ್ನಿಂಗ್ ಕೊಡುತ್ತಾನೆ. ನಂತರ ರೌಡಿಗಳ ಮೂಲಕ ಹೊಡೆಸುವ ಡಿಸೋಜ ಮಗಳನ್ನು ಬೇರೆಯವನಿಗೆ ಕೊಟ್ಟು ಮದುವೆ ಮಾಡುತ್ತಾನೆ. ಹಾಸ್ಪಿಟಲ್ ಸೇರುವ ಆಸ್ಟಿನ್ ಗೆ ಡಾಕ್ಟರ್ ಲಿಶಾ(ಪ್ರಕೃತಿ ಪ್ರಸಾದ್) ನಿರಂತರ ಟ್ರೀಟ್ಮೆಂಟ್ ನೀಡುತ್ತಾಳೆ. ನೆನಪಿನ ಶಕ್ತಿ ಕಳೆದುಕೊಂಡಿರುವ ಆಸ್ಟಿನ್ ಹಿನ್ನೆಲೆಯನ್ನ ಕುಟುಂಬದಿಂದ ತಿಳಿದುಕೊಳ್ಳುವ ಲಿಶಾ ಕ್ರಮೇಣ ಆಸ್ಟಿನ್ ನನ್ನ ಪ್ರೀತಿಸಲು ನಿರ್ಧರಿಸುತ್ತಾಳೆ.
ಮನೆಯವರು ಒಪ್ಪಿಗೆಯಂತೆ ಇಬ್ಬರು ನೆಮ್ಮದಿ ಬದುಕಿನ ಬದುಕಿನತ್ತಾ ಸಾಗುತ್ತಾರೆ. ಇದೆಲ್ಲದರ ಹಿಂದೆ ಒಂದು ಕಾಣದ ಮೌನದ ಕಠೋರ ಕೃತ್ಯ ಏನು... ಬಾಕಿ ಉಳಿದಿರುವುದು ಏನು... ಮುಂದುವರೆದ ಭಾಗ ಅದನ್ನು ಹೇಳುತ್ತಾ... ಎಂಬ ಒಂದಷ್ಟು ಸತ್ಯಗಳನ್ನು ತಿಳಿಯಬೇಕಾದರೆ ಈ ಚಿತ್ರವನ್ನು ಒಮ್ಮೆ ನೋಡಬೇಕು.
ಇಡೀ ಒಂದು ಕ್ರಿಶ್ಚಿಯನ್ ಧರ್ಮದ ಕುಟುಂಬಗಳ ನಡುವೆ ಎದುರಾಗುವ ಘಟನೆಗಳ ಸುತ್ತ ನಿರ್ದೇಶಕ ವಿನಯ್ ಕುಮಾರ್ ವೈದ್ಯನಾಥನ್ ಪ್ರೀತಿ , ಸಂಬಂಧ , ಗೆಳೆತನ , ದ್ವೇಷ , ಕ್ರೂರ ನಡುವಳಿಕೆಯ ಸುತ್ತ ಕಥೆಯನ್ನು ಕಟ್ಟಿಕೊಂಡು ಮಾನವೀಯತೆಯ ಮೌಲ್ಯ , ಪ್ರೀತಿಯ ಶಕ್ತಿಯ ಜೊತೆ ದುಷ್ಟರಿಗೆ ಪ್ರತ್ಯುತ್ತರ ನೀಡುವ ಹಾದಿ ಗಮನ ಸೆಳೆಯುತ್ತದೆ.
ನಿರ್ಮಾಣದ ಜೊತೆಗೆ ನಟನಾಗಿಯೂ ತಮ್ಮ ಪ್ರತಿಭೆಯನ್ನ ಹೊರಹಾಕಲು ಶ್ರಮಪಟ್ಟಿದ್ದಾರೆ ವಿನಯ್. ಮೌನದಲ್ಲೇ ಹೆಚ್ಚು ಗಮನ ಸೆಳೆಯುವ ವಿನಯ್ ಕುಮಾರ್ ಹೊಡೆತದ ಸನ್ನಿವೇಶಗಳಲ್ಲಿ ಬಹಳಷ್ಟು ರಕ್ತವನ್ನು ಸುರಿಸಿದ್ದಾರೆ. ಮೊದಲ ಪ್ರಯತ್ನದಲ್ಲೇ ಪ್ರೀತಿಯ ತಾಕತ್ ಅನ್ನ ಹೇಳುತ್ತಾ ಸಸ್ಪೆನ್ಸ್ ಅಂಶದೊಂದಿಗೆ ಕ್ಲೈಮಾಕ್ಸ್ ತೆರೆದಿಟ್ಟಿರುವ ವಿಭಿನ್ನವಾಗಿದೆ. ಇನ್ನು ನಾಯಕಿಯಾಗಿ ರಿಷಾ ಗೌಡ ಸಿಕ್ಕ ಅವಕಾಶವನ್ನ ಅಚ್ಚುಕಟ್ಟಾಗಿ ನಿರ್ವಹಿಸುವ ಪ್ರಯತ್ನ ಮಾಡಿದ್ದಾರೆ. ಇನ್ನು ಡಾಕ್ಟರ್ ಪಾತ್ರದಲ್ಲಿ ಅಭಿನಯಿಸಿರುವ ಪ್ರಕೃತಿ ಪ್ರಸಾದ್ ಕೂಡ ಪಾತ್ರಕ್ಕೆ ಜೀವ ತುಂಬಲು ಶ್ರಮ ಪಟ್ಟಿದ್ದಾರೆ. ನಾಯಕಿಯ ತಂದೆಯ ಪಾತ್ರದಲ್ಲಿ ಬಾಲರಾಜವಾಡಿ ಆರ್ಭಟಿಸುತ್ತಾ ದ್ವೇಷದ ಕಿಚಿನಲ್ಲೇ ಮಿಂಚಿದ್ದಾರೆ. ಗೆಳೆಯನಾಗಿ ಜಗ್ಗಪ್ಪ ಸಂದರ್ಭಕ್ಕೆ ತಕ್ಕಂತೆ ಪಾತ್ರ ಪೋಷಣೆ ಮಾಡುತ್ತಾ ಗಮನ ಸೆಳೆದಿದ್ದಾರೆ. ಇನ್ನು ನಾಯಕನ ತಂದೆಯಾಗಿ ರಘು ರಾಮನಕೊಪ್ಪ ಎಣ್ಣೆ ಹೊಡೆಯುತ್ತಲೇ ಮಕ್ಕಳನ್ನ ಗೆಳೆಯರಂತೆ ನೋಡುವ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಾಯಕನ ತಾಯಿಯಾಗಿ ಸ್ವಾತಿ ರವರ ಪಾತ್ರ ಪೋಷಣೆ ಚೆನ್ನಾಗಿದ್ದು , ಉಳಿದಂತೆ ಅಭಿನಯಿಸಿರುವ ಎಲ್ಲ ಪಾತ್ರಗಳು ಕಥೆಗೆ ಪೂರಕವಾಗಿ ಸಾಗಿದೆ. ಇನ್ನು ಚಿತ್ರದ ಹೈಲೈಟ್ ಅಂದರೆ ಸಂಗೀತ ಹಾಗೂ ಹಿನ್ನೆಲೆ ಸಂಗೀತ , ಹಾಗೆಯೇ ಛಾಯಾಗ್ರಾಣದ ಕೈಚಳಕ ಹಾಗೂ ಸಂಕಲನ ಕೆಲಸವು ಉತ್ತಮವಾಗಿದೆ. ಪ್ಯೂರ್ ಎಮೋಷನಲ್ , ಲವ್ , ಥ್ರಿಲ್ಲಿಂಗ್, ಫ್ಯಾಮಿಲಿ ಕಂಟೆಂಟ್ ಇಷ್ಟಪಡುವವರು ಸೇರಿದಂತೆ ಎಲ್ಲರೂ ಒಮ್ಮೆ ಚಿತ್ರವನ್ನು ನೋಡಬಹುದು.